Budget 2024 Date: ಇಂದು ಕೇಂದ್ರ ಬಜೆಟ್, ಸಮಯ, ಸೆಷನ್, ದಾಖಲೆ ಮತ್ತಿತರ ವಿವರ

| Updated By: ನಯನಾ ರಾಜೀವ್

Updated on: Feb 01, 2024 | 8:16 AM

FM Nirmala Sitharaman to Present Interim budget: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರುವರಿ 1ರಂದು ಮಧ್ಯಂತರ ಬಜೆಟ್ ಮಂಡಿಸುತ್ತಿದ್ದಾರೆ. ಜುಲೈ 31ರಂದು ಬಜೆಟ್ ಸೆಷನ್ ಶುರುವಾಗಿದ್ದು, ಇಂದು ಬೆಳಗ್ಗೆ 11 ಗಂಟೆಗೆ ಬಜೆಟ್ ಭಾಷಣ ಆರಂಭವಾಗುತ್ತದೆ. ನಿರ್ಮಲಾ ಸೀತಾರಾಮನ್ ಸತತ ಆರನೇ ಬಾರಿ ಬಜೆಟ್ ಮಂಡಿಸುತ್ತಿದ್ದು, ಮೊರಾರ್ಜಿ ದಾಖಲೆ ಸರಿಗಟ್ಟಲಿದ್ದಾರೆ.

Budget 2024 Date: ಇಂದು ಕೇಂದ್ರ ಬಜೆಟ್, ಸಮಯ, ಸೆಷನ್, ದಾಖಲೆ ಮತ್ತಿತರ ವಿವರ
ನಿರ್ಮಲಾ ಸೀತಾರಾಮನ್
Follow us on

ನವದೆಹಲಿ, ಫೆಬ್ರವರಿ 01: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (FM Nirmala Sitharaman) ಇಂದು( ಫೆಬ್ರುವರಿ 1ರಂದು) ಬಜೆಟ್ ಮಂಡಿಸುತ್ತಿದ್ದಾರೆ. ಲೋಕಸಭೆ ಚುನಾವಣೆಗೆ ಮುನ್ನ ಇರುವುದರಿಂದ ಇದು ಮಧ್ಯಂತರ ಬಜೆಟ್ (Interim budget 2023) ಎಂದು ಪರಿಗಣಿಸಲಾಗುತ್ತದೆ. ಅಂದರೆ ಇದು ಇಡೀ ವರ್ಷಕ್ಕೆ ಅನ್ವಯ ಆಗುವುದಿಲ್ಲ. ಚುನಾವಣೆ ಮುಗಿದು ಹೊಸ ಸರ್ಕಾರ ಬಂದು ಹೊಸ ಬಜೆಟ್ ಮಂಡನೆ ಆಗುವವರೆಗೂ ಈ ಮಧ್ಯಂತರ ಬಜೆಟ್ ಹಣಕಾಸು ಬಳಕೆಗೆ ಕೀಲಿ ಒದಗಿಸುತ್ತದೆ.

ಬಜೆಟ್ ಮಂಡನೆ ದಿನ ಮತ್ತು ಸಮಯ

ಹಿಂದೆಲ್ಲಾ ಫೆಬ್ರುವರಿ ತಿಂಗಳ ಕೊನೆಯ ಕಾರ್ಯದಿನದಂದು ಬಜೆಟ್ ಮಂಡನೆ ಆಗುತ್ತಿತ್ತು. ಬ್ರಿಟಿಷರ ಕಾಲದಿಂದ ಬಂದ ರೂಢಿಯನ್ನೇ ಮುಂದುವರಿಸಲಾಗಿತ್ತು. ಆದರೆ, ಕೆಲ ವರ್ಷಗಳ ಹಿಂದೆ ಬಜೆಟ್ ದಿನವನ್ನು ಫೆಬ್ರುವರಿ 1ಕ್ಕೆ ನಿಗದಿ ಮಾಡಲಾಗಿದೆ. ಏಪ್ರಿಲ್​ನಿಂದ ಶುರುವಾಗುವ ಹಣಕಾಸು ವರ್ಷಕ್ಕೆ ಬಜೆಟ್ ಅಂಶಗಳನ್ನು ಅಳವಡಿಸಲು ಸಾಕಷ್ಟು ಸಮಯಾವಕಾಶ ಸಿಗುತ್ತದೆ.

