ಕೇಂದ್ರ ಬಜೆಟ್ ಮೇಲೆ ಕರ್ನಾಟಕದ ನಿರೀಕ್ಷೆಗಳೇನು? ರೈಲು, ಕೃಷಿ, ನೀರಾವರಿ ಕ್ಷೇತ್ರದಲ್ಲಿ ಹೊಸ ಯೋಜನೆಗಳ ಆಶಯ

| Updated By: ಗಣಪತಿ ಶರ್ಮ

Updated on: Jul 23, 2024 | 7:37 AM

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್‌ಗೆ ಕ್ಷಣಗಣನೆ ಶುರುವಾಗಿದೆ. ದಕ್ಷಿಣ ಭಾರತದಲ್ಲೇ ಬಿಜೆಪಿಗೆ ಅತಿ ಹೆಚ್ಚು ಸ್ಥಾನ ನೀಡಿರುವ ಕರ್ನಾಟಕ, ಮೋದಿ 3ನೇ ಅವಧಿಯ ಮೊದಲ ಬಜೆಟ್‌ನತ್ತ ಆಸೆಗಣ್ಣಿನಿಂದ ನೋಡುತ್ತಿದೆ. ಹಾಗಾದರೆ ಕರ್ನಾಟಕದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿರುವ ಕೇಂದ್ರದ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಇರುವ ನಿರೀಕ್ಷೆಗಳೇನು? ಇಲ್ಲಿದೆ ವಿವರ.

ಕೇಂದ್ರ ಬಜೆಟ್ ಮೇಲೆ ಕರ್ನಾಟಕದ ನಿರೀಕ್ಷೆಗಳೇನು? ರೈಲು, ಕೃಷಿ, ನೀರಾವರಿ ಕ್ಷೇತ್ರದಲ್ಲಿ ಹೊಸ ಯೋಜನೆಗಳ ಆಶಯ
ಕೇಂದ್ರ ಬಜೆಟ್ ಮೇಲೆ ಕರ್ನಾಟಕಕ್ಕೆ ಹೆಚ್ಚಿನ ನಿರೀಕ್ಷೆ: ಕಾರಣವೂ ಇದೆ!
Follow us on

ಬೆಂಗಳೂರು, ಜುಲೈ 23: ಮೋದಿ 3.0 ಸರ್ಕಾರದ ಮೊದಲ ಬಜೆಟ್‌ ಮೇಲೆ ಕರ್ನಾಟಕ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದೆ. ಕರ್ನಾಟಕದಿಂದ ಲೋಕಸಭೆಗೆ ಆಯ್ಕೆ ಆಗಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸುವ ಬಜೆಟ್ ಬಗ್ಗೆ ಜನಸಾಮಾನ್ಯರಿಂದ ಹಿಡಿದು ಉದ್ಯಮಿಗಗಳ ತನಕ, ಅನ್ನದಾತರಿಂದ ವ್ಯಾಪಾರಿಗಳ ತನಕ, ಬೆಂಗಳೂರಿನ ಮೆಟ್ರೋ ಪ್ರಯಾಣಿಕರಿಂದ ಹಿಡಿದು ರಾಜ್ಯದ ಮೂಲೆ ಮೂಲೆಯಲ್ಲಿ ಸಂಚರಿಸುವ ರೈಲ್ವೇ ಪ್ರಯಾಣಿಕರ ತನಕ ಅಪಾರ ನಿರೀಕ್ಷೆ ಇದೆ.

ಕೊಲ್ಲೂರು – ಧರ್ಮಸ್ಥಳ – ಕುಕ್ಕೆ ರೈಲು ಯೋಜನೆ ಸಮೀಕ್ಷೆಗೆ ಸಿಗುತ್ತಾ ಅನುಮೋದನೆ?

ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ರಾಜ್ಯದ ರೈಲು ಯೋಜನೆಗಳಿಗೆ ಸಿಹಿ ಸುದ್ದಿ ಸಿಗುವ ನಿರೀಕ್ಷೆ ಇದೆ. ಯಾಕಂದರೆ ಕರ್ನಾಟಕದ ವಿ.ಸೋಮಣ್ಣ ರೈಲ್ವೇ ಖಾತೆ ರಾಜ್ಯ ಸಚಿವರಾಗಿದ್ದಾರೆ. ಸೋಮಣ್ಣ, ಕಳೆದ ವಾರ ದಕ್ಷಿಣ ಕನ್ನಡ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಜಿಲ್ಲೆಗೆ ಸಂಬಂಧಿಸಿದ ರೈಲು ಯೋಜನೆಗಳ ಕುರಿತು ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು. ಬಳಿಕ ಬೆಳ್ತಂಗಡಿಯಲ್ಲಿ ಮಾತನಾಡಿದ್ದ ವಿ.ಸೋಮಣ್ಣ, ಕೊಲ್ಲೂರು- ಧರ್ಮಸ್ಥಳ- ಕುಕ್ಕೆಗೆ ಸಂಪರ್ಕ ಬೆಸೆಯುವ ರೈಲು ಯೋಜನೆ ಸಮೀಕ್ಷೆ ಕಾರ್ಯ ಆರಂಭಿಸಲಾಗುತ್ತದೆ ಎಂದಿದ್ದರು. ಹೀಗಾಗಿ ಈ ಯೋಜನೆಗೆ ಈ ಬಾರಿ ಅನುಮೋದನೆ ಸಿಗುವ ನಿರೀಕ್ಷೆ ಇದೆ.

ಬೆಂಗಳೂರು ವರ್ತುಲ ರೈಲು ಯೋಜನೆ

ಸಾರಿಗೆ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು ಹಾಗೂ ಅಭಿವೃದ್ಧಿಯ ದೂರದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರು ನಗರದ ವರ್ತುಲ ರೈಲು ಯೋಜನೆ ನೀಲನಕ್ಷೆ ತಯಾರಿಸಲಾಗಿದೆ. 287 ಕಿ.ಮೀ. ಉದ್ದದ ಈ ರೈಲು ಯೋಜನೆ,ನಿಡುವಂದ-ವಡ್ಡರಹಳ್ಳಿ-ದೇವನಹಳ್ಳಿ-ಮಾಲೂರು-ಹೀಲಲಿಗೆ-ಹೆಜ್ಜಾಲ-ಸೋಲೂರು-ನಿಡುವಂದ ನಿಲ್ದಾಣಗಳ ಮೂಲಕ ಬೆಂಗಳೂರು ನಗರದ ಪ್ರಮುಖ ರೇಲ್ವೇ ಕೊಂಡಿಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಈ ಯೋಜನೆಗೆ 23,000 ಕೋಟಿ ರೂಪಾಯಿ ವೆಚ್ಚವಾಗುವ ಅಂದಾಜು ಇದೆ. ಕೇಂದ್ರ ಬಜೆಟ್‌ನಲ್ಲಿ ಅನುದಾನವನ್ನು ನೀಡುವ ನಿರೀಕ್ಷೆ ಇದೆ.

ರೈಲು ಯೋಜನೆಗಳ ನಿರೀಕ್ಷೆ

  • ಬೆಂಗಳೂರು ಉಪನಗರ ರೈಲು ಯೋಜನೆಗೆ ವೇಗ ನೀಡಲು ಅಗತ್ಯ ಅನುದಾನ.
  • ಬೆಂಗಳೂರು- ಮೀರಜ್‌ ಮಾರ್ಗ ವಿದ್ಯುದೀಕರಣದ ನಿರೀಕ್ಷೆ.
  • ಇದೇ ರೀತಿ ರಾಜ್ಯದ ಹಲವು ರೈಲು ಮಾರ್ಗಗಳ ವಿದ್ಯುದೀಕರಣ.
  • ತುಮಕೂರಿನಿಂದ-ಚಿತ್ರದುರ್ಗಕ್ಕೆ ನೇರ ರೈಲು ಸಂಪರ್ಕ ಯೋಜನೆ.
  • ಹುಬ್ಬಳ್ಳಿ-ಅಂಕೋಲಾ, ಧಾರವಾಡ-ಬೆಳಗಾವಿ ನೇರ ರೈಲು ಯೋಜನೆ.
  • ಗದಗದಿಂದ ಕಲಬುರಗಿಯ ವಾಡಿ ತನಕ ಹೊಸ ಮಾರ್ಗ ನಿರ್ಮಾಣ.
  • ರೈಲು ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲು ಸೂಕ್ತ ಅನುದಾನ.

ಮೆಟ್ರೋ ಯೋಜನೆಗೆ ಅನುದಾನ, 3ನೇ ಹಂತದ ಬಗ್ಗೆ ಪ್ರಸ್ತಾಪ?

ಬೆಂಗಳೂರು ಮೆಟ್ರೋದ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ. ಪ್ರತಿ ಮೆಟ್ರೋ ಕಾಮಗಾರಿ ನಿಗದಿತ ಅವಧಿಗಿಂತ ತಡವಾಗಿ ಮುಕ್ತಾಯಗೊಳ್ಳುತ್ತಿದೆ. ಸದ್ಯ ಸಾಗುತ್ತಿರುವ ಏರ್‌ಪೋರ್ಟ್‌ ಲೈನ್‌, ಕಾಳೇನ ಅಗ್ರಹಾರ-ನಾಗವಾರ ಕಾಮಗಾರಿಗೆ ಅನುದಾನದ ಜತೆಗೆ ಮೆಟ್ರೋ ಹಂತ-3ರ ಯೋಜನೆಗೆ 15 ಸಾವಿರ ಕೋಟಿ ರೂಪಾಯಿ ಅನುದಾನದ ಬಗ್ಗೆ ಪ್ರಸ್ತಾಪಿಸುವ ನಿರೀಕ್ಷೆ ಇದೆ. ಇದ್ರ ಜೊತೆ ರಾಜ್ಯದ ರಾಜ್ಯದ ಪ್ರಮುಖ ನೀರಾವರಿ ಯೋಜನೆಯಾದ ಭದ್ರಾ ಮೇಲ್ಡಂಡೆ ಯೋಜನೆಗೆ ಅನುದಾನ ಸಿಗೋ ನಿರೀಕ್ಷೆ ಇದೆ. ಯಾಕಂದ್ರೆ ವರ್ಷ ಉರುಳಿದ್ರೂ ಭದ್ರಾ ಮೇಲ್ದಂಡೆ ಯೋಜನೆಗೆ ಹಣ ಬಿಡುಗಡೆಯಾಗಿಲ್ಲ. ಕನಿಷ್ಠ ಈ ಬಾರಿಯಾದ್ರೂ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡ್ಬೇಕು ಅನ್ನೋ ಆಗ್ರಹ ಇದೆ.

ಕರ್ನಾಟಕದ ಇತರ ನಿರೀಕ್ಷೆಗಳೇನು?

ಮೇಕೆದಾಟು, ಕಳಸಾ, ಎತ್ತಿನಹೊಳೆ ಯೋಜನೆಗಳ ಬಗ್ಗೆ ಪ್ರಸ್ತಾಪ ಆಗುತ್ತಾ, ಕಿಸಾನ್ ನಿಧಿ ಹೆಚ್ಚಳವಾಗುತ್ತಾ? ತೆಂಗು ಅಭಿವೃದ್ಧಿ ಮಂಡಳಿಗೆ ವಿಶೇಷ ಪ್ಯಾಕೇಜ್ ಸಿಗಬಹುದೇ ಎಂಬ ಪ್ರಶ್ನೆಗಳು ಕರ್ನಾಟಕದ ಜನತೆಯ ಮನಸಲ್ಲಿವೆ. ಜತೆಗೆ ಸಿರಿಧಾನ್ಯ ಬಳಕೆಗೆ ಪ್ರೋತ್ಸಾಹ ಸಿಕ್ಕರೆ ಕರ್ನಾಟಕದ ರೈತರಿಗೆ ಬಂಪರ್ ಸಿಗಲಿದೆ. ಇದರ ಜೊತೆಗೆ ಹೊಟೇಲ್‌ ಉದ್ಯಮಿಗಳಿಗೆ ತೆರಿಗೆ ಹೊರೆ ಇಳಿಸುವ ನಿರೀಕ್ಷೆ ಇದೆ. ಇನ್ನು ಬಿಸಿಲ ನಾಡು ರಾಯಚೂರಿಗೆ ಏಮ್ಸ್‌ ಆಸ್ಪತ್ರೆ ಒಲಿಯುವ ನಿರೀಕ್ಷೆ ಇದೆ. ಅಲ್ಲದೆ ರಾಜ್ಯದ 39 ರಸ್ತೆಗಳಿಗೆ ರಾಷ್ಟ್ರೀಯ ಹೆದ್ದಾರಿ ಬಡ್ತಿ ಸಿಗಬಹುದು ಎಂಬ ನಿರೀಕ್ಷೆಯೂ ಇದೆ.

ಇದನ್ನೂ ಓದಿ: ಕೇಂದ್ರ ಬಜೆಟ್ ಮಂಡನೆ ಯಾವಾಗ, ಎಷ್ಟು ಗಂಟೆಗೆ ಆರಂಭ, ನಿರೀಕ್ಷೆಗಳೇನು ಇತ್ಯಾದಿ ವಿವರ

ಈ ಬಾರಿ ರಾಜ್ಯದಿಂದ ಐವರು ಕೇಂದ್ರ ಸಚಿವರಾಗಿ ಆಯ್ಕೆಯಾಗಿರುವ ಕಾರಣ ಒಂದಷ್ಟು ನಿರೀಕ್ಷೆಗಳು ಕೈಗೂಡಬಹುದೇನೋ ಎಂಬ ಭರವಸೆ ರಾಜ್ಯದ ಜನತೆಯಲ್ಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