UK Firms; ಬ್ರಿಟನ್​​ನ ಈ 100 ಕಂಪನಿಗಳಲ್ಲಿ ಇನ್ನು ವಾರಕ್ಕೆ ನಾಲ್ಕೇ ದಿನ ಕೆಲಸ!

| Updated By: Ganapathi Sharma

Updated on: Nov 29, 2022 | 2:55 PM

ಬ್ರಿಟನ್​​ನ 100 ಕಂಪನಿಗಳು ವೇತನ ಕಡಿತ ಇಲ್ಲದೆಯೇ ಪೂರ್ಣಾವಧಿಗೆ ವಾರಕ್ಕೆ ನಾಲ್ಕೇ ದಿನ ಕೆಲಸ ಮಾಡುವ ವಿಧಾನ ಅನುಷ್ಠಾನಗೊಳಿಸುವ ಒಪ್ಪಂದಕ್ಕೆ ಸಹಿ ಹಾಕಿವೆ.

UK Firms; ಬ್ರಿಟನ್​​ನ ಈ 100 ಕಂಪನಿಗಳಲ್ಲಿ ಇನ್ನು ವಾರಕ್ಕೆ ನಾಲ್ಕೇ ದಿನ ಕೆಲಸ!
ಸಾಂದರ್ಭಿಕ ಚಿತ್ರ
Follow us on

ಲಂಡನ್: ವಾರಕ್ಕೆ ನಾಲ್ಕು ದಿನ ಮಾತ್ರ ಕೆಲಸ ಮಾಡುವ ನಿಯಮ ಜಾರಿಗೆ ತರಬೇಕೆಂಬ ಆಗ್ರಹ ಯುರೋಪ್​ನಲ್ಲಿ ಕೆಲವು ಸಮಯ ಹಿಂದೆ ವ್ಯಕ್ತವಾಗಿದ್ದು ಸುದ್ದಿಯಾಗಿತ್ತು. ಇದೀಗ ಬ್ರಿಟನ್​​ನ 100 ಕಂಪನಿಗಳು (UK companies) ವೇತನ ಕಡಿತ ಇಲ್ಲದೆಯೇ (Salary Cut) ಪೂರ್ಣಾವಧಿಗೆ ವಾರಕ್ಕೆ ನಾಲ್ಕೇ ದಿನ ಕೆಲಸ ಮಾಡುವ ವಿಧಾನ ಅನುಷ್ಠಾನಗೊಳಿಸುವ ಒಪ್ಪಂದಕ್ಕೆ ಸಹಿ ಹಾಕಿವೆ. ಇದರಿಂದಾಗಿ 2,600 ಮಂದಿ ಉದ್ಯೋಗಿಗಳಿಗೆ ಪ್ರಯೋಜನವಾಗಲಿದೆ ಎನ್ನಲಾಗಿದೆ. ಐದು ದಿನ ಕೆಲಸ ಮಾಡುವುದು ಹಿಂದಿನ ಆರ್ಥಿಕ ಯುಗದ ಹ್ಯಾಂಗೋವರ್​ನಿಂದಾಗಿ ಮುಂದುವರಿದಿತ್ತು ಎಂದು ವಾರಕ್ಕೆ ನಾಲ್ಕು ಕೆಲಸದ ದಿನಗಳನ್ನು ಬೆಂಬಲಿಸುವವರ, ಈ ನಿಟ್ಟಿನಲ್ಲಿ ಅಭಿಯಾನ ನಡೆಸುತ್ತಿರುವವರ ವಾದ ಎಂದು ‘ದಿ ಗಾರ್ಡಿಯನ್’ ವರದಿ ಮಾಡಿದೆ. ವಾರಕ್ಕೆ ನಾಲ್ಕು ದಿನ ಕೆಲಸ ಮಾಡುವುದರಿಂದ ಕಂಪನಿಗಳಿಗೆ ಉತ್ಪಾದಕತೆ ಹೆಚ್ಚಿಸುವುದು ಸಾಧ್ಯವಾಗಲಿದೆ. ಕಡಿಮೆ ಅವಧಿಯಲ್ಲಿ ಸಿಗುತ್ತಿದ್ದ ಉತ್ಪಾದಕತೆ ಇನ್ನು ಹೆಚ್ಚಿನ ಅವಧಿಯ ಕೆಲಸದಿಂದಾಗಿ ಸಿಗಲಿದೆ ಎಂದು ಈ ಅಭಿಯಾನದ ಬೆಂಬಲಿಗರು ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.

