Budget 2024: ಬಜೆಟ್ ಸೆಷನ್ ಆರಂಭಕ್ಕೆ ಮುನ್ನ ಜ. 30ರಂದು ಸರ್ವಪಕ್ಷ ಸಭೆ ಕರೆದ ಸರ್ಕಾರ

|

Updated on: Jan 29, 2024 | 3:09 PM

All Party Meet In Jan 30th: ಜನವರಿ 31ರಿಂದ ಬಜೆಟ್ ಅಧಿವೇಶನ ಆರಂಭವಾಗಲಿದ್ದು ಫೆಬ್ರುವರಿ 9ರವರೆಗೆ ನಡೆಯಲಿದೆ. ಅಧಿವೇಶನಕ್ಕೆ ಒಂದು ದಿನ ಮುನ್ನ ಜನವರಿ 30 ರಂದು ಸರ್ಕಾರ ಸರ್ವಪಕ್ಷ ಸಭೆ ಕರೆದಿದೆ. ಜನವರಿ 31ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ ಇರಲಿದೆ. ಫೆ. 1ರಂದು ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ.

Budget 2024: ಬಜೆಟ್ ಸೆಷನ್ ಆರಂಭಕ್ಕೆ ಮುನ್ನ ಜ. 30ರಂದು ಸರ್ವಪಕ್ಷ ಸಭೆ ಕರೆದ ಸರ್ಕಾರ
ನರೇಂದ್ರ ಮೋದಿ
Follow us on

ನವದೆಹಲಿ, ಜನವರಿ 29: ಜನವರಿ 31ರಂದು ಬಜೆಟ್ ಅಧಿವೇಶನ (budget session) ಶುರುವಾಗಲಿದ್ದು, ಅದಕ್ಕೆ ಒಂದು ದಿನ ಮುನ್ನ, ಜನವರಿ 30ರಂದು ಕೇಂದ್ರ ಸರ್ಕಾರ ಸರ್ವಪಕ್ಷಗಳ ಸಭೆ (All Party Meeting) ಕರೆದಿದೆ. ಪ್ರತೀ ಬಜೆಟ್ ಅಧಿವೇಶನಕ್ಕೆ ಮುನ್ನ ಈ ರೀತಿ ಎಲ್ಲಾ ಪಕ್ಷಗಳ ಸಭೆ ನಡೆಯುವುದು ವಾಡಿಕೆಯಾಗಿದೆ. ಸರ್ಕಾರದ ಅಜೆಂಡಾ ಮತ್ತು ವಿಪಕ್ಷಗಳ ಅಭಿಪ್ರಾಯ ಇವೆಲ್ಲವೂ ಈ ಸರ್ವಪಕ್ಷ ಸಭೆಯಲ್ಲಿ ಅನಾವರಣಗೊಳ್ಳುವ ನಿರೀಕ್ಷೆ ಇದೆ.

ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆ ಇರುವುದರಿಂದ ಫೆಬ್ರುವರಿ 1ರಂದು ಮಂಡನೆಯಾಗಲಿರುವುದು ಮಧ್ಯಂತರ ಬಜೆಟ್ ಆಗಿರಲಿದೆ. ಲೇಖಾನುದಾನ ಪ್ರಕಟಕ್ಕೆ ಆದ್ಯತೆ ಇದೆಯಾದರೂ ಸಂಪ್ರದಾಯದಂತೆ ಬಜೆಟ್ ಅಧಿವೇಶನ ನಡೆಯುತ್ತದೆ. ಆದರೆ, ಎಂದಿನಂತೆ ಸುದೀರ್ಘವಾಗಿರುವುದಿಲ್ಲ. ಜನವರಿ 31ರಂದು ಆರಂಭವಾಗುವ ಬಜೆಟ್ ಅಧಿವೇಶನ ಫೆಬ್ರುವರಿ 9ರವರೆಗೆ ನಡೆಯಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜನವರಿ 31ರಂದು ಜಂಟಿ ಸದನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಇದರೊಂದಿಗೆ ಬಜೆಟ್ ಅಧಿವೇಶನಕ್ಕೆ ಚಾಲನೆ ಸಿಗಲಿದೆ.

ಇದನ್ನೂ ಓದಿ: DA Hike, Arrears: ಈ ಬಾರಿಯೂ 4 ಪ್ರತಿಶತ ಡಿಎ ಹೆಚ್ಚಳ ಖಾತ್ರಿಯಾ? 18 ತಿಂಗಳ ಡಿಎ ಬಾಕಿ ಹಣ ಬಿಡುಗಡೆಗೆ ಪ್ರಸ್ತಾಪ

ಫೆಬ್ರುವರಿ 1ರಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಧ್ಯಂತರ ಬಜೆಟ್ ಮಂಡನೆ ಮಾಡಲಿದ್ದಾರೆ. ಅದಾದ ಬಳಿಕ ಬಜೆಟ್ ಬಗ್ಗೆ ಅಧಿವೇಶನದಲ್ಲಿ ಚರ್ಚೆಗಳು ನಡೆಯಲು ಅವಕಾಶ ಇರುತ್ತದೆ.

