ಭಾರತ ಚೀನಾವನ್ನು ಮೀರಿಸಲು ಹೇಗೆ ಸಾಧ್ಯ? ನಾರಾಯಣಮೂರ್ತಿ ಸೂತ್ರ ಇದು
Infosys Narayana Murthy recipe to beat China: ಭಾರತದ ಆರ್ಥಿಕತೆಗಿಂತ ಚೀನಾ ಎರಡು ಪಟ್ಟು ದೊಡ್ಡದಿದೆ. ಚೀನಾವನ್ನು ಮೀರಿಸಲು ಭಾರತಕ್ಕೆ ಸಾಧ್ಯವಿಲ್ಲ ಎನ್ನುವವರಿದ್ದಾರೆ. ಆದರೆ, ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಪ್ರಕಾರ ಇದು ಸಾಧ್ಯ. ಅವರು ನಾಲ್ಕು ಅಂಶಗಳ ಸೂತ್ರ ಮುಂದಿಟ್ಟಿದ್ದಾರೆ. ಆಂಟ್ರಪ್ರನ್ಯೂರ್ಗಳ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಿಸುವುದು ಈ ಸೂತ್ರದ ಅಂಶಗಳಲ್ಲೊಂದು.
ನವದೆಹಲಿ, ಮೇ 23: ಚೀನಾ ಈಗ ಅಮೆರಿಕ ರೀತಿಯಲ್ಲಿ ವಿಶ್ವದ ಸೂಪರ್ ಪವರ್ ದೇಶವಾಗಿ ಬೆಳೆದಿದೆ. ವಿಶ್ವದ ಅಗ್ರಗಣ್ಯ ಶಕ್ತಿಕೇಂದ್ರಗಳಲ್ಲಿ ಒಂದಾಗಿದೆ. ಭಾರತ ಈಗ ಸ್ಪರ್ಧೆಯಲ್ಲಿ ಪೈಪೋಟಿ ತೋರಲು ದೌಡಾಯಿಸುತ್ತಿದೆ. ಚೀನಾದ ಜಿಡಿಪಿ ಭಾರತದಕ್ಕಿಂತ ಎರಡೂವರೆ ಪಟ್ಟು ದೊಡ್ಡದಿದೆ. ವಿಜ್ಞಾನ, ತಂತ್ರಜ್ಞಾನ, ಸಂಶೋಧನೆ ಎಲ್ಲದರಲ್ಲೂ ಮುಂಚೂಣಿಯಲ್ಲಿದೆ. ಅಮೆರಿಕದಂಥ ಅಮೆರಿಕವೇ ಚೀನಾವನ್ನು ಕಠಿಣ ಪ್ರತಿಸ್ಪರ್ಧಿಯಂತೆ ಕಾಣುತ್ತಿದೆ. ಹೀಗಿರುವಾಗ ಭಾರತವು ಚೀನಾ ಮೀರಿಸಲು ಸಾಧ್ಯವಾ ಎಂಬುದು ಪ್ರಶ್ನೆ. ಇನ್ಫೋಸಿಸ್ ಅಧ್ಯಕ್ಷ ಎನ್ ಆರ್ ನಾರಾಯಣಮೂರ್ತಿ ಪ್ರಕಾರ ಚೀನಾದ ಆರ್ಥಿಕತೆಯನ್ನು ಮೀರಿಸಿ ಬೆಳೆಯುವ ಸಾಮರ್ಥ್ಯ ಭಾರತಕ್ಕಿದೆಯಂತೆ. ಎಕನಾಮಿಕ್ ಟೈಮ್ಸ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಚೀನಾವನ್ನು ಔದ್ಯಮಿಕ ಕ್ಷೇತ್ರದಲ್ಲಿ ಓವರ್ಟೇಕ್ ಮಾಡುವುದನ್ನು ಸಾಧ್ಯವಾಗಿಸುವಂತಹ ