AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ತ್ರೀ ಆಟದ ವಸ್ತುವೇ? ಪುರಾಣ ಕಾಲದಿಂದಲೂ ಹೆಣ್ಣೆಂದರೆ ಎಲ್ಲರಿಗೂ ತಾತ್ಸಾರ

ಹೆಣ್ಣು ಎಂದರೆ ಒಂದು ಶಕ್ತಿ. ಲೋಕದ ಸುಖವೆಲ್ಲ ತನ್ನವರಿಗೆ ಸಿಗಲಿ ಎಂದು ಬಯಸುವ ಮಮತಾಮಯಿ. ತನ್ನಲ್ಲಿ ಎಷ್ಟೇ ನೋವಿರಲಿ ಅವುಗಳನ್ನೆಲ್ಲಾ ಬಚ್ಚಿಟ್ಟು ಸದಾ ನಗುವ, ಇನ್ನೊಬ್ಬರನ್ನು ನಗಿಸುವ ಕರುಣಾಮಯಿ. ಮಗಳಾಗಿ, ತಂಗಿಯಾಗಿ, ಮಡದಿಯಾಗಿ, ತಾಯಿಯಾಗಿ ಹೀಗೆ ನಾನಾ ಪಾತ್ರವಹಿಸುವವಳು ಸ್ತ್ರೀ.

ಸ್ತ್ರೀ ಆಟದ ವಸ್ತುವೇ? ಪುರಾಣ ಕಾಲದಿಂದಲೂ ಹೆಣ್ಣೆಂದರೆ ಎಲ್ಲರಿಗೂ ತಾತ್ಸಾರ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Jan 03, 2023 | 6:53 PM

Share

ಹೆಣ್ಣು ಎಂದರೆ ಒಂದು ಶಕ್ತಿ. ಲೋಕದ ಸುಖವೆಲ್ಲ ತನ್ನವರಿಗೆ ಸಿಗಲಿ ಎಂದು ಬಯಸುವ ಮಮತಾಮಯಿ. ತನ್ನಲ್ಲಿ ಎಷ್ಟೇ ನೋವಿರಲಿ ಅವುಗಳನ್ನೆಲ್ಲಾ ಬಚ್ಚಿಟ್ಟು ಸದಾ ನಗುವ, ಇನ್ನೊಬ್ಬರನ್ನು ನಗಿಸುವ ಕರುಣಾಮಯಿ. ಮಗಳಾಗಿ, ತಂಗಿಯಾಗಿ, ಮಡದಿಯಾಗಿ, ತಾಯಿಯಾಗಿ ಹೀಗೆ ನಾನಾ ಪಾತ್ರವಹಿಸುವವಳು ಸ್ತ್ರೀ. ಆದರೆ ಪುರಾಣಕಾಲದಿಂದಲೂ ಹೆಣ್ಣೆಂದರೆ ಎಲ್ಲರಿಗೂ ತಾತ್ಸರ. ಹೆಣ್ಣುಮಗು ಹುಟ್ಟಿದರೆ ಅದೃಷ್ಟಲಕ್ಷ್ಮಿ ಹುಟ್ಟಿದಳು ಎಂದು ಖುಷಿ ಪಡುವ ಪೋಷಕರು ಒಂದು ಕಡೆಯಾದರೆ, ದರಿದ್ರ ಹುಟ್ಟಿತು ಎನ್ನುವವರು ಇನ್ನೊಂದೆಡೆ. ಹೆಣ್ಣು ಹುಟ್ಟಿದರೆ ಮನೆಕೆಲಸಕ್ಕಾಯಿತು ಅವರಿಗೆ ವಿದ್ಯಾಭ್ಯಾಸದ ಅವಶ್ಯಕತೆ ಇಲ್ಲ ಎಂದುಕೊಳ್ಳುವ ಜನರೂ ಇದ್ದಾರೆ. ಹೆಣ್ಣು ಮಗು ಹುಟ್ಟಿ ಇನ್ನೇನೂ ಮಾತನಾಡುತ್ತಾಳೆ ಎಂದಾಗ ಬಂಧುಗಳ ಬಂಧನದ ಸಂಕೋಲೆಗೆ ಸಿಲುಕಿಬಿಡುತ್ತಾಳೆ.

