ಭಾರತ್ ಎನ್ ಸಿಎಪಿ ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಮಿಂಚಿದ ಟಾಟಾ ಕರ್ವ್ ಮತ್ತು ಕರ್ವ್ ಎಲೆಕ್ಟ್ರಿಕ್
Tata Curvv, Curvv EV: ಟಾಟಾ ಮೋಟಾರ್ಸ್ ಹೊಸ ಕರ್ವ್ ಮತ್ತು ಕರ್ವ್ ಎಲೆಕ್ಟ್ರಿಕ್ ಕಾರುಗಳು ಗರಿಷ್ಠ ಸುರಕ್ಷಾ ಸೌಲಭ್ಯಗಳು ಮತ್ತು ಗುಣಮಟ್ಟದ ಉತ್ಪಾದನೆಯೊಂದಿಗೆ ಭಾರತ್ ಎನ್ ಸಿಎಪಿ ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಗರಿಷ್ಠ ರೇಟಿಂಗ್ಸ್ ಪಡೆದುಕೊಂಡಿವೆ.
ಭಾರತದಲ್ಲಿ ಸುರಕ್ಷಿತ ಕಾರುಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಟಾಟಾ ಮೋಟಾರ್ಸ್ (Tata Motors) ಕಂಪನಿಯು ಇದೀಗ ತನ್ನ ಹೊಚ್ಚ ಹೊಸ ಕರ್ವ್ ಮತ್ತು ಕರ್ವ್ ಇವಿ ಕಾರುಗಳ ಉತ್ಪಾದನೆಯಲ್ಲೂ ಗುಣಮಟ್ಟ ಮತ್ತು ಸುರಕ್ಷಿತ ವಿಚಾರವಾಗಿ ಗಮನಸೆಳೆದಿದೆ. ಭಾರತದಲ್ಲಿ ಉತ್ಪಾದನೆಗೊಳ್ಳುವ ಕಾರುಗಳಿಗಾಗಿಯೇ ಹೊಸದಾಗಿ ಆರಂಭವಾಗಿರುವ ಭಾರತ್ ಎನ್ ಸಿಎಪಿ ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಟಾಟಾ ಎರಡೂ ಹೊಸ ಕಾರುಗಳು 5 ಸ್ಟಾರ್ ಸೇಫ್ಟಿ ರೇಟಿಂಗ್ಸ್ ನೊಂದಿಗೆ ತೇರ್ಗಡೆಗೊಂಡಿವೆ.
ಕರ್ವ್ ಮತ್ತು ಕರ್ವ್ ಇವಿ ಕಾರುಗಳ ಬಿಡುಗಡೆಗೂ ಮುನ್ನವೇ 5 ಸ್ಟಾರ್ ಸೇಫ್ಟಿ ರೇಟಿಂಗ್ಸ್ ನೊಂದಿಗೆ ಪರಿಚಯಿಸುವುದಾಗಿ ಭರವಸೆ ನೀಡಿದ್ದ ಟಾಟಾ ಮೋಟಾರ್ಸ್ ಕಂಪನಿ ಇದೀಗ ಹೊಸ ಕಾರುಗಳ ಕ್ರ್ಯಾಶ್ ಟೆಸ್ಟ್ ರೇಟಿಂಗ್ಸ್ ಬಹಿರಂಗಪಡಿಸಿದ್ದು, ಅಪಘಾತದ ಸಂದರ್ಭದಲ್ಲಿ ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆಯನ್ನು ಖಾತ್ರಿಪಡಿಸಿದೆ.
ಹೊಸ ಕರ್ವ್ ಮತ್ತು ಕರ್ವ್ ಇವಿ ಕಾರುಗಳು ವಯಸ್ಕ ಪ್ರಯಾಣಿಕ ಸುರಕ್ಷತೆಯಲ್ಲಿ 32 ಅಂಕಗಳಿಗೆ ಕ್ರಮವಾಗಿ 29.50 ಮತ್ತು 30.81 ಅಂಕಗಳನ್ನು ಪಡೆದುಕೊಂಡಿದ್ದರೆ ಮಕ್ಕಳ ಸುರಕ್ಷತೆಗಾಗಿ ನೀಡಲಾಗುವ 49 ಅಂಕಗಳಿಗೆ 44.83 ಮತ್ತು 43.66 ಅಂಕಗಳನ್ನು ಪಡೆದುಕೊಂಡಿವೆ. ಈ ಮೂಲಕ ಹೊಸ ಕಾರುಗಳು ಹಲವಾರು ಸ್ಟ್ಯಾಂಡರ್ಡ್ ಸುರಕ್ಷಾ ಸೌಲಭ್ಯಗಳನ್ನು ಪಡೆದುಕೊಂಡಿದ್ದು, ಇವು ಪ್ರತಿಸ್ಪರ್ಧಿ ಕಾರುಗಳಿಂತಲೂ ಗರಿಷ್ಠ ಸುರಕ್ಷತೆಯನ್ನು ಖಾತ್ರಿಪಡಿಸಿವೆ.
