AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Travel Story: ಸ್ನೇಹಿತರೊಂದಿಗೆ ಪ್ರವಾಸ ಹೋಗುವುದೆಂದರೆ ಏನೋ ಖುಷಿ

ಪ್ರವಾಸಕ್ಕೆ ಹೋಗುವುದೆಂದರೆ ಎಲ್ಲಿಲ್ಲದ ಖುಷಿ, ಅದರಲ್ಲೂ ನನಗೆ ಹೇಳಬೇಕೆಂದರೆ ಆಕಾಶದಲ್ಲಿ ಹಕ್ಕಿಯಂತೆ ಹರುತ್ತೇನೆ. ಪ್ರವಾಸ ಎಂದಾಗ ನನ್ನಲ್ಲಿ ಮೂಡಿದ ಭಾವನೆ ಅದು ಬೆಟ್ಟ ಗುಡ್ಡದ ಪ್ರದೇಶ,  ಅದು ನನ್ನ ಭಾವನೆ ಮಾತ್ರವಲ್ಲ ಅದು ನನ್ನ ಆಸೆಯು ಹೌದು.

Travel Story:  ಸ್ನೇಹಿತರೊಂದಿಗೆ ಪ್ರವಾಸ ಹೋಗುವುದೆಂದರೆ ಏನೋ ಖುಷಿ
travel story
TV9 Web
| Updated By: ಅಕ್ಷಯ್​ ಪಲ್ಲಮಜಲು​​|

Updated on: Jul 21, 2022 | 7:30 AM

Share

ಪ್ರವಾಸಕ್ಕೆ ಹೋಗುವುದೆಂದರೆ ಎಲ್ಲಿಲ್ಲದ ಖುಷಿ, ಅದರಲ್ಲೂ ನನಗೆ ಹೇಳಬೇಕೆಂದರೆ ಆಕಾಶದಲ್ಲಿ ಹಕ್ಕಿಯಂತೆ ಹರುತ್ತೇನೆ. ಪ್ರವಾಸ ಎಂದಾಗ ನನ್ನಲ್ಲಿ ಮೂಡಿದ ಭಾವನೆ ಅದು ಬೆಟ್ಟ ಗುಡ್ಡದ ಪ್ರದೇಶ,  ಅದು ನನ್ನ ಭಾವನೆ ಮಾತ್ರವಲ್ಲ ಅದು ನನ್ನ ಆಸೆಯು ಹೌದು. ಬೆಟ್ಟ ನೀರಿನ ತಾಣಗಳಲ್ಲಿ ಆಡುವುದು, ಅಲ್ಲಿಯ ವಾತಾವರಣ ಎಂದರೆ ಅದು ಅದ್ಭುತವೇ ಸರಿ. ಸುಂದರವಾದ ಪ್ರಕೃತಿಯ ನಡುವೆ ಒಂದಷ್ಟು ಸಮಯವನ್ನು ಕಳೆಯುವ ಒಂದು ಯೋಚನೆ ನಮಗೆ ಬಂತು. ಈ ಕೆಲಸದ ಒತ್ತಡ, ಬದಲಾದ ಜೀವನಶೈಲಿಯ ನಡುವೆ ಒಂದಿಷ್ಟು ಬಿಡುವು ಬೇಕೆ ಬೇಕು. ಆಫೀಸ್, ಶಾಲಾ-ಕಾಲೇಜುಗಳಿಗೆ ರಜೆ ಸಿಕ್ಕಾಗ ಎಲ್ಲಾದರೂ ಸಿಟಿಯಿಂದ ದೂರ ಹೋಗಿಬರೋಣ ಅಂತ ಅನಿಸೋದು ಸಹಜ. ಅದರಲ್ಲೂ ಸಾಲು ಸಾಲು ರಜೆ ಸಿಕ್ಕರೆ ಸಾಕು ಕಾಲು ನೆಲೆದ ಮೇಲೆ ನಿಲ್ಲುವುದೇ  ಇಲ್ಲ, ಏಕೆಂದರೆ ಆ ರಜೆಯಲ್ಲಿ ಎಲ್ಲಿಗಾದರೂ ಸುಂದರೆ ಪ್ರಕೃತಿ ತಾಣದತ್ತ ಹೋಗಿರುವ ಬರು ಎಂದನ್ನಿಸುವುದು ಖಂಡಿತ. ಅದರಲ್ಲೂ ನಾನು  ಬಯಲು ಸೀಮೆ ಹುಡುಗಿ, ನಮ್ಮನ್ನು ಕೇಳಬೇಕಾ ಸುತ್ತು ಎಂದರೆ ಅದೊಂದು ಕ್ರೇಜ್,  ಈ ಮಲೆನಾಡು, ಮಡಿಕೇರಿ, ಉತ್ತರ ಕನ್ನಡದಂತಹ ಸುಂದರ ಹಸಿರು ತಾಣಗಳ ಮೇಲೆ ಬಹಳ ಪ್ರೀತಿ. ಒಮ್ಮೆಯಾದರು ಕೊಡಗಿನ ಪ್ರಕೃತಿ ಸೌಂದರ್ಯವನ್ನು ನೋಡಬೇಕು, ಸುತ್ತಬೇಕು ಎಂದು ಅನ್ನಿಸುತ್ತಿತ್ತು. ಹಂಬಲಕ್ಕೆ ಅವಕಾಶ ಮಾಡಿಕೊಟ್ಟದ್ದು ಡಿಗ್ರಿ.

