Biggest Bank Scam: 22,842 ಕೋಟಿ ರೂ.ಗೂ ಅಧಿಕ ಮೊತ್ತದ ಬ್ಯಾಂಕ್ ವಂಚನೆ; ಎಬಿಜಿ ಶಿಪ್‌ಯಾರ್ಡ್, ಮಾಜಿ ಉನ್ನತಾಧಿಕಾರಿ ವಿರುದ್ಧ ಸಿಬಿಐ ವಿಚಾರಣೆ
ವಿಜಯ್ ಮಲ್ಯ ವಿರುದ್ಧ ಇರುವುದು 9000 ಕೋಟಿ ರೂಪಾಯಿಯ ಬ್ಯಾಂಕ್ ವಂಚನೆ ಪ್ರಕರಣ. ಈಗ ಎಬಿಪಿ ಶಿಪ್‌ಯಾರ್ಡ್ ಹಾಗೂ ಅದರ ಹಿಂದಿನ ಸಿಇಒ ಮತ್ತು ಇತರರ ವಿರುದ್ಧ 22842 ಕೋಟಿ ರೂಪಾಯಿಯ ವಂಚನೆ ಪ್ರಕರಣವನ್ನು ಸಿಬಿಐ ದಾಖಲಿಸಿದೆ. ಮಲ್ಯ ಪ್ರಕರಣಕ್ಕೆ ಹೋಲಿಸಿದರೆ ಇದೆಷ್ಟು ದೊಡ್ಡದು ಎಂದು ಅಂದಾಜಿಸಬಹುದು.
ಅತಿದೊಡ್ಡ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟಕ್ಕೆ 22,842 ಕೋಟಿ ರೂಪಾಯಿಗೂ ಹೆಚ್ಚು ವಂಚನೆ ಮಾಡಿದ ಆರೋಪದ ಮೇಲೆ ಸಿಬಿಐನಿಂದ ಎಬಿಜಿ ಶಿಪ್‌ಯಾರ್ಡ್ ಲಿಮಿಟೆಡ್ ಮತ್ತು ಅದರ ಆಗಿನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಿಷಿ ಕಮಲೇಶ್ ಅಗರ್ವಾಲ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಕ್ರಿಮಿನಲ್ ಪಿತೂರಿ, ವಂಚನೆ, ಕ್ರಿಮಿನಲ್ ನಂಬಿಕೆ ದ್ರೋಹ ಮತ್ತು ಅಧಿಕಾರ ದುರುಪಯೋಗದ ಆರೋಪಗಳಿಗೆ ಸಂಬಂಧಿಸಿದಂತೆ ಅಗರ್ವಾಲ್ ಜೊತೆಗೆ ಆಗಿನ ಕಾರ್ಯನಿರ್ವಾಹಕ ನಿರ್ದೇಶಕ ಸಂತಾನಂ ಮುತ್ತಸ್ವಾಮಿ, ನಿರ್ದೇಶಕರಾದ ಅಶ್ವಿನಿ ಕುಮಾರ್, ಸುಶೀಲ್ ಕುಮಾರ್ ಅಗರ್ವಾಲ್ ಮತ್ತು ರವಿ ವಿಮಲ್ ನೆವೆಟಿಯಾ ಮತ್ತು ಇನ್ನೊಂದು ಕಂಪೆನಿ ಎಬಿಜಿ ಇಂಟರ್ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ಅನ್ನು ಸಹ ಐಪಿಸಿ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆ ಅಡಿಯಲ್ಲಿ ಸಂಸ್ಥೆಯಿಂದ ಹೆಸರಿಸಲಾಗಿದೆ, ಎಂದು ಅವರು ಹೇಳಿದ್ದಾರೆ.
ಬ್ಯಾಂಕ್ ಮೊದಲ ಬಾರಿಗೆ ನವೆಂಬರ್ 8, 2019ರಂದು ದೂರು ಸಲ್ಲಿಸಿತ್ತು. ಅದರ ಮೇಲೆ ಸಿಬಿಐ ಮಾರ್ಚ್ 12, 2020ರಂದು ಕೆಲವು ಸ್ಪಷ್ಟೀಕರಣ ಕೇಳಿತ್ತು. ಅದೇ ವರ್ಷ ಆಗಸ್ಟ್‌ನಲ್ಲಿ ಬ್ಯಾಂಕ್ ಹೊಸ ದೂರನ್ನು ಸಲ್ಲಿಸಿತು. ಒಂದೂವರೆ ವರ್ಷಗಳ ಕಾಲ “ಪರಿಶೀಲನೆ” ಮಾಡಿದ ನಂತರ, ಫೆಬ್ರವರಿ 7, 2022ರಂದು ಎಫ್‌ಐಆರ್ ದಾಖಲಿಸುವ ದೂರಿನ ಮೇಲೆ ಸಿಬಿಐ ಕ್ರಮ ಕೈಗೊಂಡಿತು. ಬ್ಯಾಂಕ್ ಅದೇ ವರ್ಷದ ಆಗಸ್ಟ್‌ನಲ್ಲಿ ಹೊಸ ದೂರನ್ನು ಸಲ್ಲಿಸಿತು.
ಕಂಪೆನಿಯು 28 ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳಿಂದ ಸಾಲ ಸೌಲಭ್ಯಗಳನ್ನು ಮಂಜೂರು ಮಾಡಿಸಿಕೊಂಡಿದ್ದು, ಅದರಲ್ಲಿ ಎಸ್‌ಬಿಐ 2468.51 ಕೋಟಿ ರೂಪಾಯಿ ನೀಡಿದೆ. 2012ರಿಂದ 2017ರ ನಡುವೆ ಆರೋಪಿಗಳು ಒಟ್ಟಾಗಿ ಸೇರಿಕೊಂಡು ಹಣವನ್ನು ಬೇರೆ ಉದ್ದೇಶಕ್ಕೆ ಬಳಕೆ, ದುರುಪಯೋಗ ಮತ್ತು ಕ್ರಿಮಿನಲ್ ನಂಬಿಕೆ ದ್ರೋಹ ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳನ್ನು ಎಸಗಿದ್ದಾರೆ ಎಂದು ಫೊರೆನ್ಸಿಕ್ ಆಡಿಟ್ ತೋರಿಸಿದೆ ಎಂದು ಅವರು ಹೇಳಿದ್ದಾರೆ. ಸಿಬಿಐ ದಾಖಲಿಸಿರುವ ಅತಿ ದೊಡ್ಡ ಬ್ಯಾಂಕ್ ವಂಚನೆ ಪ್ರಕರಣ ಇದಾಗಿದೆ. ಬ್ಯಾಂಕ್‌ಗಳು ಬಿಡುಗಡೆ ಮಾಡಿದ ಉದ್ದೇಶಗಳಿಗೆ ಹೊರತುಪಡಿಸಿ ಬೇರೆಯದ್ದಕ್ಕಾಗಿ ಹಣವನ್ನು ಬಳಸಲಾಗಿದೆ ಎಂದು ಅದು ಹೇಳಿದೆ.
ಇದನ್ನೂ ಓದಿ: ನಕಲಿ ಕ್ರಿಪ್ಟೋಕರೆನ್ಸಿ: ಕೇರಳದಲ್ಲಿ 900 ಮಂದಿಗೆ ₹1200 ಕೋಟಿಗಿಂತಲೂ ಹೆಚ್ಚು ಮೊತ್ತ ವಂಚನೆ