ABG Shipyard Scam: ಎಬಿಜಿ ಶಿಪ್​ಯಾರ್ಡ್​ ಹಗರಣದಲ್ಲಿ ನಿರ್ದೇಶಕರ ವಿರುದ್ಧ ಸಿಬಿಐ ಲುಕ್​ಔಟ್ ನೋಟಿಸ್

23000 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಸಿಬಿಐನಿಂದ ಎಬಿಜಿ ಶಿಪ್​ಯಾರ್ಡ್​ ನಿರ್ದೇಶಕರ ವಿರುದ್ಧ ಸಿಬಿಐ ಲುಕ್​ಔಟ್ ನೋಟಿಸ್ ಹೊರಡಿಸಿದೆ.

ABG Shipyard Scam: ಎಬಿಜಿ ಶಿಪ್​ಯಾರ್ಡ್​ ಹಗರಣದಲ್ಲಿ ನಿರ್ದೇಶಕರ ವಿರುದ್ಧ ಸಿಬಿಐ ಲುಕ್​ಔಟ್ ನೋಟಿಸ್
ಸಾಂದರ್ಭಿಕ ಚಿತ್ರ
Follow us
| Updated By: Srinivas Mata

Updated on: Feb 15, 2022 | 10:15 PM

23,000 ಕೋಟಿ ರೂಪಾಯಿಯ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಷಿ ಅಗರ್​ವಾಲ್ ಮತ್ತು ಎಬಿಜಿ ಶಿಪ್‌ಯಾರ್ಡ್‌ನ (ABG Shipyard) ಇತರ ನಿರ್ದೇಶಕರ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿ ಮಾಡಿರುವುದಾಗಿ ಕೇಂದ್ರ ತನಿಖಾ ದಳ (ಸಿಬಿಐ) ಫೆಬ್ರವರಿ 15ರಂದು ತಿಳಿಸಿದೆ. ಈ ಪ್ರಕರಣವನ್ನು ತನಿಖೆ ಮಾಡುವಾಗ ದೇಶವನ್ನು ಬಿಟ್ಟು ಹೋಗಬಾರದು ಎಂದು ಹೀಗೆ ಮಾಡಲಾಗಿದೆ. “22,842 ಕೋಟಿ ರೂಪಾಯಿ ಬ್ಯಾಂಕ್ ಸಾಲ ವಂಚನೆ ಪ್ರಕರಣದಲ್ಲಿ ಎಬಿಜಿ ಶಿಪ್‌ಯಾರ್ಡ್‌ನ ನಿರ್ದೇಶಕರ ವಿರುದ್ಧ ಲುಕ್‌ಔಟ್ ಸುತ್ತೋಲೆಗಳನ್ನು (ಎಲ್‌ಒಸಿ) ಹೊರಡಿಸಲಾಗಿದೆ,” ಎಂದು ಸಿಬಿಐನ ಹಿರಿಯ ಅಧಿಕಾರಿಯೊಬ್ಬರ ಮಾತನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. ಸಿಬಿಐ ಪ್ರಕಾರ, ಎರಡು ವರ್ಷಗಳ ಹಿಂದೆ ಬ್ಯಾಂಕ್‌ಗಳಿಂದ ಸ್ವೀಕರಿಸಿದ ಫೊರೆನ್ಸಿಕ್ ಆಡಿಟ್ ವರದಿಯು 2012ರ ಏಪ್ರಿಲ್​ನಿಂದ 2017ರ ಜುಲೈ 2017ರ ಮಧ್ಯೆ ವಂಚನೆ ಉದಾಹರಣೆಗಳನ್ನು ಕಂಡುಹಿಡಿದಿದೆ.

