AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿರ್ದೇಶಕ ಗುರುಪ್ರಸಾದ್​ ಬರುತ್ತಿದ್ದಂತೆ ಕರ್ಪೂರ ಹಚ್ಚಿ ಈಡುಗಾಯಿ ಒಡೆದು ಮನಸು ಗೆಲ್ಲಬೇಕು ಅಂದುಕೊಂಡಿದ್ದೆ, ಆದರೆ ಆಗಿದ್ದೇ ಬೇರೆ

ಹಿಂದಿನ ಎರಡು ಸಿನಿಮಾಗಳಲ್ಲಿ ಅವರು ತೆರೆ ಮೇಲೆ ಬಂದಿದ್ದ ಕಾರಣ ಈ ಬಾರಿಯೂ ಬಂದೇ ಬರುತ್ತಾರೆ ಅನ್ನೋದು ನನ್ನ ನಂಬಿಕೆಯಾಗಿತ್ತು. ಹೀಗಾಗಿ ಬ್ಯಾಗ್​ನಲ್ಲಿ ತೆಂಗಿನಕಾಯಿ ಇಟ್ಟುಕೊಂಡು ಬ್ಯಾಗ್​ ಜಿಪ್​ ಸಹ ಹಾಕದೆ ಹಾಗೇ ಕೂತಿದ್ದೆ.

ನಿರ್ದೇಶಕ ಗುರುಪ್ರಸಾದ್​ ಬರುತ್ತಿದ್ದಂತೆ ಕರ್ಪೂರ ಹಚ್ಚಿ ಈಡುಗಾಯಿ ಒಡೆದು ಮನಸು ಗೆಲ್ಲಬೇಕು ಅಂದುಕೊಂಡಿದ್ದೆ, ಆದರೆ ಆಗಿದ್ದೇ ಬೇರೆ
ಡೈರೆಕ್ಟರ್ ಗುರುಪ್ರಸಾದ್
TV9 Web
| Edited By: |

Updated on:Feb 27, 2022 | 7:40 PM

Share

ಎಲ್ಲ ಬಲ್ಲವರಿಲ್ಲ, ಬಲ್ಲವರು ಬಹಳಿಲ್ಲ ಬಲ್ಲಿದರು ಇದ್ದು ಬಲವಿಲ್ಲ ಸಾಹಿತ್ಯ ಎಲ್ಲರಿಗೆ ಇಲ್ಲ ಸರ್ವಜ್ಞ

ಸರ್ವಜ್ಞರ ಈ ವಚನ ನಾನು ಸಾಹಿತ್ಯಾಭ್ಯಾಸವನ್ನು ಶುರು ಮಾಡಿದ ಅದೆಷ್ಟೋ ದಿನಗಳಾದ ಬಳಿಕ ನನಗೆ ಗೊತ್ತಾಯ್ತು. ಕನ್ನಡ ಸಾಹಿತ್ಯಲೋಕ ಸಮುದ್ರವಿದ್ದಂತೆ. ಇದರಲ್ಲಿ ನಾನು ಈಜೋದಿರ್ಲಿ, ತೀರಕ್ಕೂ ಕಾಲಿಟ್ಟಿರಲಿಲ್ಲ. ಕನ್ನಡ ಸಿನಿಮಾ ನಿರ್ದೇಶಕನಾಗಬೇಕೆಂಬ ಮಹದಾಸೆ ನನ್ನೊಳಗೆ ಅದ್ಯಾವಾಗ ಹುಟ್ಟಿಕೊಳ್ತೋ ಗೊತ್ತಿಲ್ಲ, ಅಂದಿನಿಂದ ಸೈಕಲ್​ ಹೊಡೆಯಲು ಶುರು ಮಾಡಿದ್ದೆ. ಹೀಗೆ ಸೈಕಲ್​ ಹೊಡೆಯುತ್ತಿದ್ದ ನನಗೆ ಪ್ರೇರಣೆಯಾಗಿದ್ದು ಮಠ ಹಾಗೂ ಎದ್ದೇಳು ಮಂಜುನಾಥ ಸಿನಿಮಾಗಳ ನಿರ್ದೇಶಕ ಗುರುಪ್ರಸಾದ್.