ಉದ್ಯೋಗಿಗಳನ್ನು ಆಕರ್ಷಿಸುವ ಮತ್ತು ಉಳಿಸಿಕೊಳ್ಳುವ ಉಪಯುಕ್ತ ಮಾರ್ಗವನ್ನು ಕಂಡುಕೊಂಡಿರುವುದಾಗಿ ವಾರಕ್ಕೆ ನಾಲ್ಕು ದಿನ ಕೆಲಸ ನೀತಿಯನ್ನು ಮೊದಲಾಗಿ ಜಾರಿಗೊಳಿಸುತ್ತಿರುವ ಕಂಪನಿಗಳು ಹೇಳಿಕೊಂಡಿವೆ ಎಂದು ವರದಿ ತಿಳಿಸಿದೆ. ಬ್ರಿಟನ್​ನ ಎರಡು ಅತಿ ದೊಡ್ಡ ಕಂಪನಿಗಳಾದ ಅಟಮ್ ಬ್ಯಾಂಕ್ ಮತ್ತು ಅವಿನ್ ಕೂಡ ವಾರಕ್ಕೆ ನಾಲ್ಕೇ ದಿನ ಕೆಲಸದ ನೀತಿಗೆ ಸಹಿ ಹಾಕಿವೆ. ಈ ಎರಡೂ ಕಂಪನಿಗಳಲ್ಲಿ ತಲಾ 450 ಸಿಬ್ಬಂದಿ ಇದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: 4 ದಿನದ ಕೆಲಸ ವಾರ: ಯುರೋಪಿಯನ್ ದೇಶದಲ್ಲಿ ಪೂರ್ಣಾವಧಿ ಉದ್ಯೋಗಿಗಳಿಗೆ ಹೀಗೊಂದು ಅವಕಾಶ

ಹೊಸ ನಿಯಮವು ಕಂಪನಿಯ ಇತಿಹಾಸದಲ್ಲೇ ನಾವು ಕೈಗೊಂಡ ಅತ್ಯಂತ ಮುಖ್ಯ ಕ್ರಮಗಳಲ್ಲಿ ಒಂದಾಗಿದೆ ಎಂದು ಅವಿನ್​ನ ಮುಖ್ಯ ಕಾರ್ಯನಿರ್ವಾಹಕ ಆಡಂ ರೋಸ್ ಹೇಳಿದ್ದಾರೆ. ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ಉದ್ಯೋಗಿಗಳ ಯೋಗಕ್ಷೇಮ ಚೆನ್ನಾಗಿರುವುದನ್ನು ನಾವು ಗಮನಿಸಿದ್ದೇವೆ. ಗ್ರಾಹಕ ಸೇವೆ ಮತ್ತು ಗ್ರಾಹಕರ ಜತೆ ನಮ್ಮ ಸಂಬಂಧಗಳು ಕೂಡ ಚೆನ್ನಾಗಿದೆ. ಪರಿಣಾಮವಾಗಿ ಗ್ರಾಹಕರು ಉತ್ತಮ ಸೇವೆ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ವಾರಕ್ಕೆ ನಾಲ್ಕು ದಿನಗಳ ಕೆಲಸದ ನೀತಿಯು 70 ಕಂಪನಿಗಳ ವಿಶ್ವದ ಅತಿದೊಡ್ಡ ಪ್ರಯೋಗವಾಗಿರಲಿದೆ. ಈ ಕಂಪನಿಗಳಲ್ಲಿ ಸುಮಾರು 3,300 ನೌಕರರಿದ್ದಾರೆ. ಆಕ್ಸ್​ಫರ್ಡ್, ಕೇಂಬ್ರಿಡ್ಜ್ ವಿಶ್ವವಿದ್ಯಾಲಯ, ಬೋಸ್ಟನ್ ಕಾಲೇಜು ಮತ್ತು ಚಿಂತಕರ ಚಾವಡಿಯ ಸಂಶೋಧಕರ ಸಲಹೆ ಆಧಾರದಲ್ಲಿ ಈ ಪ್ರಯೋಗಕ್ಕೆ ಮುಂದಾಗಲಾಗಿದೆ ಎಂದು ಅವಿನ್ ತಿಳಿಸಿದೆ.

