ಷೇರುಪೇಟೆಯಲ್ಲಿ ಜೂನ್ 17ನೇ ತಾರೀಕಿನ ಶುಕ್ರವಾರ ಬೆಳಗಿನ ವ್ಯವಹಾರದಲ್ಲಿ ಸತತ ಆರನೇ ನೇರ ಸೆಷನ್‌ನಲ್ಲಿ ಮಾರಾಟದ ಟ್ರೆಂಡ್ ವಿಸ್ತರಣೆ ಆಗಿತ್ತು. ಈ ಮಧ್ಯೆ ಮಾರ್ಕೆಟ್ನ ಬಿಗ್ ಬುಲ್ ರಾಕೇಶ್ ಜುಂಜುನ್‌ವಾಲಾ (Rakesh Jhunjhunwala) ಇಂದಿನ (ಶುಕ್ರವಾರ) ಆರಂಭಿಕ ವಹಿವಾಟಿನ 15 ನಿಮಿಷಗಳಲ್ಲಿ ಸುಮಾರು 900 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ಟೈಟಾನ್ ಕಂಪೆನಿ, ಮೆಟ್ರೋ ಬ್ರಾಂಡ್ಸ್ ಮತ್ತು ಸ್ಟಾರ್ ಹೆಲ್ತ್ ಅಂಡ್ ಅಲೈಡ್ ಇನ್ಷೂರೆನ್ಸ್ ಕಂಪೆನಿ ಲಿಮಿಟೆಡ್ ನಷ್ಟ ಕಂಡವು.
ಟೈಟಾನ್ ಷೇರು ಬೆಲೆಯಲ್ಲಿ ಕುಸಿತ
ಟೈಟಾನ್ ಕಂಪೆನಿಯ ಷೇರಿನ ಬೆಲೆ ಇಂದು ಕಡಿಮೆ ಮಟ್ಟದಿಂದ ಪ್ರಾರಂಭವಾಯಿತು ಮತ್ತು ಬೆಳಗ್ಗೆ 9.30ರ ಹೊತ್ತಿಗೆ ರೂ. 1997ರ ಹಂತವನ್ನು ತಲುಪಿತು. ಎನ್ಎಸ್ಇಯಲ್ಲಿ ಅದರ ಗುರುವಾರದ ಮಟ್ಟ ರೂ. 2060.95ರಿಂದ ಪ್ರತಿ ಷೇರಿಗೆ ರೂ. 63.95 ಕುಸಿತವನ್ನು ದಾಖಲಿಸಿತು.
ಸ್ಟಾರ್ ಹೆಲ್ತ್ ಷೇರು ಬೆಲೆಯಲ್ಲಿ ಇಳಿಕೆ
ಸ್ಟಾರ್ ಹೆಲ್ತ್ ಷೇರಿನ ಬೆಲೆ ಇಂದು ಕುಸಿತದಿಂದಲೇ ಪ್ರಾರಂಭವಾಯಿತು ಮತ್ತು ಬೆಳಗ್ಗೆ 9.30ರ ಹೊತ್ತಿಗೆ ರೂ. 609.05ಕ್ಕೆ ತಲುಪಿತು. ಗುರುವಾರದಂದು ಈ ಸ್ಟಾಕ್ ರೂ. 664.15 ಮಟ್ಟದಲ್ಲಿ ಮುಕ್ತಾಯಗೊಂಡಿದ್ದರಿಂದ ಇಂದು ಷೇರು ಮಾರುಕಟ್ಟೆ ಪ್ರಾರಂಭವಾದ 15 ನಿಮಿಷಗಳಲ್ಲಿ ರೂ. 55.10 ಕುಸಿತ ಕಂಡಿದೆ.
ಮೆಟ್ರೋ ಬ್ರಾಂಡ್‌ಗಳ ಷೇರು ಬೆಲೆಯಲ್ಲಿ ನಷ್ಟ
ರಾಕೇಶ್ ಜುಂಜುನ್‌ವಾಲಾರ ಇತರ ಎರಡು ಸ್ಟಾಕ್‌ಗಳಂತೆ ಇಂದು ಮೆಟ್ರೋ ಬ್ರಾಂಡ್‌ಗಳ ಷೇರು ಕಡಿಮೆ ಅಂತರದೊಂದಿಗೆ ಪ್ರಾರಂಭವಾಯಿತು ಮತ್ತು ಬೆಳಗ್ಗೆ 9.30 ರ ಹೊತ್ತಿಗೆ ರೂ. 535.35 ಕ್ಕೆ ತಲುಪಿತು. ಆರಂಭಿಕ ಗಂಟೆಯ 15 ನಿಮಿಷಗಳಲ್ಲಿ ಪ್ರತಿ ಷೇರಿಗೆ ರೂ. 14.30 ಇಳಿಕೆ ಆಯಿತು.
