4 ದಿನದ ಕೆಲಸ ವಾರ: ಯುರೋಪಿಯನ್ ದೇಶದಲ್ಲಿ ಪೂರ್ಣಾವಧಿ ಉದ್ಯೋಗಿಗಳಿಗೆ ಹೀಗೊಂದು ಅವಕಾಶ

TV9 Digital Desk

| Edited By: Srinivas Mata

Updated on: Feb 15, 2022 | 7:30 PM

ವಾರದಲ್ಲಿ ನಾಲ್ಕು ದಿನ ಮಾತ್ರ ಕೆಲಸ ಮಾಡುವ ಹಾಗೂ ಸಂಬಳ, ಸವಲತ್ತಿನಲ್ಲಿ ಯಾವುದೇ ಬದಲಾವಣೆ ಆಗದಂಥ ಹೊಸ ನಿಯಮ ಯುರೋಪ್​ನ ಈ ದೇಶದಲ್ಲಿ ಪರಿಚಯಿಸಲಾಗಿದೆ.

4 ದಿನದ ಕೆಲಸ ವಾರ: ಯುರೋಪಿಯನ್ ದೇಶದಲ್ಲಿ ಪೂರ್ಣಾವಧಿ ಉದ್ಯೋಗಿಗಳಿಗೆ ಹೀಗೊಂದು ಅವಕಾಶ
ಸಾಂದರ್ಭಿಕ ಚಿತ್ರ

ಉದ್ಯೋಗಸ್ಥಳದಲ್ಲಿ ಕಡಿಮೆ ಸಮಯ ಕಳೆದು, ಯಾವುದೇ ವೇತನ ಕಡಿತ (Salary Cut) ಆಗಬಾರದು ಎಂದು ಬಯಸುವ ಹೆಚ್ಚಿನ ಉದ್ಯೋಗಿಗಳ ಆಸೆ ಈಡೇರಿದ ಸಮಯ ಇದು. ಬೆಲ್ಜಿಯನ್ ಉದ್ಯೋಗಿಗಳು ವಾರದಲ್ಲಿ ಐದು ದಿನಗಳ ಬದಲಿಗೆ ನಾಲ್ಕು ದಿನದ ಕೆಲಸ ಎಂಬ ತಮ್ಮ ಹೋರಾಟದಲ್ಲಿ ಜಯಿಸಿದ್ದಾರೆ. ಜತೆಗೆ ವೇತನದಲ್ಲೂ ಯಾವ ಕಡಿತ ಆಗುವುದಿಲ್ಲ. ಬೆಲ್ಜಿಯಂನಲ್ಲಿ ಕೆಲಸದಲ್ಲಿ ಕಠಿಣತೆಗೆ ಕುಖ್ಯಾತಿ ಆಗಿದ್ದು, ಇನ್ನು ಮುಂದೆ ಕಾರ್ಮಿಕ ಮಾರುಕಟ್ಟೆ ಹೆಚ್ಚು ಆರಾಮದಾಯಕವಾಗಲಿದೆ. ಆದರೆ ಈಗಲೂ ಕಡಿಮೆ ಅವಧಿಯ ವಾರದ ಕೆಲಸವನ್ನು ಮಾಡಬೇಕು ಎಂಬ ಉದ್ಯೋಗಿಗಳ ಮನವಿಯನ್ನು ತಿರಸ್ಕರಿಸುವ ಹಕ್ಕು ಉದ್ಯೋಗದಾತರಿಗೆ ಇದೆ. ಆದರೆ ಏಕೆ ತಿರಸ್ಕರಿಸಲಾಗಿದೆ ಎಂಬುದನ್ನು ಲಿಖಿತವಾಗಿ ವಿವರಿಸಬೇಕಾಗುತ್ತದೆ ಎಂದು ಉಪ ಪ್ರಧಾನಮಂತ್ರಿ ಮತ್ತು ಕಾರ್ಮಿಕ ಸಚಿವರಾದ ಪಿಯೆರೆ-ಯ್ವೆಸ್ ಡರ್ಮಗ್ನೆ ಮಂಗಳವಾರ ಬ್ರಸೆಲ್ಸ್​ನಲ್ಲಿ ಹೇಳಿದ್ದಾರೆ. ಎಲ್ಲ ಕಾರ್ಮಿಕ ಒಕ್ಕೂಟಗಳ ಜತೆಗೆ ಯಾವುದೇ ಮುಂಚಿತವಾದ ಒಪ್ಪಂದದ ಅಗತ್ಯ ಇಲ್ಲದಂತೆ ಸಂಜೆ ಮತ್ತು ರಾತ್ರಿ ಕೆಲಸಗಳನ್ನು ಪರಿಚಯಿಸುವುದು ಕಂಪೆನಿಗಳಿಗೆ ಸುಲಭ ಆಗಲಿದೆ.

