ಆಕ್ರಂದನ : ಇದು ಅಂತರಾತ್ಮದ ಕೂಗು…. ಭಾಗ -1
ಈ ಪಿಲಿಚಾಮುಂಡಿ ದೈವಸ್ಥಾನದ ದೈವ ಪಾದ್ರಿಯೇ ಕುಂಞ.. ಪರವ ಜನಾಂಗದ ಇವನು ಆಜಾನು ಬಾಹು. ಕಪ್ಪಾದ ಲಕ್ಷಣ ಮುಖ. ಗುಂಗುರು ಕೂದಲು, ಕೈಯಲ್ಲಿ ಚಿನ್ನದ ಕಡಗ. ಕುಂಞ ಪಿಲಿಚಾಮುಂಡಿಯ ನೇಮಕ್ಕೆ ಅಣಿ ಕಟ್ಟಿ, ಮೊಗ ತೊಟ್ಟು ನಿಂತರೆ ಸಾಕು ಸುತ್ತಲೂ ಗಂಭೀರ ಮೌನ ಆವರಿಸುತ್ತಿತ್ತು.. ತಾಯಿ ಲಚ್ಚಿಯ ಪಾಡ್ದನ, ಅಣ್ಣ ದೇವುನ ತೆಂಬರ ವಾದನ ನೇಮಕ್ಕೆ ಇನ್ನಷ್ಟು ಕಳೆಗಟ್ಟುತ್ತಿತ್ತು.
ಊರ ಜಾತ್ರೆ ಹತ್ತಿರ ಬರುತ್ತಿದ್ದಂತೇ ಅವನ ಮನದೊಳಗೆ ತಳಮಳ ಶುರುವಾಗಿತ್ತು. ಇದ್ದಕ್ಕಿದ್ದಂತೇ ಹೃದಯ ಬಡಿತ ಹೆಚ್ಚಾಗಿತ್ತು. ಉದರದಲ್ಲಿ ಸಹಿಸಲಾಗದ ಸಂಕಟ, ನೋವು. ನಡುಕ ಹುಟ್ಟಿಸುವ ಚಳಿ. ಆಗ ಬಂದಿತ್ತು ಆ ದೀರ್ಘವಾದ ವಿಕಾರ ಸ್ವರ.. ‘ಓ’ ಎಂಬ ವಿಚಿತ್ರ ಕೂಗು.. ಒಂದು ಕ್ಷಣಕಾಲ ಆವೇಶಭರಿತವಾಗಿದ್ದ ಕಣ್ಣುಗಳಲ್ಲಿ ಕಣ್ಣೀರು ತುಂಬಿ ದೀನ ಭಾವ ಕಾಣಿಸಿಕೊಂಡಿತು. ಅದು ಪರಿಸ್ಥಿತಿಯನ್ನು ಹತೋಟಿಗೆ ತರಲಾಗದ ಅಸಹಾಯಕ ಸ್ಥಿತಿ. ಅವನು ‘ಓ..’ ಎಂದು ಕೀರುತ್ತಲೇ ಇದ್ದ. ಅವನ ಮನದೊಳಗಿನ ಆಕ್ರಂದನ ಕಣ್ಣೀರ ಕೋಡಿಯಾಗಿ ಹರಿದಿತ್ತು..
ಮಂದಾರಮಲೆ ಕಾಡಿನ ತಪ್ಪಲಲ್ಲಿ ಹಾಸಿಕೊಂಡಂತಿರುವ ಆ ಪುಟ್ಟ ಹಳ್ಳಿ ಪಚ್ಚೆಮಲೆ. ತುಳುನಾಡಿನ ವಿಶಿಷ್ಟ ಸಂಸ್ಕೃತಿಯೊಳಗೆ ಕಲೆತು,ಬೆರೆತುಹೋದ ಬದುಕು ಇಲ್ಲಿನ ಮುಗ್ದ ಜನರದ್ದು. ಈ ಹಳ್ಳಿಯ ಸದಾಶಿವ ದೇವಸ್ಥಾನ ಸುತ್ತೂರಲ್ಲಿ ಬಹಳ ಪ್ರಸಿದ್ಧಿ ಪಡೆದಿತ್ತು. ಮೊದಲು ಅರಮನೆಯ ಆಡಳಿತಕ್ಕೊಳಪಟ್ಟಿದ್ದ ದೇವಸ್ಥಾನ ನಂತರ ಮುಜರಾಯಿ ಇಲಾಖೆಯ ಕೈ ಸೇರಿದರೂ ಅಲ್ಲಿನ ಪ್ರತೀ ಆಚರಣೆಗಳೂ ಅರಮನೆ ಮನೆತನದ ಮುಖಂಡತ್ವದಲ್ಲೇ ನಡೆಯುತ್ತಿತ್ತು. ರಾಜರ ಆಳ್ವಿಕೆ ಮುಗಿದಿದ್ದರೂ ಊರಿನ ದೇವ ಕಾರ್ಯಗಳ ವಿಷಯಕ್ಕೆ ಬಂದಾಗ ಅರಮನೆಯ ಮುಖಂಡರಿಗೆ ವಿಶೇಷ ಸ್ಥಾನವಿತ್ತು.
