Rakesh Jhunjhunwala: 70 ಸಾವಿರ ಚದರಡಿ ವ್ಯಾಪ್ತಿಯಲ್ಲಿ ಎದ್ದು ನಿಲ್ಲಲಿದೆ ಬಿಲಿಯನೇರ್ ರಾಕೇಶ್ ಜುಂಜುನ್ವಾಲಾ ಒಡೆತನದ 13 ಅಂತಸ್ತಿನ ಕಟ್ಟಡ
ಶತಕೋಟ್ಯಧಿಪತಿ ಹೂಡಿಕೆದಾರ ರಾಕೇಶ್ ಜುಂಜುನ್ವಾಲಾ ಮುಂಬೈನ ಮಲಬಾರ್ ಹಿಲ್ನಲ್ಲಿ 13 ಅಂತಸ್ತಿನ, 70 ಸಾವಿರ ಚದರಡಿ ವ್ಯಾಪ್ತಿಯಲ್ಲಿ ಮನೆ ನಿರ್ಮಾಣ ಮಾಡುತ್ತಿದ್ದಾರೆ. ಆ ಬಗ್ಗೆ ಇಂಟರೆಸ್ಟಿಂಗ್ ಡೀಟೇಲ್ಸ್ ಇಲ್ಲಿದೆ.
ಮುಂಬೈನ ಮಲಬಾರ್ ಹಿಲ್ನಲ್ಲಿ ಸಣ್ಣ, ಆದರೆ ಅದ್ಭುತವಾದ ಅಪಾರ್ಟ್ಮೆಂಟ್ ಇತ್ತು. ಅದನ್ನು ರಿಜ್ವೇ (Ridgeway) ಹೆಸರಲ್ಲಿ ಕರೆಯಲಾಗುತ್ತಿತ್ತು. ಅಲ್ಲಿ ಇದ್ದದ್ದು ಕೇವಲ 12 ಅಪಾರ್ಟ್ಮೆಂಟ್ಸ್. ಅವುಗಳು ಎರಡು ದೊಡ್ಡ ಬಹುರಾಷ್ಟ್ರೀಯ ಬ್ಯಾಂಕ್ಗಳ (Multinational Banks) ಒಡೆತನದಲ್ಲಿದ್ದವು. ಬ್ಯಾಂಕ್ನ ಉನ್ನತಾಧಿಕಾರಿಗಳು ಆ ಅಪಾರ್ಟ್ಮೆಂಟ್ಗಳಲ್ಲಿ ಇದ್ದರು. ವಿಶಾಲವಾದ ಸ್ಥಳ, ಎತ್ತರದ ಛಾವಣಿ, ಉತ್ತಮ ಲೇಔಟ್ಗಳು ಹಾಗೂ ಮರೀನ್ ಡ್ರೈವ್ನ ಸುಂದರ ನೋಟ… ಇವೆಲ್ಲ ಸೇರಿತ್ತು, ಮತ್ತು ಆ ಪರಿಸರದಲ್ಲಿ ಅತ್ಯಂತ ಕನಿಷ್ಠ ಜನ ಸಂದಣಿಯ ಕಟ್ಟಡ ಅದಾಗಿತ್ತು. ಆ ನಂತರ 2013ರಲ್ಲಿ ತನ್ನ ಪಾಲಿನ ಆರು ಅಪಾರ್ಟ್ಮೆಂಟ್ಗಳನ್ನು ಮಾರಾಟ ಮಾಡುವುದಕ್ಕೆ ಸ್ಟ್ಯಾಂಡರ್ಡ್ ಚಾರ್ಟರ್ಡ್ ಮುಂದಾಯಿತು. ಮಾರಾಟವನ್ನು ಅನುಷ್ಠಾನಕ್ಕೆ ತರಲು ಪರಿಣತರ ನೆರವು ಕೋರಲಾಯಿತು. ಎಲ್ಲವನ್ನೂ ಒಟ್ಟಿಗೆ ಮಾರಬೇಕಾ ಅಥವಾ ಬಿಡಿಬಿಡಿಯಾಗಿ ಮಾರಬೇಕಾ ಎಂಬ ಚರ್ಚೆ ಕೂಡ ಆಯಿತು. ಆದರೆ ಬ್ಯಾಂಕ್ಗೆ ಗೊತ್ತಾಗಿದ್ದೇನೆಂದರೆ, ಬಿಡಿಬಿಡಿಯಾದ ಅಪಾರ್ಟ್ಮೆಂಟ್ಗಳಿಗಿಂತ ಅದು ಎದ್ದು ನಿಂತಿರುವ ಅಲ್ಲಿನ ಭೂಮಿಗೆ ಹೆಚ್ಚಿನ ಬೆಲೆ ಎಂದು ತಿಳಿದುಬಂತು. ಆದ್ದರಿಂದ ಆ ಆರೂ ಅಪಾರ್ಟ್ಮೆಂಟ್ಗಳನ್ನು ಒಂದೇ ಸಲಕ್ಕೆ ಮಾರುವುದಕ್ಕೆ ತೀರ್ಮಾನಿಸಲಾಯಿತು. ಶ್ರೀಮಂತ ಕುಟುಂಬವೊಂದು ಆ ಆರೂ ಅಪಾರ್ಟ್ಮೆಂಟ್ ಖರೀದಿಸಲು ಬಯಸಿದರೆ ಅವರನ್ನು ಸೆಳೆಯಬೇಕು ಎಂದು ತೀರ್ಮಾನಿಸಲಾಯಿತು.
