ಮುಂಬೈ, ಮೇ 23: ಅದಾನಿ ಎಂಟರ್ಪ್ರೈಸಸ್ ಶೀಘ್ರದಲ್ಲೇ ಸೆನ್ಸೆಕ್ಸ್ ಸೂಚ್ಯಂಕದ ಗುಂಪಿಗೆ ಸೇರ್ಪಡೆಯಾಗುವ ಸಾಧ್ಯತೆ ಇದೆ. ಐಐಎಫ್ಎಲ್ ಆಲ್ಟರ್ನೇಟಿವ್ ರಿಸರ್ಚ್ ಸಂಸ್ಥೆ (IIFL Alternative Research) ಪ್ರಕಟಿಸಿದ ವರದಿ ಪ್ರಕಾರ ಅದಾನಿ ಎಂಟರ್ಪ್ರೈಸಸ್ (Adani Enterprises) 30 ಷೇರುಗಳಿರುವ ಸೆನ್ಸೆಕ್ಸ್ನಲ್ಲಿ ಪಟ್ಟಿಯಾಗಬಹುದು ಎನ್ನಲಾಗಿದೆ. ಇದರ ಬೆನ್ನಲ್ಲೇ ಅದಾನಿ ಎಂಟರ್ಪ್ರೈಸಸ್ನ ಷೇರುಬೆಲೆ ಇಂದು ಗುರುವಾರ ಶೇ. 7.5ರಷ್ಟು ಹೆಚ್ಚಾಗಿ 3,377.50 ರೂ ಆಗಿದೆ. ಇದು ಕಳೆದ ಒಂದು ವರ್ಷದಲ್ಲೇ ಗರಿಷ್ಠ ಮಟ್ಟವಾಗಿದೆ. ಐಐಎಫ್ಎಲ್ ವರದಿಯ ಪರಿಣಾಮವಾಗಿ ಈ ಸಂಸ್ಥೆಯ ಷೇರಿಗೆ ಬೇಡಿಕೆ ಹೆಚ್ಚಿರುವ ಸಾಧ್ಯತೆ ಇದೆ.
ಬಾಂಬೆ ಸ್ಟಾಕ್ ಎಕ್ಸ್ಚೇಂಜ್ನ ಸೆನ್ಸೆಕ್ಸ್ ಸೂಚ್ಯಂಕದಲ್ಲಿ ಪ್ರಮುಖ 30 ಷೇರುಗಳು ಲಿಸ್ಟ್ ಆಗಿರುತ್ತವೆ. ಅತಿಹೆಚ್ಚು ಮಾರುಕಟ್ಟೆ ಬಂಡವಾಳ ಅಥವಾ ಷೇರು ಸಂಪತ್ತು ಹೊಂದಿರುವ ಕಂಪನಿಗಳು ಇದರಲ್ಲಿರುತ್ತವೆ. ಈ ಗುಂಪಿನಲ್ಲಿ ವಿಪ್ರೋ ಕೊನೆಯ ಸ್ಥಾನದಲ್ಲಿದೆ. ವಿಪ್ರೋಗಿಂತ ಅದಾನಿ ಕಂಪನಿಯ ಮಾರುಕಟ್ಟೆ ಬಂಡವಾಳ ಹೆಚ್ಚುವ ಸಾಧ್ಯತೆ ದಟ್ಟವಾಗಿದೆ. ಈ ಹಿನ್ನೆಲೆಯಲ್ಲಿ ಸೆನ್ಸೆಕ್ಸ್30 ಸೂಚ್ಯಂಕದಿಂದ ವಿಪ್ರೋ ಬದಲು ಅದಾನಿ ಕಂಪನಿ ಸ್ಥಾನ ಪಡೆಯಬಹುದು.
ಇದನ್ನೂ ಓದಿ: ಹೊಸ ದಾಖಲೆ ಮಟ್ಟಕ್ಕೆ ಏರಿದ ಸೆನ್ಸೆಕ್ಸ್, ನಿಫ್ಟಿ; ಷೇರುಪೇಟೆ ಜಂಪ್ಗೆ ಇಲ್ಲಿದೆ ಕಾರಣ
ಷೇರು ಮಾರುಕಟ್ಟೆಯಲ್ಲಿ ವಿವಿಧ ಸೂಚ್ಯಂಕಗಳಿವೆ. ಅದರಲ್ಲಿ ಪ್ರಮುಖವಾದವು ಸೆನ್ಸೆಕ್ಸ್30 ಮತ್ತು ನಿಫ್ಟಿ50. ಇವು ಅತಿಹೆಚ್ಚು ಮಾರುಕಟ್ಟೆ ಬಂಡವಾಳ ಇರುವ ಕಂಪನಿಗಳ ಗುಂಪು. ಬಹಳಷ್ಟು ಇಂಡೆಕ್ಸ್ ಫಂಡ್ಗಳು ಈ ಸೂಚ್ಯಂಕದಲ್ಲಿರುವ ಕಂಪನಿಗಳ ಷೇರುಗಳ ಮೇಲೆ ಹೂಡಿಕೆ ಮಾಡುತ್ತವೆ. ಒಂದು ವೇಳೆ ಸೂಚ್ಯಂಕದಿಂದ ಒಂದು ಕಂಪನಿ ಹೊರಬಿದ್ದು ಬೇರೆ ಕಂಪನಿ ಬಂತೆಂದರೆ ಈ ಇಂಡೆಕ್ಸ್ ಫಂಡ್ಗಳು ಹೊರಹೋಗುವ ಕಂಪನಿಯ ಷೇರುಗಳ ಮೇಲೆ ಹಾಕಿದ್ದ ಹಣವನ್ನು ಹಿಂಪಡೆದು, ಒಳಬರುವ ಕಂಪನಿಗೆ ವಿನಿಯೋಗಿಸುತ್ತವೆ. ಇಂಥ ಮ್ಯೂಚುವಲ್ ಫಂಡ್ಗಳನ್ನು ಇಂಡೆಕ್ಸ್ ಫಂಡ್ ಅಥವಾ ಪಾಸಿವ್ ಫಂಡ್ಗಳೆಂದು ಕರೆಯಬಹುದು.
ವಿಪ್ರೋ ಬದಲು ಸೆನ್ಸೆಕ್ಸ್30ಯಲ್ಲಿ ಅದಾನಿ ಎಂಟರ್ಪ್ರೈಸಸ್ ಲಿಸ್ಟ್ ಆಯಿತು ಎಂದಿಟ್ಟುಕೊಳ್ಳಿ, ಆಗ ವಿಪ್ರೋದ 500 ಕೋಟಿ ರೂ ಮೌಲ್ಯದಷ್ಟು ಷೇರುಗಳು ಮಾರಾಟವಾಗಬಹುದು. ಅದಾನಿ ಎಂಟರ್ಪ್ರೈಸಸ್ನ ಷೇರುಗಳಿಗೆ 1,000 ಕೋಟಿ ರೂ ಒಳಹರಿವು ಬರಬಹುದು ಎಂಬ ನಿರೀಕ್ಷೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