ಕೆಲಸದ ಸಮಯವನ್ನು ತಮಗೆ ಬೇಕಾದಂತೆ ಹೊಂದಾಣಿಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಜನರು ಮತ್ತು ಕಂಪೆನಿಗಳಿಗೆ ನೀಡುವುದು ಗುರಿಯಾಗಿದೆ, ಎಂದು ಪ್ರಧಾನಮಂತ್ರಿ ಅಲೆಕ್ಸಾಂಡರ್ ಡಿ ಕ್ರೂ ಮಂಗಳವಾರ ಬ್ರಸೆಲ್ಸ್​ನಲ್ಲಿ ಹೇಳಿದ್ದಾರೆ. ನಮ್ಮ ದೇಶವನ್ನು ಇತರ ದೇಶಗಳೊಂದಿಗೆ ನೀವು ಹೋಲಿಸಿದಲ್ಲಿ ನಾವು ತುಂಬಾ ಕಡಿಮೆ ಕ್ರಿಯಾತ್ಮಕವಾಗಿರುವುದನ್ನು ನೋಡುತ್ತೀರಿ ಎಂದು ಅವರು ಹೇಳಿದ್ದಾರೆ. ಪ್ರತಿ 100 ಬೆಲ್ಜಿಯನ್​ಗಳಲ್ಲಿ 71 ಮಂದಿ 20ರಿಂದ 64 ವರ್ಷದವರಾಗಿದ್ದು, ಉದ್ಯೋಗ ಹೊಂದಿದ್ದಾರೆ. ಯುರೋ ಪ್ರದೇಶದ ಸರಾಸರಿಯಾದ 73ಕ್ಕೆ ಹೋಲಿಸಿದಲ್ಲಿ ಬೆಲ್ಜಿಯಂನಲ್ಲಿ ಸ್ವಲ್ಪ ಮಟ್ಟಿಗೆ ಕಡಿಮೆ ಇದೆ. ಪೂರ್ಣವಾಗಿ 10 ಪರ್ಸೆಂಟೇಜ್ ಪಾಯಿಂಟ್ಸ್​ ನೆರೆಯ ದೇಶಗಳಾದ ನೆದರ್​ಲೆಂಡ್ಸ್​ ಮತ್ತು ಜರ್ಮನಿಯಂಥ ಕಡೆ ಕೆಳಗೆ ಇದೆ, ಎಂದು 2021ರ ಮೂರನೇ ತ್ರೈಮಾಸಿಕ ಯುರೋಸ್ಟಾಟ್ ಡೇಟಾ ತಿಳಿಸಿದೆ.

ಬೆಲ್ಜಿಯಂನ ಏಳು-ಪಕ್ಷಗಳ ಫೆಡರಲ್ ಒಕ್ಕೂಟದ ಒಪ್ಪಂದವು 2030ರ ವೇಳೆಗೆ ಶೇ 80ರ ಉದ್ಯೋಗ ದರಕ್ಕೆ ಗುರಿಯನ್ನು ನಿಗದಿಪಡಿಸಿದೆ. ಇದು ತನ್ನ ಕಾನೂನು ಪಿಂಚಣಿಗಳನ್ನು ಕೈಗೆಟುಕುವಂತೆ ಮಾಡಲು ಅಥವಾ ಭವಿಷ್ಯದ ತೆರಿಗೆ ಕಡಿತಗಳಿಗೆ ಹಣಕಾಸು ಒದಗಿಸುವ ಸಮಸ್ಯೆಗಳ ನಿವಾರಕವಾಗಿದೆ. ಬೆಲ್ಜಿಯಂ ಸರ್ಕಾರವು ಪ್ಲಾಟ್‌ಫಾರ್ಮ್ ಕೆಲಸಗಾರರಿಗೆ ಹೊಸ ನಿಯಮಗಳನ್ನು ಪರಿಚಯಿಸಿದ್ದು, ಒಪ್ಪಂದದಲ್ಲಿ ಅವರನ್ನು ಏನು ಕರೆಯುತ್ತಾರೆ ಎಂಬುದನ್ನು ಲೆಕ್ಕಿಸದೆಯೇ ಉದ್ಯೋಗಿಗಳಾಗಿ ನೇಮಿಸುವ ಮಾನದಂಡಗಳನ್ನು ನಿಗದಿಪಡಿಸುತ್ತದೆ. ಸಾಮಾಜಿಕ ವ್ಯವಹಾರಗಳ ಸಚಿವ ಫ್ರಾಂಕ್ ವ್ಯಾಂಡೆನ್‌ಬ್ರೂಕ್ ಪ್ರಕಾರ, ಗಿಗ್ ಕೆಲಸಗಾರರಿಗೆ ಡಿಸೆಂಬರ್‌ನಿಂದ ಯುರೋಪಿಯನ್ ಆಯೋಗದ ಪ್ರಸ್ತಾವದ ಮೇಲೆ ಬೆಲ್ಜಿಯಂ ಶಾಸನವನ್ನು ರೂಪಿಸಲಾಗುವುದು.