ರಾಕೇಶ್ ಜುಂಜುನ್‌ವಾಲಾ ನಿವ್ವಳ ಮೌಲ್ಯದಲ್ಲಿ ಕುಸಿತ
2022ರ ಹಣಕಾಸು ವರ್ಷ ನಾಲ್ಕನೇ ತ್ರೈಮಾಸಿಕದಲ್ಲಿ ಟೈಟಾನ್ ಕಂಪೆನಿಯ ಷೇರುದಾರರ ಮಾದರಿ ಪ್ರಕಾರ, ರಾಕೇಶ್ ಜುಂಜುನ್‌ವಾಲಾ 3,53,10,395 ಕಂಪೆನಿ ಷೇರುಗಳನ್ನು ಹೊಂದಿದ್ದಾರೆ ಮತ್ತು ಅವರ ಪತ್ನಿ ರೇಖಾ ಜುಂಜುನ್‌ವಾಲಾ 95,40,575 ಟೈಟಾನ್ ಷೇರುಗಳನ್ನು ಹೊಂದಿದ್ದಾರೆ. ಆದ್ದರಿಂದ ಜುಂಜುನ್‌ವಾಲಾ ದಂಪತಿ ಒಟ್ಟಾಗಿ 4,48,50,970 ಟೈಟಾನ್ ಷೇರುಗಳನ್ನು ಹೊಂದಿದ್ದಾರೆ. ಇಂದು ಸ್ಟಾಕ್ ಮಾರುಕಟ್ಟೆ ಪ್ರಾರಂಭವಾದ 15 ನಿಮಿಷಗಳಲ್ಲಿ ಟೈಟಾನ್ ಷೇರಿನ ಬೆಲೆ 63.95 ಕುಸಿದಿದ್ದು, ಈ ಟಾಟಾ ಸ್ಟಾಕ್‌ನಲ್ಲಿನ ಕುಸಿತದಿಂದಾಗಿ ಜುಂಜುನ್‌ವಾಲಾ ಅವರ ನಿವ್ವಳ ಮೌಲ್ಯವು ಸುಮಾರು ರೂ. 287 ಕೋಟಿ (ರೂ. 63.95 x 4,48,50,970) ಕಡಿಮೆ ಆಯಿತು.
ಅದೇ ರೀತಿ ರಾಕೇಶ್ ಜುಂಜುನ್‌ವಾಲಾ ಅವರು 10,07,53,935 ಸ್ಟಾರ್ ಹೆಲ್ತ್ ಷೇರುಗಳನ್ನು ಹೊಂದಿದ್ದಾರೆ. ಅದು ಇಂದು ಷೇರು ಮಾರುಕಟ್ಟೆ ಪ್ರಾರಂಭವಾದ 15 ನಿಮಿಷಗಳಲ್ಲಿ ಪ್ರತಿ ಷೇರಿಗೆ ರೂ. 55.10 ಕುಸಿದಿದೆ. ಆದ್ದರಿಂದ ರಾಕೇಶ್ ಜುಂಜುನ್‌ವಾಲಾ ಪೋರ್ಟ್‌ಫೋಲಿಯೊದ ಈ ಸ್ಟಾಕ್‌ನಲ್ಲಿನ ಕುಸಿತದಿಂದಾಗಿ ನಿವ್ವಳ ಮೌಲ್ಯವು ಸುಮಾರು ರೂ. 555 ಕೋಟಿ (₹55.10 x 10,07,53,935) ಕುಸಿದಿದೆ.
ರಾಕೇಶ್ ಜುಂಜುನ್‌ವಾಲಾ ಅವರು ತಮ್ಮ ಹೆಂಡತಿ ರೇಖಾ ಜುಂಜುನ್‌ವಾಲಾ ಮೂಲಕ ಮೆಟ್ರೋ ಬ್ರಾಂಡ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ. ಜನವರಿಯಿಂದ ಮಾರ್ಚ್ 2022ರ ತ್ರೈಮಾಸಿಕಕ್ಕೆ ಮೆಟ್ರೋ ಬ್ರಾಂಡ್‌ಗಳ ಷೇರುದಾರರ ಮಾದರಿಯ ಪ್ರಕಾರ, ರೇಖಾ ಜುಂಜುನ್‌ವಾಲಾ ಕಂಪೆನಿಯ 3,91,53,600 ಷೇರುಗಳನ್ನು ಹೊಂದಿದ್ದಾರೆ. ಅದು ಇಂದು ಮಾರುಕಟ್ಟೆ ಪ್ರಾರಂಭವಾದ 15 ನಿಮಿಷಗಳಲ್ಲಿ ಪ್ರತಿ ಷೇರಿಗೆ ರೂ. 14.30 ಕುಸಿದಿದೆ. ಆದ್ದರಿಂದ ರಾಕೇಶ್ ಜುಂಜುನ್‌ವಾಲಾ ಅವರ ನಿವ್ವಳ ಮೌಲ್ಯವು ರೂ. 56 ಕೋಟಿ (ರೂ. 14.30 x 3,91,53,600) ಕರಗಿತು.
ಹೀಗೆ ಟೈಟಾನ್ ಕಂಪೆನಿ, ಸ್ಟಾರ್ ಹೆಲ್ತ್ ಮತ್ತು ಮೆಟ್ರೋ ಬ್ರಾಂಡ್‌ಗಳ ಷೇರುಗಳನ್ನು ಇಂದಿನ ಮಾರಾಟ ಒತ್ತಡದಲ್ಲಿ ರಾಕೇಶ್ ಜುಂಜುನ್‌ವಾಲಾ ಅವರು ಷೇರು ಮಾರುಕಟ್ಟೆ ಪ್ರಾರಂಭವಾದ 15 ನಿಮಿಷಗಳಲ್ಲಿ ಸುಮಾರು ರೂ. 900 ಕೋಟಿ ಕಳೆದುಕೊಂಡರು.
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