ಅತಿದೊಡ್ಡ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟಕ್ಕೆ 22,842 ಕೋಟಿ ರೂ. ವಂಚಿಸಿದ ಆರೋಪದಲ್ಲಿ ಸಿಬಿಐ ಫೆಬ್ರವರಿ 12ರಂದು ಎಬಿಜಿ ಶಿಪ್‌ಯಾರ್ಡ್ ಲಿಮಿಟೆಡ್ ಮತ್ತು ಅದರ ಮಾಜಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ (ಸಿಎಮ್‌ಡಿ) ರಿಷಿ ಕಮಲೇಶ್ ಅಗರ್​ವಾಲ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿದೆ. ಸಿಬಿಐ ದೂರಿನಲ್ಲಿ ಸೇರಿಸಲಾದ ಫೊರೆನ್ಸಿಕ್ ಲೆಕ್ಕಪರಿಶೋಧನೆ ಅಂಕಿಅಂಶಗಳ ಪ್ರಕಾರ, ಕಂಪೆನಿಯು ಐಸಿಐಸಿಐ ಬ್ಯಾಂಕ್‌ಗೆ ರೂ. 7089 ಕೋಟಿ, ಐಡಿಬಿಐ ಬ್ಯಾಂಕ್ ರೂ. 3634 ಕೋಟಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ರೂ. 2925 ಕೋಟಿ, ಬ್ಯಾಂಕ್ ಆಫ್ ಬರೋಡಾಗೆ ರೂ 1614 ಕೋಟಿ, ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ರೂ. 1244 ಕೋಟಿ ಮತ್ತು ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ಗೆ ರೂ. 1228 ಕೋಟಿ ಬಾಕಿ ಇದೆ.

ಅಗರ್​ವಾಲ್ ಅಲ್ಲದೆ, ನಿರ್ದೇಶಕರಾದ ಅಶ್ವಿನಿ ಕುಮಾರ್, ಸುಶೀಲ್ ಕುಮಾರ್ ಅಗರ್​ವಾಲ್ ಮತ್ತು ರವಿ ವಿಮಲ್ ನೆವೆಟಿಯಾ ಅವರೊಂದಿಗೆ ಕಂಪೆನಿಯ ಅಂದಿನ ಕಾರ್ಯನಿರ್ವಾಹಕ ನಿರ್ದೇಶಕ ಸಂತಾನಂ ಮುತ್ತಸ್ವಾಮಿ ಅವರನ್ನು ತನಿಖಾ ಸಂಸ್ಥೆಯು ಹೆಸರಿಸಿದೆ. ಎಬಿಜಿ ಇಂಟರ್‌ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ಹೆಸರಿನ ಮತ್ತೊಂದು ಕಂಪೆನಿಯು ಕ್ರಿಮಿನಲ್ ಪಿತೂರಿ, ವಂಚನೆ, ಕ್ರಿಮಿನಲ್ ನಂಬಿಕೆ ದ್ರೋಹ ಹಾಗೂ ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಭ್ರಷ್ಟಾಚಾರ ತಡೆ ಕಾಯ್ದೆ ಅಡಿಯಲ್ಲಿ ಅಧಿಕೃತ ಸ್ಥಾನದ ದುರುಪಯೋಗದ ಆರೋಪದ ಮೇಲೆ ಕೂಡ ಸಿಬಿಐನಿಂದ ದಾಖಲಾಗಿದೆ.

ಬ್ಯಾಂಕ್ ಮೊದಲಿಗೆ ನವೆಂಬರ್ 8, 2019ರಂದು ಎಬಿಜಿ ಶಿಪ್‌ಯಾರ್ಡ್ ವಿರುದ್ಧ ದೂರು ದಾಖಲಿಸಿತ್ತು. ಅದರ ಮೇಲೆ ಸಿಬಿಐ ಮಾರ್ಚ್ 12, 2020ರಂದು ಕೆಲವು ಸ್ಪಷ್ಟೀಕರಣಗಳನ್ನು ಕೋರಿತ್ತು. ಆ ನಂತರ 2019ರ ಆಗಸ್ಟ್​ನಲ್ಲಿ ಹೊಸ ದೂರು ದಾಖಲಿಸಿ, ಒಂದೂವರೆ ವರ್ಷಗಳಿಗೂ ಹೆಚ್ಚು ಕಾಲ ಪರಿಶೀಲನೆ ನಂತರ 2022ರ ಫೆಬ್ರವರಿ 7ರಂದು ಎಫ್‌ಐಆರ್ ದಾಖಲಿಸಿತು. ಎಬಿಜಿ ಶಿಪ್‌ಯಾರ್ಡ್‌ಗೆ ಎಸ್‌ಬಿಐ ಸೇರಿ ಹಣಕಾಸು ಸಂಸ್ಥೆಗಳು ಮತ್ತು 28 ​​ಬ್ಯಾಂಕ್‌ಗಳಿಂದ 24,68.51 ಕೋಟಿ ರೂ. 2012-17ರ ನಡುವೆ ಸಾಲ ಸೌಲಭ್ಯ ಮಂಜೂರು ಮಾಡಲಾಗಿದ್ದು, ಆರೋಪಿಗಳು ಒಟ್ಟಾಗಿ ಸೇರಿಕೊಂಡು ಹಣವನ್ನು ಬೇರೆಡೆಗೆ ತಿರುಗಿಸಿದ್ದು, ದುರುಪಯೋಗ ಕ್ರಿಮಿನಲ್ ನಂಬಿಕೆ ದ್ರೋಹ ಸೇರಿ ಕಾನೂನು ಬಾಹಿರ ಚಟುವಟಿಕೆಗಳನ್ನು ಎಸಗಿರುವುದು ಫೊರೆನ್ಸಿಕ್ ಲೆಕ್ಕ ಪರಿಶೋಧನೆಯಿಂದ ಸಾಬೀತಾಗಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಬ್ಯಾಂಕ್​ಗಳಿಂದ ಹಣವನ್ನು ಯಾವ ಉದ್ದೇಶಕ್ಕಾಗಿ ಬಿಡುಗಡೆ ಮಾಡಲಾಯಿತೋ ಅದಕ್ಕೆ ಬಳಸಿಲ್ಲ.

