ಬ್ರಿಟನ್ನಲ್ಲಿ ತೆರೆಮರೆಯಲ್ಲಿ ಜನರೊಂದಿಗೆ ಬೆರೆತು ಹೋಗಿದ್ದಾರೆ ರಷ್ಯಾದ 1,000 ಗೂಢಚಾರರು
ಕೆಲವರಂತೂ ಸರ್ಕಾರದ ಉನ್ನತ ಹಂತದ ಅಧಿಕಾರ ಕೇಂದ್ರಗಳಿಗೂ ನುಸುಳಿ, ಕೆಲಸ ಸಂಪಾದಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ‘ದಿ ಮಿರರ್’ ದಿನಪತ್ರಿಕೆ ವರದಿ ಮಾಡಿದೆ.
ಬ್ರಿಟನ್ನಲ್ಲಿ ರಷ್ಯಾದ ಸುಮಾರು 1,000 ಗೂಢಚಾರರು ತೆರೆಮರೆಯಲ್ಲಿ ಜನಜೀವನದೊಂದಿಗೆ ಬೆರೆತುಹೋಗಿದ್ದಾರೆ. ಸಾಮಾನ್ಯ ಜನರಂತೆ ಹತ್ತುಹಲವು ಉದ್ಯೋಗಗಳಲ್ಲಿ ತೊಡಗಿಕೊಂಡಿದ್ದಾರೆ. ಕೆಲವರಂತೂ ಸರ್ಕಾರದ ಉನ್ನತ ಹಂತದ ಅಧಿಕಾರ ಕೇಂದ್ರಗಳಿಗೂ ನುಸುಳಿ, ಕೆಲಸ ಸಂಪಾದಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ‘ದಿ ಮಿರರ್’ ದಿನಪತ್ರಿಕೆ ವರದಿ ಮಾಡಿದೆ. ಜನಜೀವನದ ಎಲ್ಲ ಆಯಾಮಗಳಲ್ಲಿ ಬೆರೆತುಕೊಳ್ಳುವಂಥ ಒಂದು ವಿಶಿಷ್ಟ ಗೂಢಚರ್ಯೆಯ ಜಾಲವನ್ನು ರಷ್ಯಾ ನಿರ್ಮಿಸಿದೆ. ವಿಶಾಲವಾಗಿ ಮತ್ತು ಆಳವಾಗಿ ಬೇರು ಬಿಟ್ಟಿರುವ ಈ ಜಾಲದ ಪ್ರಭಾವದಿಂದ ತಪ್ಪಿಸಿಕೊಳ್ಳಲು ಸಾಧ್ಯ ಎಂದು ಯಾರೂ ಅಂದುಕೊಳ್ಳುವಂತಿಲ್ಲ. ವಿದ್ಯಾರ್ಥಿ ಸಂಘಗಳು, ವಿದ್ಯಾರ್ಥಿಗಳು, ಕಾರ್ಮಿಕ ಸಂಘಟನೆಗಳು, ನಿಯಮಿತವಾಗಿ ಪ್ರತಿಭಟನೆ ನಡೆಸುವ ಗುಂಪುಗಳು, ನಾಗರಿಕ ಸೇವೆ ಹಾಗೂ ಪೊಲೀಸ್ ಇಲಾಖೆಯಲ್ಲಿಯೂ ರಷ್ಯಾದ ಗೂಢಚಾರರು ನುಸುಳಿಕೊಂಡಿದ್ದಾರೆ ಎಂದು ವರದಿಯು ತಿಳಿಸಿದೆ.
ಬ್ರಿಟನ್ನಲ್ಲಿರುವ ರಷ್ಯಾದ ರಾಯಭಾರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗೂಢಚಾರರ ಸಂಖ್ಯೆ ಕಡಿಮೆಯಾಗಿದೆ. ಆದರೆ ಬ್ರಿಟನ್ ಆಡಳಿತಕ್ಕೆ ಗುರುತು ಪತ್ತೆಯಾಗದಂತೆ ಕೆಲಸ ಮಾಡುತ್ತಿರುವ ಅಪರಿಚಿತರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಬ್ರಿಟನ್ನ ಅಣುಶಕ್ತಿ ಕೇಂದ್ರಗಳು, ಸೇನೆ, ವಾಯುಪಡೆ, ನೌಕಾನೆಲೆಗಳು, ಅಣ್ವಸ್ತ್ರ ಸಜ್ಜಿತ ಜಲಾಂತರ್ಗಾಮಿಗಳು ಇರು ಸ್ಕಾಟ್ಲೆಂಡ್ನ ಫಾಸ್ಲೇನ್ನಲ್ಲಿಯೂ ರಷ್ಯಾದ ಏಜೆಂಟ್ಗಳು ಮಾಹಿತಿ ಕಲೆ ಹಾಕಿದ್ದಾರೆ ಎಂದು ವರದಿಯು ತಿಳಿಸಿದರು.