ಅದೇ ಸಮಯಕ್ಕೆ ಬಿಲಿಯನೇರ್ (ಶತಕೋಟ್ಯಧಿಪತಿ) ಷೇರು ಹೂಡಿಕೆದಾರ- ರಾಕೇಶ್ ಜುಂಜುನ್ವಾಲಾ ಅಪ್ಗ್ರೇಡ್ ಆಗಬೇಕು ಅಂತಿದ್ದರು. ಆದರೆ ಅವರಿಗೆ ಒಂದೋ ಎರಡೋ ಅಪಾರ್ಟ್ಮೆಂಟ್ಗಿಂತ ಇಡೀ ಕಟ್ಟಡ ತಮಗಾಗಿಯೇ ಖರೀದಿಸುವ ಇರಾದೆ ಇತ್ತು. ಅವರು ಈಗಾಗಲೇ ಇರುವ ಕಟ್ಟಡದಲ್ಲಿ ಸಿಕ್ಕಾಪಟ್ಟೆ ಅಪಾರ್ಟ್ಮೆಂಟ್ ಇದದು, ಕೆಲವರು ಮಾತ್ರ ಅಪಾರ್ಟ್ಮೆಂಟ್ ಮಾರಾಟಗಾರರು ಇದ್ದರು. ಮತ್ತೊಂದು ಕಡೆ ರಿಜ್ವೇ ಅಪಾರ್ಟ್ಮೆಂಟ್ಸ್ನಲ್ಲಿ 12 ಅಪಾರ್ಟ್ಮೆಂಟ್ಗಳಿದ್ದವು. ಇಬ್ಬರೇ ಮಾಲೀಕರಿದ್ದರು. ಅದು ಎಚ್ಎಸ್ಬಿಸಿ ಮತ್ತು ಸ್ಟ್ಯಾಂಡರ್ಡ್ ಚಾರ್ಟರ್ಡ್. ಆ ಇಬ್ಬರು ಒಪ್ಪಿದರೆ ಇಡೀ ಕಟ್ಟಡ ಮಾರಾಟ ಮಾಡಬಹುದು. ಇಂಥ ಸಂದರ್ಭದಲ್ಲೇ ಸ್ಟ್ಯಾಂಡರ್ಡ್ ಚಾರ್ಟರ್ಡ್ನಿಂದ ಆರು ಅಪಾರ್ಟ್ಮೆಂಟ್ಗಳ ಒಂದು ಬ್ಲಾಕ್ ಮಾರಾಟಕ್ಕೆ ಇಡಲಾಯಿತು.
ಮುಂದಕ್ಕೆ ಹೆಜ್ಜೆ ಇಟ್ಟ ಜುಂಜುನ್ವಾಲಾ ಬಿಡ್ನಲ್ಲಿ ಗೆದ್ದರು. ಆ ಆರು ಅಪಾರ್ಟ್ಮೆಂಟ್ಗಳನ್ನು 176 ಕೋಟಿ ರೂಪಾಯಿಗೆ ಖರೀದಿಸಿದರು. ಮೀಸಲು ಮೊತ್ತಕ್ಕಿಂತ ಶೇ 20ರಷ್ಟು ಹೆಚ್ಚಿನ ಬೆಲೆ ಅದಾಗಿತ್ತು. ಇನ್ನು ಬಾಕಿ ಆರು ಕೂಡ ಮಾರಾಟಕ್ಕೆ ಬಂದು ಬಿಡಲಿ ಎಂದು ತಾಳ್ಮೆಯಿಂದ ರಾಕೇಶ್ ಜುಂಜುನ್ವಾಲಾ ಕಾದರು. ನಾಲ್ಕು ವರ್ಷದ ನಂತರ, 2017ರಲ್ಲಿ ಎಚ್ಎಸ್ಬಿಸಿ ಮಾಲೀಕತ್ವದ ಆರು ಅಪಾರ್ಟ್ಮೆಂಟ್ಗಳ ಸಹ ಬಿಕರಿಗೆ ಬಂತು. ಆಶ್ಚರ್ಯ ಏನಿಲ್ಲ, ಅತಿ ಹೆಚ್ಚಿನ ಬಿಡ್ ಮಾಡಿದ್ದು ಜುಂಜುನ್ವಾಲಾ. ಆ ಮೂಲಕ ಸಂಪೂರ್ಣ ಅಪಾರ್ಟ್ಮೆಂಟ್ ಕಟ್ಟಡ ಅವರದಾಯಿತು. ಅದಕ್ಕಾಗಿ ಅವರು 195 ಕೋಟಿ ರೂಪಾಯಿ ಪಾವತಿಸಿದರು.
