Sign In

By signing in or creating an account, you agree with Associated Broadcasting Company's Terms & Conditions and Privacy Policy.

PM Cares: ಕೊವಿಡ್​ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಹಲವು ಸೌಲಭ್ಯ ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ

\ಕೊವಿಡ್-19 ಪಿಡುಗಿನಿಂದ ಪೋಷಕರನ್ನು ಕಳೆದುಕೊಂಡವರ ನೆರವಿಗಾಗಿ ಈ ಯೋಜನೆ ರೂಪಿಸಲಾಗಿದೆ’ ಎಂದು ಮೋದಿ ಹೇಳಿದರು.

PM Cares: ಕೊವಿಡ್​ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಹಲವು ಸೌಲಭ್ಯ ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ
ನರೇಂದ್ರ ಮೋದಿ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:May 30, 2022 | 2:39 PM

ದೆಹಲಿ: ಕೊವಿಡ್-19 ಪಿಡುಗಿನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಸೌಲಭ್ಯಗಳನ್ನು ಘೋಷಿಸಿದರು. ಶಾಲಾ ಮಕ್ಕಳಿಗೆ ವಿದ್ಯಾರ್ಥಿವೇತನ ಬಿಡುಗಡೆ ಮಾಡುವ ಜೊತೆಗೆ ಪಿಎಂ ಕೇರ್ಸ್​ ಫಾರ್ ಚಿಲ್ಡರ್ನ್​ (PM Cares for Children) ಯೋಜನೆಯ ಪಾಸ್​ ಪುಸ್ತಕಗಳನ್ನೂ ವಿತರಿಸಿದರು. ಆಯುಷ್ಮಾನ್ ಭಾರತ್-ಪ್ರಧಾನ್ ಮಂತ್ರಿ ಜನ್ ಆರೋಗ್ಯ ಯೋಜನೆಯ ಹೆಲ್ತ್​ ಕಾರ್ಡ್​ಗಳನ್ನೂ ನೀಡಿದರು. ಮೇ 29, 2021ರಂದು ಪ್ರಧಾನಿ ನರೇಂದ್ರ ಮೋದಿ ಪಿಎಂ ಕೇರ್ಸ್​ ಫಾರ್ ಚಿಲ್ಡರ್ನ್ ಯೋಜನೆ ಘೋಷಿಸಿದ್ದರು. ಮಾರ್ಚ್ 11, 2020ರಿಂದ ಫೆಬ್ರುವರಿ 28, 2022ರ ಅವಧಿಯಲ್ಲಿ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಈ ಯೋಜನೆಯಡಿ ಹಲವು ಸವಲತ್ತುಗಳು ಸಿಗುತ್ತವೆ.

ವಿಡಿಯೊ ಕಾನ್ಫರೆನ್ಸ್​ ಮೂಲಕ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ‘ಕೊವಿಡ್-19 ಪಿಡುಗಿನ ವೇಳೆ ಜನರು ಎಷ್ಟು ಕಷ್ಟ ಅನುಭವಿಸಿದರು ಎನ್ನುವುದು ನನಗೆ ಗೊತ್ತಿದೆ. ಕೊವಿಡ್-19 ಪಿಡುಗಿನಿಂದ ಪೋಷಕರನ್ನು ಕಳೆದುಕೊಂಡವರ ನೆರವಿಗಾಗಿ ಈ ಯೋಜನೆ ರೂಪಿಸಲಾಗಿದೆ’ ಎಂದು ಮೋದಿ ಹೇಳಿದರು.

‘ಉನ್ನತ ಶಿಕ್ಷಣಕ್ಕಾಗಿ ಯಾರಿಗಾದರೂ ಶಿಕ್ಷಣ ಸಾಲ ಬೇಕಿದ್ದರೆ ಅಂಥವರಿಗೂ ಪಿಎಂ ಕೇರ್ಸ್​ ನೆರವಾಗುತ್ತದೆ. ಈ ಮಕ್ಕಳ ದೈನಂದಿನ ಖರ್ಚುವೆಚ್ಚ ನಿಭಾಯಿಸಲೆಂದು ವಿವಿಧ ಯೋಜನೆಗಳಡಿ ತಿಂಗಳಿಗೆ ₹ 4,000 ವಿತರಿಸಲು ವ್ಯವಸ್ಥೆ ಮಾಡಲಾಗಿದೆ’ ಎಂದು ಹೇಳಿದರು.

ವಿಶ್ವದ ವಿವಿಧ ದೇಶಗಳ ಕೊವಿಡ್-19 ಪರಿಸ್ಥಿತಿ ಕುರಿತು ಪ್ರಸ್ತಾಪಿಸಿದ ಮೋದಿ, ಕೊವಿಡ್ ಸಂದರ್ಭದಲ್ಲಿ ಭಾರತವು ಜಗತ್ತಿಗೆ ತಲೆಬೇನೆ ಆಗಲಿಲ್ಲ. ಬದಲಿಗೆ ಪರಿಹಾರವಾಗಿತ್ತು. ಹಲವು ದೇಶಗಳಿಗೆ ನಾವು ಲಸಿಕೆ ಮತ್ತು ಔಷಧಿಗಳನ್ನು ಕಳುಹಿಸಿಕೊಟ್ಟಿದ್ದೆವು ಎಂದು ಮೋದಿ ಹೇಳಿದರು. ಭಾರತದಲ್ಲಿ ಈವರೆಗೆ 200 ಕೋಟಿ ಲಸಿಕೆಗಳನ್ನು ವಿತರಿಸಲಾಗಿದೆ ಎಂದರು.

