French Fry: ಆವತ್ತು ಆಮದು , ಇವತ್ತು ರಫ್ತು; ಜಾಗತಿಕ ಫ್ರೆಂಚ್ ಫ್ರೈ ಮಾರುಕಟ್ಟೆಯಲ್ಲಿ ಭಾರತದ ಅಧಿಪತ್ಯ
India and french fry market: ಫ್ರೆಂಚ್ ಫ್ರೈಗಳ ರಫ್ತಿನಲ್ಲಿ ಭಾರತ ಮೂರನೇ ಸ್ಥಾನ ಹೊಂದಿದೆ. ಅಮೆರಿಕ ಮತ್ತು ಬೆಲ್ಜಿಯಂ ನಂತರ ಅತಿಹೆಚ್ಚು ಫ್ರೆಂಚ್ ಫ್ರೈ ರಫ್ತಾಗುವುದು ಭಾರತದಿಂದಲೇ. 2023-24ರಲ್ಲಿ 1.35 ಟನ್ ಫ್ರೆಂಚ್ ಫ್ರೈ ರಫ್ತಾಗಿತ್ತು. 2024-25ರ ಮೊದಲ ಏಳು ತಿಂಗಳಲ್ಲಿ ಒಂದು ಲಕ್ಷ ಟನ್ಗೂ ಅಧಿಕ ಫ್ರೆಂಚ್ ಫ್ರೈ ರಫ್ತಾಗಿದೆ. ಆಗ್ನೇಯ ಏಷ್ಯಾ, ಪೂರ್ವ ಏಷ್ಯಾ ಮತ್ತು ಪಶ್ಚಿಮ ಏಷ್ಯಾದ ಹಲವು ದೇಶಗಳು ಭಾರತದಿಂದ ಫ್ರೆಂಚ್ ಫ್ರೈ ಸರಬರಾಜು ಪಡೆಯುತ್ತವೆ.
ನವದೆಹಲಿ, ಜನವರಿ 24: ಭಾರತದಲ್ಲಿ ಒಂದು ಕಾಲದಲ್ಲಿ ಶ್ರೀಮಂತರ ತಿಂಡಿ ಎನಿಸಿದ್ದ ಫ್ರೆಂಚ್ ಫ್ರೈ ಇವತ್ತು ಸಾಧಾರಣ ಹೋಟೆಲ್ಗಳಲ್ಲೂ ಸಾಮಾನ್ಯವಾಗಿ ಲಭ್ಯ ಇದೆ. ಫ್ರೆಂಚ್ ಫ್ರೈಗಳನ್ನು ಆಮದು ಮಾಡಿಕೊಳ್ಳುತ್ತಿದ್ದ ಭಾರತ ಇವತ್ತು ಪ್ರಮುಖ ರಫ್ತುದಾರ ದೇಶವಾಗಿ ಬದಲಾಗಿದೆ. ಭಾರತದಿಂದ ರಫ್ತಾಗುವ ಪ್ರಮುಖ ಸರಕುಗಳಲ್ಲಿ ಫ್ರೋಜನ್ ಫ್ರೆಂಚ್ ಫ್ರೈ ಕೂಡ ಒಂದು. ಇಂಡಿಯನ್ ಎಕ್ಸ್ಪ್ರೆಸ್ ವರದಿ ಪ್ರಕಾರ 2023-24ರಲ್ಲಿ ಭಾರತ 1,35,877 ಟನ್ಗಳಷ್ಟು ಫ್ರೆಂಚ್ ಫ್ರೈಗಳನ್ನು ರಫ್ತು ಮಾಡಿತ್ತು. ಇವುಗಳ ಒಟ್ಟು ಮೌಲ್ಯ 1,478.73 ಕೋಟಿ ರೂ. 2024-25ರ ಹಣಕಾಸು ವರ್ಷದ ಮೊದಲ ಏಳು ತಿಂಗಳಾದ ಏಪ್ರಿಲ್-ಅಕ್ಟೋಬರ್ವರೆಗೆ ಒಂದು ಸಾವಿರ ಕೋಟಿ ರೂಗೂ ಹೆಚ್ಚು ಮೌಲ್ಯದ ಮತ್ತು 1,06,506 ಟನ್ನಷ್ಟು ಫ್ರೆಂಚ್ ಫ್ರೈ ಅನ್ನು ರಫ್ತು ಮಾಡಲಾಗಿದೆ. ಇದು ಸಾಮಾನ್ಯ ಸಂಗತಿ ಅಲ್ಲ.