ಒಂದು ವೇಳೆ ಹೆಣ್ಣಿಗೆ ಆಕೆಯ ಪೋಷಕರು ಒಳ್ಳೆಯ ಭವಿಷ್ಯ ಕೊಡಲು ನಿರ್ಧರಿಸಿದರೆ ಕೆಲ ಬಂಧುಗಳು ಅದನ್ನು ನಾಶ ಮಾಡಿಬಿಡುತ್ತಾರೆ. “ಹೆಣ್ಣಲ್ವಾ ಅವಳಿಗೆ ಭವಿಷ್ಯ ರೂಪಿಸಿ ನಿಮಗೇನು ಪ್ರಯೋಜನ? ಹೇಗೂ ಬೇರೆಯವರ ಮನೆಗೆ ಹೋಗುವವಳು ಎಂಬುದಷ್ಟೇ ಅವರ ಉತ್ತರವಾಗಿರುತ್ತದೆ. ಇದರಿಂದ ಹೆಣ್ಣಿಗೆ ಅವಳ ಇಚ್ಛೆಯಂತೆ ಸಮಾಜದಲ್ಲಿ ಸ್ಥಾನಮಾನ ದೊರಕುವುದಿಲ್ಲ. ಅವಳಿಗೆ ಬೇಕಾದಂತೆ ಜೀವಿಸುವ ಸ್ವಾತಂತ್ರ್ಯವೂ ಇಲ್ಲವಾಗುತ್ತದೆ. ಹೆಣ್ಣು ಒಂದು ನಿರ್ದಿಷ್ಟ ವಯಸ್ಸಿಗೆ ಬರುತ್ತಿದ್ದಂತೆಯೇ ಅವಳ ಮೇಲೆ ನಿರ್ಬಂಧ ಹೇರಲು ಶುರುಮಾಡುತ್ತಾರೆ. ಆಕೆ ಯಾವ ಬಟ್ಟೆ ಧರಿಸಬೇಕು, ಹೇಗೆ ಶೃಂಗಾರ ಮಾಡಬೇಕು, ಎಲ್ಲಿ ಹೋಗಬೇಕು ಇವೆಲ್ಲವೂ ಪೋಷಕರ ಅಥವಾ ಬಂಧುಮಿತ್ರರ ನಿರ್ಧಾರವಾಗಿರುತ್ತದೆ. ಆಕೆಗೆ ತನ್ನ ಸ್ವಂತ ಯೋಚನೆಗೂ ಅವಕಾಶ ಕೊಡುವುದಿಲ್ಲ. ಹಾಗೋ ಹೀಗೋ ಕಷ್ಟಪಟ್ಟು ಓದಿ ತನ್ನ ಭವಿಷ್ಯ ತಾನೇ ರೂಪಿಸಿಕೊಳ್ಳೋಣವೆಂದರೆ ವಿವಾಹವೆಂಬ ಕಾರಾಗ್ರಹಕ್ಕೆ ತಳ್ಳಿಬಿಡುತ್ತಾರೆ. ನಿನ್ನ ಗಂಡನ ಮನೆಯಲ್ಲಿ ನಿನಗಿಷ್ಟ ಬಂದಂತೆ ಇರು ಎಂಬ ಉತ್ತರವೂ ಅವರಲ್ಲಿ ಸಿದ್ಧವಿರುತ್ತದೆ.

ಇದನ್ನು ಓದಿ:ಅಕ್ಕನೆಂಬ ಮಮತೆಗೆ ನಮ್ಮ ಮನೆಯಿಂದ ವಿದಾಯದ ಕ್ಷಣ, ನೀ ನನ್ನ ಜೀವನದ ಸ್ಪೂರ್ತಿ ಅಕ್ಕಮ್ಮ

ಗಂಡನ ಮನೆ ಮೊದಲ ಕೆಲ ದಿವಸ ಸ್ವರ್ಗದಂತೆ ಭಾಸವಾದರೂ ದಿನ ಕಳೆಯುತ್ತಿದ್ದಂತೆ ಅದೂ ಸಹ ನರಕವಾಗಿ ಬಿಡುತ್ತದೆ. ನಿನಗಿಷ್ಟ ಬಂದಂತೆ ಇರಲು ಇದು ನಿನ್ನ ಹೆತ್ತವರ ಮನೆಯಲ್ಲ ಎಂಬ ಮಾತು ಆಕೆಯನ್ನು ಕಟ್ಟಿ ಹಾಕಿ ಬಿಡುತ್ತದೆ. ದಿನಾ ಕೂಲಿಯಂತೆ ದುಡಿಯುವ ಆಕೆಯ ಯೋಗಕ್ಷೇಮ ವಿಚಾರಿಸುವರೇ ಇರುವುದಿಲ್ಲ. ಒಂದೆರಡು ಹೊಗಳಿಕೆಯ ಮಾತು ಆಕೆಯ ಪಾಲಿಗೆ ಇಲ್ಲವಾಗಿಬಿಡುತ್ತದೆ. ಯಾವುದು ಆಕೆಯ ಮನೆ, ಯಾರು ಆಕೆಯ ಹಿತೈಷಿಗಳು ಎಂಬ ಸಂಶಯದ ನಡುವೆ ಸಿಲುಕಿಬಿಡುತ್ತಾಳೆ. ತನ್ನ ಸಣ್ಣ ವಯಸ್ಸಿನಲ್ಲಿಯೇ ಇಡೀ ಮನೆಯ ಹೊರೆಯನ್ನು ಹೊತ್ತುಕೊಳ್ಳುತ್ತಾಳೆ. ಮುಂಜಾನೆಯಿಂದ ಸಂಜೆಯವರೆಗೆ ಮನೆಯಲ್ಲಿ ದುಡಿದರೂ ಆಕೆಗೆ ಕೊನೆಗೆ ದೂಷಣೆಯ, ಅವಮಾನದ ಮಾತುಗಳಷ್ಟೇ.

