ಬಜೆಟ್ 2025: ಕೃಷಿ ವಲಯಕ್ಕೆ ಶೇ. 15ರಷ್ಟು ಹೆಚ್ಚು ಫಂಡಿಂಗ್ ಸಾಧ್ಯತೆ; ವಿವಿಧ ಕಾರ್ಯಗಳಿಗೆ ಹೆಚ್ಚು ಹಣ

|

Updated on: Jan 24, 2025 | 4:43 PM

Agriculture in Union budget 2025: ಮುಂಬರುವ ಕೇಂದ್ರ ಬಜೆಟ್​ನಲ್ಲಿ ಕೃಷಿ ಕ್ಷೇತ್ರಕ್ಕೆ ಪ್ರಾಧಾನ್ಯತೆ ಇನ್ನಷ್ಟು ಹೆಚ್ಚಲಿದೆ ಎನ್ನುವ ಸುದ್ದಿ ಇದೆ. ವರದಿಯ ಪ್ರಕಾರ 2025 ಬಜೆಟ್​ನಲ್ಲಿ ಕೃಷಿಗೆ ನೀಡಲಾಗುವ ಹಣದಲ್ಲಿ ಶೇ. 15ರಷ್ಟು ಹೆಚ್ಚಲಿದೆ. ಪಿಎಂ ಕಿಸಾನ್ ಯೋಜನೆಯ ಹಣ, ಕಿಸಾನ್ ಕ್ರೆಡಿಟ್ ಕಾರ್ಡ್ ಅಡಿಯಲ್ಲಿ ಸಾಲದ ಮಿತಿ ಮತ್ತಷ್ಟು ಹೆಚ್ಚಬಹುದು. ಉತ್ತಮ ಇಳುವರಿ ನೀಡಬಲ್ಲ ಬೀಜಗಳ ಅಭಿವೃದ್ಧಿ ಸೇರಿದಂತೆ ಈ ಕ್ಷೇತ್ರದಲ್ಲಿ ಅರ್ ಅಂಡ್ ಡಿಗೆ ಉತ್ತೇಜನ ಸಿಗುವ ಸಾಧ್ಯತೆ ಇದೆ.

ಬಜೆಟ್ 2025: ಕೃಷಿ ವಲಯಕ್ಕೆ ಶೇ. 15ರಷ್ಟು ಹೆಚ್ಚು ಫಂಡಿಂಗ್ ಸಾಧ್ಯತೆ; ವಿವಿಧ ಕಾರ್ಯಗಳಿಗೆ ಹೆಚ್ಚು ಹಣ
ಕೃಷಿ
Follow us on

ನವದೆಹಲಿ, ಜನವರಿ 24: ಫೆಬ್ರುವರಿ 1ರಂದು ಮಂಡನೆ ಆಗಲಿರುವ 2025-26ರ ಸಾಲಿನ ಕೇಂದ್ರ ಬಜೆಟ್​ನಲ್ಲಿ ಕೃಷಿ ಕ್ಷೇತ್ರಕ್ಕೆ ಈ ಬಾರಿ ಭರ್ಜರಿ ಅನುದಾನ ಸಿಗಲಿದೆ. ರಾಯ್ಟರ್ಸ್ ವರದಿ ಪ್ರಕಾರ ಕೃಷಿ ಕ್ಷೇತ್ರಕ್ಕೆ ಸರ್ಕಾರ ವಿನಿಯೋಗಸಲಿರುವ ಹಣ ಶೇ. 15ರಷ್ಟು ಹೆಚ್ಚಾಗಬಹುದು. ಇಬ್ಬರು ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದ್ದು, ಇದು ನಿಜವೇ ಆದಲ್ಲಿ ಕಳೆದ ಆರು ವರ್ಷದ ಬಜೆಟ್ ​ನಲ್ಲಿ ಕೃಷಿಗೆ ಹಣ ವಿನಿಯೋಗದಲ್ಲಿ ಅಗಿರುವ ಅತಿ ಹೆಚ್ಚಳ ಇದಾಗಿರುತ್ತದೆ.

ಕೃಷಿ ಕ್ಷೇತ್ರದ ಮೇಲೆ ಸರ್ಕಾರದ ಗಮನ ಹೆಚ್ಚಲು ಎರಡು ಪ್ರಮುಖ ಕಾರಣ ಇವೆ. ಒಂದು, ಆಹಾರ ಹಣದುಬ್ಬರ ಹೆಚ್ಚುತ್ತಿರುವುದರಿಂದ ಆಹಾರ ಉತ್ಪನ್ನ ಮತ್ತು ಮಾರುಕಟ್ಟೆ ವ್ಯವಸ್ಥೆ ಉತ್ತಮಗೊಳಿಸುವುದು ಸರ್ಕಾರಕ್ಕೆ ಬಹಳ ಮುಖ್ಯ ಎನಿಸಿದೆ. ಮತ್ತೊಂದು ಸಂಗತಿ ಎಂದರೆ, ಗ್ರಾಮೀಣ ಭಾಗದಲ್ಲಿ ಆದಾಯ ಹೆಚ್ಚಳ ಮಾಡಬೇಕು ಎನ್ನುವುದು.

