Tesla Cybertruck: ಬಹುನೀರಿಕ್ಷಿತ ಟೆಸ್ಲಾ ಸೈಬರ್‌ಟ್ರಕ್ ಬಿಡುಗಡೆ ಮಾಹಿತಿ ಬಹಿರಂಗ
ಟೆಸ್ಲಾ ಕಂಪನಿಯು ತನ್ನ ಬಹುನೀರಿಕ್ಷಿತ ಸೈಬರ್‌ಟ್ರಕ್ ಬಿಡುಗಡೆಗೆ ಸಿದ್ದವಾಗಿದ್ದು, ಹೊಸ ಎಲೆಕ್ಟ್ರಿಕ್ ಪಿಕ್ ಅಪ್ ಟ್ರಕ್ ವಿತರಣೆ ಸಿದ್ದತೆಯ ಮಾಹಿತಿ ಹಂಚಿಕೊಂಡಿದೆ.
ಅಮೆರಿಕ ಜನಪ್ರಿಯ ಎಲೆಕ್ಟ್ರಿಕ್ ಕಾರು (Electric Cars) ಉತ್ಪಾದನಾ ಕಂಪನಿಯಾಗಿರುವ ಟೆಸ್ಲಾ (Tesla) ತನ್ನ ಬಹುನೀರಿಕ್ಷಿತ ಸೈಬರ್‌ಟ್ರಕ್ (Cybertruck) ಎಲೆಕ್ಟ್ರಿಕ್ ಪಿಕ್ ಅಪ್ ಬಿಡುಗಡೆಗೆ ಸಿದ್ದವಾಗಿದ್ದು, ಹೊಸ ಎಲೆಕ್ಟ್ರಿಕ್ ಪಿಕ್ ಅಪ್ ಟ್ರಕ್ ವಿತರಣೆಗಾಗಿ ಕಾಯುತ್ತಿರುವ ಗ್ರಾಹಕರಿಗೆ ಸಿಹಿಸುದ್ದಿ ನೀಡಿದೆ.
ಬಿಡುಗಡೆಯ ಮಾಹಿತಿ
ಮಾಡೆಲ್ ಎಸ್, ಮಾಡೆಲ್ 3, ಮಾಡೆಲ್ ಎಕ್ಸ್ ಮತ್ತ ಮಾಡೆಲ್ ವೈ ಎನ್ನುವ ನಾಲ್ಕು ಎಲೆಕ್ಟ್ರಿಕ್ ಕಾರುಗಳ ಮೂಲಕ ಇವಿ ವಾಹನೋದ್ಯಮದಲ್ಲಿ ಹೊಸ ಸಂಚಲನ ಮೂಡಿಸಿರುವ ಟೆಸ್ಲಾ ಕಂಪನಿಯು ಇದೀಗ ತನ್ನ ಬಹುನೀರಿಕ್ಷಿತ ಸೈಬರ್‌ಟ್ರಕ್ ಎಲೆಕ್ಟ್ರಿಕ್ ಪಿಕ್ ಅಪ್ ಬಿಡುಗಡೆ ಮಾಡುತ್ತಿದ್ದು, ಹೊಸ ಇವಿ ವಾಹನವು ಇದೇ ವರ್ಷದ ನವೆಂಬರ್ 30ರಿಂದ ಗ್ರಾಹಕರಿಗೆ ವಿತರಣೆಯಾಗುವುದು ಬಹುತೇಕ ಖಚಿತವಾಗಿದೆ.
2019ರಲ್ಲಿ ಮೊದಲ ಬಾರಿಗೆ ಅನಾವರಣಗೊಂಡಿದ್ದ ಸೈಬರ್‌ಟ್ರಕ್ ಎಲೆಕ್ಟ್ರಿಕ್ ಪಿಕ್ ಅಪ್ ಅನ್ನು ಟೆಸ್ಲಾ ಕಂಪನಿಯು ಕಾರಣಾಂತರಗಳಿಂದ ಬಿಡುಗಡೆಯನ್ನು ಮುಂದೂಡುತ್ತಲೇ ಬಂದಿತ್ತು. 2021ರಲ್ಲೂ ಬಿಡುಗಡೆಗೆ ಸಿದ್ದವಾದಾಗಲೂ ಕೋವಿಡ್ ಕಾರಣಕ್ಕೆ ಹೊಸ ಇವಿ ವಾಹನ ಬಿಡುಗಡೆಯನ್ನು ಮುಂದೂಡಿಕೆ ಮಾಡಿದ್ದ ಟೆಸ್ಲಾ ಕಂಪನಿಯು ಇದೀಗ ಅಂತಿಮವಾಗಿ ಮತ್ತೊಂದು ದಿನಾಂಕ ಘೋಷಣೆ ಮಾಡಿದೆ.