ನಾನು ಆಗಷ್ಟೇ ಡಿಗ್ರಿ ಮುಗಿಸಿ ರಜೆಯಲ್ಲಿದ್ದೆ. ಮುಂದೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿನಿಂದ ದೂರದ ಉಜಿರೆಗೆ ಹೋಗಬೇಕಾಗಿತ್ತು.  ನನ್ನಂತಯೇ ನನ್ನ ಸ್ನೇಹಿತರೂ ಅವರವರ ಮುಂದಿನ ದಾರಿಯಲ್ಲಿ ಸಾಗುವ ನಿರ್ಧಾರವನ್ನು ಮಾಡಿಕೊಂಡಿದ್ದರ.   ಈ ಮಧ್ಯೆ ಮೂರು ವರ್ಷಗಳ ಡಿಗ್ರಿ ಲೈಫ್​ನ್ನು ಮೆಲಕು ಹಾಕುವಂತೆ ಎಲ್ಲರೂ ಸೇರಿ ಎಲ್ಲಾದರೂ ಪ್ರವಾಸಕ್ಕೆ ಹೋಗಿ ಬರುವ ಎಂದು ಮಾತುಕತೆ ನಡೆದಿತ್ತು

ಈ ಪ್ರವಾಸ ಎಂದ ಕೂಡಲೇ ಮೊದಲು ಬರೋ ಪ್ರಶ್ನೆರೆ “ಎಲ್ಲಿಗೆ ನಮ್ಮ ಪಯಣ? “ಎಂದು. ಈ ಪ್ರವಾಸಕ್ಕೆ ಯಾರೆಲ್ಲ ಬರುತ್ತಾರೆ, ಎಷ್ಟು ದಿನ, ಯಾವ ವಾಹನದಲ್ಲಿ ಹೋಗೋದು ಹೀಗೆ ಸುಮಾರು ಚರ್ಚೆಗಳು ನಡೆದು ಒಂದು ತಿರ್ಮಾನಕ್ಕೆ ಬರಬೇಕಿತ್ತು. ಮೊದಲಿಗೆ ನಾವು ಒಂದು ವಾಟ್ಸಪ್ ಗ್ರೂಪ್ ಮಾಡಿಕೊಂಡು  ಪ್ರವಾಸಕ್ಕೆ  ಹೋಗುವ ಸಿದ್ದತೆ ನಡೆಯಿತು.  ಬರುವವರನ್ನೆಲ್ಲ ಆ ಗ್ರೂಪಿಗೆ ಸೇರಿಸಿ, ಬಾರದಿರುವವರನ್ನು ಬರುವಂತೆ ಮಾಡಿ, ಮನೆಯಲ್ಲಿ ಒಪ್ಪಿಗೆ ಸಿಗದವರ ಮನೆಗೆ ಹೋಗಿ ಅವರ ಅಪ್ಪ ಅಮ್ಮನನ್ನು ಒಪ್ಪಿಸಿ ಹೋಗಲು ಸಿದ್ದ ಮಾಡಿಕೊಂಡೆವು. ಇದೆಲ್ಲದರ ಮಧ್ಯೆ ಹಂಪಿಯಿಂದ ಹಿಡಿದು ಗೋವಾದವರೆಗೂ ಎಲ್ಲಿಗೆ ಹೋಗುವುದು ಎಂಬ ಬಿಸಿಬಿಸಿ ಚರ್ಚೆ ನಡೆಯಿತ್ತು,  ಕೊನೆಗೆ ಮಡಿಕೇರಿ ಎಂದು ಖಾತ್ರಿಯಾಯಿತು. ನನ್ನ ಸಂತೋಷಕ್ಕಂತೂ ಪಾರವೇ ಇರಲಿಲ್ಲ. ಒಂದೊಂದು ಜಾಗಕ್ಕೆ ತಕ್ಕಂತೆ ಉಡುಪುಗಳನ್ನು ಜೋಡಿಸಿಕೊಂಡೆ. ಜಾಗ ಗೊತ್ತಾದ ಬೆನ್ನಲ್ಲೇ ದಿನಾಂಕ, ವಾಹನ, ಊಟ, ವಸತಿಯ ತಯಾರಿಯಾಗಿತ್ತು.

