Bharat NCAP: ಭಾರತ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್ ಆರಂಭಕ್ಕೆ ಕ್ಷಣಗಣನೆ

|

Updated on: Dec 14, 2023 | 7:57 PM

ಕೇಂದ್ರ ಸರ್ಕಾರವು ಭಾರತದಲ್ಲಿ ಹೊಸ ಕಾರುಗಳ ಸುರಕ್ಷತೆ ಸುಧಾರಿಸುವ ನಿಟ್ಟಿನಲ್ಲಿ ಭಾರತ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ಜಾರಿ ಮಾಡಿದ್ದು, ಹೊಸ ಸುರಕ್ಷಾ ಮಾನದಂಡ ಒಳಗೊಂಡಿರುವ ಕಾರುಗಳ ಪರೀಕ್ಷಾ ಪ್ರಕ್ರಿಯೆ ಡಿಸೆಂಬರ್ 15ರಿಂದ ಅಧಿಕೃತವಾಗಿ ಆರಂಭವಾಗಲಿದೆ.

Bharat NCAP: ಭಾರತ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್ ಆರಂಭಕ್ಕೆ ಕ್ಷಣಗಣನೆ
ಭಾರತ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್
Follow us on

ಭಾರತದಲ್ಲಿ ಉತ್ಪಾದನೆಗೊಳ್ಳುವ ಮತ್ತು ಮಾರಾಟಗೊಳ್ಳುವ ಹೊಸ ಕಾರುಗಳಲ್ಲಿನ ಸುರಕ್ಷತೆಯನ್ನು ಖಾತ್ರಿಪಡಿಸಲು ಕೇಂದ್ರ ಸರ್ಕಾರವು ಭಾರತ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ (Bharat New Car Assessment Program) ಆರಂಭಿಸಿದ್ದು, ಡಿಸೆಂಬರ್ 15ರಿಂದ ಅಧಿಕೃತವಾಗಿ ಆರಂಭವಾಗಲಿರುವ ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ (Crash Test) ದೇಶಿಯ ಮಾರುಕಟ್ಟೆಯಲ್ಲಿ ಹಲವು ಜನಪ್ರಿಯ ಕಾರುಗಳು ಸ್ವಯಂಪ್ರೇರಿತವಾಗಿ ಪರೀಕ್ಷೆಗೆ ಒಳಪಡಲಿವೆ.

ಭಾರತ್ ಎನ್‌ಸಿಎಪಿ ಸುರಕ್ಷಾ ಮಾನದಂಡಗಳು ದೇಶಿಯ ಮಾರುಕಟ್ಟೆಯಲ್ಲಿನ ವಾಹನಗಳ ಸುರಕ್ಷತೆಯಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಸಹಕಾರಿಯಾಗಲಿದ್ದು, ಮೊದಲ ಹಂತದಲ್ಲಿಯೇ ಸುಮಾರು 30ಕ್ಕೂ ಹೆಚ್ಚು ಕಾರುಗಳು ಕ್ಯಾಶ್ ಟೆಸ್ಟಿಂಗ್ ನಲ್ಲಿ ಭಾಗಿಯಾಗಲು ನೋಂದಣಿಯಾಗಿವೆ ಎನ್ನಲಾಗಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಜಾಗತಿಕವಾಗಿ ಉತ್ಪಾದನೆಗೊಳ್ಳು ಹೊಸ ಕಾರುಗಳ ಗುಣಮಟ್ಟ ಪರೀಕ್ಷಿಸಲು ಗ್ಲೋಬಲ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ ಮಾನದಂಡಗಳನ್ನು ಅನುಸರಿಸಲಾಗುತ್ತಿದ್ದು, ಇದೀಗ ಕೇಂದ್ರ ಸಾರಿಗೆ ಇಲಾಖೆಯು ದೇಶಿಯ ಮಾರುಕಟ್ಟೆಯಲ್ಲಿನ ಕಾರುಗಳಿಗಾಗಿಯೇ ಪ್ರತ್ಯೇಕವಾದ ಸುರಕ್ಷಾ ಮಾನದಂಡಗಳೊಂದಿಗೆ ಭಾರತ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್ ಸಿದ್ದಪಡಿಸಿದೆ.

ಇದನ್ನೂ ಓದಿ: ADAS ಫೀಚರ್ಸ್ ಹೊಂದಿರುವ ಟಾಪ್ 5 ಬಜೆಟ್ ಕಾರುಗಳಿವು!

ಕ್ರ್ಯಾಶ್ ಟೆಸ್ಟಿಂಗ್ ಮೂಲಕ ಹೊಸ ಕಾರುಗಳಲ್ಲಿನ ವಯಸ್ಕ ಪ್ರಯಾಣಿಕರ ಸುರಕ್ಷತೆ, ಮಕ್ಕಳ ಸುರಕ್ಷತೆ ಮತ್ತು ಸುರಕ್ಷಾ ತಂತ್ರಜ್ಞಾನಗಳ ಕಾರ್ಯನಿರ್ವಹಣೆಯ ಕಾರ್ಯಕ್ಷಮತೆಯನ್ನು ಪರೀಕ್ಷಿಸಲಿದ್ದು, ಇವು ಅಪಘಾತದ ವೇಳೆ ಪ್ರಯಾಣಿಕರಿಗೆ ಯಾವ ಮಟ್ಟದಲ್ಲಿ ಸುರಕ್ಷತೆ ಒದಿಗಸುತ್ತವೆ ಎನ್ನುವ ಆಧಾರದ ಮೇಲೆ ಸೊನ್ನೆಯಿಂದ 5 ಸ್ಟಾರ್ ತನಕ ರೇಟಿಂಗ್ಸ್ ನೀಡಲಾಗುತ್ತದೆ.

ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಸುರಕ್ಷಿತ ಕಾರು ಮಾದರಿ ಎಂದು ಗುರುತಿಸಿಕೊಳ್ಳಲು ಕನಿಷ್ಠ ಮೂರು ಸ್ಟಾರ್ ರೇಟಿಂಗ್ಸ್ ಪಡೆದುಕೊಳ್ಳುವುದು ಕಡ್ಡಾಯವಾಗಿದ್ದು, ಮೂರಕ್ಕಿಂತ ಕಡಿಮೆ ರೇಟಿಂಗ್ಸ್ ಪಡೆದುಕೊಳ್ಳುವ ಕಾರುಗಳನ್ನು ಕಳಪೆ ಕಾರು ಎಂದು ಘೋಷಣೆ ಮಾಡಲಾಗುತ್ತದೆ. ಹೀಗಾಗಿ ಹೊಸ ಕಾರುಗಳಲ್ಲಿ ಕಾರು ಉತ್ಪಾದನಾ ಕಂಪನಿಯು ಇದೀಗ ಹೆಚ್ಚಿನ ಸಂಖ್ಯೆಯ ಏರ್ ಬ್ಯಾಗ್ ಗಳು ಸೇರಿದಂತೆ ವಿವಿಧ ಸುರಕ್ಷಾ ಫೀಚರ್ಸ್ ಕಡ್ಡಾಯವಾಗಿ ಅಳವಡಿಸುತ್ತಿದ್ದು, ಇದು ಕ್ರ್ಯಾಶ್ ಟೆಸ್ಟಿಂಗ್ ರೇಟಿಂಗ್ಸ್ ಹೆಚ್ಚಿಸಲು ಸಹಕಾರಿಯಾಗಲಿವೆ.

ಭಾರತ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಭಾಗಿಯಾಗಲು ಈಗಾಗಲೇ ಹಲವಾರು ಕಾರು ಉತ್ಪಾದನಾ ಕಂಪನಿಗಳು ಉತ್ಸುಕವಾಗಿದ್ದು, ಟಾಟಾ ಮೋಟಾರ್ಸ್, ಮಹೀಂದ್ರಾ ಮತ್ತು ಹ್ಯುಂಡೈ ನಿರ್ಮಾಣದ ಪ್ರಮುಖ ಕಾರುಗಳು ಕಂಪನಿಯು ಮುಂಚೂಣಿಯಲ್ಲಿವೆ. ಭಾರತ್‌ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ ಪ್ರೋಟೋಕಾಲ್ ಅಂತಾರಾಷ್ಟ್ರೀಯ ಮಟ್ಟದ ಎನ್‌ಸಿಎಪಿ ರೇಟಿಂಗ್ ಏಜೆನ್ಸಿಗಳಿಗೆ ಅನುಗುಣವಾಗಿರಲಿದ್ದು, ಪರೀಕ್ಷಾ ವೇಗವನ್ನು ಪ್ರತಿ ಗಂಟೆಗೆ ಗರಿಷ್ಠ 64 ಕಿಮೀ ಗಳಿಗೆ ನಿಗದಿಪಡಿಸಲಾಗಿದೆ. ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ಸೀಟ್ ಬೆಲ್ಟ್ ರಿಮೈಂಡರ್‌ ಮತ್ತು ಪಾದಚಾರಿಗಳ ರಕ್ಷಣೆಯ ಫೀಚರ್ಸ್ ಗಳು ಹೊಸ ಕಾರುಗಳಿಗೆ ಹೆಚ್ಚಿನ ರೇಟಿಂಗ್ಸ್ ಒದಗಿಸಲಿವೆ.

ಇದನ್ನೂ ಓದಿ: ಬಿಡುಗಡೆಗೆ ಸಜ್ಜಾಗಿದೆ ಭರ್ಜರಿ ಮೈಲೇಜ್ ನೀಡುವ ರೆನಾಲ್ಟ್ ಇವಿ 5 ಕಾರು

ಭಾರತ್ ಎನ್‌ಸಿಎಪಿ ಅಧಿಕೃತ ಜಾರಿ ನಂತರ ಭಾರತದಲ್ಲಿ ಮಾರಾಟಗೊಳ್ಳುವ ಪ್ರತಿ ಹೊಸ ಕಾರಿಗೂ ಕ್ರ್ಯಾಶ್ ಟೆಸ್ಟಿಂಗ್ ಕಡ್ಡಾಯವಾಗಲಿದ್ದು, ಈ ಹಿನ್ನಲೆಯಲ್ಲಿ ಮುಂಬರುವ ಹೊಸ ಕಾರುಗಳು ಹೆಚ್ಚಿನ ಮಟ್ಟದ ರೇಟಿಂಗ್ಸ್ ಪಡೆದುಕೊಳ್ಳುವ ನಿಟ್ಟಿನಲ್ಲಿ ಸುರಕ್ಷಾ ಫೀಚರ್ಸ್ ಅಳವಡಿಸುವ ನೀರಿಕ್ಷೆಗಳಿವೆ. ಈ ಮೂಲಕ ಅಪಘಾತಗಳಲ್ಲಿನ ಪ್ರಾಣಹಾನಿ ಪ್ರಕರಣಗಳನ್ನು ಗಣನೀಯವಾಗಿ ತಗ್ಗಲಿದ್ದು, ಹೊಸ ಸುರಕ್ಷಾ ಫೀಚರ್ಸ್ ಗಳಿಂದಾಗಿ ಬಜೆಟ್ ಕಾರುಗಳ ಬೆಲೆಯಲ್ಲಿ ಸಾಕಷ್ಟು ದುಬಾರಿಯಾಗಬಹುದಾಗಿದೆ.

Published On - 7:57 pm, Thu, 14 December 23