ಸಮೀಕ್ಷೆಯಲ್ಲೂ ನಾಲ್ಕು ಕೆಲಸದ ದಿನಗಳ ಪರ ಒಲವು

ಸೆಪ್ಟೆಂಬರ್​​ನಲ್ಲಿ ನಡೆದಿದ್ದ ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಕಂಪನಿಗಳ ಪೈಕಿ ಶೇಕಡಾ 88ರಷ್ಟು ನಾಲ್ಕು ಕೆಲಸದ ದಿನಗಳ ನೀತಿ ಬಗ್ಗೆ ಒಲವು ವ್ಯಕ್ತಪಡಿಸಿದ್ದವು. ಶೇಕಡಾ 95ರಷ್ಟು ಕಂಪನಿಗಳು ಉತ್ಪಾದಕತೆ ಪ್ರಮಾಣ ಹಿಂದಿನಷ್ಟೇ ಇರುವುದಾಗಿ ತಿಳಿಸಿದ್ದವು ಎಂದು ‘ಗಾರ್ಡಿಯನ್’ ವರದಿ ತಿಳಿಸಿದೆ.

ತಂತ್ರಜ್ಞಾನ, ಇವೆಂಟ್ಸ್ ಮತ್ತು ಮಾರ್ಕೆಟಿಂಗ್ ಕಂಪನಿಗಳ ಪೈಕಿ ಹೆಚ್ಚಿನವು ವಾರಕ್ಕೆ ನಾಲ್ಕು ದಿನಗಳ ಕೆಲಸ ನೀತಿಯನ್ನು ಅಧಿಕೃತವಾಗಿ ಆಯ್ಕೆ ಮಾಡಿಕೊಂಡಿವೆ. ಉತ್ಪಾದನೆ, ನಿರ್ಮಾಣ ಕ್ಷೇತ್ರದ ಕೆಲವು ಉದ್ಯೋಗದಾತರೂ ಇದಕ್ಕೆ ಸಹಿ ಹಾಕಿದ್ದಾರೆ ಎಂದು ಅಭಿಯಾನದ ಬೆಂಬಲಿಗರು ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.

ವಾರದಲ್ಲಿ ನಾಲ್ಕು ದಿನ ಮಾತ್ರ ಕೆಲಸ ಮಾಡುವ ನಿಯಮ ಜಾರಿಗೆ ತರುವ ಬಗ್ಗೆ ಏಷ್ಯಾದಲ್ಲಿಯೂ ಕೆಲವೊಂದು ಸಂಘಟನೆಗಳು ದನಿಯೆತ್ತಲಾರಂಭಿಸಿವೆ ಎಂದು ಇತ್ತೀಚೆಗೆ ವರದಿಯಾಗಿತ್ತು. ಈ ಕುರಿತು ಅಮೆರಿಕ ಮೂಲದ ‘ಸೆಂಟರ್ ಫಾರ್ ಕ್ರಿಯೇಟಿವ್ ಲೀಡರ್​ಶಿಪ್’ ಸ್ವಯಂಸೇವಾ ಸಂಸ್ಥೆಯ ಸಮೀಕ್ಷಾ ವರದಿಯಲ್ಲಿಯೂ ಉಲ್ಲೇಖಿಸಲಾಗಿತ್ತು. ಶಿಫ್ಟ್ ಸಂಸ್ಕೃತಿ ಹೊಂದಿರುವ ಏಷ್ಯಾದ ಉದ್ದಿಮೆಗಳು ಇದಕ್ಕೆ ಸಹಮತ ವ್ಯಕ್ತಪಡಿಸಿಲ್ಲ. ಕೇವಲ ಶೇಕಡಾ 2ರಷ್ಟು ನಾಯಕರು ಮುಂದಿನ ಐದು ವರ್ಷಗಳಲ್ಲಿ ಈ ನಿಯಮ ಜಾರಿಯಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ ಎಂದು ಸಮೀಕ್ಷಾ ವರದಿ ತಿಳಿಸಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:54 pm, Tue, 29 November 22