ಇದನ್ನೂ ಓದಿ
Image
International Yoga Day 2022: ಮಾನವೀಯತೆಗೆ ಭಾರತ ನೀಡಿದ ಕೊಡುಗೆಯೇ ಯೋಗ; ರಾಷ್ಟ್ರಪತಿ ರಾಮನಾಥ ಕೋವಿಂದ್ ಬಣ್ಣನೆ
Image
International Yoga Day 2022: ಗಾರ್ಡಿಯನ್ ರಿಂಗ್ ಮೂಲಕ ವಿವಿಧ ದೇಶಗಳ ಯೋಗ ಪ್ರಸಾರ; 5 ಪ್ರಮುಖ ಅಂಶಗಳು ಇಲ್ಲಿವೆ
Image
Thyroid Disease and Yoga: ಈ ಯೋಗಾಸನಗಳನ್ನು ಮಾಡಿದರೆ ಥೈರಾಯ್ಡ್ ಸಮಸ್ಯೆಗೆ ಪರಿಹಾರ ಸಿಗುತ್ತದೆ
Image
International Yoga Day 2022: ಯಾವ ರಾಶಿಯವರು ಯಾವ ಯೋಗಾಸನಗಳನ್ನು ಮಾಡಬೇಕು? ಇಲ್ಲಿದೆ ಮಾಹಿತಿ

ಅಂತೂ ಇಂತೂ ಪ್ರವಾಸಕ್ಕೆ ಹೋಗುವ ದಿನ ಬಂದೇ ಬಿಟ್ಟಿತು ನೋಡಿ, ಆ ದಿನಕ್ಕಾಗಿ ಯೋಗಿಯಂತೆ ಕಾಯುತ್ತಿದ್ದು ನಿಜ . ಆ ದಿನ ರಾತ್ರಿ ನಾವೆಲ್ಲರೂ ಬಸವನಗುಡಿಯ ನಮ್ಮ ನ್ಯಾಷನಲ್ ಕಾಲೇಜಿನ ಮುಂಬಾಗದಲ್ಲೇ ಸೇರಿಕೊಂಡೇವು. ಕೆಲವರು ಅವರವರ ಅಪ್ಪ ಅಮ್ಮನೊಂದಿಗೆ ಬಂದಿದ್ದರು, ಇನ್ನೂ ಕೆಲವರು,  ಅಣ್ಣ, ಅಕ್ಕ, ಅತ್ತೆ, ದೊಡ್ಡಪ್ಪ, ಚಿಕ್ಕಮ್ಮಂದಿರನ್ನು ಅಂತ ಕುಟುಂಬ ಸಮೇತರಾಗಿ ಬಂದಿದ್ದರು. ಇನ್ನೂ ಕೆಲವು  ಮಹನೀಯರು ಮಾತ್ರ ಸಿಂಗಲ್ ಶೇರ್ ಎಂಬಂತೆ ಎಲ್ಲರಿಗಿಂತ ಮುಂಚಿತವಾಗಿ  ಬಂದು ಕಾಯುತ್ತಿದ್ದರು.