ಗುರುಪ್ರಸಾದ್​ ನನಗೆ ಮಾನಸಿಕ ಗುರುಗಳಾಗಿದ್ದರು. ನಾನು ಸಿನಿಮಾಗಳ ಕುರಿತು ಅಭ್ಯಾಸ ಮಾಡುವುದಕ್ಕಿಂತ ಹೆಚ್ಚಾಗಿ ಅವರ ಬಗ್ಗೆಯೇ ಹೆಚ್ಚಾಗಿ ಅಭ್ಯಾಸ ಮಾಡುತ್ತಿದ್ದೆ. 2013 ರಲ್ಲಿ ಅವರ ನಿರ್ದೇಶನದ ಡೈರೆಕ್ಟರ್​​ ಸ್ಪೆಷಲ್​ ಸಿನಿಮಾ ರಿಲೀಸ್​ ಆದ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಆ ಸಿನಿಮಾ ರಿಲೀಸ್​ ಆದ ದಿನ ಅವರನ್ನು ಮೆಚ್ಚಿಸಿ ಅವರ ಪರಮ ಶಿಷ್ಯನಾಗಬೇಕು ಎಂದು ನಾನು ಅಂದುಕೊಂಡಿದ್ದೆ. ಅಂದು ಬೆಳಗ್ಗೆಯೇ ಎದ್ದು ತ್ರಿವೇಣಿ ಥಿಯೇಟರ್​ ಬಳಿ ಹೋಗಿದ್ದೆ. 10.30ಕ್ಕೆ ಮೊದಲ ಶೋ ಇತ್ತು. ಮೊದಲಿಗೆ ಅಣ್ಣಮ್ಮನ ದೇವಾಲಯದ ಬಳಿ ತೆರಳಿ ಒಂದು ತೆಂಗಿನಕಾಯಿ, ಕರ್ಪೂರ ತೆಗೆದುಕೊಂಡು ಬಂದೆ. ಬಳಿಕ ಬಾಲ್ಕನಿಗೆ ಟಿಕೆಟ್​​ ತೆಗೆದುಕೊಂಡು ಹೋಗಿ ಕೂತಿದ್ದು ತೆರೆಯ ಮುಂದಿನ ಮೊದಲ ಸಾಲಿನಲ್ಲಿ. ನನ್ನ ಉದ್ದೇಶ ಇಷ್ಟೇ ಆಗಿತ್ತು, ತೆರೆ ಮೇಲೆ ನಿರ್ದೇಶಕ ಗುರುಪ್ರಸಾದ್​ ಬರುತ್ತಿದ್ದಂತೆ ಕೂಡಲೇ ಕರ್ಪೂರ ಹಚ್ಚಿ ತೆಂಗಿನಕಾಯಿ ಇಳಿ ತೆಗೆದು ಈಡುಗಾಯಿ ಹೊಡೆದು ಅವರ ಮನಸು ಗೆಲ್ಲಬೇಕು. ಹಿಂದಿನ ಎರಡು ಸಿನಿಮಾಗಳಲ್ಲಿ ಅವರು ತೆರೆ ಮೇಲೆ ಬಂದಿದ್ದ ಕಾರಣ ಈ ಬಾರಿಯೂ ಬಂದೇ ಬರುತ್ತಾರೆ ಅನ್ನೋದು ನನ್ನ ನಂಬಿಕೆಯಾಗಿತ್ತು. ಹೀಗಾಗಿ ಬ್ಯಾಗ್​ನಲ್ಲಿ ತೆಂಗಿನಕಾಯಿ ಇಟ್ಟುಕೊಂಡು ಬ್ಯಾಗ್​ ಜಿಪ್​ ಸಹ ಹಾಕದೆ ಹಾಗೇ ಕೂತಿದ್ದೆ.

ಗುರುಪ್ರಸಾದ್​​ ತೆರೆ ಮೇಲೆ ಬರುವ ವೇಳೆಗೆ ನಾನು ಎರಡು ಬಾರಿ ನಿದ್ದೆಗೆ ಜಾರಿದ್ದೆ. ಮೂರನೇ ಬಾರಿ ನಿದ್ದೆಗೆ ಜಾರುವಾಗ ತೆರೆ ಮೇಲೆ ಗುರುಪ್ರಸಾದ್ ಧಿಡೀರ್​​ ಎಂದು​ ಬಂದೇ ಬಿಟ್ಟರು. ನಾನು ಗಾಬರಿಯಲ್ಲಿ ಬ್ಯಾಗ್​ ಕೈಗೆತ್ತಿಕೊಂಡರೆ ತೆಂಗಿನಕಾಯಿ ಎಲ್ಲಿ. ಅದು ನಾನು ನಿದ್ದೆಗೆ ಜಾರಿದ್ದ ಸಮಯದಲ್ಲಿ ಅದ್ಯಾವಾಗ ತೆರೆ ಮುಂದೆ ಉರುಳಿಕೊಂಡು ಹೋಗಿತ್ತೋ ಏನೋ ನಾನು ಗಮನಿಸಿರಲಿಲ್ಲ. ತೆರೆಯ ಬೆಳಕಿನಲ್ಲೇ ನಾನು ತೆಂಗಿನಕಾಯಿ ಹುಡುಕುತ್ತಿದ್ದೆ. ಅಷ್ಟರಲ್ಲಿ ಸಿನಿಮಾ ಮುಗಿದು ಶುಭಂ ಎಂದು ಕಾರ್ಡ್​​​ ಬಿದ್ದಿತ್ತು, ಇದು ಹಾಳಾಗಿ ಹೋಗ್ಲಿ ಎಂದು ಹೊರಗೆ ಬಂದು ಮಾಧ್ಯಮಗಳ ಮೈಕ್​ ಮುಂದೆ ಸಿನಿಮಾ ಬಗ್ಗೆ ಓ..ಹೋ ಅದ್ಭುತ ಎಂದು ಹೊಗಳಿ ಅಟ್ಟಕ್ಕೇರಿಸಿ ಗುರುಪ್ರಸಾದ್​​ಗೆ ಶೇಕ್​​ ಹ್ಯಾಂಡ್​​ ಕೊಟ್ಟು ಮುಂದಕ್ಕೆ ಹೋದೆ.

