Kia EV6: ಇವಿ ಕಾರು ಮಾರಾಟದಲ್ಲಿ ಹೊಸ ದಾಖಲೆ ನಿರ್ಮಿಸಿದ ಕಿಯಾ ಇವಿ6
ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಕಿಯಾ ಇಂಡಿಯಾ ಕಂಪನಿಯು ಹೊಸ ದಾಖಲೆ ನಿರ್ಮಿಸಿದೆ. ದುಬಾರಿ ಬೆಲೆ ನಡುವೆಯೂ ಇವಿ6 ಕಾರು ಮಾರಾಟದಲ್ಲಿ ಪ್ರತಿಸ್ಪರ್ಧಿ ಕಂಪನಿಗಳಿಗೆ ಭರ್ಜರಿ ಪೈಪೋಟಿ ನೀಡುತ್ತಿದೆ.
ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ(Electric Car) ಬೇಡಿಕೆ ಹೆಚ್ಚುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ವಿವಿಧ ಕಾರು ಕಂಪನಿಗಳು ಭರ್ಜರಿ ಮೈಲೇಜ್ ಪ್ರೇರಿತ ಇವಿ ಕಾರುಗಳನ್ನು ಬಿಡುಗಡೆ ಮಾಡುತ್ತಿವೆ. ಕಿಯಾ ಇಂಡಿಯಾ(Kia India) ಕಂಪನಿಯು ಕೂಡಾ ತನ್ನ ಹೊಸ ಇವಿ6(EV6) ಕಾರು ಮಾದರಿಯನ್ನು ಬಿಡುಗಡೆಗೊಳಿಸುವ ಮೂಲಕ ಹೊಸ ದಾಖಲೆಗೆ ಕಾರಣವಾಗಿದೆ. ಹೊಸ ಇವಿ6 ಕಾರು ಬಿಡುಗಡೆಯಾದ ಕೆಲವೇ ತಿಂಗಳಿನಲ್ಲಿ ಪ್ರಮುಖ ಐಷಾರಾಮಿ ಇವಿ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡುವ ಮೂಲಕ ಹೊಸ ಸಂಚಲನ ಮೂಡಿಸಿದೆ.
ಕಿಯಾ ಹೊಸ ಇವಿ6 ಮಾದರಿಯು ಭಾರತದಲ್ಲಿ ಬಿಡುಗಡೆಯಾದ ಕೇವಲ 5 ತಿಂಗಳಿನಲ್ಲಿ ಸುಮಾರು 200 ಯುನಿಟ್ ಮಾರಾಟಗೊಂಡಿದೆ. ಹೊಸ ಕಾರು ದುಬಾರಿ ಬೆಲೆ ನಡುವೆಯೂ ಉತ್ತಮ ಬೇಡಿಕೆ ಪಡೆದುಕೊಂಡಿದ್ದು, ಐಷಾರಾಮಿ ಕಾರುಗಳಿಗೆ ಭಾರೀ ಪೈಪೋಟಿ ನೀಡುತ್ತಿದೆ. ಭಾರತದಲ್ಲಿ ಸದ್ಯ ಹೊಸ ಕಾರಿಗೆ ಸುಮಾರು 355 ಗ್ರಾಹಕರು ಮುಂಗಡ ಹಣ ಪಾವತಿಸಿ ಬುಕಿಂಗ್ ದಾಖಲಿಸಿದ್ದು, ಇದರಲ್ಲಿ ಇದುವರೆಗೆ 200 ಯುನಿಟ್ ವಿತರಣೆ ಮಾಡಲಾಗಿದೆ.
ಇದನ್ನೂ ಓದಿ: ಐಷಾರಾಮಿ ಫೀಚರ್ಸ್ ಜೊತೆ ಹೈಬ್ರಿಡ್ ಎಂಜಿನ್ ನೊಂದಿಗೆ ಟೊಯೊಟಾ ಇನೋವಾ ಹೈಕ್ರಾಸ್ ಅನಾವರಣ
ಬೆಲೆ(ಎಕ್ಸ್ ಶೋರೂಂ ದರ)
ಐಷಾರಾಮಿ ಫೀಚರ್ಸ್ ಗಳೊಂದಿಗೆ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿರುವ ಕಿಯಾ ಇವಿ6 ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಹೊಸ ಕಾರು ಸದ್ಯ ಎಕ್ಸ್ ಶೋರೂಂ ಪ್ರಕಾರ ರೂ. 59.95 ಲಕ್ಷದಿಂದ ರೂ. 64.95 ಲಕ್ಷ ಬೆಲೆ ಹೊಂದಿದೆ.