ಆಗಾ ಸುಮಾರು ಹತ್ತು ಗಂಟೆಯಾಗಿತ್ತು, ನಮ್ಮ ಪ್ರಯಾಣ ಸುಖವಾಗಿರಲಿ ಎಂದು ಟಿ.ಟಿ ವ್ಯಾನ್ ಗೆ ಪೂಜೆ ಮಾಡುವುದರ ಮೂಲಕ ಅಲ್ಲಿಂದ ಹೊರಟೆವು. ಬೆಂಗಳೂರು ಸಿಟಿಯಿಂದ ಹೊರಗೆ ಹೋಗಲು ಸುಮಾರು ಒಂದು ತಾಸು ಬೇಕಾಯಿತು.  ಈ ಮಧ್ಯೆ ಯಾರೋ ಒಬ್ಬ ಜೋರಾಗಿ ಹಾಡುತ್ತ, ಕುಣಿಯುತ್ತ ಪ್ರವಾಸದ ವಾತಾವರಣವನ್ನು ತಂದೊಡನೆ, ಎಲ್ಲರೂ ಸೀಟಿನಿಂದ ಎದ್ದು ಕುಣಿಯಲಾರಂಭಿಸಿದರು. ಉಪ್ಪಿ- ಶಿವಣ್ಣನ ಕಾಂಬಿನೇಶನ್ ಹಾಡುಗಳಿಗೆ, ಹಳೆಯ ಮಾಧುರಿ ದೀಕ್ಷಿತ್ ಹಾಡುಗಳಿಗೆ, ಚಂದನ್ ಶೆಟ್ಟಿಯ ರಾಪ್ ಹಾಡುಗಳಿಗೆ ಹೆಜ್ಜೆ ಹಾಕುತ್ತ, ಜೋರಾದ ಗಲಾಟೆ ಗದ್ದಲ ಮಾಡಿಕೊಂಡು ಪ್ರಯಾಣ ಬೆಳೆಸಿದ ನಮಗೆ ರಾತ್ರಿ ಕಳೆದದ್ದೇ ಗೊತ್ತಾಗಲಿಲ್ಲ. ಬೆಳಗಿನ ಜಾವ ಕಿಟಕಿಯಿಂದಾಚೆ ನೋಡಿದರೆ ಮಂಜಿನ ಮಧ್ಯೆ ಚಿಕ್ಕಮಗಳೂರು ಬರ ಮಾಡಿಕೊಂಡಿತ್ತು.

ಅರೇ! ಇದೇನಿದು ನಾವು ಹೊರಟಿದ್ದು ಮಡಿಕೇರಿಗೆ ಅಲ್ವಾ? ಚಿಕ್ಕಮಗಳೂರಿಗ್ಯಾಕೆ ಬಂದಿದ್ದೇವೆ ಎನ್ನುವ ಪ್ರಶ್ನೆ ನಮ್ಮನ್ನು ಕಾಡುತ್ತಿತ್ತು. ಪ್ಲಾನಿನಲ್ಲಿ ಸಣ್ಣ ಬದಲಾವಣೆಯಾಗಿದ್ದು, ಹೇಗಿದ್ರೂ ಇಷ್ಟು ಹತ್ತಿರ ಬಂದಿದ್ದೀವಿ, ಮೊದಲು ಮುಳ್ಳಯ್ಯನಗಿರಿ ಬೆಟ್ಟವನ್ನು ನೋಡಿಕೊಂಡು ಆನಂತರ ಮಡಿಕೇರಿಗೆ ಹೋಗುವುದಾಗಿ ತಿಳಿಸಿದರು. ಇದಕ್ಕೊಪ್ಪಿದ ಎಲ್ಲರೂ ಮುಂಜಾನೆಯ ಮಂಜಲ್ಲಿ ಮೊದಲು ಮುಳ್ಳಯ್ಯನ ಗಿರಿಶಿಖರವನ್ನು ಕಣ್ತುಂಬಿಕೊಳ್ಳಲು ಧಾವಿಸಿದೆವು. ಬೆಟ್ಟ ಹತ್ತುವ ಮೊದಲೇ ಜೀಪಿನಿಂದ ಇಳಿಯುವಾಗ ಕಾಲು ನೋವು ಮಾಡಿಕೊಂಡು ಅಲ್ಲೇ ಅಳುತ್ತಾ ಕುಳಿತುಬಿಟ್ಟೆ. ಈಗ ನೆನಪು ಮಾಡಿಕೊಂಡರೆ ನಗು ಬರುತ್ತೇ, ಆದರೆ ಆ ಘಳಿಗೆ ಬಹಳ ಭಯಾನಕವಾಗಿತ್ತು. ಎರಡು ಹೆಜ್ಜೆ ಸಹ ಮುಂದಿಡಲು ಆಗದ ನನಗೆ ಬೆಟ್ಟ ಹತ್ತುವುದು ಕನಸಿನ ಮಾತೇ, ಎಂಬುದನ್ನು ಸುಳ್ಳು ಮಾಡಿದ್ದೇ ನನ್ನ ಗೆಳೆಯ ಹೇಮಂತ್. ನನ್ನಲ್ಲಿ ಆತ್ಮವಿಶ್ವಾಸದ ಜೊತೆಗೆ ಬೆಟ್ಟದ ವರೆಗೂ ಬಂದು, ಬೆಟ್ಟ ಹತ್ತದೇ ಹೋಗ್ತಿಯಾ? ಏನು ಆಗೋಲ್ಲ, ನಾನಿದ್ದೇನೆ ನನ್ನ ಜೊತೆಗೆ ಬಾ ಎಂದು ಧೈರ್ಯ ತುಂಬಿದ. ಶುರುವಿನಿಂದ ಹಿಡಿದು ಬೆಟ್ಟದ ತುದಿಯವರೆಗೂ ನನ್ನ ಭಾರವನ್ನೆಲ್ಲ ತನ್ನ ಕೈಮೇಲೆ ಇರಿಸಿಕೊಂಡು ಮಗುವಿನಂತೆ ಕಾಳಜಿ ಮಾಡಿ ಮುಳ್ಳಯ್ಯನಗಿರಿ ಬೆಟ್ಟ ಕಣ್ತುಂಬಿಕೊಳ್ಳಲು ಸಹಾಯ ಮಾಡಿದ ಒಳ್ಳೆಯ ಮನಸ್ಸು ಅವನದ್ದು. ಹಿಂದಿರುಗುವಾಗಲೂ ಅದೇ ರೀತಿ ಕಾಳಜಿ ವಹಿಸಿದ್ದನ್ನು, ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ.