ಯುನೈಟೆಡ್​ ಕಿಂಗ್​ಡಮ್​ನ ಕಂಪೆನಿಗಳಿಂದ ವೇತನ ಕಡಿತವಿಲ್ಲದೆ 4 ದಿನಗಳ ವಾರ ಪ್ರಾರಂಭ

ನಾಲ್ಕು ದಿನಗಳ ಕೆಲಸದ ವಾರವನ್ನು ಯುನೈಟೆಡ್​ ಕಿಂಗ್​ಡಮ್​ನಲ್ಲಿ ಜೂನ್‌ನಲ್ಲಿ ಪ್ರಾಯೋಗಿಕವಾಗಿ ಪ್ರಾರಂಭಿಸಲಾಗುತ್ತದೆ. ಇಲ್ಲಿಯವರೆಗೆ ಈ ಪ್ರಯೋಗಕ್ಕೆ ಸುಮಾರು 30 ಕಂಪೆನಿಗಳು ಸಹಿ ಹಾಕಿವೆ. ಆರು ತಿಂಗಳ ಅವಧಿಯ ಕಾರ್ಯಕ್ರಮದಲ್ಲಿ ಕಂಪೆನಿಗಳು ಸಿಬ್ಬಂದಿಗೆ ವಾರಕ್ಕೆ 32 ಗಂಟೆಗಳ ಕಾಲ ಕೆಲಸ ಮಾಡಲು ಅವಕಾಶ ನೀಡುತ್ತದೆ ಮತ್ತು ಅವರ ಸಂಬಳ, ಸವಲತ್ತು ಮತ್ತು ಇತರ ಪ್ರಯೋಜನಗಳಲ್ಲಿ ಯಾವುದೇ ಬದಲಾವಣೆ ಮಾಡದೆ ಹಾಗೇ ಬಿಡಲಾಗುತ್ತದೆ. ಕಂಪೆನಿಗಳು ಸಿಬ್ಬಂದಿಯನ್ನು ಐದು ದಿನಗಳಲ್ಲಿ 32 ಗಂಟೆಗಳ ಕಾಲ ಕೆಲಸ ಮಾಡಲು ಕೇಳಬಹುದು. “ವಾರಕ್ಕೆ ನಾಲ್ಕು-ದಿನದ ಕೆಲಸ ಎಂಬುದು ಕಂಪನಿಗಳಿಗೆ ಗೆಲುವು-ಗೆಲುವಿನ ಸನ್ನಿವೇಶ,” ಎಂದು ಯುಕೆಯಲ್ಲಿನ ನಾಲ್ಕು ದಿನಗಳ ವಾರದ ಅಭಿಯಾನ ನಿರ್ದೇಶಕ ಜೋ ರೈಲ್ ಫೋನ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಇದರಿಂದ “ಕಾರ್ಮಿಕರ ಯೋಗಕ್ಷೇಮದ ಜತೆಗೆ ಉತ್ಪಾದಕತೆ ಸುಧಾರಿಸುತ್ತದೆ ಎಂದು ಅಧ್ಯಯನಗಳು ತೋರಿಸಿವೆ.”

ಜಾಗತಿಕವಾಗಿಯೇ ನಡೆಯುತ್ತಿರುವ ನಾಲ್ಕು ದಿನದ ಕೆಲಸದಲ್ಲಿ ಯುನೈಟೆಡ್​ ಕಿಂಗ್​ಡಮ್​ನಲ್ಲಿಯೂ ಪ್ರಯೋಗದ ನಡೆಯುತ್ತಿದೆ. ಪ್ರಪಂಚದಾದ್ಯಂತ ಹಲವಾರು ದೇಶಗಳು ವಾರದಲ್ಲಿ 4 ದಿನದ ಕೆಲಸ ಮಾಡುವ ಪರವಾಗಿ ವಾದ ಮಂಡಿಸುತ್ತಿವೆ. ಇದೇ ರೀತಿಯಾಗಿ ಅಮೆರಿಕ ಮತ್ತು ಐರ್ಲೆಂಡ್‌ನಲ್ಲಿಯೂ ಪ್ರಾರಂಭಿಸಲು ನಿರ್ಧರಿಸಲಾಗಿದೆ. ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲೂ ಯೋಜಿಸಲಾಗಿದೆ ಎಂದು ರೈಲ್ ಹೇಳಿದ್ದಾರೆ.

ಇದನ್ನೂ ಓದಿ: 3 Days Working Week: ಬೆಂಗಳೂರು ಮೂಲದ ಈ ಕಂಪೆನಿಯಲ್ಲಿ ವಾರದಲ್ಲಿ ಮೂರೇ ದಿನದ ಕೆಲಸ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada