ಏನಿದು ಅಬ್ರಹಾಂ ಒಪ್ಪಂದ? ಟ್ರಂಪ್ ಮಾತಿಗೆ ಒಪ್ಪಿದರೆ ಪಾಕಿಸ್ತಾನದ ಪಾಸ್​ಪೋರ್ಟ್ ಏಕೆ ಬದಲಾಗುತ್ತದೆ?

Abraham Accords: ಮಧ್ಯಪ್ರಾಚ್ಯದಲ್ಲಿ ಪ್ರಾದೇಶಿಕ ಶಾಂತಿ ಮಾತುಕತೆಗಳ ಭಾಗವಾಗಿ ಪಾಕಿಸ್ತಾನ, ಸೌದಿ ಅರೇಬಿಯಾ, ಕತಾರ್ ಮತ್ತು ಟರ್ಕಿ ಸೇರಿದಂತೆ ಪ್ರಮುಖ ಮುಸ್ಲಿಂ ರಾಷ್ಟ್ರಗಳು ಇಸ್ರೇಲ್ ಜೊತೆಗಿನ 'ಅಬ್ರಹಾಂ ಒಪ್ಪಂದ'ಕ್ಕೆ ತಕ್ಷಣವೇ ಸಹಿ ಹಾಕಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾರ್ವಜನಿಕವಾಗಿ ಕರೆ ನೀಡಿದ್ದರು. ಒಂದು ವೇಳೆ ಭವಿಷ್ಯದಲ್ಲಿ ರಾಜತಾಂತ್ರಿಕ ಅಥವಾ ಆರ್ಥಿಕ ಒತ್ತಡಕ್ಕೆ ಮಣಿದು ಪಾಕಿಸ್ತಾನವು ಇಸ್ರೇಲ್ ಜೊತೆ ಒಪ್ಪಂದಕ್ಕೆ ಮುಂದಾದರೆ, ಅಲ್ಲಿನ ಇಡೀ ದೇಶದ ಪಾಸ್‌ಪೋರ್ಟ್ ವ್ಯವಸ್ಥೆಯನ್ನೇ ಬದಲಾಯಿಸಬೇಕಾಗುತ್ತದೆ. ಏನಿದಕ್ಕೆ ಕಾರಣ? ಎಂಬುದರ ಮಾಹಿತಿ ಇಲ್ಲಿದೆ.

ಏನಿದು ಅಬ್ರಹಾಂ ಒಪ್ಪಂದ? ಟ್ರಂಪ್ ಮಾತಿಗೆ ಒಪ್ಪಿದರೆ ಪಾಕಿಸ್ತಾನದ ಪಾಸ್​ಪೋರ್ಟ್ ಏಕೆ ಬದಲಾಗುತ್ತದೆ?
Shehbaz Sharif With Trump
Image Credit source: Getty Image

Updated on: May 26, 2026 | 3:55 PM

ಇಸ್ಲಮಾಬಾದ್, ಮೇ 26: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಇಚ್ಛೆಯಂತೆ ಪಾಕಿಸ್ತಾನವು ಇಸ್ರೇಲ್ ಜೊತೆ ಸಂಬಂಧವನ್ನು ಸುಧಾರಿಸುವ ‘ಅಬ್ರಹಾಂ ಒಪ್ಪಂದಕ್ಕೆ’ (Abraham Accords) ಸಹಿ ಹಾಕಿದರೆ ಪಾಕಿಸ್ತಾನದ ಪ್ರಜೆಗಳಿಗೆ ಹೊಸ ಪಾಸ್‌ಪೋರ್ಟ್‌ಗಳನ್ನು ಪಡೆಯಬೇಕಾಗುತ್ತದೆ ಎಂಬ ಚರ್ಚೆ ಅಂತಾರಾಷ್ಟ್ರೀಯ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಪಾಕಿಸ್ತಾನದ ಪಾಸ್‌ಪೋರ್ಟ್‌ನಲ್ಲಿರುವ ಇಸ್ರೇಲ್ ವಿರೋಧಿ ನಿಯಮ ಮತ್ತು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ನೀಡಿರುವ ಇತ್ತೀಚಿನ ಹೇಳಿಕೆಯೇ ಇದಕ್ಕೆ ಕಾರಣ.

