Matter Electric BIke: ಪ್ರತಿ ಚಾರ್ಜ್ ಗೆ 150 ಕಿ.ಮೀ ಮೈಲೇಜ್ ನೀಡುತ್ತೆ ಮ್ಯಾಟರ್ ಎಲೆಕ್ಟ್ರಿಕ್ ಬೈಕ್
ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳ ಮಾರಾಟವು ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಅಹಮದಾಬಾದ್ ಮೂಲದ ಮ್ಯಾಟಿಕ್ ಎಲೆಕ್ಟ್ರಿಕ್ ಎಲೆಕ್ಟ್ರಿಕ್ ತನ್ನ ವಿನೂತನ ಬೈಕ್ ಮಾದರಿಯನ್ನು ಅನಾವರಣಗೊಳಿಸಿದೆ.
ಎಲೆಕ್ಟ್ರಿಕ್ ವಾಹನಗಳಿಗೆ(Electric Vehicles) ಹೆಚ್ಚುತ್ತಿರುವ ಬೇಡಿಕೆ ಆಧರಿಸಿ ಹಲವು ಸ್ಟಾರ್ಟ್ಅಪ್ ಕಂಪನಿಗಳು ಎಲೆಕ್ಟ್ರಿಕ್ ದ್ವಿಚಕ್ರ ವಾಹನ (Electric Two Wheelers) ವಿಭಾಗದಲ್ಲಿ ಹೊಸ ಮಾದರಿಗಳನ್ನು ಪರಿಚಯಿಸುತ್ತಿದ್ದು, ಅಹಮದಾಬಾದ್ ಮೂಲದ ಮ್ಯಾಟರ್ ಎಲೆಕ್ಟ್ರಿಕ್(Matter Electric) ಎಲೆಕ್ಟ್ರಿಕ್ ತನ್ನ ವಿನೂತನ ಬೈಕ್ ಮಾದರಿಯನ್ನು ಅನಾವರಣಗೊಳಿಸಿದೆ. ಹೊಸ ಬೈಕ್ ಮಾದರಿಯು ವಿನೂತನ ತಂತ್ರಜ್ಞಾನ ಪ್ರೇರಣೆಯೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಹೊಸ ಬೈಕ್ ಮಾದರಿಯು ಪ್ರತಿ ಚಾರ್ಜ್ ಗೆ 125 ರಿಂದ 150 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.
ಬ್ಯಾಟರಿ ಮತ್ತು ಎಲೆಕ್ಟ್ರಿಕ್ ಮೋಟಾರ್
ಮ್ಯಾಟರ್ ಎಲೆಕ್ಟ್ರಿಕ್ ಕಂಪನಿಯು ಹೊಸ ಇವಿ ಮೋಟಾರ್ ಸೈಕಲ್ ಮಾದರಿಯಲ್ಲಿ 5kWh ಬ್ಯಾಟರಿ ಪ್ಯಾಕ್ ಜೋಡಣೆ ಮಾಡಿದ್ದು, ಇದರಲ್ಲಿರುವ ಲಿಕ್ವಿಡ್ ಕೂಲ್ಡ್ ಎಲೆಕ್ಟ್ರಿಕ್ ಮೋಟಾರ್ ಮಾದರಿಯು 4-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿರುವ ಮತ್ತೊಂದು ವಿಶೇಷವಾಗಿದೆ. ಎಲೆಕ್ಟ್ರಿಕ್ ಬೈಕ್ ಮಾದರಿಗಳಲ್ಲಿ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆ ಹೊಂದಿರುವ ಮೊದಲ ಬೈಕ್ ಮಾದರಿ ಇದಾಗಿದ್ದು, ಭರ್ಜರಿ ಮೈಲೇಜ್ ಜೊತೆಗೆ ಅತ್ಯುತ್ತಮ ಪರ್ಫಾಮೆನ್ಸ್ ಹಿಂದಿರುಗಿಸುತ್ತದೆ.
ಹೊಸ ಬೈಕಿನಲ್ಲಿ ಚಾಲನೆಗೆ ಸಹಕಾರಿಯಾಗಿ ಸ್ಪೋರ್ಟ್, ಇಕೋ ಮತ್ತು ಸಿಟಿ ರೈಡಿಂಗ್ ಮೋಡ್ ಗಳನ್ನು ನೀಡಲಾಗಿದ್ದು, ಕೀ ಲೆಸ್ ಎಂಟ್ರಿ, ರಿವರ್ಸ್ ಪಾರ್ಕಿಂಗ್ ಅಸಿಸ್ಟ್ ಸೌಲಭ್ಯಗಳು ಬೈಕ್ ಚಾಲನೆಯನ್ನು ಮತ್ತಷ್ಟು ಸರಳಗೊಳಿಸಲಿವೆ. ಇನ್ನು ಹೊಸ ಬೈಕಿನಲ್ಲಿರುವ 5kWh ಬ್ಯಾಟರಿ ಪ್ಯಾಕ್ ಚಾರ್ಜ್ ಮಾಡಲು 1kW ಆನ್ ಬೋರ್ಡ್ ಚಾರ್ಜರ್ ಸೌಲಭ್ಯವನ್ನು ನೀಡಲಾಗಿದ್ದು, ಗರಿಷ್ಠ 5 ಗಂಟೆಗಳಲ್ಲಿ ಪೂರ್ತಿಯಾಗಿ ಚಾರ್ಜ್ ಮಾಡಬಹುದಾಗಿದೆ.
