ಎಡಿಎಎಸ್ ಫೀಚರ್ಸ್ ನೊಂದಿಗೆ ಎಂಟ್ರಿ ನೀಡಲಿವೆ ಹೊಸ ಸ್ಕೋಡಾ ಕುಶಾಕ್ ಮತ್ತು ಸ್ಲಾವಿಯಾ

|

Updated on: Mar 15, 2024 | 10:30 PM

ಸ್ಕೋಡಾ ಕಂಪನಿಯು ತನ್ನ ಕುಶಾಕ್ ಕಂಪ್ಯಾಕ್ಟ್ ಎಸ್ ಯುವಿ ಮತ್ತು ಸ್ಲಾವಿಯಾ ಸೆಡಾನ್ ಕಾರುಗಳೊಂದಿಗೆ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ಕಾರುಗಳನ್ನು ಶೀಘ್ರದಲ್ಲಿಯೇ ಮತ್ತಷ್ಟು ಪ್ರೀಮಿಯಂ ಸುರಕ್ಷಾ ಫೀಚರ್ಸ್ ಗಳೊಂದಿಗೆ ಬಿಡುಗಡೆ ಮಾಡಲಾಗುತ್ತಿದೆ.

ಎಡಿಎಎಸ್ ಫೀಚರ್ಸ್ ನೊಂದಿಗೆ ಎಂಟ್ರಿ ನೀಡಲಿವೆ ಹೊಸ ಸ್ಕೋಡಾ ಕುಶಾಕ್ ಮತ್ತು ಸ್ಲಾವಿಯಾ
ಸ್ಕೋಡಾ ಕುಶಾಕ್ ಮತ್ತು ಸ್ಲಾವಿಯಾ
Follow us on

ಮಧ್ಯಮ ಕ್ರಮಾಂಕದ ಪ್ರೀಮಿಯಂ ಕಾರುಗಳ ಮೂಲಕ ಹೊಸ ಸಂಚಲನ ಮೂಡಿಸಿರುವ ಸ್ಕೋಡಾ ಇಂಡಿಯಾ (Skoda India) ಕಂಪನಿಯು ಶೀಘ್ರದಲ್ಲಿಯೇ ತನ್ನ ಜನಪ್ರಿಯ ಕಾರುಗಳಾದ ಕುಶಾಕ್ ಕಂಪ್ಯಾಕ್ಟ್ ಎಸ್ ಯುವಿ ಮತ್ತು ಸ್ಲಾವಿಯಾ ಸೆಡಾನ್ ಮಾದರಿಯನ್ನು ಹೊಸ ಸುರಕ್ಷಾ ಫೀಚರ್ಸ್ ಗಳೊಂದಿಗೆ ಉನ್ನತಿಕರಿಸುವ ಸುಳಿವು ನೀಡಿದೆ. ಹೊಸ ಮಾದರಿಗಳಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಈ ಮೂಲಕ ಇವು ಪ್ರತಿಸ್ಪರ್ಧಿ ಮಾದರಿಗಳಿಗೆ ಮತ್ತಷ್ಟು ಪೈಪೋಟಿ ನೀಡಲಿವೆ.

ಗುಣಮಟ್ಟದ ಉತ್ಪಾದನೆ ಮತ್ತು ಗರಿಷ್ಠ ಸುರಕ್ಷಾ ಸೌಲಭ್ಯಗಳ ಮೂಲಕ ಈಗಾಗಲೇ ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ 5 ಸ್ಟಾರ್ ಸೇಫ್ಟಿ ಹೊಂದಿರುವ ಕುಶಾಕ್ ಮತ್ತು ಸ್ಲಾವಿಯಾ ಕಾರುಗಳಲ್ಲಿ ಇದೀಗ ಮತ್ತಷ್ಟು ಹೊಸ ಫೀಚರ್ಸ್ ನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡುತ್ತಿವೆ. ಹೊಸ ಕಾರುಗಳಲ್ಲಿ ಮೊದಲ ಬಾರಿಗೆ 360 ಡಿಗ್ರಿ ಕ್ಯಾಮೆರಾ ಸೇರಿದಂತೆ ಲೆವಲ್ 2 ಅಡ್ವಾನ್ಸ್ ಡ್ರೈವಿಂಗ್ ಅಸಿಸ್ಟ್ ಸಿಸ್ಟಂ ಸೌಲಭ್ಯಗಳನ್ನು ಪಡೆದುಕೊಳ್ಳಲಿವೆ.