ಮಕ್ಕಳಿಗಾಗಿ ಪಿಎಂ ಕೇರ್ಸ್​ ಯೋಜನೆಯ ಮುಖ್ಯಾಂಶಗಳು

ಪ್ರಧಾನಿ ನರೇಂದ್ರ ಮೋದಿ ಅವರು ಮೇ 29, 2021ರಂದು ಮಕ್ಕಳಿಗಾಗಿ ಪಿಎಂ ಕೇರ್ಸ್​ (PM CARES for Children Scheme) ಯೋಜನೆಯನ್ನು ಜಾರಿಗೊಳಿಸಿದರು. ಕೊವಿಡ್ ಪಿಡುಗಿನಿಂದ ಅಪ್ಪ-ಅಮ್ಮ ಅಥವಾ ಪೋಷಕರು ಅಥವಾ ದತ್ತು ಪೋಷಕರನ್ನು ಕಳೆದುಕೊಂಡವರಿಗೆ ನೆರವಾಗುವುದು ಈ ಯೋಜನೆಯ ಉದ್ದೇಶ. ಮಾರ್ಚ್ 11, 2020ರಿಂದ ಫೆಬ್ರುವರಿ 28, 2022ರ ನಡುವಣ ಅವಧಿಯಲ್ಲಿ ಮೃತಪಟ್ಟ ಪೋಷಕರ ಮಕ್ಕಳಿಗೆ ಈ ಯೋಜನೆಯ ಅನ್ವಯ ನೆರವು ಒದಗಿಸುವ ಉದ್ದೇಶವಿದೆ.

ಪಿಎಂ ಕೇರ್ಸ್​ ಯೋಜನೆಯಡಿ ಸಿಗುವ ನೆರವುಗಳು

ಮಕ್ಕಳ ಸಮಗ್ರ ಬೆಳವಣಿಗೆಗಳನ್ನು ಸುಸ್ಥಿರವಾಗಿ ಗಮನಿಸುವುದು, ಕಾಪಾಡುವುದು ಪಿಎಂ ಕೇರ್ಸ್ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಮಕ್ಕಳಿಗೆ ವಸತಿ ಸೌಕರ್ಯ, ವಿದ್ಯಾಭ್ಯಾಸ, ವಿದ್ಯಾರ್ಥಿ ವೇತನ, ಆರ್ಥಿಕ ನೆರವು ಒದಗಿಸಲು ಈ ಯೋಜನೆಯಡಿ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಈ ಮಕ್ಕಳು 23ನೇ ವರ್ಷ ಮುಟ್ಟಿದಾಗ ತಲಾ ₹ 10 ಲಕ್ಷ ಆರ್ಥಿಕ ನೆರವು ಒದಗಿಸಲಾಗುವುದು. ಆರೋಗ್ಯ ವಿಮೆಯ ಮೂಲಕ ಅವರಿಗೆ ಕಾಳಜಿಗೂ ಕ್ರಮ ತೆಗೆದುಕೊಳ್ಳುತ್ತದೆ.

ಪಿಎಂ ಕೇರ್ಸ್ ಯೋಜನೆಗೆ ನೋಂದಣಿ ಹೇಗೆ?

ಪಿಎಂ ಕೇರ್ಸ್​ ಯೋಜನೆಗೆ ಸೇರಲು ಇಚ್ಛಿಸುವ ಮಕ್ಕಳು ಹಿರಿಯರ ನೆರವು ಪಡೆದುಕೊಳ್ಳಬೇಕು. ಭಾರತ ಸರ್ಕಾರವು ರೂಪಿಸಿರುವ ವೆಬ್​ ಪೋರ್ಟಲ್ ಮೂಲಕ ಮಾಹಿತಿ ಅಪ್​ಲೋಡ್ ಮಾಡಬೇಕು. ಒಮ್ಮೆ ನಿಮ್ಮ ಅರ್ಜಿಯು ಸೂಕ್ತ ಪ್ರಕ್ರಿಯೆಗಳಿಗೆ ಒಳಪಟ್ಟು, ಅನುಮೋದನೆ ಪಡೆದುಕೊಂಡರೆ ಆಯ್ಕೆಯಾದ ಮಕ್ಕಳಿಗೆ ಸರ್ಕಾರದ ಹಲವು ಸೌಕರ್ಯಗಳು ಲಭ್ಯವಾಗುತ್ತವೆ.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:39 pm, Mon, 30 May 22