ಅಲ್ಲಿಗೆ ಪೂರ್ಣ ಕಟ್ಟಡದ ಮಾಲೀಕರಾದ ಜುಂಜುನ್ವಾಲಾ, ಮುಂದಿನ ಹೆಜ್ಜೆಯಾಗಿ ಅವುಗಳನ್ನು ಕೆಡವಿಸಿದರು. ಆರಂಭದಲ್ಲಿ ತಮಗಾಗಿಯೇ ಬಂಗಲೆ ನಿರ್ಮಿಸುವ ಯೋಜನೆ ಅವರದಾಗಿತ್ತು. ಆದರೆ ಆ ನಂತರ ಅದು ಬೇಡ ಅಂದುಕೊಂಡು, ಹದಿಮೂರು ಅಂತಸ್ತಿನ ಕಟ್ಟಡ ಸಮುದ್ರದ ಸುಂದರ ನೋಟ ಕಾಣುವಂತೆ ಇರಬೇಕು ಅಂತ ನಿರ್ಧರಿಸಿದರು. ಜುಂಜುನ್ವಾಲಾ ಅವರಂಥವರಿಗೆ ಮನೆ ನಿರ್ಮಾಣ ಪ್ರಕ್ರಿಯೆಯಲ್ಲಿ ಆಗಿರುವ ಅನುಭವ ಎಂಥದ್ದೋ ಗೊತ್ತಿಲ್ಲ. ಆದರೆ ಅಪಾರ ನೀತಿಗಳು ಮತ್ತು ನಿಯಮಗಳಿಂದ ಅವರಿಗೆ ಬೇಸರ ಆಗಿದ್ದಿರಬಹುದು. ಆದರೆ ಮನೆ ನಿರ್ಮಾಣದ ವಿಚಾರದಲ್ಲಿ ತೋರಿಸಬೇಕಾದ ಬುದ್ಧಿವಂತಿಕೆಯನ್ನು ತೋರಿದ್ದಾರೆ ಎಂದು ಮುಂದೆ ಕಟ್ಟಲಿರುವ ಜುಂಜುನ್ವಾಲಾ ಅವರು ಮನೆಯ ಆರ್ಕಿಟೆಕ್ಟ್ಸ್ ಮತ್ತು ಕನ್ಸಲ್ಟೆಂಟ್ಸ್ಗಳಲ್ಲಿ ಒಬ್ಬರಾದ ಆಕಾರ್ ಆರ್ಕಿಟೆಕ್ಟ್ಸ್ ಅಂಡ್ ಕನ್ಸಲ್ಟೆಂಟ್ಸ್ನ ಅಮೀತ್ ಪವಾರ್ ಹೇಳಿದ್ದಾರೆ.
ಮನೆಯ ನಿರ್ಮಾಣಕ್ಕಾಗಿ ಆಯಾ ಪ್ರಾಧಿಕಾರಗಳಿಗೆ ಕಟ್ಟಬೇಕಾದ ಶುಲ್ಕದಿಂದ ಮೊದಲುಗೊಂಡು ಪ್ರತಿ ವೆಚ್ಚದ ಬಗ್ಗೆಯೂ ಸ್ಪಷ್ಟವಾಗಿ ತಿಳಿದುಕೊಳ್ಳುವುದಕ್ಕೆ ಜುಂಜುನ್ವಾಲಾ ಬಯಸಿದ್ದರು. ಅದರಲ್ಲೂ ವಿಶೇಷವಾಗಿ ಪ್ರೀಮಿಯಂ ವೈಯಕ್ತಿಕ ಮನೆಗಳಿಗೆ ಕಟ್ಟಬೇಕಾದ ಶುಲ್ಕದ ಬಗ್ಗೆ ತಿಳಿಯಲು ಇಷ್ಟಪಟ್ಟಿದ್ದರು ಎಂದು ಪವಾರ್ ಹೇಳಿದ್ದಾರೆ.