ಚುನಾವಣೆ ಮುಗಿದು ಹೊಸ ಸರ್ಕಾರ ರಚನೆಯಾದ ಬಳಿಕ ಜುಲೈ ತಿಂಗಳಲ್ಲಿ ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಆಗಲಿದೆ. ಅಲ್ಲಿಯವರೆಗೆ ಸರ್ಕಾರದ ನಿರ್ವಹಣೆಗೆ ಬೇಕಾದ ಹಣಕಾಸು ಸಂಪನ್ಮೂಲ ಬಳಕೆಗೆ ಅವಕಾಶವನ್ನು ಲೇಖಾನುದಾನದ ಮೂಲಕ ನೀಡಲಾಗುತ್ತದೆ. ಹೀಗಾಗಿ, ಫೆಬ್ರುವರಿ 1ರಂದು ಮಂಡನೆಯಾಗುವ ಮಧ್ಯಂತರ ಬಜೆಟ್​ನಿಂದ ದೊಡ್ಡ ನಿರೀಕ್ಷೆಗಳು ಇಲ್ಲ.

ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಸತತ ಎರಡು ಅವಧಿ ಅಧಿಕಾರದಲ್ಲಿದೆ. ಮೊದಲ ಅವಧಿಯಲ್ಲಿ ಅರುಣ್ ಜೇಟ್ಲಿ ಹಣಕಾಸು ಸಚಿವರಾಗಿದ್ದರು. ಎರಡನೇ ಅವಧಿಯಲ್ಲಿ ನಿರ್ಮಲಾ ಸೀತಾರಾಮನ್ ಫೈನಾನ್ಸ್ ಮಿನಿಸ್ಟರ್ ಆಗಿದ್ದಾರೆ. ಇಂದಿರಾ ಗಾಂಧಿ ಬಳಿಕ ಬಜೆಟ್ ಮಂಡಿಸಿದ ಮಹಿಳೆ ಎಂಬ ಖ್ಯಾತಿ ನಿರ್ಮಲಾ ಸೀತಾರಾಮನ್ ಅವರದ್ದಾಗಿದೆ. ಅಷ್ಟೇ ಅಲ್ಲ, ಅವರು ಫೆಬ್ರುವರಿ 1ರದ್ದೂ ಸೇರಿಸಿದರೆ ನಿರ್ಮಲಾ ಸೀತಾರಾಮನ್ ಐದು ಬಜೆಟ್ ಮಂಡಿಸಿದಂತಾಗುತ್ತದೆ.

ಇದನ್ನೂ ಓದಿ: Budget 2024: ಹೆರಿಗೆ ರಜೆ, ಕೌಶಲ್ಯ ತರಬೇತಿ ಇತ್ಯಾದಿ; ಮಹಿಳಾ ಉದ್ಯೋಗಿಗಳ ಅಪೇಕ್ಷೆ ಮತ್ತು ನಿರೀಕ್ಷೆಗಳು

ಬ್ರಿಟಿಷರ ಕಾಲದ ನಡವಳಿಕೆಗೆ ತಿಲಾಂಜಲಿ

ಹಾಗೆಯೇ, ನಿರ್ಮಲಾ ಸೀತಾರಾಮನ್ ಅವಧಿಯಲ್ಲಿ ಅಂದಕಾಲದ ಕೆಲ ಆಚರಣೆಗಳನ್ನು ದೂರ ಮಾಡಲಾಗಿದೆ. ಬ್ರಿಟಿಷರ ಕಾಲದಿಂದಲೂ ಬಜೆಟ್ ಮಂಡನೆಗೆ ಕಾಗದಪತ್ರಗಳನ್ನು ಬ್ರೀಫ್​ಕೇಸ್​ನಲ್ಲಿ ತರಲಾಗುತ್ತಿತ್ತು. 2019ರಲ್ಲಿ ಇದನ್ನು ನಿಲ್ಲಿಸಲಾಯಿತು. 2021ರಲ್ಲಿ ಬಜೆಟ್ ಪೂರ್ಣ ಡಿಜಿಟಲ್ ಆಯಿತು. ನಿರ್ಮಲಾ ಸೀತಾರಾಮನ್ ಅವರು ಟ್ಯಾಬ್​ನಲ್ಲಿ ನೋಡಿಕೊಂಡು ಬಜೆಟ್ ಭಾಷಣ ಓದುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