
ನವದೆಹಲಿ, ಜನವರಿ 30: ಮಧ್ಯಮ ವರ್ಗದವರಿಗೆ ಬಾಧೆಯಾಗಿರುವ ತೆರಿಗೆಗಳ ಹೊರೆಯನ್ನು ಇಳಿಸುವುದು, ನಿರ್ದಿಷ್ಟ ಚೀನೀ ಉತ್ಪನ್ನಗಳ ಮೇಲೆ ಆಮದು ತೆರಿಗೆ ಹೆಚ್ಚಿಸುವುದು ಇತ್ಯಾದಿ ವಿವಿಧ ಕ್ರಮಗಳನ್ನು 2025ರ ಬಜೆಟ್ನಿಂದ ಆರ್ಎಸ್ಎಸ್ ನಿರೀಕ್ಷಿಸುತ್ತಿದೆ. ಶಿಕ್ಷಣ ಮತ್ತು ಕೌಶಲ್ಯ ತರಬೇತಿಗೆ ಹೆಚ್ಚಿನ ಹಣ ನೀಡಬೇಕು, ಸಣ್ಣ ಉದ್ದಿಮೆಗಳಿಗೆ ಪಿಎಲ್ಐನಂತಹ ಯೋಜನೆಗಳಿಂದ ಉತ್ತೇಜನ ನೀಡಬೇಕು ಎನ್ನುವ ಸಲಹೆಗಳನ್ನು ಸಂಘ ಪರಿವಾರದ ವಿವಿಧ ಸಂಘಟನೆಗಳು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ನೀಡಿವೆ.
ಸಂಘ ಪರಿವಾರದಲ್ಲಿ ಹಲವಾರು ಸಂಘಟನೆಗಳಿವೆ. ಕೈಗಾರಿಕೆ, ವ್ಯಾಪಾರ, ಕಾರ್ಮಿಕ, ಶಿಕ್ಷಣ ಇತ್ಯಾದಿ ಕ್ಷೇತ್ರಗಳಲ್ಲಿರುವ ಲಘು ಉದ್ಯೋಗ್ ಭಾರ್ತಿ (ಎಲ್ಯುಬಿ), ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ), ಸ್ವದೇಶೀ ಜಾಗಣ ಮಂಚ್ ಇತ್ಯಾದಿ ಸಂಘ ಪರಿವಾರದ ಆರೇಳು ಸಂಘಟನೆಗಳು ಕಳೆದ ತಿಂಗಳು ಕೇಂದ್ರ ಹಣಕಾಸು ಸಚಿವೆಯನ್ನು ಭೇಟಿ ಮಾಡಿ ತಮ್ಮ ನಿರೀಕ್ಷೆಗಳನ್ನು ಮುಂದಿಟ್ಟಿದ್ದವು.
ಇದನ್ನೂ ಓದಿ: Budget 2025 Date: ಕೇಂದ್ರ ಬಜೆಟ್ ಮಂಡನೆ ದಿನ, ಸಮಯ, ಸ್ಥಳ ಇತ್ಯಾದಿ ವಿವರ
ದೊಡ್ಡ ಮಟ್ಟದ ಸುಧಾರಣಾ ಕ್ರಮಗಳು, ತೆರಿಗೆ ಸಂಗ್ರಹ, ಆದಾಯ ಹೆಚ್ಚಳ ಇತ್ಯಾದಿ ಕಾರ್ಯಗಳು ಇಂದಿನ ಸಂದರ್ಭದಲ್ಲಿ ಬಹಳ ಮುಖ್ಯ ಎಂಬುದನ್ನು ಆರೆಸ್ಸೆಸ್ ಒಪ್ಪುತ್ತದೆ. ಆದರೆ, ಮಧ್ಯಮ ವರ್ಗದವರ ಮೇಲಿರುವ ತೆರಿಗೆ ಹೊರೆಯನ್ನು ಇಳಿಸುವುದೂ ಕೂಡ ಬಹಳ ಮುಖ್ಯ. ಸ್ಥಳೀಯ ಸಣ್ಣ ಉದ್ದಿಮೆಗಳು ಹುಲುಸಾಗಿ ಬೆಳೆಯಬೇಕು. ಸರ್ಕಾರಿ ಉದ್ದಿಮೆಗಳ ಖಾಸಗೀಕರಣ ಅತಿಯಾಗಿ ಆಗದ ರೀತಿಯಲ್ಲಿ ನೋಡಿಕೊಳ್ಳಬೇಕು. ಇವೂ ಕೂಡ ಮುಖ್ಯ ಎನ್ನುವುದು ಆರೆಸ್ಸೆಸ್ ಅನಿಸಿಕೆ.