ಬೆಟ್ಟ ಹತ್ತಿ ಇಳಿದು ಸುಸ್ತಾದವರಿಗೆಲ್ಲ, ಬಿಸಿ ಬಿಸಿ ತಿಂಡಿ-ಕಾಫಿ ಮತ್ತೇ ಚೈತನ್ಯ ತುಂಬಿತು. ಅಲ್ಲಿಂದ ನಂತರ ಮಡಿಕೇರಿಗೆ ಪಯಣ ಸಾಗಿತು. ರಾತ್ರಿ ಇಡೀ ನಿದ್ದೆ ಮಾಡದೆ ಕುಣಿದು ಕುಪ್ಪಳಿಸಿದವರಿಗೆ ಸದ್ದಿಲ್ಲದೇ ನಿದ್ರೆ ಬಂದಿತ್ತು. ಕಣ್ಣು ಬಿಟ್ಟಾಗ ಅದಾಗಲೇ ಮಡಿಕೇರಿಯ ಚಿಕ್ಲಿಹೊಳೆ ಡ್ಯಾಮ್ ತಲುಪಿದ್ದೆವು. ಆ ತಣ್ಣನೆಯ ಗಾಳಿ, ಸುತ್ತಲೂ ನೀರು, ಮಧ್ಯೆ ನಡೆದುಕೊಂಡು ಹೋಗಲು ಸೇತುವೆಯ ದಾರಿ, ಅಲ್ಲಲ್ಲಿ ಆಳವಿದೆ ಎಚ್ಚರವಾಗಿ ನಡೆಕೊಂಡು ಹೋಗುವ ಹೊತ್ತಿಗೆ  ಸೂರ್ಯ  ಮುಳುಗುವ ದೃಶ್ಯವನ್ನು ಕಂಡು, ಅಬ್ಬಬ್ಬಾ ಮನಸ್ಸು ಆಕಾಶದಲ್ಲಿ ಹಕ್ಕಿ ಹರುವಂತೆ ಭಾಸವಾಗಿದ್ದು ನಿಜ. ಅಲ್ಲಿಂದ  ಪಕ್ಕದಲ್ಲಿದ್ದ ಮಿನಿ ಫಾಲ್ಸ್ ನಲ್ಲಿ ನೀರಿನಲ್ಲಿ ಆಡುತ್ತ ಒದ್ದೆಯಾಗಿ ಬಿಟ್ಟೆವು, ಕತ್ತಲಾಗುತ್ತಿದ್ದಂತೆ ನಮ್ಮ ಹೋಮ್ ಸ್ಟೇ ಕಡೆಗೆ ಹೊರೆಟೆವು. ದಟ್ಟವಾದ ಹಸಿರು ಕಾನನದ ನಡುವೆ ಮಡಿಕೇರಿಯಿಂದ ಸುಮಾರು ಏಳೆಂಟು ಕಿ.ಮೀ ಸಾಗಿದರೆ, ಘಮ ಘಮ ಸುವಾಸನೆ ಬೀರುವ ಕಾಫಿ ಎಸ್ಟೇಟಿನ ಮಧ್ಯೆ ಕಾಣುವ ಗುಬ್ಬಿಗೂಡು ನಿಕುಂಜ್ ಹೋಮ್’ಸ್ಟೇ.