ಈ ಬಾರಿಯದ್ದು ಮಧ್ಯಂತರ ಬಜೆಟ್ ಆದರೂ ಫೆಬ್ರುವರಿ 1ಕ್ಕೆಯೇ ಇರುತ್ತದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರುವರಿ 1ರಂದು ಬೆಳಗ್ಗೆ 11ಗಂಟೆಗೆ ಜಂಟಿ ಸದನದಲ್ಲಿ ಬಜೆಟ್ ಮಂಡಿಸುತ್ತಾರೆ. ಸಾಮಾನ್ಯವಾಗಿ ಬಜೆಟ್ ಭಾಷಣ ಎರಡೂವರೆಗೆ ಗಂಟೆ ಇರುತ್ತದೆ.

ಇದನ್ನೂ ಓದಿ: Budget Expectations: ಸಂಬಳ ಪಡೆಯುವ ಮಧ್ಯಮವರ್ಗದವರಿಗೆ ಈ ಬಾರಿಯ ಬಜೆಟ್ ನಿರೀಕ್ಷೆಗಳಿವು

ಬಜೆಟ್ ಸಂಬಂಧಿತ ಚಟುವಟಿಕೆಗಳ ಟೈಮ್​ಲೈನ್

  • ಆರು ತಿಂಗಳ ಹಿಂದಿನಿಂದಲೇ ಬಜೆಟ್ ತಯಾರಿ ಆರಂಭವಾಗುತ್ತದೆ
  • ಜ. 24: ಹಲ್ವಾ ಕಾರ್ಯಕ್ರಮ
  • ಜ. 29: ಆರ್ಥಿಕ ಸಮೀಕ್ಷಾ ವರದಿ ಬದಲು ಆರ್ಥಿಕ ಪರಾಮರ್ಶೆ ವರದಿ
  • ಜ. 30: ಕೇಂದ್ರ ಸರ್ಕಾರದಿಂದ ಸರ್ವಪಕ್ಷ ಸಭೆ
  • ಜ. 31: ಬಜೆಟ್ ಸೆಷನ್ ಆರಂಭ, ರಾಷ್ಟ್ರಪತಿಗಳಿಂದ ಜಂಟಿ ಸದನವನ್ನು ಉದ್ದೇಶಿಸಿ ಭಾಷಣ
  • ಫೆ. 1: ಬೆಳಗ್ಗೆ 11 ಗಂಟೆಗೆ ನಿರ್ಮಲಾ ಸೀತಾರಾಮ್ ಅವರಿಂದ ಮಧ್ಯಂತರ ಬಜೆಟ್ ಮಂಡನೆ ಆರಂಭ
  • ಫೆ. 9: ಬಜೆಟ್ ಸೆಷನ್ ಮುಕ್ತಾಯ
  • 2024ರ ಏ. 1: ಹೊಸ ಹಣಕಾಸು ವರ್ಷ ಆರಂಭ
  • ಜುಲೈ: ಮೇ ತಿಂಗಳಲ್ಲಿ ಚುನಾವಣೆ ಫಲಿತಾಂಶ ಬಂದು ಹೊಸ ಸರ್ಕಾರ ರಚನೆಯಾಗುತ್ತದೆ. ಜೂನ್ ಅಥವಾ ಜುಲೈ ತಿಂಗಳಲ್ಲಿ ಪೂರ್ಣಪ್ರಮಾಣದ ಬಜೆಟ್ ಮಂಡನೆ ಆಗುವ ನಿರೀಕ್ಷೆ ಇದೆ.

ಎನ್​ಡಿಎ ಸರ್ಕಾರ ಮತ್ತು ಹಣಕಾಸು ಸಚಿವರು

2014ರಿಂದ ಅಸ್ತಿತ್ವಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರದಲ್ಲಿ ನಿರ್ಮಲಾ ಸೀತಾರಾಮನ್ ಸೇರಿ ಮೂವರು ಹಣಕಾಸು ಸಚಿವರಾಗಿದ್ದಾರೆ. ಅರುಣ್ ಜೇಟ್ಲಿ ಮೊದಲಿಗೆ ಆಗಿದ್ದರು. ಅವರು ಅಕಾಲಿಕ ಮರಣಕ್ಕೆ ತುತ್ತಾದಾಗ ಹಂಗಾಮಿಯಾಗಿ ಪೀಯುಶ್ ಗೋಯಲ್ ಸಚಿವರಾದರು. 2019ರಲ್ಲಿ ಎರಡನೇ ಬಾರಿ ಎನ್​ಡಿಎ ಸರ್ಕಾರ ಬಂದಾಗ ನಿರ್ಮಲಾ ಸೀತಾರಾಮನ್ ವಿತ್ತ ಸಚಿವೆಯಾದರು.

ಇದನ್ನೂ ಓದಿ: 2019 Budget: 2019ರ ಮಧ್ಯಂತರ ಬಜೆಟ್​ನ ಎರಡು ಹಿಟ್ ಸ್ಕೀಮ್ಸ್; ಈ ಬಾರಿಯೂ ಬರುತ್ತಾ ಹೊಸ ಗೇಮ್ ಚೇಂಜರ್?

ನಿರ್ಮಲಾ ಸೀತಾರಾಮನ್ ಬಜೆಟ್ ದಾಖಲೆ

  • ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದ ಎರಡನೇ ಮಹಿಳೆಯಾಗಿದ್ದಾರೆ. ಇಂದಿರಾ ಗಾಂಧಿ ಈ ಹಿಂದೆ ಬಜೆಟ್ ಮಂಡಿಸಿದ್ದರು.
  • ನಿರ್ಮಲಾ ಸೀತಾರಾಮನ್ ಈವರೆಗೆ ಐದು ಬಾರಿ ಬಜೆಟ್ ಮಂಡಿಸಿದ್ದಾರೆ. ಫೆ. 1ರಂದು ಅವರೇ ಮಾಡಿದರೆ ಆರನೇ ಬಜೆಟ್ ಮಂಡಿಸಿದ ದಾಖಲೆ ಬರೆಯಲಿದ್ದಾರೆ.
  • ಮೊರಾರ್ಜಿ ದೇಸಾಯಿ ಮಾತ್ರವೇ ಸತತ ಆರು ಬಜೆಟ್ ಮಂಡಿಸಿರುವುದು. ಐದು ಪೂರ್ಣ ಬಜೆಟ್ ಮತ್ತು ಒಂದು ಮಧ್ಯಂತರ ಬಜೆಟ್ ಮಂಡಿಸಿದ್ದರು ಮೊರಾರ್ಜಿ. ಒಟ್ಟು ಅವರು 10 ಬಜೆಟ್ ಮಂಡನೆ ಮಾಡಿದ್ದರು.
  • ಯಶವಂತ್ ಸಿನ್ಹಾ, ಅರುಣ್ ಜೇಟ್ಲಿ, ಮನಮೋಹನ್ ಸಿಂಗ್, ಪಿ ಚಿದಂಬರಂ ಅವರು ಸತತವಾಗಿ ಐದು ಬಾರಿ ಬಜೆಟ್ ಮಂಡಿಸಿದ್ದರು. ನಿರ್ಮಲಾ ಸೀತಾರಾಮನ್ ಈ ದಾಖಲೆ ಸರಿಗಟ್ಟಿದ್ದಾರೆ.

ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:43 pm, Tue, 30 January 24