ಭಾರತದಲ್ಲಿ ಫ್ರೆಂಚ್ ಫ್ರೈಗೆ ಮಾರುಕಟ್ಟೆ ಬೆಳೆಯುತ್ತಿದೆ. ಸಾಮಾನ್ಯ ಹೋಟೆಲ್ಗಳು ಫ್ರೆಂಚ್ ಫ್ರೈ ಲಭ್ಯ ಇದೆ. ಸ್ಟ್ರೀಟ್ ಫೂಡ್ಗಳಲ್ಲಿ ಜನಪ್ರಿಯವಾಗಿರುವ ತಿಂಡಿಗಳಲ್ಲಿ ಅದೂ ಒಂದು. ಭಾರತದ ಒಳಗೆ ವರ್ಷದಲ್ಲಿ ಒಂದು ಲಕ್ಷ ಟನ್ನಷ್ಟು ಫ್ರೆಂಚ್ ಫ್ರೈ ಅವಶ್ಯಕತೆ ಇದೆ. ಭಾರತೀಯರ ಬೇಡಿಕೆ ಪೂರೈಸಿ, ಜಾಗತಿಕವಾಗಿ ಫ್ರೆಂಚ್ ಫ್ರೈ ಅನ್ನು ರಫ್ತು ಮಾಡುತ್ತಿರುವುದು ಗಮನಾರ್ಹ ಸಂಗತಿ. ಜಾಗತಿಕವಾಗಿ ಫ್ರೆಂಚ್ ಫ್ರೈ ಮಾರುಕಟ್ಟೆ 16 ಬಿಲಿಯನ್ ಡಾಲರ್ ಇದೆ. ಅತಿಹೆಚ್ಚು ಫ್ರೆಂಚ್ ಫ್ರೈ ರಫ್ತು ಮಾಡುವ ದೇಶ ಅಮೆರಿಕ. ಅದರ ನಂತರದ ಸ್ಥಾನ ಬೆಲ್ಜಿಯಂ ಮತ್ತು ಭಾರತ. ವಿಶ್ವದ ಟಾಪ್-3 ಫ್ರೆಂಚ್ ಫ್ರೈ ರಫ್ತುದಾರ ದೇಶಗಳ ಪಟ್ಟಿಯಲ್ಲಿ ಭಾರತ ಇರುವುದು ಸೋಜಿಗದ ಸಂಗತಿ.
ಭಾರತದ ಫ್ರೆಂಚ್ ಫ್ರೈಗಳು ಎಲ್ಲೆಲ್ಲಿಗೆ ರಫ್ತು?
ಫಿಲಿಪ್ಪೈನ್ಸ್, ಥಾಯ್ಲೆಂಡ್, ಮಲೇಷ್ಯಾ, ಇಂಡೋನೇಷ್ಯಾ, ವಿಯೆಟ್ನಾಂ ಇತ್ಯಾದಿಗಳಿರುವ ಆಗ್ನೇಯ ಏಷ್ಯಾದ ದೇಶಗಳಿಗೆ ಭಾರತದಿಂದ ಫ್ರೆಂಚ್ ಫ್ರೈ ಹೆಚ್ಚಾಗಿ ರಫ್ತಾಗುತ್ತದೆ. ಜಪಾನ್, ತೈವಾನ್ ಇತ್ಯಾದಿ ಪೂರ್ವ ಏಷ್ಯನ್ ದೇಶಗಳಿಗೂ ರಫ್ತಾಗುತ್ತದೆ. ಸೌದಿ ಅರೇಬಿಯಾ, ಯುಎಇ ಮತ್ತು ಓಮನ್ನಂತಹ ಪಶ್ಚಿಮ ಏಷ್ಯನ್ ದೇಶಗಳಿಗೂ ಇವುಗಳನ್ನು ಭಾರತದಿಂದ ರಫ್ತು ಮಾಡಲಾಗುತ್ತಿದೆ.
ಇದನ್ನೂ ಓದಿ: ವಿಶ್ವದ ಅತಿದೊಡ್ಡ ಡಾಟಾಸೆಂಟರ್ಗಿಂತ ಮೂರು ಪಟ್ಟು ದೊಡ್ಡದು ರಿಲಾಯನ್ಸ್ನಿಂದ ನಿರ್ಮಾಣ; ಇಲ್ಲಿದೆ ಪಟ್ಟಿ
ಹೈಫನ್ ಫೂಡ್ಸ್, ಇಸ್ಕಾನ್ ಬಾಲಾಜಿ ಫೂಡ್ಸ್, ಫನ್ವೇವ್ ಫೂಡ್ಸ್, ಚಿಲ್ಫಿಲ್ ಫೂಡ್ಸ್, ಜೆ ಆರ್ ಸಿಂಪ್ಲಾಟ್ ಮೊದಲಾದ ಭಾರತೀಯ ಕಂಪನಿಗಳು ಫ್ರೆಂಚ್ ಫ್ರೈಗಳನ್ನು ಹೊರದೇಶಗಳಿಗೆ ರಫ್ತು ಮಾಡುತ್ತವೆ.