ನಾವೆಲ್ಲ ಫ್ರೆಶ್ ಅಪ್ ಆಗಿ ಬರುವುದರೊಳಗೆ ಗೆಳೆಯರಾದ ಗಿರಿ ಮತ್ತು ಪವನ್ ರುಚಿಯಾಗಿ ಬಿಸಿಬಿಸಿಯಾದ ಬಿರಿಯಾನಿ, ಚಿಲ್ಲಿ ಚಿಕನ್ ತಯಾರಿಸಿದ್ದರು. ಒಂಥರ ಮನೆಯ ವಾತಾವರಣ, ಸುತ್ತಲೂ ಕೂತು ಊಟ ಮಾಡುತ್ತ, ಹರಟೆ ಹೊಡೆಯುತ್ತ ಹೊತ್ತು ಕಳೆದದ್ದೇ ಗೊತ್ತಾಗಲಿಲ್ಲ. ಪ್ರವಾಸ, ಅದರಲ್ಲೂ ಮಡಿಕೇರಿಯಂತಹ ಸುಂದರ ತಾಣ, ಕ್ಯಾಂಪ್ ಫೈರ್ ಇಲ್ಲದಿದ್ದರೆ ಹೇಗೆ? ರಾತ್ರಿಯ ಮೈ ಕೊರಿಯೋ ಚಳಿಗೆ ಕ್ಯಾಂಪ್ ಫೈರ್, ಅದರ ಸುತ್ತ ಹಾಡುತ್ತಾ ಕುಣಿಯುತ್ತ, ಆಗಾಗ ತಿಂಡಿ ತಿನಿಸುಗಳನ್ನು ತಿನ್ನುತ್ತಾ ರಾತ್ರಿ ಕಳೆದೆವು.

ಮರುದಿನ ಬೇಗ ಎದ್ದು ಕೊಡಗಿನ ಪ್ರಸಿದ್ಧ ಸ್ಥಳ ತಲಕಾವೇರಿಗೆ ಹೋಗಬೇಕು ಅಂತಿದ್ದವರೆಲ್ಲಾ ರೂಂನಿಂದ ಹೊರಗಡೆ ಸಹ ಬಂದಿರಲಿಲ್ಲ. ರಾತ್ರಿಯೆಲ್ಲ ಕುಣಿದು ಕುಪ್ಪಳಿಸಿದ ಪ್ರಭಾವ ಎಲ್ಲರೂ ಸುಸ್ತಾಗಿ ನಿದ್ದೆಗೆ ಜಾರಿದ್ದರು. ಅದರ ಹೋಗುವ ಪ್ಲಾನ್ ಬಿಡಲಿಲ್ಲ, ಕೊನೆಗೂ ಹೋಗಬೇಕು ಎಂದು ಹೇಳಿದ ಮೇಲೆ ಹೋಗಲೇ ಬೇಕು ಎಂದು ಎಲ್ಲರೂ ಸೇರಿ ಹೊರಟೆವು,  ಆ ದಿನದ ಸ್ಪೆಷಲ್ ಕುಕ್ ನಾನು, ತಿಂಡಿ ಮುಗಿಸಿ ತಲಕಾವೇರಿಯತ್ತ ಸಾಗಿದೆವು. ಕನ್ನಡ ನಾಡಿನ ಜೀವನದಿಯನ್ನು ಸ್ಮರಿಸುವ ತೃಪ್ತಿ ಎಲ್ಲರಲ್ಲೂ ಇತ್ತು. ಅಲ್ಲಿಂದ ಬರುವಾಗ ಭಾಗಮಂಡಲ ದೇವಸ್ಥಾನಕ್ಕೂ ಭೇಟಿ ಕೊಟ್ಟೆವು. ಅಲ್ಲಿಂದ ಮಧ್ಯಾಹ್ನದ ಊಟಕ್ಕಾಗಿ ಸುಮಾರು ದೂರ ಪ್ರಯಾಣಿಸಿ ಮಡಿಕೇರಿಯ ಸ್ಪೆಷಲ್ ಊಟ ಮಾಡಿದ ನಂತರ ಕ್ಷೀರಧಾರೆ ಅಬ್ಬಿ ಫಾಲ್ಸ್ ಅನ್ನು ಕಣ್ತುಂಬಿಕೊಂಡೇವು. ಮಡಿಕೇರಿಯಿಂದ ಸುಮಾರು ೮ ಕಿ.ಮಿ ಸಾಗಿದರೆ ಮನಮೋಹಕ ಅಬ್ಬಿ ಜಲಪಾತವನ್ನು ತಲುಪುತ್ತೇವೆ.