ಇವರೆಲ್ಲರೂ ಗೂಢಚರ್ಯೆಯಲ್ಲಿ ಅತ್ಯುತ್ತಮ ತರಬೇತಿ ಪಡೆದುಕೊಂಡಿದ್ದಾರೆ. ಜನರೊಂದಿಗೆ ಬೆರೆಯುವುದು, ಎಂಥವರನ್ನೂ ಮಾತಿಗೆ ಎಳೆಯುವುದು, ಸಂಘಟನೆಗಳಲ್ಲಿ ನುಸುಳಿಕೊಳ್ಳುವುದು ಮತ್ತು ಸ್ಥಳೀಯವಾಗಿ ಗೂಢಚಾರರನ್ನು ನೇಮಿಸಿಕೊಳ್ಳುವ ಚಾಕಚಕ್ಯತೆ ಇವರಿಗಿದೆ ಎಂದು ವರದಿಯು ತಿಳಿಸಿದೆ. ಉಕ್ರೇನ್ನಲ್ಲಿ ಸತತ ಹಿನ್ನಡೆ ಅನುಭವಿಸುತ್ತಿರುವ ರಷ್ಯಾ ಸೇನೆಯು ಇದೀಗ ಖೆರ್ಸೊನ್ ನಗರದಿಂದಲು ಹಿಮ್ಮೆಟ್ಟುತ್ತಿದೆ. ಹಿಮ್ಮೆಟ್ಟುತ್ತಿರುವ ಪ್ರದೇಶಗಳಲ್ಲಿ ರಷ್ಯಾ ಸೈನಿಕರು ನಾಗರಿಕರಿಗೆ ಹಿಂಸೆ ಕೊಡುತ್ತಿದ್ದಾರೆ. ಜನರನ್ನು ಕೊಲ್ಲುತ್ತಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ದೂರಿದ್ದಾರೆ. ‘ಖೆರ್ಸೊನ್ ಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ 400 ನಾಗರಿಕರ ಶವಗಳು ಪತ್ತೆಯಾಗಿವೆ’ ಎಂದು ಝೆಲೆನ್ಸ್ಕಿ ಹೇಳಿದ್ದರು.
ರಷ್ಯಾ ಇನ್ನೂ ಎಷ್ಟು ದಿನ ಈ ಆಕ್ರಮಣವನ್ನು ಮುಂದುವರಿಸಲು ಸಾಧ್ಯ ಎನ್ನುವ ಬಗ್ಗೆ ಗೊಂದಲಗಳಿವೆ ಎಂದು ಅಮೆರಿಕ ಸೇನೆ ವಿಶ್ಲೇಷಿಸಿದೆ. ರಷ್ಯಾ ಸೇನೆಯು ಉಕ್ರೇನ್ನ ಪ್ರಮುಖ ನಗರ ಖೆರ್ಸೋನ್ನಿಂದ ತನ್ನ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವುದಾಗಿ ನ 9ರಂದು ಘೋಷಿಸಿತ್ತು. ಇದು ಉಕ್ರೇನ್ ಯುದ್ಧದಲ್ಲಿ ರಷ್ಯಾಕ್ಕೆ ಆದ ದೊಡ್ಡ ಹಿನ್ನಡೆ ಎಂದು ವ್ಯಾಖ್ಯಾನಿಸಲಾಗಿತ್ತು. ಉಕ್ರೇನ್ ಪಡೆಗಳು ಖಾರ್ಕಿವ್ ಉತ್ತರ ಪ್ರಾಂತ್ಯದಲ್ಲಿ ಮುನ್ನಡೆ ಸಾಧಿಸಿದ ಬಳಿಕ ನಡೆದ ಅತಿಪ್ರಮುಖ ಸೇನಾ ಬೆಳವಣಿಗೆ ಇದು ಎಂದು ವಿಶ್ಲೇಷಿಸಲಾಗಿತ್ತು.
ಕಳೆದ ಸೆಪ್ಟೆಂಬರ್ನಲ್ಲಿ ರಷ್ಯಾ ಪಡೆಗಳು ಖೆರ್ಸೊನ್ ನಗರವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದವು. ಈ ಪ್ರದೇಶದಿಂದ ರಷ್ಯಾ ಸಂಪೂರ್ಣವಾಗಿ ಸೇನೆ ಹಿಂಪಡೆದರೆ ಸಾವಿರಾರು ಕಿಲೋಮೀಟರ್ ವಿಸ್ತೀರ್ಣದ ಪ್ರದೇಶದಿಂದ ರಷ್ಯಾ ಹಿಂದೆ ಸರಿದಂತೆ ಅಗುತ್ತದೆ. ಇದು ಉಕ್ರೇನ್ ಯುದ್ಧದಲ್ಲಿ ನಡೆದ ಪ್ರಮುಖ ಬೆಳವಣಿಗೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ: Russia Ukraine War: ಉಕ್ರೇನ್ನಲ್ಲಿ 1 ಲಕ್ಷಕ್ಕೂ ಹೆಚ್ಚು ರಷ್ಯಾ ಯೋಧರ ಸಾವು; ಅಮೆರಿಕ ಸೇನಾಧಿಕಾರಿ ಅಂದಾಜು
Published On - 3:30 pm, Mon, 14 November 22