2023ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕ ಸಭೆಯಲ್ಲಿ ಹೊಸ ಸೈಬರ್‌ಟ್ರಕ್‌ನ ಬಿಡುಗಡೆ ದಿನಾಂಕ ಘೋಷಣೆ ಮಾಡಿದ ಟೆಸ್ಲಾ ಕಂಪನಿಯು ಹೊಸ ಇವಿ ವಾಹನದ ಪೈಲಟ್ ಉತ್ಪಾದನೆ ಆರಂಭಿಸಿರುವುದಾಗಿ ಹೇಳಿಕೊಂಡಿದೆ. ಟೆಕ್ಸಾಸ್ ನಲ್ಲಿರುವ ತನ್ನ ಗಿಗಾಫ್ಯಾಕ್ಟರಿಯಲ್ಲಿ ಹೊಸ ಇವಿ ವಾಹನದ ಉತ್ಪಾದನೆ ಮಾಡಲಾಗುತ್ತಿದ್ದು, ಗಿಗಾಫ್ಯಾಕ್ಟರಿಯಲ್ಲಿ ವಾರ್ಷಿಕವಾಗಿ 1.25 ಲಕ್ಷ ಯುನಿಟ್ ಉತ್ಪಾದನೆ ಮಾಡಬಹುದಾದ ಸೌಲಭ್ಯ ಹೊಂದಿದೆ.
ಇದನ್ನೂ ಓದಿ: ಟಾಟಾ ಹ್ಯಾರಿಯರ್ vs ಟಾಟಾ ಸಫಾರಿ.. ಖರೀದಿಗೆ ಯಾವುದು ಬೆಸ್ಟ್?
ಬುಕಿಂಗ್ ನಲ್ಲಿ ಹೊಸ ದಾಖಲೆ
ಪಿಕ್ ಅಪ್ ಟ್ರಕ್ ಮಾದರಿಗಳ ಅತಿ ದೊಡ್ಡ ಮಾರುಕಟ್ಟೆಯಾಗಿರುವ ಅಮೆರಿಕದಲ್ಲಿ ಹೊಸ ಟೆಸ್ಲಾ ಸೈಬರ್‌ಟ್ರಕ್ ಇವಿ ವಾಹನವು ಈಗಾಗಲೇ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಂಡಿದ್ದು, ಬಿಡುಗಡೆಗೂ ಮುನ್ನವೇ ಬರೋಬ್ಬರಿ 20 ಲಕ್ಷಕ್ಕೂ ಹೆಚ್ಚು ಗ್ರಾಹಕರಿಂದ ಬುಕಿಂಗ್ ಪಡೆದುಕೊಂಡಿದೆ ಎನ್ನಲಾಗಿದೆ. ಹೊಸ ಇವಿ ವಾಹನವು ಟೆಸ್ಲಾ ಕಂಪನಿಯ ಇತರೆ ಇವಿ ಕಾರುಗಳಿಂತಲೂ ಹೆಚ್ಚಿನ ಮಟ್ಟ ತಂತ್ರಜ್ಞಾನ ಮತ್ತು ವೈಶಿಷ್ಟ್ಯತೆಗಳನ್ನು ಹೊಂದಿರಲಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾಡೆಲ್ ವೈ ತಂತ್ರಜ್ಞಾನ ಆಧರಿಸಿರುವ ಹೊಸ ಸೈಬರ್‌ಟ್ರಕ್ ಪಿಕ್ಅಪ್ ವಾಹನವು ವಿಶೇಷ ವಿನ್ಯಾಸದೊಂದಿಗೆ ರಸ್ತೆಗಿಳಿಯು ಸಿದ್ದವಾಗಿದ್ದು, ಹೊರಭಾಗದ ವಿನ್ಯಾಸವು ತುಸು ವಿಚಿತ್ರ ಎನ್ನಿಸಿದರೂ ಸಹ ಸುಧಾರಿತ ತಂತ್ರಜ್ಞಾನ ಪ್ರೇರಿತ ಸೌಲಭ್ಯಗಳೊಂದಿಗೆ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದೆ. ಸಾಮಾನ್ಯ ರಸ್ತೆಗಳಲ್ಲಿ ಮಾತ್ರವಲ್ಲದೇ ಆಫ್ ರೋಡ್‌ಗಳಲ್ಲೂ ಬಲಶಾಲಿ ಡ್ರೈವ್ ಸಿಸ್ಟಂ ಸೌಲಭ್ಯವನ್ನು ಹೊಂದಿರುವ ಸೈಬರ್‌ಟ್ರಕ್ ಮಾದರಿಯು ಆಲ್ ವೀಲ್ಹ್ ಡ್ರೈವ್ ಟೆಕ್ನಾಲಜಿ ವಿವಿಧ ವೆರಿಯೆಂಟ್‌ಗಳನ್ನು ಖರೀದಿಗೆ ಲಭ್ಯವಿರವಿದೆ.