ಹಲ್ನೋರೆಯಂತೆ ದುಮ್ಮಿಕ್ಕಿ ಹರಿಯುವ ಆ ನೀರ ಚೆಲುವನ್ನು ನೋಡುವುದು, ಆ ಶಬ್ದವನ್ನು ಆಲಿಸುವುದೇ ಒಂದು ರೀತಿಯ ಸಂತಸದ ಅನುಭವ. ಆನಂತರ ಮಡಿಕೇರಿಯ ಮತ್ತೊಂದು ಪ್ರಸಿದ್ಧ ಜಾಗ ರಾಜಾಸೀಟ್ ನೋಡಲು ಹೊರೆಟೆವು. ಬಹುಷಃ ವಾರಾಂತ್ಯ ಆಗಿದ್ದರಿಂದ ತುಂಬಾ ಜನ ಸೇರಿದ್ದರು.  ಅಲ್ಲಿಂದ ಬೇಗ ಹೊರಟು ಶಾಪಿಂಗ್  ಶುರುಮಾಡಿಕೊಂಡೆವು. ಕೆಲವರು ಅವರ ಅಮ್ಮಂದಿರಿಗೆ ತಾಜಾ ಕಾಫಿ ಪುಡಿಯನ್ನು ತೆಗೆದುಕೊಂಡರೆ, ಇನ್ನೂ ಕೆಲವರು ಚಾಕ್ಲೆಟ್ ಗಳನ್ನು, ವೈನ್ ಬಾಟಲಿಗಳನ್ನು, ನೆನಪಿಗಾಗಿ ಯಾವುದಾದರೂ ವಸ್ತುವನ್ನು ಕೊಂಡುಕೊಳ್ಳುತ್ತಿದ್ದರು. ಇದರ ನಡುವೆ ಒಂದೊಳ್ಳೆ ಹೋಟೆಲ್​ಗೆ ಹೋಗಿ ಚಾಟ್ಸ್, ತಂಪು ಪಾನೀಯ, ಐಸ್ಕ್ರೀಂ ಎಂದು ವಿವಿಧ ಬಗೆಯ ತಿನಿಸುಗಳನ್ನು ತಿನ್ನುತ್ತ, ಪ್ರವಾಸವನ್ನು ಆನಂದಿಸುತ್ತಿದ್ದೆವು. ಮತ್ತೇ ಹೋಮ್ ಸ್ಟೇನಲ್ಲಿ ಅದೇ ಫೈರ್ ಕ್ಯಾಂಪ್,  ಆಟಗಳು, ಜೊತೆಗೆ ಒಂದಷ್ಟು ಹುಡುಗ ಹುಡುಗಿಯರನ್ನು ರೇಗಿಸುತ್ತಾ, ಕಾಲು ಎಳೆದುಕೊಂಡು, ರಾತ್ರಿ  ಇಡೀ ಜೀವನಕ್ಕೆ ಸಾಕಾಗುವಷ್ಟು ಮಾತು ಕಥೆ ನಡೆಸಿದೆವು. ಬಹುಷಃ ಆ ರಾತ್ರಿಯನ್ನು ಜೀವನದಲ್ಲಿ ಎಂದಿಗೂ ಮರೆಯಲು ಸಾಧ್ಯವಿಲ್ಲ.