ಸಾಲದ ಖಾತೆಯನ್ನು 2016ರ ಜುಲೈನಲ್ಲಿ ಅನುತ್ಪಾದಕ ಆಸ್ತಿ (ಎನ್‌ಪಿಎ) ಮತ್ತು 2019ರಲ್ಲಿ ವಂಚನೆ ಎಂದು ಘೋಷಿಸಲಾಯಿತು. ಆದರೆ ಫೆಬ್ರವರಿ 14ರಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಎಬಿಜಿ ಶಿಪ್‌ಯಾರ್ಡ್‌ಗೆ ನೀಡಲಾದ ಸಾಲಗಳು 2014ರ ಮೊದಲು ಎನ್‌ಪಿಎಗಳಾಗಿ ಮಾರ್ಪಟ್ಟಿವೆ, ಅಂದರೆ ಕೇಂದ್ರದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಎಂದಿದ್ದರು. ಹಿಂದಿನ ಯುಪಿಎ ಆಡಳಿತದಲ್ಲಿ ಎಬಿಜಿ ಶಿಪ್‌ಯಾರ್ಡ್ ಖಾತೆಯು ಎನ್‌ಪಿಎಗೆ ತಿರುಗಿತು ಮತ್ತು ಹಡಗು ಸಂಸ್ಥೆಯು ನಡೆಸಿದ ವಂಚನೆಯನ್ನು ಪತ್ತೆಹಚ್ಚಲು ಬ್ಯಾಂಕ್​ಗಳು ಸಾಮಾನ್ಯಕ್ಕಿಂತ ಕಡಿಮೆ ಸಮಯವನ್ನು ತೆಗೆದುಕೊಂಡಿವೆ ಎಂದು ಸೀತಾರಾಮನ್ ಹೇಳಿದರು. “ಈ ನಿರ್ದಿಷ್ಟ ಪ್ರಕರಣದಲ್ಲಿ ಜತೆಗೆ ಆ ರೀತಿಯ ಮಾಪನದೊಂದಿಗೆ ವಾಸ್ತವದಲ್ಲಿ ಬ್ಯಾಂಕ್‌ಗಳಿಗೆ ಈ ಶ್ರೇಯವನ್ನು ನಾನು ಹೇಳಲೇಬೇಕು. ಈ ರೀತಿ ವಂಚನೆಗಳನ್ನು ಪತ್ತೆಹಚ್ಚಲು ಸಾಮಾನ್ಯವಾದ ಸರಾಸರಿ ಸಮಯಕ್ಕಿಂತ ಕಡಿಮೆ ತೆಗೆದುಕೊಂಡಿದ್ದಾರೆ,” ಎಂದು ಆರ್‌ಬಿಐ ಮಂಡಳಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದ್ದರು.

ಇದನ್ನೂ ಓದಿ: Biggest Bank Scam: 22,842 ಕೋಟಿ ರೂ.ಗೂ ಅಧಿಕ ಮೊತ್ತದ ಬ್ಯಾಂಕ್ ವಂಚನೆ; ಎಬಿಜಿ ಶಿಪ್‌ಯಾರ್ಡ್, ಮಾಜಿ ಉನ್ನತಾಧಿಕಾರಿ ವಿರುದ್ಧ ಸಿಬಿಐ ವಿಚಾರಣೆ