ಈ ಘಟನೆ ಬಳಿಕ ಅವರ ಬಳಿ ಕೆಲಸ ಮಾಡಬೇಕು ಎಂಬ ನನ್ನ ಮಹದಾಸೆ ಇನ್ನೂ ಹೆಚ್ಚಾಯ್ತು. ಒಂದು ದಿನ ಅವರ ಡೈರೆಕ್ಟರ್​​ ಸ್ಪೆಷಲ್​​ ಬುಕ್​​ನಲ್ಲಿದ್ದ ಲಕ್ಷ್ಮಿಕಾಂತ್​ ಎಂಬುವವರಿಗೆ ಕಾಲ್​ ಮಾಡಿ ಅವರ ಮನೆ ಅಡ್ರಸ್​​ ಗಿಟ್ಟಿಸಿಕೊಂಡಿದ್ದೆ. 27 ಆಗಸ್ಟ್​​ 2013ರ ಆ ದಿನ ನಾನು ಗುರುಪ್ರಸಾದ್​ ಮನೆ ಹುಡುಕಿಕೊಂಡು ಹೊರಟಿದ್ದು ಕೋಣನಕುಂಟೆಗೆ. ಅಂದು ನಾನು ಹಾಗೂ ನನ್ನ ಸ್ನೇಹಿತ ಕೀರ್ತಿ, ಗುರುಪ್ರಸಾದ್​ ಮನೆ ಅಡ್ರಸ್​​ ಹುಡುಕಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಕೊನೆಗೂ ಕೋಣನಕುಂಟೆಯ ಶ್ರೀನಿಧಿ ಲೇಔಟ್​​ಗೆ ತಲುಪಿ ಅವರ ಮನೆಗೆ ಹೊಕ್ಕೆವು. ನಿದ್ದೆ ಮಾಡುತ್ತಿದ್ದ ಗುರುಪ್ರಸಾದ್​​ ಎದ್ದು ಬಂದು ನಮ್ಮನ್ನು ಕಳ್ಳರಂತೆ ಕಂಡರು, ಏನು ಬಂದ ವಿಷಯ ಎಂದು ಕೇಳಿದರು.

ನಾನು ಸಿನಿಮಾ, ಕನಸು ಅದು ಇದು ಎಂದು ಏನೇನೋ ಹೇಳಿದೆ. ಇದಕ್ಕೆ ಪ್ರತಿಯಾಗಿ ಅವರು ಕೇಳಿದ ಪ್ರಶ್ನೆ ಸಾಹಿತ್ಯ ಅಭ್ಯಾಸ ಮಾಡಿದ್ದೀಯಾ ಎಂದು. ನಾನು ಅಲ್ಲಿವರೆಗೂ ಗುರುಪ್ರಸಾದ್​ ಬಗ್ಗೆ ಅಭ್ಯಾಸ ಮಾಡಿದ್ದೆ. ಆದರೆ ಇದ್ಯಾರು ಸಾಹಿತ್ಯ ಹೇಗಿರುತ್ತಾಳೆ ಏನೋ ಎಂದು ಮನಸಿನಲ್ಲೇ ಅಂದುಕೊಳ್ಳುತ್ತಿದ್ದಾಗ ಅವರು ಮುಂದುವರಿಸಿ ಕೇಳಿದರು. ಕನ್ನಡ ಸಾಹಿತ್ಯ ಎಂದು. ನಾನು ಟೈಂ ಪಾಸ್​ಗೆ ಓದುತಿದ್ದ ಕೆಲ ಪುಸ್ತಕಗಳನ್ನ ಅವರ ಮುಂದಿಟ್ಟೆ. ಅವುಗಳಲ್ಲಿ ಡೈರೆಕ್ಟರ್​​ ಸ್ಪೆಷಲ್​​, ಹಾಗೂ ಮಠ ಮತ್ತು ಎದ್ದೇಳು ಮಂಜುನಾಥ ಸಿನಿಮಾಗಳ ಸ್ಕ್ರೀನ್​​ಪ್ಲೇ ಪುಸ್ತಕವೂ ಒಂದು. ನನ್ನ ಸಾಹಿತ್ಯ ಅಜ್ಞಾನವನ್ನು ಕಂಡ ಅವರು ನಕ್ಕು ಕೆಲವೊಂದು ಪುಸ್ತಕಗಳ ಹೆಸರನ್ನು ಬರೆದುಕೊಳ್ಳಲು ಹೇಳಿದರು. ಜೊತೆಗೆ ಭೈರಪ್ಪ, ಯಂಡಮೂರಿ ವೀರೇಂದ್ರನಾಥ್​​ ಇಬ್ಬರನ್ನು ಮುಗಿಸಿ ಬಾ ಎಂದರು.

ಅಯ್ಯೋ ನಾನು ಅವರನ್ನು ಮುಗಿಸುವುದೇ. ಅಷ್ಟಕ್ಕೂ ಅವರು ಯಾರು, ಅವರನ್ನು ನಾನು ಯಾಕೆ ಮುಗಿಸಬೇಕು ಎಂಬ ಆಲೋಚನೆಗಳು ನನ್ನ ಮನಸಿನಲ್ಲಿ ಓಡುತ್ತಿದ್ದವು. ಹೀಗೆ ನನ್ನ ಮನಸು ಓಡುತ್ತಿರುವಾಗ ಅವರಿಬ್ಬರು ಬರೆದ ಎಲ್ಲ ಪುಸ್ತಕಗಳನ್ನು ಓದಿ ಮುಗಿಸಿ ಸ್ವಲ್ಪ ನೋಟ್ಸ್​​ ಮಾಡಿಕೊಂಡು ಬಾ ಎಂದರು. ಸರಿ ಎಂದು ನಾನು ಅವರ ಮನೆಯಿಂದ ಹೊರಟವನೇ ಸೀದಾ ಬಂದಿದ್ದು ಟೋಟಲ್​​ ಕನ್ನಡ ಪುಸ್ತಕ ಮಳಿಗೆಗೆ. ಅಂದು ನಾನು ತೆಗೆದುಕೊಂಡ ಮೊದಲ ಪುಸ್ತಕವೇ ದುರ್ಗಾಸ್ತಮಾನ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೃತಿ. ಅಲ್ಲಿಗೆ ನನ್ನ ಸಾಹಿತ್ಯಾಭ್ಯಾಸಕ್ಕೆ ನಾಂದಿ ಹಾಡಿದ್ದು ನಿರ್ದೇಶಕ ಗುರುಪ್ರಸಾದ್​.

ಅಂದಿನಿಂದ ಇಂದಿನವರೆಗೂ ಭೈರಪ್ಪ, ಯಂಡಮೂರಿ ವೀರೇಂದ್ರನಾಥ್​​, ತರಾಸು, ತೇಜಸ್ವಿ, ಜೋಗಿ, ಶಿವರಾಮ ಕಾರಂತರು ಸೇರಿದಂತೆ ಅನೇಕರ ಪುಸ್ತಕಗಳನ್ನು ಓದಿ ಮುಗಿಸಿದ್ದೇನೆ. ಇಂದಿಗೂ ಇನ್ನು ಅನೇಕರ ಪುಸ್ತಕಗಳನ್ನು ಓದಿ ಮುಗಿಸಬೇಕೆಂದುಕೊಂಡಿದ್ದೇನೆ. ಹಾಗೆ ಮತ್ತೊಂದು ವಿಚಾರ. ನಾನು ಮತ್ತೆ ಗುರುಪ್ರಸಾದ್​​ರನ್ನು ಭೇಟಿಯಾಗಲು ಹೋಗಿಲ್ಲ. ಇದು ಅವರಿಗೆ ಗೊತ್ತಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ನನ್ನ ಸಾಹಿತ್ಯಾಭ್ಯಾಸಕ್ಕೆ ಗುರುಗಳಾಗಿದ್ದು ಮಾತ್ರ ಅವರೇ. ನನ್ನ ಸಾಹಿತ್ಯ ಗುರುಗಳು.. ಗುರುಪ್ರಸಾದ್​​.

ಬರಹ: ಮಂಜುನಾಥ್​​ ಹೆಚ್​​.ಎಮ್​.

ಇದನ್ನೂ ಓದಿ: ಕನ್ನಡತಿಯನ್ನು ಕಥೆಗಾತಿಯನ್ನಾಗಿ ಮೆಚ್ಚಿಕೊಂಡಾಗ..

ಇದನ್ನೂ ಓದಿ: ದೇಶ ಕಾಯೋ ಯೋಧ ನನ್ನ ಪ್ರೇಮಿ..

Published On - 7:37 pm, Sun, 27 February 22

ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್