ಮೂರನೇ ದಿನ ಬೆಳಗ್ಗೆ ನಿಕುಂಜ್ “ಹೋಮ್ ಸ್ಟೇ”ಯಿಂದ ಹೊರಡುವಾಗ ಕೊಂಚ ಬೇಸರವಿತ್ತು. ಒಲ್ಲದ ಮನಸಲ್ಲೇ ಸ್ವಲ್ಪ ದೂರ ಪ್ರಯಾಣಿಸಿದೆವು. ಆ ದಿನ ಮೊದಲು ಇರುಪ್ಪು ಫಾಲ್ಸ್ ನೋಡಿಕೊಂಡು ಅಲ್ಲಿಂದ ನಾಗರಹೊಳೆ ಅರಣ್ಯ ಪ್ರವೇಶಿಸಿದೆವು. ಆ ಅನುಭವನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ.  ಜಿಂಕೆ, ಆನೆ, ಕೋಣ, ಕರಡಿ, ಗೊರಿಲ್ಲಾ, ನವಿಲುಗಳಂತಹ ಅನೇಕ ಪ್ರಾಣಿ ಪಕ್ಷಿಗಳ ಕಂಡೇವು . ಇನ್ನೇನು ಪ್ರವಾಸ ಮುಗಿಯಿತು, ಮುಂದಿನ ಪ್ರಯಾಣ ಬೆಂಗಳೂರಿನ ಕಡೆಗೆ ಅನ್ನುತ್ತಿದ್ದಂತೆ ಹುಡುಗಿಯರೆಲ್ಲಾ ಸಪ್ಪೆ ಮೊರೆ ಹಾಕಿ ಕೂತೆವು. ನಮ್ಮ ಮುಖಗಳನ್ನು ನೋಡಲಾಗದೆ ಹುಡುಗರೆಲ್ಲ ಸಣ್ಣ ಸಭೆ ನಡೆಸಿ, ಬೆಂಗಳೂರಿನ ಬದಲು ಮೈಸೂರಿಗೆ ಹೋಗೋಣ ಎಂದರು. ಎಲ್ಲರ ಮುಖ ತಾವರೆಯಂತೆ ಅರಳಿತ್ತು. ಮುಂದೆ ಮೈಸೂರಿನ ಕೆ.ಆರ್.ಸ್ ಡ್ಯಾಮ್ ನ “ವಾಟರ್ ಡ್ಯಾನ್ಸ್” ನೋಡಿಕೊಂಡು, ಹೆದ್ದಾರಿಯ ಬಳಿ ಬಾಳೆ ಎಲೆ  ಊಟ ಮುಗಿಸಿದೆವು. ನಂತರ ಅಲ್ಲೇ ಹತ್ತಿರದ ಹೋಟೆಲ್ ನಲ್ಲಿ ಉಳಿದುಕೊಂಡು ಮರುದಿನ ಮಧ್ಯಾಹ್ನದ ವರೆಗೂ ಮೈಸೂರಿನಲ್ಲಿ ಸುತ್ತಾಡಿಕೊಂಡು ಕೊನೆಗೂ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದೆವು.

ಊರು ಹತ್ತಿರ ಬರುತ್ತಿದ್ದಂತೆ ನನ್ನ ಕಣ್ತುಂಬಿ ಬಂತು. ಮೂರು ವಸಂತಗಳ ಸುಂದರ ನೆನಪುಗಳು, ಕ್ಲಾಸ್ ‘ರೂಂ ಕಥೆಗಳು, ಜಗಳಗಳು, ಗೆಳೆಯ-ಗೆಳತಿಯರು, ಈ ನಾಲ್ಕು ದಿನದ ಪ್ರವಾಸದ ಅದ್ಬುತ ಕ್ಷಣಗಳು, ಎಲ್ಲವೂ ಇಲ್ಲಿಗೆ ಮುಗಿಯಿತೇನೋ ಎನ್ನುವ ಮನ್ನಸ್ಸಿನ್ನ ಭಾರ ಒಂದೆಡೆಯಾದರೆ, ಎಲ್ಲರೂ ಬೆಂಗಳೂರಿನಲ್ಲೇ ಇರುತ್ತಾರೆ, ನಾನೊಬ್ಬಳೇ ದೂರದ ಊರಿಗೆ ಹೋಗುತ್ತಿರುವೆ ಎನ್ನುವ ಕೊಂಚ ಬೇಸರ ಮತ್ತೊಂದೆಡೆ. ನನ್ನಂತಯೇ ಹಲವರಿಗೆ ದುಃಖವಾಗುತ್ತಿತ್ತು, ಈ ಮಧ್ಯೆ ಮತ್ತೆ ಸಿಗೋಣ ಗೆಳಯ ಮತ್ತೆ ಸಿಗೋಣ ಗೆಳತಿ ಎಂದು ಅಪ್ಪಿಕೊಂಡು ಟಾಟಾ ಮಾಡಿದ್ದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಈಗ ಸದ್ಯಕ್ಕೆ ಸ್ನಾತಕೋತ್ತರ ಪದವಿಗಾಗಿ ಉಜಿರೆಯಲ್ಲಿದ್ದರೂ ಆದಷ್ಟು ಬೇಗ ಮತ್ತೊಂದು ಪ್ರವಾಸಕ್ಕೆ ಹೋಗೋಣ ಎಂದು ಕಾಡುತ್ತಿದ್ದೇನೆ. ಈ ಪ್ರವಾಸಗಳೇ ಹಾಗೇ ಬಹಳಷ್ಟು ಕಾಲ ನಮ್ಮ ನೆನಪಿನಲ್ಲಿ ಉಳಿದುಬಿಡುತ್ತವೆ.

ತೇಜಸ್ವಿನಿ ಕಾಂತರಾಜ್ ಬೆಂಗಳೂರು

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!