ಇಂದು ರಾತ್ರಿ ಇರಾನ್ ಮೇಲೆ ಬೃಹತ್ ದಾಳಿ ನಡೆಸುತ್ತೇವೆ; ಟ್ರಂಪ್ ಎಚ್ಚರಿಕೆ

ಇಂದು ರಾತ್ರಿ ಇರಾನ್ ಮೇಲೆ ದಾಳಿ ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಹಾಗೇ, ಮುಂದಿನ ದಿನಗಳಲ್ಲಿ ವೆನೆಜುವೆಲಾದಂತೆ ಇರಾನ್ ತೈಲದ ಮೇಲೂ ಹಿಡಿತ ಸಾಧಿಸುವ ಮುನ್ಸೂಚನೆ ನೀಡಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ವಿರುದ್ಧ ಸತತ ಮೂರನೇ ರಾತ್ರಿಯೂ ದಾಳಿಗಳನ್ನು ಮುಂದುವರಿಸುವುದಾಗಿ ಕಠಿಣ ಮುನ್ನೆಚ್ಚರಿಕೆ ನೀಡಿದ್ದಾರೆ. ಈ ಬೆಳವಣಿಗೆಯು ಉಭಯ ದೇಶಗಳ ನಡುವಿನ ಕದನ ವಿರಾಮವನ್ನು ಸಂಪೂರ್ಣವಾಗಿ ಮುರಿದುಬೀಳುವ ಹಂತಕ್ಕೆ ತಳ್ಳಿದೆ. "ಅಮೆರಿಕವು ಇಂದು ರಾತ್ರಿ ಇರಾನ್ ಮೇಲೆ ಅತ್ಯಂತ ಕಠಿಣವಾಗಿ ದಾಳಿ ನಡೆಸಲಿದೆ" ಎಂದು ಟ್ರಂಪ್ ಪೋಸ್ಟ್ ಮಾಡಿದ್ದಾರೆ.

ಇಂದು ರಾತ್ರಿ ಇರಾನ್ ಮೇಲೆ ಬೃಹತ್ ದಾಳಿ ನಡೆಸುತ್ತೇವೆ; ಟ್ರಂಪ್ ಎಚ್ಚರಿಕೆ
Donald Trump
Image Credit source: AP

Updated on: Jun 11, 2026 | 8:32 PM

ವಾಷಿಂಗ್ಟನ್, ಜೂನ್ 11: ಮಧ್ಯಪ್ರಾಚ್ಯದಲ್ಲಿ ಯುದ್ಧ ನಿಲ್ಲುವ ಲಕ್ಷಣಗಳೇ ಕಾಣುತ್ತಿಲ್ಲ. ಇರಾನ್ ಜೊತೆ ಕದನ ವಿರಾಮದ ಪ್ರಸ್ತಾಪವನ್ನಿಟ್ಟಿದ್ದ ಅಮೆರಿಕ ಇದೀಗ ಇರಾನ್ ಮೇಲೆ ಸಮರ ಸಾರುವುದಾಗಿ ಘೋಷಿಸಿದೆ. ಇಂದು ರಾತ್ರಿ ಇರಾನ್ ಮೇಲೆ ಭೀಕರ ದಾಳಿ ನಡೆಸುತ್ತೇವೆ ಎಂದು ಟ್ರಂಪ್ (Donald Trump) ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪಶ್ಚಿಮ ಏಷ್ಯಾದ ಸಂಘರ್ಷ ಇನ್ನಷ್ಟು ಹೆಚ್ಚಾಗುವ ಲಕ್ಷಣಗಳು ಕಾಣುತ್ತಿವೆ. ಅಮೆರಿಕ (United States) ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಂದು ಇರಾನ್ ವಿರುದ್ಧ ಹೊಸ ಮಿಲಿಟರಿ ದಾಳಿಗಳ ಎಚ್ಚರಿಕೆ ನೀಡಿದ್ದಾರೆ. ಅಮೆರಿಕವು ಇಂದು ರಾತ್ರಿ ಇರಾನ್ ದೇಶದ ಮೇಲೆ ಅತ್ಯಂತ ಭೀಕರ ದಾಳಿ ಮಾಡಲಿದೆ ಎಂದು ಹೇಳಿರುವ ಅವರು, ಇರಾನ್‌ನ ಮಿಲಿಟರಿ ಸಾಮರ್ಥ್ಯವು ಈಗಾಗಲೇ ತೀವ್ರವಾಗಿ ದುರ್ಬಲಗೊಂಡಿದೆ ಎಂದು ಪ್ರತಿಪಾದಿಸಿದ್ದಾರೆ.