ಅಂತಿಮವಾಗಿ 70,000 ಚದರಡಿಯ ವ್ಯಾಪ್ತಿಯನ್ನು ಮನೆ ನಿರ್ಮಾಣಕ್ಕೆ ಅನುಮತಿ ಸಿಕ್ಕಿದೆ. ನಾಲ್ಕನೇ ಅಂತಸ್ತಿನಲ್ಲಿ ಬ್ಯಾಂಕ್ವೆಟ್ ಹಾಲ್ ಇದ್ದು, ಕುಟುಂಬದವರು ದೊಡ್ಡ ಕಾರ್ಯಕ್ರಮ ನಡೆಸಬಹುದು. ಎಂಟನೇ ಅಂತಸ್ತಿನಲ್ಲಿ ಜಿಮ್ ಮತ್ತು ಮಸಾಜ್ನಂಥ ವ್ಯವಸ್ಥೆ ಇದ್ದು, ಹತ್ತನೇ ಅಂತಸ್ತಿನಲ್ಲಿ ನಾಲ್ಕು ಅತಿಥಿಗಳ ಕೋಣೆಗಳಿವೆ. ಹನ್ನೊಂದನೇ ಅಂತಸ್ತನ್ನು ಮಕ್ಕಳಿಗಾಗಿಯೇ ಮೀಸಲಿಡಲಾಗುವುದು. ಹನ್ನೆರಡನೇ ಅಂತಸ್ತಿನಲ್ಲಿ ರಾಕೇಶ್ ಜುಂಜುನ್ವಾಲಾ ಮತ್ತು ಅವರ ಪತ್ನಿ ರೇಖಾ ಇರಲಿದ್ದಾರೆ. ಕಟ್ಟಡದ ಪ್ರತಿ ಭಾಗದಲ್ಲೂ ವಿಶಾಲವಾದ ಕೋಣೆಗಳು ಇರಲಿವೆ. ಸ್ನಾನದ ಕೋಣೆಯ ಗಾತ್ರವು ಮುಂಬೈನಲ್ಲಿ ಮಾರಾಟ ಆಗುವ ಸರಾಸರಿ 1 ಬಿಎಚ್ಕೆಗಿಂತ ವಿಶಾಲ ಇರಲಿದೆ. ಮಾಸ್ಟರ್ ಬೆಡ್ರೂಮ್ 731 ಚದರಡಿಗಳಿದ್ದಯ, ಮುಂಬೈನಲ್ಲಿ ಬಿಲ್ಟರ್ಗಳು ಮಾರಾಟ ಮಾಡುವ ಸರಾಸರಿ 2 ಬಿಎಚ್ಕೆ ಸರಾಸರಿಗಿಂತ ಶೇ 20ರಷ್ಟು ಹೆಚ್ಚಿದೆ. ಹಜಾರ ಮತ್ತು ಊಟದ ಕೋಣೆ 3 ಬಿಎಚ್ಕೆ ಗಾತ್ರಕ್ಕಿಂತ ದೊಡ್ಡದಿರಲಿದೆ.
ಟೆರೇಸ್ ಮೇಲೆ ತರಕಾರಿ ತೋಟ, ಸಾಂಪ್ರದಾಯಿಕವಾದ ಸ್ಥಳ ಮತ್ತು ಹೊರಾಂಗಣ ಕೂರುವ ಡೆಕ್ ಹೊಂದಿರಲಿದೆ. ರಾಕೇಶ್ ಜುಂಜುನ್ವಾಲಾ ಅವರ ಮನೆ ಇನ್ನೂ ಸಂಪೂರ್ಣವಾಗಿ ನಿರ್ಮಾಣಗೊಂಡಿಲ್ಲ. ಆದರೆ ಅದು ಪೂರ್ಣಗೊಂಡಾಗ ಭಾರತದ ಬಿಲಿಯನೇರ್ಗಳ ಪೈಕಿ ಸಂಪೂರ್ಣ ಕಟ್ಟಡವನ್ನು ತಮಗೆ ಇಟ್ಟುಕೊಂಡಿರುವವರಲ್ಲಿ ಜುಂಜುನ್ವಾಲಾ ಸಹ ಒಬ್ಬರ ಎನಿಸಿಕೊಳ್ಳುತ್ತಾರೆ.
(ಮಾಹಿತಿ- ಮನಿಕಂಟ್ರೋಲ್.ಕಾಮ್ ಮೂಲ ಲೇಖಕ- ವಿಶಾಲ್ ಭಾರ್ಗವ)