ಆಲೂಗಡ್ಡೆಯಿಂದ ಫ್ರೆಂಚ್ ಫ್ರೈ….
ಫ್ರೆಂಚ್ ಫ್ರೈ ಅನ್ನು ಆಲೂಗಡ್ಡೆಯಿಂದ ತಯಾರಿಸಲಾಗುತ್ತದೆ. ವಿಶ್ವದಲ್ಲಿ ಅತಿಹೆಚ್ಚು ಆಲೂಗಡ್ಡೆ ಬೆಳೆಯುವುದು ಚೀನಾದಲ್ಲಿ. ಅದು ಬಿಟ್ಟರೆ ಭಾರತವೇ. ಚೀನಾದಲ್ಲಿ ವರ್ಷಕ್ಕೆ 95 ಮಿಲಿಯನ್ ಟನ್ ಆಲೂಗಡ್ಡೆ ಉತ್ಪಾದನೆ ಇದ್ದರೆ, ಭಾರತದಲ್ಲಿ 60 ಮಿಲಿಯನ್ ಟನ್ ಇದೆ. ಇಷ್ಟು ಅಗಾಧ ಪ್ರಮಾಣದಲ್ಲಿ ಭಾರತದಲ್ಲಿ ಆಲೂಗಡ್ಡೆ ಬೆಳೆದರೂ ಎಲ್ಲವೂ ಕೂಡ ಫ್ರೆಂಚ್ ಫ್ರೈಗೆ ಸೂಕ್ತ ಇರುವುದಿಲ್ಲ.
ಭಾರತದಲ್ಲಿ ಬೆಳೆಯಲಾಗುವ ಹೆಚ್ಚಿನ ಆಲೂಗಡ್ಡೆಯು ಫ್ರೆಂಚ್ ಫ್ರೈಗೆ ಸೂಕ್ತ ಇಲ್ಲ. ಭಾರತೀಯ ಸಾಂಪ್ರದಾಯಿಕ ಅಡುಗೆಗಳಿಗೆ ಸೂಕ್ತವೆನಿಸುವ ಆಲೂವೇ ಹೆಚ್ಚು. ಇವುಗಳಲ್ಲಿ ತೇವಾಂಶ ಹೆಚ್ಚಿರುತ್ತದೆ. ಫ್ರೆಂಚ್ ಫ್ರೈಗೆ ಸಂಸ್ಕರಣೆ ಗ್ರೇಡ್ನ ಆಲೂಗಡ್ಡೆ ಅಗತ್ಯ. ಇದರಲ್ಲಿ ತೇವಾಂಶ ಕಡಿಮೆ ಇರುತ್ತದೆ. ಹಾಗೆಯೇ, ರೆಡ್ಯೂಸಿಂಗ್ ಶುಗರ್ಗಳ ಪ್ರಮಾಣ ಕಡಿಮೆ ಇರುತ್ತದೆ.
ಇದನ್ನೂ ಓದಿ: ಅಮೆರಿಕದ ಸ್ಟಾರ್ಗೇಟ್: ಟ್ರೋಲ್ ಮಾಡಿದ ಮಸ್ಕ್; ತಿರುಗೇಟು ನೀಡಿದ ಆಲ್ಟ್ಮ್ಯಾನ್; ಏನಿದು ಎಐ ಪ್ರಾಜೆಕ್ಟ್? ಇಲ್ಲಿದೆ ಡೀಟೇಲ್ಸ್
ಕುಫ್ರಿ ಚಿಪ್ಸೋನಾ, ಕುಫ್ರಿ ಫ್ರೈಸೋನಾ, ಸಂಟಾನಾ, ಇನ್ನೋವೇಟರ್, ಕುಫ್ರಿ ಫ್ರೈಯೋಎಂ ಇತ್ಯಾದಿ ತಳಿಯ ಆಲೂಗಡ್ಡೆಗಳನ್ನು ಫ್ರೆಂಚ್ ಫ್ರೈ ತಯಾರಿಕೆಗೆ ಬಳಸಲಾಗುತ್ತದೆ. ಒಂದು ಕಿಲೋ ಫ್ರೈಗೆ ಎರಡು ಕಿಲೋ ಆಲೂ ಬೇಕಾಗುತ್ತದೆ. ವೇಫರ್ ಇತ್ಯಾದಿಗಳಿಗೆ ಆರು ಕಿಲೋ ಆಲೂಗಡ್ಡೆಯ ಅವಶ್ಯಕತೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