ತಮ್ಮ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ‘ಟ್ರುತ್ ಸೋಶಿಯಲ್’ ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ಭವಿಷ್ಯದಲ್ಲಿ ಅಮೆರಿಕವು ವೆನೆಜುವೆಲಾದಲ್ಲಿ ಮಾಡಿದಂತೆಯೇ ಖಾರ್ಗ್ ದ್ವೀಪ ಸೇರಿದಂತೆ ಇರಾನ್‌ನ ಪ್ರಮುಖ ತೈಲ ಮತ್ತು ಅನಿಲ ಘಟಕಗಳನ್ನು ತನ್ನ ವಶಕ್ಕೆ ಪಡೆದು, ಅದರ ಸಂಪೂರ್ಣ ನಿಯಂತ್ರಣವನ್ನು ಸಾಧಿಸಲಿದೆ ಎಂದು ಹೇಳಿದ್ದಾರೆ.


“ಅಮೆರಿಕವು ಇಂದು ರಾತ್ರಿ ಇರಾನ್ ಮೇಲೆ ಅತ್ಯಂತ ಕಠಿಣವಾಗಿ ದಾಳಿ ನಡೆಸಲಿದೆ. ಇರಾನ್‌ನ ನೌಕಾಪಡೆ, ವಾಯುಪಡೆ, ರೇಡಾರ್, ವೈಮಾನಿಕ ರಕ್ಷಣಾ ವ್ಯವಸ್ಥೆ ಹಾಗೂ ಇತರ ಎಲ್ಲಾ ರೀತಿಯ ರಕ್ಷಣಾತ್ಮಕ ಮತ್ತು ಆಕ್ರಮಣಕಾರಿ ಸಾಮರ್ಥ್ಯಗಳು ಈಗಾಗಲೇ ನಾಶವಾಗಿವೆ!” ಎಂದು ಟ್ರಂಪ್ ಬರೆದಿದ್ದಾರೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿ ಸಂಪೂರ್ಣ ಬಂದ್; ಅಮೆರಿಕ ದಾಳಿಗೆ ಇರಾನ್ ಪ್ರತೀಕಾರ

“ಸದ್ಯದಲ್ಲೇ ನಾವು ಖಾರ್ಗ್ ದ್ವೀಪ ಮತ್ತು ಇತರ ತೈಲ ಮೂಲಸೌಕರ್ಯ ಕೇಂದ್ರಗಳನ್ನು ನಮ್ಮ ವಶಕ್ಕೆ ಪಡೆಯಲಿದ್ದೇವೆ. ವೆನೆಜುವೆಲಾದಲ್ಲಿ ನಾವು ಮಾಡಿದಂತೆಯೇ ಅವರ ತೈಲ ಮತ್ತು ಅನಿಲ ಮಾರುಕಟ್ಟೆಗಳ ಸಂಪೂರ್ಣ ನಿಯಂತ್ರಣವನ್ನು ತೆಗೆದುಕೊಳ್ಳಲಿದ್ದೇವೆ” ಎಂದು ಅವರು ಮತ್ತೊಂದು ಎಚ್ಚರಿಕೆಯನ್ನೂ ನೀಡಿದ್ದಾರೆ.


ಈ ಪೋಸ್ಟ್ ಪ್ರಕಟವಾದ ಕೆಲವೇ ನಿಮಿಷಗಳಲ್ಲಿ, ಫಾಕ್ಸ್ ನ್ಯೂಸ್ ಗೆ ನೀಡಿದ ಸಂದರ್ಶನದಲ್ಲೂ ಟ್ರಂಪ್ ಖಾರ್ಗ್ ದ್ವೀಪವನ್ನು ವಶಪಡಿಸಿಕೊಳ್ಳುವ ತಮ್ಮ ಇಚ್ಛೆಯನ್ನು ಪುನರುಚ್ಚರಿಸಿದ್ದಾರೆ. “ನಾವು ಇರಾನ್ ಜೊತೆ ಮಾತುಕತೆ ನಡೆಸುತ್ತಿದ್ದೇವೆ. ಆದರೆ, ನನ್ನ ಮೊದಲ ಆದ್ಯತೆ ಯಾವಾಗಲೂ ಖಾರ್ಗ್ ದ್ವೀಪವನ್ನು ವಶಪಡಿಸಿಕೊಳ್ಳುವುದೇ ಆಗಿದೆ. ನನ್ನ ಆಯ್ಕೆ ಅದೇ ಆಗಿರುತ್ತದೆ. ಆದರೆ ಅದನ್ನು ವಶಪಡಿಸಿಕೊಳ್ಳಲು ಅಮೆರಿಕಕ್ಕೆ ಸದ್ಯ ಧೈರ್ಯವಿದೆಯೇ ಎಂದು ನನಗೆ ಗೊತ್ತಿಲ್ಲ,” ಎಂದಿದ್ದಾರೆ.