ಪ್ರಮುಖ ಮುಖ್ಯಾಂಶಗಳು:

  • ಅಬ್ರಹಾಂ ಒಪ್ಪಂದಕ್ಕೆ ಸಹಿ ಹಾಕಲು ಪಾಕಿಸ್ತಾನಕ್ಕೆ ಟ್ರಂಪ್ ಒತ್ತಡ
  •  ಅಬ್ರಹಾಂ ಒಪ್ಪಂದದ ಮಹತ್ವವೇನು?
  • ಈ ಒಪ್ಪಂದದಿಂದ ಪಾಕ್ ಮೇಲಾಗುವ ಪರಿಣಾಮವೇನು?

ಇರಾನ್ ದೇಶದೊಂದಿಗೆ ನಡೆಯುತ್ತಿರುವ ಪ್ರಾದೇಶಿಕ ಶಾಂತಿ ಮಾತುಕತೆಗಳ ಭಾಗವಾಗಿ ಪಾಕಿಸ್ತಾನ, ಸೌದಿ ಅರೇಬಿಯಾ, ಕತಾರ್ ಮತ್ತು ಟರ್ಕಿ ಸೇರಿದಂತೆ ಪ್ರಮುಖ ಮುಸ್ಲಿಂ ರಾಷ್ಟ್ರಗಳು ಇಸ್ರೇಲ್ ಜೊತೆಗಿನ ‘ಅಬ್ರಹಾಂ ಒಪ್ಪಂದ’ಕ್ಕೆ ತಕ್ಷಣವೇ ಸಹಿ ಹಾಕಬೇಕು ಎಂದು ಡೊನಾಲ್ಡ್ ಟ್ರಂಪ್ ಸೋಷಿಯಲ್ ಮೀಡಿಯಾದಲ್ಲಿ ಸಾರ್ವಜನಿಕವಾಗಿ ಕರೆ ನೀಡಿದ್ದರು. ಆದರೆ, ಟ್ರಂಪ್ ಅವರ ಈ ಆಫರ್ ಅನ್ನು ತಕ್ಷಣವೇ ತಿರಸ್ಕರಿಸಿದ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್, “ನಮ್ಮ ಮೂಲಭೂತ ಸಿದ್ಧಾಂತಗಳಿಗೆ ಧಕ್ಕೆ ತರುವ ಇಂತಹ ಯಾವುದೇ ಒಪ್ಪಂದಕ್ಕೆ ಪಾಕಿಸ್ತಾನ ಸಹಿ ಹಾಕುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿ ಮಾರ್ಗ ತೆರೆಯುವ ಸುಳಿವು ನೀಡಿದ ಟ್ರಂಪ್

ಪಾಕಿಸ್ತಾನಿಗಳಿಗೆ ಹೊಸ ಪಾಸ್‌ಪೋರ್ಟ್ ಏಕೆ ಬೇಕಾಗುತ್ತದೆ?:
ಇಷ್ಟಾದರೂ ಒಂದು ವೇಳೆ ಮುಂದಿನ ದಿನಗಳಲ್ಲಿ ರಾಜತಾಂತ್ರಿಕ ಒತ್ತಡಕ್ಕೆ ಮಣಿದು ಪಾಕಿಸ್ತಾನವು ಇಸ್ರೇಲ್ ಅನ್ನು ಒಪ್ಪಿಕೊಂಡರೆ ಅಲ್ಲಿನ ಇಡೀ ದೇಶದ ಪಾಸ್‌ಪೋರ್ಟ್ ವ್ಯವಸ್ಥೆಯನ್ನೇ ಬದಲಾಯಿಸಬೇಕಾಗುತ್ತದೆ. ಅದಕ್ಕೆ ಪ್ರಮುಖ ಕಾರಣಗಳು ಇಲ್ಲಿವೆ…