ಆ ದೇವಸ್ಥಾನದ ಅಧೀನದಲ್ಲಿ ಬರುವುದೇ ಅರಮನೆಗೆ ಅಂಟಿಕೊಂಡಂತಿರುವ ಪಿಲಿಚಾಮುಂಡಿ ದೈವಸ್ಥಾನ. ಊರ ಜಾತ್ರೆಗೆ ಕಳೆಗಟ್ಟುವುದೇ ಇಲ್ಲಿನ ದೈವಗಳ ಭಂಡಾರ ಹೊರಟಾಗ. ಊರ ಜನಕ್ಕೆ ದೈವದ ಮೇಲೆ ಅತೀವ ಭಯಭಕ್ತಿ. ಶಕ್ತಿ ರೂಪಿಣಿಯಾದ ಆ ದೈವ ಊರನ್ನು ಕಾಪಾಡುವಳು ಎಂಬ ನಂಬಿಕೆ. ಊರಲ್ಲಿ ಏನೇ ಶುಭಕಾರ್ಯವಿರಲಿ,ತೊಂದರೆ ಬರಲಿ ಆಕೆಗೆ ಎಲೆ-ಅಡಿಕೆ, ಮಲ್ಲಿಗೆ ಅರ್ಪಿಸಿದರೆ ಆಕೆಯೇ ನೋಡಿಕೊಳ್ಳುವಳೆಂಬ ಧೈರ್ಯ. ಆ ಜನರ ಮುಗ್ದ ಧೈರ್ಯ ನಂಬಿಕೆಗಳೆ ಆ ಊರಿನ ಭದ್ರ ಬುನಾದಿ.
ಈ ಪಿಲಿಚಾಮುಂಡಿ ದೈವಸ್ಥಾನದ ದೈವ ಪಾದ್ರಿಯೇ ಕುಂಞ.. ಪರವ ಜನಾಂಗದ ಇವನು ಆಜಾನು ಬಾಹು. ಕಪ್ಪಾದ ಲಕ್ಷಣ ಮುಖ. ಗುಂಗುರು ಕೂದಲು, ಕೈಯಲ್ಲಿ ಚಿನ್ನದ ಕಡಗ. ಕುಂಞ ಪಿಲಿಚಾಮುಂಡಿಯ ನೇಮಕ್ಕೆ ಅಣಿ ಕಟ್ಟಿ, ಮೊಗ ತೊಟ್ಟು ನಿಂತರೆ ಸಾಕು ಸುತ್ತಲೂ ಗಂಭೀರ ಮೌನ ಆವರಿಸುತ್ತಿತ್ತು.. ತಾಯಿ ಲಚ್ಚಿಯ ಪಾಡ್ದನ, ಅಣ್ಣ ದೇವುನ ತೆಂಬರ ವಾದನ ನೇಮಕ್ಕೆ ಇನ್ನಷ್ಟು ಕಳೆಗಟ್ಟುತ್ತಿತ್ತು. ಆ ಒಂದು ರಾತ್ರಿ ಭೂತಾರಾಧನೆ ಮುಗಿದರೆ ಮತ್ತದೇ ಕಡು ಬಡತನ. ಅರಮನೆಯಿಂದ ಬಂದ ಒಂದಷ್ಟು ತೋಟ ತಂದೆಯ ಜೂಜಿನ ಪಾಲಾಗಿ ತಂದೆಯೊಂದಿಗೆ ಇತಿಹಾಸ ಸೇರಿಕೊಂಡಿತ್ತು. ಊರ ಹಿರಿಯರ ತೋಟಗಳಲ್ಲಿ ಕೆಲಸ ಮಾಡಿಕೊಂಡು, ಬುಟ್ಟಿ ಹೆಣೆದು ಕೊಂಡು ತಮ್ಮ ಜೀವನ ಸಾಗಿಸಬೇಕಾದ ಅನಿವಾರ್ಯತೆ. ಕುಂಞನ ಅಣ್ಣ ದೇವು. ಅವನೂ ದೈವ ಪಾದ್ರಿಯೆ. ಕುಂಞ ಮಿತಭಾಷಿಯಾದರೆ ದೇವು ವಾಚಾಳಿ. ದಿನವಿಡೀ ತೋಟದಲ್ಲಿ ದುಡಿದು, ಬಳಲಿ ಬೆಂಡಾಗಿ ಮನೆಗೆ ತೆರಳಬೇಕಾದರೆ ಅವರ ಕೈಯಲ್ಲಿ ಕಳಿ(ಸಾರಾಯಿ)ಯ ಬಾಟಲಿಗಳು ಇರಲೇ ಬೇಕು.