ಕರ್ವ್ ಮತ್ತು ಕರ್ವ್ ಇವಿ ಕಾರುಗಳಲ್ಲಿ ಸುರಕ್ಷತೆಗಾಗಿ ಆರು ಏರ್ ಬ್ಯಾಗ್ ಗಳೊಂದಿಗೆ ಆಲ್ ವ್ಹೀಲ್ ಡಿಸ್ಕ್ ಬ್ರೇಕ್ಸ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, 360 ಡಿಗ್ರಿ ಕ್ಯಾಮೆರಾ, ಆಟೋ ಹೋಲ್ಡ್ ಅಸಿಸ್ಟ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಸೌಲಭ್ಯಗಳಿವೆ. ಹಾಗೆಯೇ ಹೈಎಂಡ್ ಮಾದರಿಗಳಿಗಾಗಿ ಹೆಚ್ಚಿನ ಮಟ್ಟದ ಸುರಕ್ಷಾ ಫೀಚರ್ಸ್ ಹೊಂದಿರುವ ಲೆವಲ್ 2 ಅಡ್ವಾನ್ಸ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ ನೀಡಲಾಗಿದೆ.
ಇನ್ನು ಕರ್ವ್ ಎಲೆಕ್ಟ್ರಿಕ್ ಆವೃತ್ತಿಯು ಪ್ರಮುಖ ಐದು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದೆ. ಕರ್ವ್ ಇವಿ ಕಾರಿನ ಆರಂಭಿಕ ಮಾದರಿಯು ಎಕ್ಸ್ ಶೋರೂಂ ಪ್ರಕಾರ ರೂ. 17.49 ಲಕ್ಷ ಬೆಲೆ ಹೊಂದಿದ್ದರೆ ಟಾಪ್ ಎಂಡ್ ಮಾದರಿಯು ರೂ. 21.99 ಲಕ್ಷ ಬೆಲೆ ಹೊಂದಿದೆ. ಗ್ರಾಹಕರು ಇದರಲ್ಲಿ 45ಕೆವಿಹೆಚ್ ಮತ್ತು 55ಕೆವಿಹೆಚ್ ಬ್ಯಾಟರಿ ಪ್ಯಾಕ್ ಆಯ್ಕೆ ಮಾಡಬಹುದಾಗಿದ್ದು, ಆರಂಭಿಕ ಮಾದರಿಯು ಗರಿಷ್ಠ 502 ಕಿ.ಮೀ ಮೈಲೇಜ್ ನೀಡಿದರೆ ಟಾಪ್ ಎಂಡ್ ಮಾದರಿಯು ಪ್ರತಿ ಚಾರ್ಜ್ ಗೆ ಗರಿಷ್ಠ 585 ಕಿ.ಮೀ ಮೈಲೇಜ್ ನೀಡುತ್ತದೆ.
ಹಾಗೆಯೇ ಕರ್ವ್ ಹೊಸ ಕಾರು ಆರು ವೆರಿಯೆಂಟ್ ಗಳನ್ನು ಹೊಂದಿದ್ದು, ಇದು 1.2 ಲೀಟರ್ ಎನ್ಎ ಪೆಟ್ರೋಲ್ ಎಂಜಿನ್, 1.5 ಲೀಟರ್ ಡೀಸೆಲ್ ಎಂಜಿನ್ ಮತ್ತು ಪರ್ಫಾಮೆನ್ಸ್ ಪ್ರಿಯರಿಗಾಗಿ 125 ಹಾರ್ಸ್ ಪವರ್ ಪ್ರೇರಿತ 1.2 ಲೀಟರ್ ಡೈರೆಕ್ಟ್ ಇಂಜೆಕ್ಷನ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆ ಪಡೆದುಕೊಂಡಿದೆ. ಇದು ಎಕ್ಸ್ ಶೋರೂಂ ಪ್ರಕಾರ ರೂ. 10 ಲಕ್ಷದಿಂದ ರೂ. 19 ಲಕ್ಷ ಬೆಲೆ ಹೊಂದಿದೆ.
Published On - 10:34 pm, Tue, 15 October 24