ಸಾಂಪ್ರದಾಯಿಕವಾಗಿ ಪಾಕಿಸ್ತಾನದ ಪಾಸ್‌ಪೋರ್ಟ್‌ಗಳ ಮುಖಪುಟ ಅಥವಾ ಒಳಗಿನ ಪುಟದಲ್ಲಿ ಅತ್ಯಂತ ಸ್ಪಷ್ಟವಾಗಿ “ಈ ಪಾಸ್‌ಪೋರ್ಟ್ ಇಸ್ರೇಲ್ ಹೊರತುಪಡಿಸಿ ಪ್ರಪಂಚದ ಎಲ್ಲಾ ದೇಶಗಳಿಗೆ ಮಾನ್ಯವಾಗಿದೆ” (This passport is valid for all countries of the world except Israel) ಎಂದು ಮುದ್ರಿಸಲಾಗಿರುತ್ತದೆ. ಜಗತ್ತಿನಲ್ಲೇ ತನ್ನ ಪಾಸ್‌ಪೋರ್ಟ್‌ನಲ್ಲಿ ಇಸ್ರೇಲ್ ದೇಶದ ಹೆಸರನ್ನು ಈ ರೀತಿ ಬರೆದು, ಅದನ್ನು ಬಹಿಷ್ಕರಿಸಿರುವ ಏಕೈಕ ದೇಶ ಪಾಕಿಸ್ತಾನವಾಗಿದೆ.

ಒಂದು ವೇಳೆ ಅಬ್ರಹಾಂ ಒಪ್ಪಂದಕ್ಕೆ ಪಾಕಿಸ್ತಾನ ಸಹಿ ಹಾಕಿದರೆ, ಇಸ್ರೇಲ್‌ನ ಸಾರ್ವಭೌಮತ್ವವನ್ನು ಒಪ್ಪಿಕೊಂಡಂತಾಗುತ್ತದೆ ಮತ್ತು ಪಾಕಿಸ್ತಾನಿಗಳು ಇಸ್ರೇಲ್‌ಗೆ ಪ್ರಯಾಣಿಸಲು ಅವಕಾಶ ನೀಡಬೇಕಾಗುತ್ತದೆ. ಆಗ ಇಡೀ ದೇಶದ ಕೋಟ್ಯಂತರ ನಾಗರಿಕರ ಹಳೆಯ ಪಾಸ್‌ಪೋರ್ಟ್‌ಗಳನ್ನು ರದ್ದುಗೊಳಿಸಿ, ಇಸ್ರೇಲ್ ಹೆಸರಿನ ನಿರ್ಬಂಧವನ್ನು ತೆಗೆದುಹಾಕಿರುವ ಹೊಸ ಮಾದರಿಯ ಪಾಸ್‌ಪೋರ್ಟ್‌ಗಳನ್ನು ವಿತರಿಸಬೇಕಾಗುತ್ತದೆ. ಪಾಕಿಸ್ತಾನಕ್ಕೆ ಇದು ಕೇವಲ ಪೇಪರ್ ಮೇಲಿನ ಬದಲಾವಣೆಯಲ್ಲ. ಇದು ದೇಶದ ಅಸ್ತಿತ್ವ ಮತ್ತು ಸಿದ್ಧಾಂತದ ವಿಷಯವಾಗಿದೆ.

“ಒಂದು ದಿನವೂ ನಂಬಲು ಸಾಧ್ಯವಿಲ್ಲದ ಇಸ್ರೇಲ್ ಜನರೊಂದಿಗೆ ನಾವು ಹೇಗೆ ಒಟ್ಟಿಗೆ ಇರಲು ಸಾಧ್ಯ? ನಮ್ಮ ಪಾಸ್‌ಪೋರ್ಟ್ ನೀತಿಯೇ ಇಸ್ರೇಲ್ ವಿರುದ್ಧದ ನಮ್ಮ ಸಾಂಸ್ಥಿಕ ನಿಲುವನ್ನು ಜಗತ್ತಿಗೆ ಸಾರುತ್ತದೆ” ಎಂದು ಪಾಕ್ ಸಚಿವ ಖ್ವಾಜಾ ಆಸಿಫ್ ಹೇಳಿದ್ದಾರೆ.