ಡಿಸೈನ್ ಮತ್ತು ಫೀಚರ್ಸ್
ಸ್ಪೋರ್ಟಿ ಡಿಸೈನ್ ಹೊಂದಿರುವ ಹೊಸ ಮ್ಯಾಟರ್ ಇವಿ ಬೈಕ್ ಮಾದರಿಯು ಡ್ಯುಯಲ್ ಕ್ರೆಡಲ್ ಫ್ರೆಮ್ ಚಾರ್ಸಿ ಮೇಲೆ ನಿರ್ಮಾಣಗೊಂಡಿದ್ದು, ಇದರಲ್ಲಿ ಬಿ-ಫಂಕ್ಷನಲ್ ಎಲ್ಇಡಿ ಹೆಡ್ ಲೈಟ್, ಎಲ್ಇಡಿ ಟರ್ನ್ ಇಂಡಿಕೇಟರ್ಸ್ ಮತ್ತು ಫೈರಿಂಗ್ ಫ್ಲಕ್ಸ್ ಫ್ಯೂಲ್ ಟ್ಯಾಂಕ್ ಡಿಸೈನ್ ಹೊಂದಿರಲಿದೆ. ಜೊತೆಗೆ ಹೊಸ ಕಾರಿನಲ್ಲಿ ಸ್ಪ್ಲಿಟ್ ಎಲ್ಇಡಿ ಟೈಲ್ ಲೈಟ್ಸ್, 7 ಇಂಚಿನ ಎಲ್ ಸಿಡಿ ಟಚ್ ಸ್ಕ್ರೀನ್, 4ಜಿ ಸರ್ಪೊಟ್ ಹೊಂದಿರುವ ಅಂಡ್ರಾಯಿಡ್ ಆಟೋ ಸೌಲಭ್ಯವು ರೈಡರ್ ಗೆ ಗರಿಷ್ಠ ಮಾಹಿತಿ ನೀಡಲಿವೆ.
ಸುರಕ್ಷಾ ಸೌಲಭ್ಯಗಳು
ಹೊಸ ಮ್ಯಾಟರ್ ಎಲೆಕ್ಟ್ರಿಕ್ ಬೈಕಿನಲ್ಲಿ ಕಂಪನಿಯು ಹಲವಾರು ಸುರಕ್ಷಾ ಸೌಲಭ್ಯಗಳಿದ್ದು, ಎರಡು ಬದಿ ಚಕ್ರಗಳಲ್ಲೂ ಡಿಸ್ಕ್ ಬ್ರೇಕ್ ಜೋಡಿಸಲಾಗಿದೆ. ಜೊತೆಗೆ ಹೊಸ ಬೈಕಿನಲ್ಲಿ ರಿಮೋಟ್ ಲಾಕ್/ಅನ್ ಲಾಕ್, ಜಿಯೋ ಫೆನ್ಸಿಂಗ್, ಲೈವ್ ಲೋಕೇಷನ್ ಟ್ರ್ಯಾಕಿಂಗ್, ವೆಹಿಕಲ್ ಹೆಲ್ತ್ ಮಾನಿಟರಿಂಗ್, ರೈಡ್ ಸ್ಟಾಟಿಕ್ಸ್, ಫುಶ್ ನ್ಯಾವಿಗೇಷನ್ ಸೌಲಭ್ಯಗಳಿವೆ.
ಬೆಲೆ ಮತ್ತು ಬಿಡುಗಡೆ
ಸದ್ಯ ಹೊಸ ಬೈಕ್ ಮಾದರಿಯನ್ನು ಅನಾವರಣಗೊಳಿಸಿರುವ ಮ್ಯಾಟರ್ ಕಂಪನಿಯು ಮುಂಬರುವ ಮಾರ್ಚ್ ಅಥವಾ ಏಪ್ರಿಲ್ ವೇಳೆಗೆ ಬಿಡುಗಡೆ ಮಾಡುವ ಸುಳಿವು ನೀಡಿದ್ದು, ಹೊಸ ಬೈಕ್ ಮಾದರಿಯು ಎಕ್ಸ್ ಶೋರೂಂ ಪ್ರಕಾರ ರೂ. 1.80 ಲಕ್ಷದಿಂದ ರೂ. 2 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗುವ ನೀರಿಕ್ಷೆಯಿದೆ.
Published On - 5:35 pm, Tue, 22 November 22