ಬ್ಯಾಟರಿ ಸಾಮರ್ಥ್ಯ ಮತ್ತು ಮೈಲೇಜ್
ಹೊಸ ಕಾರು ಈ ವಿಭಾಗದಲ್ಲಿಯೇ ಅತಿಹೆಚ್ಚು ಐಷಾರಾಮಿ ಫೀಚರ್ಸ್ ಹೊಂದಿದ್ದು, 77.4kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಪಡೆದುಕೊಂಡಿದೆ. ಇದು ಪ್ರತಿ ಚಾರ್ಜ್ ಗೆ ಗರಿಷ್ಠ 528 ಕಿ.ಮೀ ಮೈಲೇಜ್ ರೇಂಜ್ ಹೊಂದಿದ್ದು, ಎಲೆಕ್ಟ್ರಿಕ್-ಗ್ಲೋಬಲ್ ಮಾಡ್ಯುಲರ್ ಪ್ಲಾಟ್‌ಫಾರ್ಮ್ ಆಧರಿಸಿ ನಿರ್ಮಾಣಗೊಂಡಿದೆ. ಹೊಸ ಕಾರು ತುಸು ದುಬಾರಿ ಬೆಲೆ ಹೊಂದಿದ್ದರೂ ಐಷಾರಾಮಿ ಫೀಚರ್ಸ್‌ಗಳೊಂದಿಗೆ ಪ್ರಮುಖ ಜರ್ಮನ್ ಕಾರು ಕಂಪನಿಗಳಿಗೆ ಉತ್ತಮ ಪೈಪೋಟಿ ನೀಡುತ್ತಿದೆ. ಸದ್ಯ ಕಂಪನಿಯು ಭಾರತದಲ್ಲಿ ಹೊಸ ಕಾರನ್ನು ಸೀಮಿತ ಸಂಖ್ಯೆಯಲ್ಲಿ ಮಾತ್ರ ಮಾರಾಟ ಮಾಡುತ್ತಿದ್ದು, ಹೊಸ ಕಾರನ್ನು ದಕ್ಷಿಣ ಕೊರಿಯಾದಲ್ಲಿನ ಉತ್ಪಾದನಾ ಘಟಕದಿಂದ ಆಮದುಮಾಡಿಕೊಳ್ಳುತ್ತಿದೆ.
ಇದನ್ನೂ ಓದಿ: ಮಾರುತಿ ಸುಜುಕಿ ಆಲ್ಟೋ ಕೆ10 ಸಿಎನ್ಜಿ ವರ್ಷನ್ ಬಿಡುಗಡೆ
ಹೊಸ ಎಲೆಕ್ಟ್ರಿಕ್ ಕಾರು ಅತ್ಯುತ್ತಮ ಮೈಲೇಜ್ ಪರ್ಫಾಮೆನ್ಸ್ ನಲ್ಲೂ ಗಮನಸೆಳೆಯುತ್ತಿದೆ. ಇದರಲ್ಲಿ ಡ್ಯುಯಲ್ ಮೋಟಾರ್ ಸೆಟಪ್ ಅನ್ನು ಜೋಡಿಸಲಾಗಿದೆ. ಇದರಲ್ಲಿರುವ ರಿಯರ್ ವ್ಹೀಲ್ ಡ್ರೈವ್ ಸೆಟಪ್ ಹೊಂದಿರುವ ಮಾದರಿಯು 229 ಹಾರ್ಸ್ ಪವರ್ ಮತ್ತು 350 ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದರೆ ಆಲ್ ವ್ಹೀಲ್ ಡ್ರೈವ್ ಮಾದರಿಯು 325 ಹಾರ್ಸ್ ಪವರ್ ಮತ್ತು 605 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.
ಡಿಸೈನ್ ಮತ್ತು ಫೀಚರ್ಸ್
ಪರ್ಫಾಮೆನ್ಸ್ ಜೊತೆಗೆ ಅತ್ಯುತ್ತಮ ಮೈಲೇಜ್ ಹೊಂದಿರುವ ಹೊಸ ಕಾರು ಹಲವಾರು ಪ್ರೀಮಿಯಂ ಫೀಚರ್ಸ್ ಹೊಂದಿದೆ. ಹೊಸ ಕಾರಿನಲ್ಲಿ ಕಂಪನಿಯು ಐದು ವಿವಿಧ ಬಣ್ಣಗಳ ಆಯ್ಕೆ ನೀಡಿದ್ದು, 4690 ಎಂಎಂ ಉದ್ದ, 1890 ಎಂಎಂ ಅಗಲ ಮತ್ತು 1550 ಎಂಎಂ ಎತ್ತರದೊಂದಿಗೆ ಅತ್ಯುತ್ತಮ ಕ್ಯಾಬಿನ್ ಸ್ಥಳವಾಕಾಶ ಹೊಂದಿದೆ. ಹೊಸ ಕಾರಿನಲ್ಲಿ 12.3-ಇಂಚಿನ ಡ್ಯುಯಲ್ ಡಿಸ್ಪ್ಪೇ, ಡ್ಯುಯಲ್ ಜೋನ್ ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, 60ಕ್ಕೂ ಹೆಚ್ಚು ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿರುವ ಕಿಯಾ ಕನೆಕ್ಟ್ ಸೌಲಭ್ಯ ನೀಡಲಾಗಿದೆ. ಇದಲ್ಲದೆ ಅಡ್ವಾನ್ಸ್ ಡ್ರೈವಿಂಗ್ ಅಸಿಸ್ಟ್ ಸಿಸ್ಟಂ ಸೂಟ್ ಸಹ ನೀಡಲಾಗಿದ್ದು, ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಗರಿಷ್ಠ 5 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಮೂಲಕ ಗರಿಷ್ಠ ಸುರಕ್ಷತೆ ಖಾತ್ರಿಪಡಿಸುತ್ತದೆ.
Published On - 7:49 pm, Mon, 21 November 22