ಬಿಡುಗಡೆಗೆ ಸಿದ್ದವಾಗಿದೆ ಕಡಿಮೆ ಬೆಲೆಗೆ ಭರ್ಜರಿ ಮೈಲೇಜ್ ನೀಡುವ ಸಿಂಪಲ್ ಹೊಸ ಇವಿ ಸ್ಕೂಟರ್
ಸಿಂಪರ್ ಎನರ್ಜಿ ಕಂಪನಿಯು ದೇಶಿಯ ಮಾರುಕಟ್ಟೆಗಾಗಿ ತನ್ನ ಎರಡನೇ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಬಿಡುಗಡೆ ಮಾಡಲು ಸಿದ್ದವಾಗಿದ್ದು, ಹೊಸ ಇವಿ ಸ್ಕೂಟರ್ ಮಾದರಿಯು ಕಡಿಮೆ ಬೆಲೆಯೊಂದಿಗೆ ಭರ್ಜರಿ ಮೈಲೇಜ್ ಪ್ರೇರಿತ ಬ್ಯಾಟರಿ ಪ್ಯಾಕ್ ಜೋಡಣೆ ಹೊಂದಿರಲಿದೆ.
ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಮಾರಾಟದಲ್ಲಿ ಹೊಸ ಸಂಚಲನ ಮೂಡಿಸಿರುವ ಸಿಂಪಲ್ ಎನರ್ಜಿ (Simple Energy) ಕಂಪನಿಯು ಸಿಂಪಲ್ ಒನ್ ಇವಿ ಸ್ಕೂಟರ್ ನಂತರ ಎರಡನೇ ಇವಿ ಸ್ಕೂಟರ್ ಬಿಡುಗಡೆಯ ಯೋಜನೆಯಲ್ಲಿದ್ದು, ಹೊಸ ಇವಿ ಸ್ಕೂಟರ್ ಮಾದರಿಯನ್ನು ಸಿಂಪಲ್ ಎನರ್ಜಿ ಕಂಪನಿಯು ಡಾಟ್ ಒನ್ (Dot One) ಹೆಸರಿನಲ್ಲಿ ಬಿಡುಗಡೆ ಮಾಡುತ್ತಿದೆ.
ಮಾಹಿತಿಗಳ ಪ್ರಕಾರ ಸಿಂಪಲ್ ಎನರ್ಜಿ ಕಂಪನಿಯು ಹೊಸ ಡಾಟ್ ಒನ್ ಇವಿ ಸ್ಕೂಟರ್ ಮಾದರಿಯನ್ನು ಮುಂದಿನ ತಿಂಗಳು ಡಿಸೆಂಬರ್ 15ರಂದು ಅಧಿಕೃತವಾಗಿ ಬಿಡುಗಡೆ ಮಾಡುತ್ತಿದ್ದು, ಹೊಸ ಸ್ಕೂಟರ್ ಮಾದರಿಯು ಸಿಂಪಲ್ ಒನ್ ಮಾದರಿಗಿಂತಲೂ ಕಡಿಮೆ ಬೆಲೆಯೊಂದಿಗೆ ಉತ್ತಮ ಮೈಲೇಜ್ ಹೊಂದಿರುವ ಬ್ಯಾಟರಿ ಪ್ಯಾಕ್ ಜೋಡಣೆ ಹೊಂದಿರಲಿದೆ ಎನ್ನಲಾಗಿದೆ.
ಹೊಸ ಡಾಟ್ ಒನ್ ಇವಿ ಸ್ಕೂಟರ್ ಅನ್ನು ಸಿಂಪಲ್ ಎನರ್ಜಿಯು ಎಕ್ಸ್ ಶೋರೂಂ ಪ್ರಕಾರ ರೂ. 1 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆ ಮಾಡಲಿದೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ಇದು ಸದ್ಯ ಭಾರೀ ಬೇಡಿಕೆಯಲ್ಲಿರುವ ಓಲಾ ಮತ್ತು ಎಥರ್ ಇವಿ ಸ್ಕೂಟರ್ ಗಳಿಗೆ ಭರ್ಜರಿ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.
ಇದನ್ನೂ ಓದಿ: ಹೀರೋ ಜೂಮ್ 125ಆರ್ ಮತ್ತು ಜೂಮ್ 160 ಮ್ಯಾಕ್ಸಿ ಸ್ಕೂಟರ್ ಅನಾವರಣ!
ಡಾಟ್ ಒನ್ ಇವಿ ಸ್ಕೂಟರ್ ನಲ್ಲಿ ಸಿಂಪಲ್ ಎನರ್ಜಿ ಕಂಪನಿ ಪ್ರತಿಸ್ಪರ್ಧಿ ಮಾದರಿಗಳಿಗೆ ಪೈಪೋಟಿಯಾಗಿ 3.7ಕೆವಿಹೆಚ್ ಬ್ಯಾಟರಿ ಪ್ಯಾಕ್ ಜೋಡಣೆ ಮಾಡಲಿದ್ದು, ಇದು ಪ್ರತಿ ಚಾರ್ಜ್ ಗೆ ಬರೋಬ್ಬರಿ 160 ಕಿ.ಮೀ ಮೈಲೇಜ್ ನೀಡಬಹುದಾಗಿದೆ. ಜೊತೆಗೆ ಹೊಸ ಇವಿ ಸ್ಕೂಟರ್ ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಸಿಂಪಲ್ ಒನ್ ಮಾದರಿಗಿಂತಲೂ ಸಾಕಷ್ಟು ಹಗುರವಾಗಿದ್ದು, ಇದರಲ್ಲಿ 8.5ಕೆವಿ ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಮಾಡಲಾಗುತ್ತಿದೆ.