ಸೈಬರ್‌ಟ್ರಕ್ ಮಾದರಿಯ ಅಧಿಕೃತ ಬ್ಯಾಟರಿ ಸಾಮರ್ಥ್ಯದ ಮಾಹಿತಿ ಲಭ್ಯವಿಲ್ಲವಾದರೂ ಪ್ರಮುಖ ನಾಲ್ಕು ವೆರಿಯೆಂಟ್ ಗಳೊಂದಿಗೆ ವಿವಿಧ ಸಾಮರ್ಥ್ಯ ಬ್ಯಾಟರಿ ಪ್ಯಾಕ್ ಆಯ್ಕೆ ಹೊಂದಿರಲಿದ್ದು, ಇದು ಪ್ರತಿ ಚಾರ್ಜ್ ಗೆ ಗರಿಷ್ಠ 850 ಕಿ.ಮೀ ಮೈಲೇಜ್ ನೀಡುತ್ತದೆ. ಜೊತೆಗೆ ಹೊಸ ಇವಿ ವಾಹನವು ಟೂರಿಂಗ್ ಉದ್ದೇಶಗಳಿಗೆ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಇದು ಸುಮಾರು 4,500 ಕೆಜಿ ಸರಕು ಎಳೆಯುವ ಸಾಮರ್ಥ್ಯವನ್ನು ಹೊಂದಿರುತ್ತದೆ ಎನ್ನಬಹುದು.
ಇದನ್ನೂ ಓದಿ: ವಿಶ್ವದ ಪ್ರಥಮ ಸೂಪರ್ ಟೂರರ್ ಆಸ್ಟನ್ ಮಾರ್ಟಿನ್ ಡಿಬಿ12 ಬೆಂಗಳೂರಿನಲ್ಲಿ ಬಿಡುಗಡೆ
ಇನ್ನು ಟೆಸ್ಲಾ ಹೊಸ ಪಿಕ್ಅಪ್ ಟ್ರಕ್ ಆವೃತ್ತಿಯು ಬಿಡುಗಡೆಯ ಹೊತ್ತಿಗೆ ಇನ್ನು ಕೆಲವು ಬದಲಾವಣೆಗಳಾಗುವ ಸಾಧ್ಯತೆಗಳಿದ್ದು, ಆದರೂ ಕೂಡಾ ಟೆಸ್ಲಾ ಕಂಪನಿ ಶೇ.90 ರಷ್ಟು ಉತ್ಪಾದನಾ ಆವೃತ್ತಿಯ ವಿನ್ಯಾಸವನ್ನು ಉತ್ಪಾದನಾ ಮಾದರಿಯಲ್ಲೂ ಮುಂದುವರೆಸುದಾಗಿ ಭರವಸೆ ನೀಡಿದೆ. ಹಾಗೆಯೇ ಬೆಲೆಯಲ್ಲೂ ಕೂಡಾ ಗಮನಸೆಳೆಯಲಿದ್ದು, ಇದು ಭಾರತದ ರೂಪಾಯಿ ಮೌಲ್ಯದಲ್ಲಿ ರೂ.60 ಲಕ್ಷದಿಂದ ಹೈ ಎಂಡ್ ಮಾದರಿಯು ರೂ. 90 ಲಕ್ಷ ಬೆಲೆ ಹೊಂದಿರುವ ಸಾಧ್ಯತೆಗಳಿವೆ.
Published On - 8:34 pm, Sun, 22 October 23