ನಂಬಿದ ದೈವಕ್ಕೆ ನಿತ್ಯ ಸೇವೆ ಮಾಡಿ, ಮನೆಯ ಅಂಗಳದಲ್ಲಿ ಒಣ ಕಡ್ಡಿಗಳನ್ನು ಸೇರಿಸಿ, ಬೆಂಕಿ ಹಚ್ಚಿ ಬಯಲುರಿ ಹಾಕಿ ಕುಳಿತರೆ, ತಾಯಿ ಲಚ್ಚಿ ಹೊಟ್ಟೆಗೊಂದಷ್ಟು ಕಳಿ ಇಳಿಸಿ, ತಮಟೆ ತಟ್ಟುತ್ತಾ ತನ್ನ ಪಾಡ್ದನ ಶುರು ಹಚ್ಚಿಕೊಳ್ಳುತ್ತಿದ್ದಳು. ತಾಳ-ಮೇಳಗಳೊಂದಿಗೆ ಕಳಿ(ಸಾರಾಯಿ) ಗಂಟಲೊಳಗೆ ಇಳಿಯುತ್ತಿದ್ದರೆ ಅವರ ಸ್ವರ್ಗಕ್ಕೆ ಮೂರೇ ಗೇಣು. ಇದ್ದಲ್ಲಿಗೆ ಸಂತೋಷವಾಗಿ, ಸುಂದರವಾಗಿ ಸಾಗುತ್ತಿದ್ದ ಬದುಕಿನ ದೋಣಿಗೆ ಆಸೆಯ ಅಲೆಯೊಂದು ಬಂದು ಅಪ್ಪಳಿಸಿತ್ತು.
ಊರ ಜಾತ್ರೆಗೆ ತಿಂಗಳಿರಬೇಕಾದರೆ ಅರಮನೆಯಲ್ಲಿ ಗೌಜಿ-ಗದ್ದಲಗಳು ಶುರುವಾಗುತ್ತಿತ್ತ್ತು. ಜಾತ್ರೆ ಸಂದರ್ಭದಲ್ಲಿ ಅಣ್ಣ ತಮ್ಮಂದಿರು ಸಂಪೂರ್ಣ ಅರಮನೆಯ ಕೆಲಸ ಕಾರ್ಯಗಳಲ್ಲಿ ನಿರತರಾಗುತ್ತಿದ್ದರು. ಪ್ರತೀ ವರ್ಷದಂತೆ ಕುಂಞ ಹಾಗೂ ದೇವು, ದೈವ- ದೇವರುಗಳ ಚಿನ್ನಾಭರಣ, ಆಯುಧಗಳನ್ನು ತೊಳೆದಿಡುವ ಕಾರ್ಯಕ್ಕೆ ತೊಡಗಿದ್ದರು. ಕಣ್ಣೆದುರು ಚಿನ್ನದ ಭಂಡಾರವನ್ನೇ ಕಂಡ ದೇವು ಒಮ್ಮೆ ಮೂಖನಾಗಿದ್ದ.. ಮನದಲ್ಲಿ ಅದೇನೋ ಅಸಹನೆ, ನೋವು ಕಾಡಿತ್ತು. ಪಕ್ಕದಲ್ಲೇ ಕಾರ್ಯ ನಿರತನಾದ ತಮ್ಮನ ಕಂಡು, “ನೋಡು ಕುಂಞ, ಇವರ ಹತ್ತಿರ ಎಷ್ಟು ಚಿನ್ನವಿದೆ..ದೇವರದ್ದೇ ಇಷ್ಟಿರಬೇಕಾದರೆ ಒಳಗೆಷ್ಟಿರಬೇಡ. ದೇವರೆಂದಾದರೂ ನನಗೆ ಹಾಕು ಚಿನ್ನ ಎಂದಿದ್ದಾನೆಯೇ? ಇದರಲ್ಲಿ ಒಂದು ತುಂಡಾದರೂ ಅಂದು ನಮ್ಮ ಹತ್ತಿರ ಇದ್ದಿದ್ದರೆ ಗುರುವನನ್ನು ಉಳಿಸಿಕೊಳ್ಳಬಹುದಿತ್ತು.