ಭಾರತೀಯ ಸಂಸ್ಕೃತಿ, ನೈಜ ಇತಿಹಾಸ, ಸಾಧನೆಗಳನ್ನು, ಪ್ರಾಚೀನ ಭಾರತೀಯರ ಜ್ಞಾನಗಳ ಬಗ್ಗೆ ಮಕ್ಕಳಿಗೆ ತಿಳಿಸುವ ಮೌಲ್ಯಾಧಾರಿತ ಶಿಕ್ಷಣ ವ್ಯವಸ್ಥೆ ಇರಬೇಕು ಎಂದು ಆರೆಸ್ಸೆಸ್ ನಿರೀಕ್ಷಿಸಿದೆ. ಗ್ರಾಮೀಣ ಭಾಗದ ಶಾಲೆಗಳಿಗೆ ಹೆಚ್ಚು ಒತ್ತು ಕೊಡಬೇಕು. ವಿವಿಧ ರಾಜ್ಯಗಳಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ನೆರವು ನೀಡಬೇಕು. ಕೌಶಲ್ಯಾಭಿವೃದ್ಧಿ ಯೋಜನೆಗಳು ಮತ್ತು ಸಂಶೋಧನೆಗಳಿಗೆ ಹೆಚ್ಚಿನ ಅನುದಾನ ನೀಡಬೇಕು ಎಂದು ಎಬಿವಿಪಿ ಒತ್ತಾಯಿಸಿದೆ.
ಇದನ್ನೂ ಓದಿ: ಕೇಂದ್ರ ಹಣಕಾಸು ಸಚಿವೆ ನೇತೃತ್ವದ ಬಜೆಟ್ ಟೀಮ್ನ ಪ್ರಮುಖ ಸದಸ್ಯರಿವರು…
ಬಹುರಾಷ್ಟ್ರೀಯ ಸಂಸ್ಥೆಗಳ ಮೇಲಿನ ಅವಲಂಬನೆ ಕಡಿಮೆ ಮಾಡಬೇಕು, ಸ್ಥಳೀಯ ಉದ್ದಿಮೆಗಳಿಗೆ ಉತ್ತೇಜನ ನೀಡಬೇಕು ಎಂಬುದು ಸ್ವದೇಶೀ ಜಾಗರಣ ಮಂಚ್ ಮತ್ತು ಲಘು ಉದ್ಯೋಗ್ ಭಾರ್ತಿ ಸಂಘಟನೆಗಳ ಒತ್ತಾಯವಾಗಿದೆ.
ಸ್ಥಳೀಯ ಸಣ್ಣ ಉದ್ದಿಮೆಗಳಿಗೆ ಸುಲಭವಾಗಿ ಹೆಚ್ಚು ಸಾಲ ಸಿಗಬೇಕು, ಕಾನೂನು ತಡೆ ಕಡಿಮೆ ಇರಬೇಕು. ಉದ್ಯೋಗ ಸೃಷ್ಟಿ, ದೇಶೀಯ ಉತ್ಪಾದನೆಗೆ ಒತ್ತು ಕೊಡಬೇಕು. ಆರ್ಥಿಕ ಪ್ರಗತಿಯ ಹೆಚ್ಚಿನ ಲಾಭವು ದೊಡ್ಡ ಕಾರ್ಪೊರೇಟ್ಗಳ ಬದಲು ಸಣ್ಣ ಉದ್ದಿಮೆಗಳಿಗೆ ಸಿಗುವಂತಾಗಬೇಕು ಎನ್ನುವುದು ಇವುಗಳ ಅನಿಸಿಕೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