ಅದೇನು ಆ ರೀತಿ ಬಾಗಿಲು ಬಂದ್ ಮಾಡ್ತಿ, ಅದೇನೂ ಬಸ್ಸಾ? ನಿಧಾನಕ್ಕೆ ಹಾಕಿದರೆ ಆಗಲ್ವಾ? ಢಬಕ್ ಎಂದು ಬಾಗಿಲು ಮುಚ್ಚಿದ ಸದ್ದಿಗಿಂತಲೂ ಎತ್ತರದ ದನಿಯಲ್ಲೇ ಕಿರುಚಿದ್ದೆ. ಕೆಲವೊಮ್ಮೆ ಕಿರುಚುವುದು ಅರ್ಥಾತ್ ಬೊಬ್ಬೆ ಹಾಕಿ ಹೇಳುವುದು ಅನಿವಾರ್ಯ. ಇಲ್ಲಾಂದ್ರೆ ಮನೆಯಲ್ಲಿ ಯಾರೂ ಕಿವಿಗೊಡುವುದಿಲ್ಲ. ಆಫ್ಟರ್ ಆಲ್ ಮನೆಯಲ್ಲಿರುವಾಗ ಅಲ್ಲವೇ ಹೀಗೆ ಬೇಕೆಂದಂತೆ ಕಿರುಚೋದು ಅರಚೋದು. ನಾವು ನಾವಾಗಿರೋದು ಕೂಡಾ ಬಾಗಿಲು ಮುಚ್ಚಿದ ಕೋಣೆಯಲ್ಲೇ. ಹೀಗೆ ಕಿರುಚಿ ಒಂದೈದು ನಿಮಿಷ ಆದ ನಂತರ ಮುಚ್ಚಿದ ಕೋಣೆಯಲ್ಲಿ ಕುಳಿತು ಅದೇ ಬಾಗಿಲತ್ತ ನೋಡಿ ಕುಳಿತಾಗ ಅನಿಸಿದ್ದು, ಬಾಗಿಲಿಗೂ ಮಾತು ಬರುತ್ತಿದ್ದರೆ? ಅದೂ ಕೂಡಾ ನಮ್ಮಂತೆ ಕೈ ಕಾಲು ಇದ್ದು ಚಲಿಸುವಂತಿದ್ದರೆ? ನನಗೆ ಈ ಕೋಣೆ ಬೇಡ ಎಂದು ಎದ್ದು ಹೋಗುತ್ತಿತ್ತು. ತುಂಟತನವಿರುವ ಬಾಗಿಲು ಆಗಿರ್ತಿದ್ದರೆ ತಕ್ಕ ಸಮಯ ನೋಡಿ ಎಲ್ಲೋ ಅಡಗಿ ಕೂತು ಕೋಣೆಯೊಳಗಿರುವ ಪ್ರೈವಸಿಯನ್ನು ಪಬ್ಲಿಕ್ ಮಾಡಿ ಬಿಡ್ತಿತ್ತು. ಸ್ವಲ್ಪ ಸಿಟ್ಟು ಇರುವ ಬಾಗಿಲು ಆದ್ರೆ ಬಾಗಿಲು ಢಬಕ್ ಎಂದು ಹಾಕಿದಾಗ ಬಾಯಿಗೆ ಬಂದಂತೆ ಬಯ್ಯುತ್ತಿತ್ತು. ಏನೆಲ್ಲಾ ತರ್ಲೆ ಯೋಚನೆಗಳು! ಬಾಗಿಲು ಎಂಬುದು ಸಾಮಾನ್ಯ ಸಂಗತಿಯೇ ಅಲ್ಲ, ಕೋಣೆಗೊಂದು ಬಾಗಿಲು ಬೇಕೇ ಬೇಕು. ಬಾಗಿಲುಗಳಿಲ್ಲದ ಮನೆಗಳಿಲ್ಲ. ನಮ್ಮ ಆಪ್ತರು ಬರುತ್ತಿದ್ದರೆ ಬಾಗಿಲ ಬಳಿ ನಿಂತೇ ದಾರಿಕಾಯುವುದು. ಹೆಣ್ಣು ನೋಡಲು ಬಂದರೆ ಗಂಡಿನ ಕಣ್ಣು ಬಾಗಿಲ ಕಡೆಯೇ ಇರುತ್ತದೆ. ಬಾಗಿಲ ಬಳಿ ನಿಂತು ಇಣುಕಿ ನೋಡುವ ಹೆಣ್ಣು, ಕರೆದಾಗಲಷ್ಟೇ ಗಂಡಿನ ಮುಂದೆ ಬಂದು ನಿಲ್ಲವ ದೃಶ್ಯಗಳು, ಮದುವೆ ಆದಮೇಲೆ ಗಂಡು ಹೆಣ್ಣು ತಮ್ಮ ಕೋಣೆಯೊಳಗೆ ಹೊಕ್ಕು ಬಾಗಿಲುಮುಚ್ಚುವ ದೃಶ್ಯಗಳು..ಹೀಗೆ ಬಾಗಿಲು ಇಲ್ಲಿ ಪ್ರಧಾನವಾಗಿರುತ್ತದೆ.
ನಮ್ಮ ಅಜ್ಜಿ ಮನೆಯೊಳಗೆ ಹೋಗಬೇಕಾದರೆ ಸ್ವಲ್ಪ ತಲೆ ಬಗ್ಗಿಸಿಯೇ ಹೋಗಬೇಕಾಗಿತ್ತು. ಪ್ರವೇಶ ಬಾಗಿಲಿನ ದಾರಂದ ತಗ್ಗಾಗಿಯೇ ಇತ್ತು. ಮನೆಯೊಳಗೆ ಬರಬೇಕಾದರೆ ತಲೆ ತಗ್ಗಿಸಿ ಬರಬೇಕು ಅಂತಿದ್ದರು ಅಮ್ಮ. ಆಗ ನನಗಿನ್ನೂ ಆರೇಳು ವರ್ಷ, ಹಾಗಾಗಿ ಎತ್ತರವಿದ್ದ ಸಾಮಾನ್ಯ ವ್ಯಕ್ತಿಗಳ ಹಣೆಗೆ ದಾರಂದ ತಾಗುತ್ತಿತ್ತೇ ಹೊರತು ನಮ್ಮಂತ ಮಕ್ಕಳಿಗೆ ಇದರಿಂದ ಏನೂ ಸಮಸ್ಯೆ ಇರುತ್ತಿರಲಿಲ್ಲ. ಇದು ಹಳೇ ಮನೆ ಕತೆ, ಈಗ ಅಂಥಾ ಸಮಸ್ಯೆಗಳೇನೂ ಇಲ್ಲ.
ಹೇಳ ಹೊರಟಿದ್ದು ಬಾಗಿಲು ವಿಷ್ಯ ಅಲ್ವಾ, ಬಾಗಿಲಿನ ಮೇಲಿರುವ ವಿನ್ಯಾಸ ಹೇಗೆಯೇ ಇರಲಿ ಚಿಲಕ ಗಟ್ಟಿಯಾಗಿ ಇರಬೇಕು. ಬಾಗಿಲ ಬಳಿ ಕಸ ಇರಲೇ ಬಾರದು. ಬಾಗಿಲು ಎಂಬುದು ಕೇವಲ ವಸ್ತುವಲ್ಲ. ನಮ್ಮನ್ನು ಸದಾ ಸ್ವಾಗತಿಸುವ, ನಮಗೆ ಪ್ರೈವೆಸಿ ನೀಡುವ ಬಾಗಿಲುಗಳನ್ನು ಸಾಮಾನ್ಯವೆಂಬಂತೆ ಕಾಣುವುದು ಸರಿಯಲ್ಲ. ಅದೇನೇ ಸಿಟ್ಟಿರಲಿ ಅದನ್ನು ಬಾಗಿಲ ಮೂಲಕ ತೋರಿಸುವ ಹಲವರನ್ನು ನಾನು ನೋಡಿದ್ದೇನೆ. ಸಿಟ್ಟು ತೋರಿಸುವುದಕ್ಕೋಸ್ಕರ ಬಾಗಿಲನ್ನು ಜೋರಾಗಿ ಹಾಕುವುದು, ಬಾಗಿಲಿಗೆ ಬಂದವರನ್ನು ಅವಮಾನಿಸಲು ಬಾಗಿಲು ಮುಚ್ಚುವುದು ಹೀಗೆ.