ಟ್ರಂಪ್​ಗೆ ತಿರುಗೇಟು ನೀಡಿರುವ ಇರಾನ್ ಅಮೆರಿಕದ ಅಂತ್ಯ ಸಮೀಪಿಸುತ್ತಿದೆ. ಅಮೆರಿಕಕ್ಕೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಪ್ರತಿಕ್ರಿಯೆ ನೀಡಿದೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿ ಮೇಲೆ ಅಮೆರಿಕದ ಹೆಲಿಕಾಪ್ಟರ್‌ ಪತನ; ಇರಾನ್ ವಿರುದ್ಧ ಸೇಡು ತೀರಿಸಿಕೊಳ್ಳುತ್ತೇವೆಂದ ಟ್ರಂಪ್

ಇರಾನ್-ಇಸ್ರೇಲ್ ಹಾಗೂ ಅಮೆರಿಕದ ನಡುವೆ ಶಾಂತಿ ಸ್ಥಾಪನೆಗಾಗಿ ರಾಜತಾಂತ್ರಿಕ ಸಂಪರ್ಕಗಳು ನಡೆಯುತ್ತಿದ್ದರೂ, ಇಡೀ ಪ್ರದೇಶದಲ್ಲಿ ಭೀಕರ ಯುದ್ಧ ಮುಂದುವರಿದಿದೆ. ಇಂದು ಅಮೆರಿಕ ಸೇನೆಯು ಇರಾನ್‌ನ ಸಿಸಿಟಿವಿ ವ್ಯವಸ್ಥೆಗಳು, ಸಂವಹನ ಜಾಲಗಳು ಮತ್ತು ವಾಯು ರಕ್ಷಣಾ ನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್‌ನಾದ್ಯಂತ ತೀವ್ರ ದಾಳಿಗಳನ್ನು ನಡೆಸಿದೆ. ಇರಾನ್ ನಿರಂತರವಾಗಿ ನಡೆಸುತ್ತಿರುವ ಆಕ್ರಮಣಕಾರಿ ನಡವಳಿಕೆಗೆ ಪ್ರತಿಯಾಗಿ ಈ ದಾಳಿ ಮಾಡಲಾಗಿದೆ ಎಂದು ವಾಷಿಂಗ್ಟನ್ ಸಮರ್ಥಿಸಿಕೊಂಡಿದೆ. ಇರಾನ್ ಸರ್ಕಾರ ಅಮೆರಿಕದ ನಿಯಮಗಳನ್ನು ತಕ್ಷಣವೇ ಒಪ್ಪಿಕೊಳ್ಳದಿದ್ದರೆ ಮಿಲಿಟರಿ ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಟ್ರಂಪ್ ಎಚ್ಚರಿಸಿದ್ದಾರೆ.

ಇದಕ್ಕೆ ಇರಾನ್ ಸಹ ಗಲ್ಫ್ ಪ್ರದೇಶದಾದ್ಯಂತ ಇರುವ ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸುವ ಮೂಲಕ ತಿರುಗೇಟು ನೀಡಿದೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC), ಕುವೈತ್ ಮತ್ತು ಬಹ್ರೇನ್‌ನಲ್ಲಿರುವ ವಾಯು ನೆಲೆಗಳು ಮತ್ತು ಯುಎಸ್ ನೌಕಾಪಡೆಯ ಐದನೇ ಫ್ಲೀಟ್ ಪ್ರಧಾನ ಕಚೇರಿ ಸೇರಿದಂತೆ ಅಮೆರಿಕದ 18 ಮಿಲಿಟರಿ ಗುರಿಗಳ ಮೇಲೆ ದಾಳಿ ನಡೆಸಿರುವುದಾಗಿ ತಿಳಿಸಿದೆ. ಜೋರ್ಡಾನ್‌ನಲ್ಲಿರುವ ಅಲ್-ಅಜ್ರಾಕ್ ವಾಯು ನೆಲೆಯ ಮೇಲೆಯೂ ಕ್ಷಿಪಣಿ ದಾಳಿ ನಡೆಸಿರುವುದಾಗಿ ಇರಾನ್ ಪಡೆಗಳು ಹೇಳಿಕೊಂಡಿವೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Follow Us