ಪುರಾಣ ಕಾಲದಿಂದಲೂ ಯಾವ ಹೆಣ್ಣು ಸಹ ಸಂಪೂರ್ಣವಾಗಿ ಖುಷಿಯನ್ನು ಅನುಭವಿಸಿದವರಲ್ಲ. ರಾಧೆ, ಸೀತೆ, ದ್ರೌಪದಿಯರದೂ ಇದೇ ಕಥೆ. ಏನೇ ಕೆಲಸವಾಗಬೇಕಾದರೂ ಹೆಣ್ಣು ಬೇಕು. ಬೆಳ್ಳಗೆ ತಿಂಡಿ ತಯಾರಿಸಿ, ಗಂಡನ ಬೂಟು ಸ್ವಚ್ಛಗೊಳಿಸಿ, ಆತನನ್ನು ನಗು ಮುಖದಿಂದ ಆಫೀಸಿಗೆ ಕಳುಹಿಸುವ, ಮಕ್ಕಳನ್ನು ಪ್ರೀತಿಯಿಂದ ಪೊರೆಯುವ ಈಕೆಯ ಬೇಕು ಬೇಡಗಳನ್ನು ಕೇಳುವವರು ಯಾರೂ ಇಲ್ಲ. ಆಕೆಯ ಮೇಲೆ ಸಾವಿರ ಬಾರಿ ದಬ್ಬಾಳಿಕೆಗಳು ನಡೆದರೂ ಆಕೆ ಮಾತ್ರ ತನ್ನವರ ಹಿತವನ್ನೇ ಬಯಸುತ್ತಾಳೆ. ಆಕೆಯ ಬಗ್ಗೆ ಒಂದು ಒಳ್ಳೆಯ ಮಾತನ್ನಾಡಿದರೆ ಸಾಕು ಸಂತೋಷದಿಂದ ಹಿಗ್ಗುತ್ತಾಳೆ. ನೋವಲ್ಲೂ ನಗುವನ್ನು ಕಾಣುತ್ತಾಳೆ ಆ ಮಾತೃಹೃದಯಿ. ಅತ್ತಾಗ ಸಾಂತ್ವನ ನೀಡುವ ದೇವತೆ, ಆಕೆ ನಿಜವಾಗಿಯೂ ಒಂದು ಶಕ್ತಿ.

ಕಾಲ ಬದಲಾದರೂ ಮನುಷ್ಯನ ಯೋಚನೆ ಇನ್ನೂ ಬದಲಾಗಿಲ್ಲ. ಈಗಲೂ ಹೆಣ್ಣನ್ನು ಆಟದ ವಸ್ತುವಾಗಿಯೇ ಕಾಣುತ್ತಿದ್ದಾರೆ. ಏನೇ ಆದರೂ ಹೆಣ್ಣಿನ ಮೇಲಿನ ಶೋಷಣೆ, ದಬ್ಬಳಿಗೆ ತಪ್ಪಿದ್ದಲ್ಲ. ಹೆಣ್ಣೇ ದೈರ್ಯದಿಂದ ಇವುಗಳನ್ನೆಲ್ಲ ಎದುರಿಸಿ ನಿಲ್ಲಬೇಕು. ಆಕೆಯ ವಿರುದ್ಧವಾಗಿ ನಡೆಯುವ ಶೋಷಣೆಯನ್ನು ಆಕೆಯೇ ಖಂಡಿಸಬೇಕು. ಶಾಂತ ರೂಪಿಯಾಗಿರುವ ಆಕೆಯ ರೌದ್ರ ಮುಖವನ್ನು ಜಗತ್ತಿಗೆ ತೋರಿಸಬೇಕು. ಹೆಣ್ಣು ಆಟದ ವಸ್ತುವಲ್ಲ ಎಂಬುದನ್ನು ಸಾಬೀತುಪಡಿಸಬೇಕು.

ಲಾವಣ್ಯ. ಎಸ್.

ಬ್ಲಾಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:53 pm, Tue, 3 January 23