8.5ಕೆವಿ ಎಲೆಕ್ಟ್ರಿಕ್ ಮೋಟಾರ್ 72 ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, ಇದರಲ್ಲಿ 30 ಲೀಟರ್ ಸಾಮರ್ಥ್ಯದ ಅಂಡರ್ ಸೀಟ್ ಸ್ಟೋರೆಜ್, ಟಚ್ ಸ್ಕ್ರೀನ್ ಟಿಎಫ್ ಟಿ ಡ್ಯಾಶ್ ಬೋರ್ಡ್, ಬ್ಲೂಟೂಥ್ ಕನೆಕ್ಟಿವಿಟಿ ನೀಡಲಾಗುತ್ತಿದೆ. ತಾಂತ್ರಿಕವಾಗಿ ಸಿಂಪಲ್ ಒನ್ ಪ್ಲ್ಯಾಟ್ ಫಾರ್ಮ್ ಹಂಚಿಕೊಂಡಿರುವ ಡಾಟ್ ಒನ್ ಮಾದರಿಯಲ್ಲಿ ಬೆಲೆ ಕಡಿತಕ್ಕಾಗಿ ಕೆಲವು ಪ್ರೀಮಿಯಂ ಫೀಚರ್ಸ್ ಕೈಬಿಡಲಾಗಿದ್ದು, ಕಡಿಮೆ ಬೆಲೆಯೊಂದಿಗೆ ಅಗತ್ಯವಾಗಿರುವ ಕೆಲವೇ ಫೀಚರ್ಸ್ ಮಾತ್ರ ನೀಡಲಾಗುತ್ತಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿರುವ ಸಿಂಪಲ್ ಒನ್ ಮಾದರಿಯು 5ಕೆವಿಹೆಚ್ ಬ್ಯಾಟರಿ ಪ್ಯಾಕ್ ಜೋಡಣೆಯೊಂದಿಗೆ ಪ್ರತಿ ಚಾರ್ಜ್ ಗೆ 212 ಕಿ.ಮೀ ಮೈಲೇಜ್ ನೀಡುತ್ತಿದ್ದು, ಇದು ಸಿಂಗಲ್ ವೆರಿಯೆಂಟ್ ನಲ್ಲಿ ಬೆಂಗಳೂರು ಎಕ್ಸ್ ಶೋರೂಂ ಪ್ರಕಾರ ರೂ. 1.53 ಲಕ್ಷ ಬೆಲೆ ಹೊಂದಿದೆ. ಈ ಹಿನ್ನಲೆಯಲ್ಲಿ ಸಿಂಪಲ್ ಎನರ್ಜಿ ಕಂಪನಿಯು ಹೊಸ ಇವಿ ಸ್ಕೂಟರ್ ಮೂಲಕ ಕಡಿಮೆ ಬೆಲೆಯ ಇವಿ ಸ್ಕೂಟರ್ ಖರೀದಿದಾರರನ್ನು ಸೆಳೆಯುವ ತಂತ್ರ ರೂಪಿಸಿದ್ದು, ಇದು ಪ್ರಮುಖ ಇವಿ ಸ್ಕೂಟರ್ ಗಳಿಗೆ ಉತ್ತಮ ಪೈಪೋಟಿ ನೀಡಲಿದೆ.
ಇದನ್ನೂ ಓದಿ: ಹೋಂಡಾ ಸಿಬಿ350 Vs ಆರ್‍ಇ ಕ್ಲಾಸಿಕ್ 350.. ಖರೀದಿಗೆ ಯಾವುದು ಬೆಸ್ಟ್?
ಡಿಸೆಂಬರ್ 15ರಂದು ಹೊಸ ಡಾಟ್ ಒನ್ ಇವಿ ಸ್ಕೂಟರ್ ಬಿಡುಗಡೆ ಮಾಡಲಿರುವ ಸಿಂಪಲ್ ಎನರ್ಜಿ ಕಂಪನಿಯು 2024ರ ಜನವರಿ ಕೊನೆಯಲ್ಲಿ ಗ್ರಾಹಕರಿಗೆ ವಿತರಣೆ ಮಾಡುವ ಯೋಜನೆಯಲ್ಲಿದ್ದು, ಇದು ರೂ. 1 ಲಕ್ಷ ಬೆಲೆ ಅಂತರದಲ್ಲಿ ಉತ್ತಮ ಫೀಚರ್ಸ್ ಹೊಂದಿರುವ ಮತ್ತು ಹೆಚ್ಚು ಮೈಲೇಜ್ ನೀರಿಕ್ಷೆ ಮಾಡುವ ಗ್ರಾಹಕರಿಗೆ ಇದು ಅತ್ಯುತ್ತಮ ಆಯ್ಕೆಯಾಗಲಿದೆ.
Published On - 8:00 pm, Tue, 28 November 23