ಇದನ್ನೂ ಓದಿ: ಭಾರತ-ಅಮೆರಿಕದಲ್ಲಲ್ಲ, ಪ್ರಧಾನಿ ಮೋದಿ-ಟ್ರಂಪ್ ಐತಿಹಾಸಿಕ ಭೇಟಿಗೆ ಆತಿಥ್ಯ ವಹಿಸಲಿದೆ ಈ ರಾಷ್ಟ್ರ

ಪಾಕಿಸ್ತಾನವು ಆರಂಭದಿಂದಲೂ ಸ್ವತಂತ್ರ ಪ್ಯಾಲೆಸ್ತೀನ್ ರಾಷ್ಟ್ರ ರಚನೆಯಾಗುವವರೆಗೆ ಇಸ್ರೇಲ್ ಅನ್ನು ದೇಶ ಎಂದು ಒಪ್ಪಿಕೊಳ್ಳುವುದಿಲ್ಲ ಎಂಬ ಕಠಿಣ ನಿಲುವನ್ನು ಹೊಂದಿದೆ. ಪ್ರಸ್ತುತ ಗಾಜಾದಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಜನಸಾಮಾನ್ಯರಲ್ಲಿ ಇಸ್ರೇಲ್ ವಿರುದ್ಧ ಭಾರಿ ಆಕ್ರೋಶವಿದೆ. ಇಂತಹ ಪರಿಸ್ಥಿತಿಯಲ್ಲಿ ಇಸ್ರೇಲ್ ಜೊತೆ ಕೈಜೋಡಿಸಲು ಮುಂದಾದರೆ ಪಾಕಿಸ್ತಾನದಲ್ಲಿ ತೀವ್ರ ಸಾರ್ವಜನಿಕ ಪ್ರತಿಭಟನೆಗಳು ಮತ್ತು ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗುವ ಭೀತಿಯಿದೆ.

ಏನಿದು ಅಬ್ರಹಾಂ ಒಪ್ಪಂದ?:

ಅಬ್ರಹಾಂ ಒಪ್ಪಂದ (Abraham Accords) ಎನ್ನುವುದು ಇಸ್ರೇಲ್ ಮತ್ತು ವಿವಿಧ ಅರಬ್ ರಾಷ್ಟ್ರಗಳ ನಡುವೆ ರಾಜತಾಂತ್ರಿಕ ಸಂಬಂಧಗಳನ್ನು ಸುಧಾರಿಸಲು ಮತ್ತು ಶಾಂತಿಯನ್ನು ಸ್ಥಾಪಿಸಲು ಸಹಿ ಮಾಡಲಾದ ಐತಿಹಾಸಿಕ ಶಾಂತಿ ಒಪ್ಪಂದಗಳಾಗಿವೆ. ಅಮೆರಿಕದ ಮಧ್ಯಸ್ಥಿಕೆಯಲ್ಲಿ ನಡೆದ ಈ ಒಪ್ಪಂದಕ್ಕೆ 2020ರ ಸೆಪ್ಟೆಂಬರ್‌ನಲ್ಲಿ ಅಮೆರಿಕದ ಶ್ವೇತಭವನದಲ್ಲಿ ಸಹಿ ಹಾಕಲಾಯಿತು. ಕಳೆದ ಹಲವು ದಶಕಗಳಿಂದ ಇಸ್ರೇಲ್ ಮತ್ತು ಅರಬ್ ದೇಶಗಳ ನಡುವೆ ಇದ್ದ ದ್ವೇಷ ಮತ್ತು ರಾಜತಾಂತ್ರಿಕ ಬಹಿಷ್ಕಾರವನ್ನು ಕೊನೆಗೊಳಿಸುವಲ್ಲಿ ಇದು ಅತ್ಯಂತ ಮಹತ್ವದ ಮೈಲಿಗಲ್ಲಾಗಿದೆ.