ನಮ್ಮಲ್ಲಿ ಹಣವಿಲ್ಲದಿದ್ದುದೇ ತಪ್ಪಾಯಿತು” ಎಂದಾಗ, ಕುಂಞನಿಗೆ ತಮ್ಮನ ನೆನಪಾಗಿ ಕಣ್ಣೀರು ಬಂತು. ಗುರುವ ಇವರಲ್ಲೇ ಕೊನೆಯವ. ಚೆನ್ನಾಗೇ ಆಡಿಕೊಂಡಿದ್ದ ೧೪ ವರ್ಷದ ಹುಡುಗ ಇದ್ದಕ್ಕಿದ್ದ ಹಾಗೇ ಜ್ವರ, ತಲೆನೋವು ಎಂದು ಮಲಗಿದವನು ಎದ್ದೇಳಲಾರದಾದ. ಆಸ್ಪತ್ರೆಯಲ್ಲಿ “ಈತನಿಗೆ ಟ್ಯೂಮರ್ ಇದೆ ಕೂಡಲೇ ಶಸ್ತ್ರ ಚಿಕಿತ್ಸೆ ಆಗಬೇಕು” ಎಂದಾಗ ಅಣ್ಣ-ತಮ್ಮಂದಿರಿಗೇ ದಿಕ್ಕೇ ತೋಚದಾಯಿತು. ಊರಿಡೀ ಕಾಡಿದರೂ, ಬೇಡಿದರೂ ಚಿಕಿತ್ಸೆಗೆ ಬೇಕಾದಷ್ಟು ಹಣ ಹೊಂದಿಸಲಾಗಲಿಲ್ಲ. ಕೊನೆಗೆ ಪ್ರೀತಿಯ ತಮ್ಮನ ಹೆಣದ ಮುಂದೆ ಬರಿಗೈ ಚೆಲ್ಲಿ ಕುಳಿತಿದ್ದರು.
“ನಮ್ಮಲ್ಲಿ ವೇಷಕ್ಕೆ ಬೆಲೆ ಮನುಷ್ಯರಿಗಲ್ಲ. ಜಾತಿಗೆ,ಚಿನ್ನಕ್ಕೆ ಸಿಗುವ ಬೆಲೆ ಮನಸ್ಸಿಗಿಲ್ಲ. ಕತ್ತಲೆಗೆ ನೀನು ದೈವವಾದರೆ ಹಗಲು ಕೇವಲ ದೇವು. ಬುಟ್ಟಿ ಹೆಣೆದು ಮಾರುವ ಪರವ.. ಮಾರು ದೂರದ ಸ್ಥಾನ. ಸಂತೋಷ ಕೊಡುವ ವಿಷಯ ಒಂದೇ ಅದೇನು ಗೊತ್ತಾ ದೇವು ಆ ಶಕ್ತಿ ಸಂಚಾರವಾಗುವುದು ನಮ್ಮೊಳಗೆ. ಆಕೆ ನಮ್ಮನ್ನು ದೂರ ಮಾಡಳು” ಎಂದ. ದೇವು ಹೌದೆಂಬಂತೆ ತಲೆಯಲ್ಲಾಡಿಸುತ್ತಾ ನಿಟ್ಟುಸಿರುಬಿಟ್ಟ. ಆ ದಿನ ಕೆಲಸ ಮುಗಿಸಿ ರಾತ್ರಿ ಮನೆಗೆ ತೆರಳಬೇಕಾದರೆ ಅಣ್ಣ ತಮ್ಮಂದಿರ ಕಾಲು ರಸ್ತೆಯನ್ನು ಅಳೆಯುತ್ತಿತ್ತು, ಕಳಿಯ ‘ಮತ್ತು’ ತಲೆಗೇರಿತ್ತು. ದೇವು ಅದೇಕೋ ಅಸಹನೆಯಲ್ಲಿ ಕುದಿಯುತ್ತಿದ್ದ. ಆದಿನ ಎಂದಿನಂತೆ ಅವರಿಗೆ ದೈವಕ್ಕೆ ಕೈಮುಗಿವ ಮನಸ್ಸಾಗಲಿಲ್ಲ. ಮತ್ತೇರಿದ ಮಕ್ಕಳನ್ನು ಕಂಡ ಲಚ್ಚಿಯೂ ಬೈದುಕೊಂಡು ಸುಮ್ಮನಾಗಿದ್ದಳು. ದೇವು, ಕುಂಞ ತೂರಾಡುತ್ತಾ ಮಾತಿಗೆ ಶುರುವಿಟ್ಟುಕೊಂಡಿದ್ದರು. ಬಯಲುರಿಯ ಬೆಂಕಿ ಅಣ್ಣ ತಮ್ಮಂದಿರ ಮುಖದಲ್ಲಿ ಪ್ರಜ್ವಲಿಸುತ್ತಿತ್ತು.
ಗಾರ್ಗಿ
-ಮುಂದುವರಿಯುವುದು
Published On - 9:43 am, Wed, 23 February 22