ಇದನ್ನೂ ಓದಿ: French Fry: ಆವತ್ತು ಆಮದು , ಇವತ್ತು ರಫ್ತು; ಜಾಗತಿಕ ಫ್ರೆಂಚ್ ಫ್ರೈ ಮಾರುಕಟ್ಟೆಯಲ್ಲಿ ಭಾರತದ ಅಧಿಪತ್ಯ

ಅಧಿಕ ಇಳುವರಿ ಕೊಡಬಲ್ಲಂತಹ ತಳಿಯ ಬೀಜಗಳನ್ನು ಅಭಿವೃದ್ದಿಪಡಿಸಲು ಸರ್ಕಾರದಿಂದ ಧನಸಹಾಯ ಹೆಚ್ಚಲಿದೆ. ಈ ನಿಟ್ಟಿನಲ್ಲಿ ಕೃಷಿ ಕ್ಷೇತ್ರದಲ್ಲಿ ಆರ್ ಅಂಡ್ ಡಿಗೆ ಉತ್ತೇಜನ ಸಿಗಬಹುದು. ಆಹಾರವಸ್ತುಗಳ ಸಂಗ್ರಹಣೆ, ಸರಬರಾಜು ಸೌಕರ್ಯ ವ್ಯವಸ್ಥೆಯನ್ನು ಹೆಚ್ಚಿಸುವುದಕ್ಕೆ ಬಜೆಟ್​ನಲ್ಲಿ ಗಮನ ವಹಿಸಬಹುದು.

ಕಿಸಾನ್ ಕ್ರೆಡಿಟ್ ಕಾರ್ಡ್​ನಲ್ಲಿ ಸಾಲ ಪ್ರಮಾಣ ಹೆಚ್ಚಳ…

ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬ ರೈತರು 3 ಲಕ್ಷ ರೂವರೆಗೆ ಸಾಲ ಪಡೆಯಬಹುದು. ಈ ಸಾಲ ಮಿತಿಯನ್ನು 5 ಲಕ್ಷ ರೂಗೆ ಹೆಚ್ಚಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ಅರ್ಹ ರೈತರಿಗೆ ಸರ್ಕಾರ ವರ್ಷಕ್ಕೆ ಮೂರು ಕಂತುಗಳಲ್ಲಿ 6,000 ರೂ ನೀಡುತ್ತದೆ. ಈ ಮೊತ್ತವನ್ನು ಹೆಚ್ಚಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: ರೈತರ ಬದುಕು ಹಸನಾಗಲು ನೆರವಾಗುತ್ತಾ ಈ ಬಾರಿಯ ಬಜೆಟ್; ಏನಿವೆ ಕೃಷಿ ಕ್ಷೇತ್ರದ ನಿರೀಕ್ಷೆಗಳು?

ಕೃಷಿ ಯಂತ್ರೋಪಕರಣಗಳಿಗೆ ಜಿಎಸ್​ಟಿ ದರವನ್ನು ಕನಿಷ್ಠ ಮಟ್ಟಕ್ಕೆ ಇಳಿಸಬೇಕೆನ್ನುವ ಕೂಗಿದೆ. ಬಜೆಟ್​ನಲ್ಲಿ ಇದನ್ನು ಪರಿಗಣಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕೃಷಿ ಕ್ಷೇತ್ರದಲ್ಲಿ ಸ್ಟಾರ್ಟಪ್​ಗಳು ಮತ್ತು ಅಗ್ರಿಟೆಕ್ ಕಂಪನಿಗಳಿಗೆ ಉತ್ತೇಜನ ಸಿಗಬಹುದು. ಆಹಾರ ಮತ್ತು ರಸಗೊಬ್ಬರಗಳಿಗೆ ಸಬ್ಸಿಡಿ ಮುಂದುವರಿಯಬಹುದು, ಅಥವಾ ಹೆಚ್ಚಲೂ ಬಹುದು.

ಬಹಳ ಮುಖ್ಯವಾಗಿ, ಹವಾಮಾನ ಸಮಸ್ಯೆಯನ್ನು ಎದುರಿಸಿ ಕೃಷಿ ಕ್ಷೇತ್ರ ಕುಂದಿಹೋಗದ ರೀತಿಯಲ್ಲಿ ಅಣಿಗೊಳಿಸುವ ದೂರಗಾಮಿ ಯೋಜನೆಗಳನ್ನು ಬಜೆಟ್​ನಲ್ಲಿ ಆರಂಭಿಸಬಹುದು. ಭವಿಷ್ಯದ ಸವಾಲುಗಳಿಗೆ ಸಜ್ಜಾಗಲು ಕೃಷಿ ಕ್ಷೇತ್ರವನ್ನು ಸಜ್ಜುಗೊಳಿಸುವ ಸವಾಲು ಬಜೆಟ್ ಮುಂದಿದೆ. ಎಷ್ಟರಮಟ್ಟಿಗೆ ಇದು ಸಫಲವಾಗುತ್ತದೆ ಎಂದು ಕಾದುನೋಡಬೇಕು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