ಯಹೂದಿ ಧರ್ಮ (Judaism) ಮತ್ತು ಇಸ್ಲಾಂ ಧರ್ಮ (Islam) ಎರಡಕ್ಕೂ ಮೂಲ ಪುರುಷ ಅಥವಾ ಪಿತಾಮಹರಾಗಿರುವ ‘ಅಬ್ರಹಾಂ’ ಅವರ ಹೆಸರನ್ನು ಈ ಒಪ್ಪಂದಕ್ಕೆ ಇಡಲಾಗಿದೆ. ಉಭಯ ಧರ್ಮಗಳ ಮತ್ತು ಜನಾಂಗಗಳ ನಡುವಿನ ಸಾಮಾನ್ಯ ಆಧ್ಯಾತ್ಮಿಕ ಹಿನ್ನೆಲೆಯನ್ನು ನೆನಪಿಸುವ ಮೂಲಕ ಶಾಂತಿ ಮತ್ತು ಸೌಹಾರ್ದತೆಯನ್ನು ಮೂಡಿಸುವುದು ಇದರ ಉದ್ದೇಶವಾಗಿದೆ. ಇಸ್ರೇಲ್ ಮತ್ತು ಅಮೆರಿಕದ ಮಧ್ಯಸ್ಥಿಕೆಯಲ್ಲಿ ಮೊದಲು ಒಪ್ಪಂದಕ್ಕೆ ಸಹಿ ಹಾಕಿದ ಅರಬ್ ರಾಷ್ಟ್ರಗಳೆಂದರೆ, ಯುನೈಟೆಡ್ ಅರಬ್ ಎಮಿರೇಟ್ಸ್ (UAE), ಬಹ್ರೇನ್, ಮೊರಾಕೊ ಮತ್ತು ಸುಡಾನ್.

ಅಬ್ರಹಾಂ ಒಪ್ಪಂದದ ಅಡಿಯಲ್ಲಿ ಅರಬ್ ದೇಶಗಳು ಇಸ್ರೇಲ್ ಅನ್ನು ಅಧಿಕೃತವಾಗಿ ಒಂದು ಸಾರ್ವಭೌಮ ದೇಶ ಎಂದು ಮಾನ್ಯ ಮಾಡಿದವು. ಉಭಯ ದೇಶಗಳಲ್ಲಿ ಪರಸ್ಪರ ರಾಯಭಾರ ಕಚೇರಿಗಳನ್ನು ತೆರೆಯಲಾಯಿತು. ಇಸ್ರೇಲ್ ಮತ್ತು ಯುಎಇ (UAE) ನಡುವೆ ನೇರ ವಿಮಾನಯಾನ ಸೇವೆಗಳು ಆರಂಭವಾದವು. ತಂತ್ರಜ್ಞಾನ, ಪ್ರವಾಸೋದ್ಯಮ, ಆರೋಗ್ಯ ಮತ್ತು ಕೃಷಿ ಕ್ಷೇತ್ರಗಳಲ್ಲಿ ಬಿಲಿಯನ್​ಗಟ್ಟಲೆ ಡಾಲರ್ ಹೂಡಿಕೆ ಹಾಗೂ ವ್ಯಾಪಾರ ಒಪ್ಪಂದಗಳು ನಡೆದವು. ಅಂದಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಹಿರಿಯ ಸಲಹೆಗಾರರಾಗಿದ್ದ ಜ್ಯಾರೆಡ್ ಕುಶ್ನರ್ ಈ ಒಪ್ಪಂದವನ್ನು ಯಶಸ್ವಿಗೊಳಿಸುವಲ್ಲಿ ಪ್ರಮುಖ ರಾಜತಾಂತ್ರಿಕ ಪಾತ್ರ ವಹಿಸಿದ್ದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 3:29 pm, Tue, 26 May 26

Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Follow Us