Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ದಾಖಲೆ ಮಟ್ಟಕ್ಕೆ ಏರಿದ ಸೆನ್ಸೆಕ್ಸ್, ನಿಫ್ಟಿ; ಷೇರುಪೇಟೆ ಜಂಪ್​ಗೆ ಇಲ್ಲಿದೆ ಕಾರಣ

Reasons for stock market bull run on May 23: ಭಾರತದ ಷೇರು ಮಾರುಕಟ್ಟೆ ನಿಫ್ಟಿ50 ಮತ್ತು ಸೆನ್ಸೆಕ್ಸ್30 ಸೂಚ್ಯಂಕಗಳು ಇಂದು ಮೇ 23, ಗುರುವಾರ ಹೊಸ ದಾಖಲೆಯ ಎತ್ತರಕ್ಕೆ ಏರಿವೆ. ಸೆನ್ಸೆಕ್ಸ್ 75,418 ಅಂಕಗಳ ಮಟ್ಟ ಮುಟ್ಟಿದೆ. ನಿಫ್ಟಿ 22,967 ಅಂಕಗಳ ಮಟ್ಟಕ್ಕೆ ಹೋಗಿದೆ. ಇವು ಆ ಸೂಚ್ಯಂಕಗಳು ದಿನಾಂತ್ಯದಲ್ಲಿ ಏರಿದ ದಾಖಲೆಯ ಮಟ್ಟವಾಗಿವೆ. ಮಾರುಕಟ್ಟೆ ತಜ್ಞರು ಷೇರುಪೇಟೆಯ ಈ ಓಟಕ್ಕೆ ನಾಲ್ಕೈದು ಕಾರಣಗಳಿರಬಹುದು ಎಂದು ಅಂದಾಜಿಸಿದ್ದಾರೆ.

ಹೊಸ ದಾಖಲೆ ಮಟ್ಟಕ್ಕೆ ಏರಿದ ಸೆನ್ಸೆಕ್ಸ್, ನಿಫ್ಟಿ; ಷೇರುಪೇಟೆ ಜಂಪ್​ಗೆ ಇಲ್ಲಿದೆ ಕಾರಣ
ಷೇರು ಮಾರುಕಟ್ಟೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 23, 2024 | 4:41 PM

ನವದೆಹಲಿ, ಮೇ 23: ಭಾರತದ ಷೇರುಮಾರುಕಟ್ಟೆ (stock market) ಇಂದು ಹೊಸ ಎತ್ತರ ಕಂಡಿದೆ. ಅದರ ಪ್ರಮುಖ ಸೂಚ್ಯಂಕಗಳು (share index) ದಾಖಲೆ ಬರೆದಿವೆ. ಎನ್​ಎಸ್​ಇಯ ನಿಫ್ಟಿ (Nifty50) ಮತ್ತು ಬಿಎಸ್​ಇಯ ಸೆನ್ಸೆಕ್ಸ್ (Sensex30) ಸೂಚ್ಯಂಕ ಹಿಂದಿನ ದಾಖಲೆ ಮೀರಿ ಹೆಚ್ಚಾಗಿವೆ. ಐವತ್ತು ಸ್ಟಾಕ್​ಗಳಿರುವ ನಿಫ್ಟಿ50 ಸೂಚ್ಯಂಕ 370 ಅಂಕ ಹೆಚ್ಚಿಸಿಕೊಂಡು 22,967.65 ಮಟ್ಟ ಮುಟ್ಟಿದೆ. ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ನ ಸೆನ್ಸೆಕ್ಸ್30 ಸೂಚ್ಯಂಕ ಗುರುವಾರ ದಿನಾಂತ್ಯದಲ್ಲಿ 75,418.04 ಅಂಕಗಳ ಮಟ್ಟ ಮುಟ್ಟಿದೆ. ನಿಫ್ಟಿ ಶೇ. 1.64ರಷ್ಟು ಅಂಕ ಹೆಚ್ಚಿಸಿಕೊಂಡರೆ, ಸೆನ್ಸೆಕ್ಸ್ ಏರಿಕೆ ಶೇ. 1.61ರಷ್ಟಿತ್ತು. ನಿಫ್ಟಿಯಲ್ಲಿದ್ದ 50 ಷೇರುಗಳಲ್ಲಿ 44 ಷೇರುಗಳು ಪಾಸಿಟಿವ್ ಆಗಿದ್ದವು. ಸೆನ್ಸೆಕ್ಸ್​ನ 30 ಷೇರುಗಳಲ್ಲಿ 27 ಪಾಸಿಟಿವ್ ಇತ್ತು.

ಇವತ್ತು ನಿಫ್ಟಿ ಒಂದು ಹಂತದಲ್ಲಿ 30,000 ಅಂಕಗಳ ಮೈಲಿಗಲ್ಲಿಗೆ ಬಹಳ ಸಮೀಪ ಹೋಗಿತ್ತು. ಅಂತಿಮವಾಗಿ 22,967.65 ಅಂಕಗಳ ಮಟ್ಟಕ್ಕೆ ನಿಂತಿದೆ. ಸೆನ್ಸೆಕ್ಸ್ ಕೂಡ ಹೆಚ್ಚೂಕಡಿಮೆ 75,500 ಅಂಕಗಳ ಮಟ್ಟಕ್ಕೆ ಹೋಗಿ ತುಸು ಕೆಳಗಿಳಿಯಿತು.