ಸಂಭಾವ್ಯ ಅಪಘಾತಗಳನ್ನು ತಗ್ಗಿಸುವಲ್ಲಿ ಅಡ್ವಾನ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ ಸಾಕಷ್ಟು ಸಹಕಾರಿಯಾಗುತ್ತಿದ್ದು, ಇದು ಕಾರು ಚಾಲನೆಯಲ್ಲಿರುವಾಗ ಚಾಲಕನ ಅರಿವಿಗೆ ಬಾರದೇ ಆಗಬಹುದಾದ ಅಪಘಾತಗಳನ್ನು ತಪ್ಪಿಸಲು ನೆರವಾಗುತ್ತಿದೆ. ಹೀಗಾಗಿ ಇತ್ತೀಚೆಗೆ ಬಿಡುಗಡೆಯಾಗಿರುವ ಹಲವು ಕಾರುಗಳಲ್ಲಿ ಈ ಹೊಸ ಸುರಕ್ಷಾ ಸೌಲಭ್ಯ ಪರಿಚಯಿಸಿದ್ದು, ಇದು ಗ್ರಾಹಕರಿಂದಲೂ ಭಾರೀ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಇದರಿಂದ ಸ್ಕೋಡಾ ಕಂಪನಿ ಸಹ ಕುಶಾಕ್ ಮತ್ತು ಸ್ಲಾವಿಯಾ ಕಾರುಗಳಿಗಾಗಿ ಹೊಸ ಫೀಚರ್ಸ್ ನೀಡಲು ಸಿದ್ದವಾಗುತ್ತಿದ್ದು, ಹೊಸ ಫೀಚರ್ಸ್ ಅನ್ನು ಹೈ ಎಂಡ್ ವೆರಿಯೆಂಟ್ ಗಳಲ್ಲಿ ನೀಡಬಹುದಾಗಿದೆ.

ಎಡಿಎಎಸ್ ಸೌಲಭ್ಯವು ಸಂಪೂರ್ಣವಾಗಿ ರಡಾರ್ ಆಧರಿಸಿ ಕಾರ್ಯನಿರ್ವಹಿಸಲಿದ್ದು, ಭವಿಷ್ಯದ ಆಟೊನೊಮಸ್ ಕಾರುಗಳಲ್ಲೂ ಇದು ನಿರ್ಣಾಯಕ ಪಾತ್ರವಹಿಸಲಿದೆ. ಆಟೋನೊಮಸ್ ಕಾರುಗಳಲ್ಲಿ ಸದ್ಯಕ್ಕೆ ಲೆವಲ್ 5 ಸೌಲಭ್ಯವನ್ನು ಬಳಕೆ ಮಾಡಲಾಗುತ್ತಿದ್ದು, ಸಾಮಾನ್ಯ ಕಾರುಗಳಿಗಾಗಿ ಲೆವಲ್ 1, ಲೆವಲ್ 2, ಲೆವಲ್ 3 ಮತ್ತು ಲೆವಲ್ 4 ಎಡಿಎಎಸ್ ಸೌಲಭ್ಯವನ್ನು ಬಳಸಲಾಗುತ್ತಿದೆ.

ಸ್ಕೋಡಾ ಕಂಪನಿ ಇದೀಗ ಹೊಸ ಕುಶಾಕ್ ಮತ್ತು ಸ್ಲಾವಿಯಾ ಕಾರುಗಳಿಗೆ ಲೆವಲ್ 2 ಎಡಿಎಎಸ್ ಫೀಚರ್ಸ್ ನೀಡುತ್ತಿದ್ದು, ಇದರಲ್ಲಿ ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್, ಪೆಡೆಸ್ಟ್ರಿಯನ್ ಡಿಟೆಕ್ಷನ್, ಸರೌಂಡ್ ವ್ಯೂ ಕ್ಯಾಮೆರಾ, ಪಾರ್ಕಿಂಗ್ ಅಸಿಸ್ಟ್, ಲೇನ್ ಕೀಪ್ ಅಸಿಸ್ಟ್, ಫಾರ್ವಡ್ ಕೂಲಿಷನ್ ಅಸಿಸ್ಟ್, ರಿಯರ್ ಕ್ರಾಸ್ ಟ್ರಾಫಿಕ್ ಅಸಿಸ್ಟ್ ಸೇರಿ ಹಲವು ಸೌಲಭ್ಯಗಳಿರಲಿವೆ.

ಇನ್ನು ಹೊಸ ಸುರಕ್ಷಾ ಫೀಚರ್ಸ್ ನೊಂದಿಗೆ ಮತ್ತಷ್ಟು ಸ್ಮಾರ್ಟ್ ಆಗಿ ರಸ್ತೆಗಿಳಿಯಲಿರುವ ಕುಶಾಕ್ ಮತ್ತು ಸ್ಲಾವಿಯಾ ಕಾರುಗಳು ಬೆಲೆಯಲ್ಲಿ ತುಸು ದುಬಾರಿಯಾಗಿರಲಿದ್ದು, ಇವು ಈ ಹಿಂದಿನಂತೆ ಪ್ರಮುಖ ಫೀಚರ್ಸ್ಗಳು ಮತ್ತು ಎಂಜಿನ್ ಆಯ್ಕೆಯೊಂದಿಗೆ ಮುಂದುವರಿಯಲಿವೆ. ಕುಶಾಕ್ ಮತ್ತು ಸ್ಲಾವಿಯಾ ಸದ್ಯಕ್ಕೆ 1.0 ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಮತ್ತು 1.5 ಲೀಟರ್ ಟಿಎಸ್ಐ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದ್ದು, ಇದರಲ್ಲಿ ಎಲೆಗೆನ್ಸ್ ಮತ್ತು ಮಾಂಟೆ ಕಾರ್ಲೊ ಎಡಿಷನ್ ಗಳನ್ನು ಹೊಂದಿವೆ.