ನಮ್ಮೂರಲ್ಲಿ ಅತಿಥಿಗಳು ಮನೆಗೆ ಬಂದು ಹೊರಟಾಗ ಅವರೊಂದಿಗೆ ಅಂಗಳಕ್ಕೆ ಇಳಿದು ಬೀಳ್ಕೊಡುವುದು ವಾಡಿಕೆ. ಆದರೆ ಮಹಾ ನಗರಗಳಲ್ಲಿ ಅತಿಥಿ ಹೊಸ್ತಿಲು ದಾಟುತ್ತಿದ್ದಂತೆ ಬಾಗಿಲು ಬಂದ್. ಇದು ನಗರಜೀವನದ ಸೇಫ್ಟಿ ವಿಷಯ. ಗಾಳಿ,ಮಳೆ ,ಬಿಸಿಲು ,ಚಳಿಯಿಂದ ನಮ್ಮನ್ನು ಕಾಪಾಡುವ ಬಾಗಿಲು ಅತೀ ಹೆಚ್ಚು ಉಪಯೋಗಕ್ಕೆ ಬರುವುದು ನಮ್ಮ ಖಾಸಗಿತನವನ್ನು ಕಾಪಾಡುವುದಕ್ಕೆ. ಅಳು, ನಗು,ಸಿಟ್ಟು, ಕ್ರೌರ್ಯ ಭಯಗಳೆಲ್ಲವೂ ಮುಚ್ಚಿದ ಕೋಣೆಯೊಳಗೇ ನಡೆಯುತ್ತವೆ. ಮುಚ್ಚಿದ ಬಾಗಿಲು ದಿಗಿಲು ಹುಟ್ಟಿಸುವಂಥದ್ದೂ , ಉಸಿರುಕಟ್ಟಿಸುವಂಥದ್ದೂ ಹೌದು. ಆದರೆ ಬಾಗಿಲು ಯಾವಾಗ ತೆರೆಯಬೇಕು, ಹೇಗೆ ಮುಚ್ಚಬೇಕು ಎಂಬುದು ನಮ್ಮ ಕೈಯಲ್ಲಿದೆ. ಮುಚ್ಚಿದ ಕೋಣೆಯೊಳಗೆ ಹುಟ್ಟುವ ಆಲೋಚನೆಗಳೂ ಹಾಗೆಯೇ.ಅದು ಪಾಸಿಟಿವ್ ಆಗಿರಬಹುದು, ನೆಗೆಟಿವ್ ಕೂಡಾ ಆಗಿರಬಹುದು. ಅದಕ್ಕೆ ಹೇಗೆ ಪ್ರತಿಕ್ರಯಿಸಬೇಕು ಎಂಬ ಗೊಂದಲಕ್ಕೊಳಗಾದಾಗ ಬಾಗಿಲು ತೆರೆದು ನೋಡಬೇಕು, ಕೋಣೆಯದ್ದು ಮಾತ್ರವಲ್ಲ ಮನಸಿನದ್ದೂ ಕೂಡಾ.
ಇದನ್ನೂ ಓದಿ: ಅಡುಗೆ ಮಾಡಿ ಬಡಿಸುವುದೆಂದರೆ ಒಲವು, ಖುಷಿಯನ್ನು ದಾಟಿಸುವ ಕ್ರಿಯೆ