ಷೇರು ಮಾರುಕಟ್ಟೆ ಓಟಕ್ಕೆ ಕಾರಣಗಳಿವು…

ಚುನವಣಾ ಫಲಿತಾಂಶದ ನಿರೀಕ್ಷೆಯ ಎಫೆಕ್ಟ್

ಚುನಾವಣೆ ಬಳಿಕ ರಾಜಕೀಯ ಸ್ಥಿರತೆ ಬರಬಹುದು ಎನ್ನುವ ವಿಶ್ವಾಸ ಮಾರುಕಟ್ಟೆಗೆ ಬಂದಂತಿದೆ. ಹೀಗಾಗಿ, ದೂರಗಾಮಿ ಬೆಳವಣಿಗೆ ದೃಷ್ಟಿಯಿಂದ ಹೂಡಿಕೆದಾರರು ಗುಣಮಟ್ಟದ ಷೇರುಗಳತ್ತ ಗಮನ ಹರಿಸುತ್ತಿದ್ದಾರೆ.

ಇದನ್ನೂ ಓದಿ: ಒಂದೇ ವರ್ಷದಲ್ಲಿ 1 ಟ್ರಿಲಿಯನ್ ಡಾಲರ್ ಹೆಚ್ಚಿಸಿಕೊಂಡ ಭಾರತೀಯ ಷೇರುಪೇಟೆ; ಮೊದಲ ಬಾರಿಗೆ 5 ಟ್ರಿಲಿಯನ್ ಮೈಲಿಗಲ್ಲು

ಸರ್ಕಾರಕ್ಕೆ ಆರ್​ಬಿಐನಿಂದ ಭರ್ಜರಿ ಡಿವಿಡೆಂಡ್

ಆರ್​ಬಿಐ ಸರ್ಕಾರಕ್ಕೆ ನೀಡುವ ಡಿವಿಡೆಂಡ್ ಅನ್ನು ಈ ಬಾರಿ ಸಖತ್ ಹೆಚ್ಚಿಸಿದೆ. 2023-24ರ ವರ್ಷದ ಲಾಭಾಂಶವಾಗಿ 2.11 ಲಕ್ಷ ಕೋಟಿ ರೂ ಅನ್ನು ಕೊಡುವುದಾಗಿ ಆರ್​ಬಿಐ ಘೋಷಿಸಿದೆ. ಇದರಿಂದ ಸರ್ಕಾರಕ್ಕೆ ಹೆಚ್ಚಿನ ಹಣದ ಹರಿವು ಸಿಕ್ಕಂತಾಗಿದೆ. ಬಂಡವಾಳ ವೆಚ್ಚ ಹೆಚ್ಚಲಿದೆ. ಉದ್ದಿಮೆಗಳಿಗೆ ಇದು ಸಕಾರಾತ್ಮಕ ಸುದ್ದಿ. ಇದು ಮಾರುಕಟ್ಟೆಯನ್ನು ಹರ್ಷಗೊಳಿಸಿದೆ.

ಬ್ಯಾಂಕ್ ಸ್ಟಾಕ್​ಗಳ ಗಳಿಕೆ

ಸರ್ಕಾರದ 10 ವರ್ಷದ ಬಾಂಡ್ ರಿಟರ್ನ್ ಅಥವಾ ಯೀಲ್ಡ್ ಬಹಳಷ್ಟು ಕುಸಿತ ಕಂಡಿದೆ. ಇದರಿಂದ ಬ್ಯಾಂಕಿಂಗ್ ವಲಯದ ಸಂಸ್ಥೆಗಳಿಗೆ ಅನುಕೂಲವಾಗಿದೆ. ಅದರ ಷೇರುಗಳಿಗೆ ಬೇಡಿಕೆ ಹೆಚ್ಚಾಗಿದೆ. ಪರಿಣಾಮವಾಗಿ ಸೆನ್ಸೆಕ್ಸ್, ನಿಫ್ಟಿಯಲ್ಲಿ ಲಿಸ್ಟ್ ಆಗಿರುವ ಹೆಚ್ಚಿನ ಬ್ಯಾಂಕ್ ಸ್ಟಾಕ್​ಗಳು ಒಳ್ಳೆಯ ಏರಿಕೆ ಪಡೆದಿವೆ. ಇದು ಆಯಾ ಸೂಚ್ಯಂಕಗಳ ಏರಿಕೆಗೂ ಕಾರಣವಾಗಿದೆ.

ಇದನ್ನೂ ಓದಿ: ಷೇರುಪೇಟೆಯಲ್ಲಿ ಟ್ರೇಡಿಂಗ್ ಮಾಡಲು ಬೇಕು ಡೀಮ್ಯಾಟ್ ಖಾತೆ? ಈ ಅಕೌಂಟ್ ತೆರೆಯುವ ಮುನ್ನ ಕೆಲ ಅಂಶಗಳು ತಿಳಿದಿರಲಿ

ದೇಶೀಯ ಹೂಡಿಕೆದಾರರ ಕಲರವ

ಭಾರತದ ಮಾರುಕಟ್ಟೆಯಿಂದ ವಿದೇಶೀ ಹೂಡಿಕೆದಾರರು (FII) ಬಂಡವಾಳ ಹಿಂತೆಗೆದುಕೊಂಡರೂ ದೇಶೀಯ ಸಾಂಸ್ಥಿಕ ಹೂಡಿಕೆದಾರರು (DII) ಹಣ ತುಂಬಿದ್ದಾರೆ. ಈ ತಿಂಗಳು ಮೇ 1ರಿಂದ 22ರವರೆಗೆ ಎಫ್​ಐಐಗಳು ಹಿಂಪಡೆದ ಹೂಡಿಕೆ ಮೊತ್ತ 38,186 ಕೋಟಿ ರೂ ಆಗಿದೆ. ಇದೇ ಅವಧಿಯಲ್ಲಿ ಡಿಐಐಗಳಿಂದ ಹೂಡಿಕೆಯಾದ ಹಣ 38,331 ಕೋಟಿ ರೂ ಎನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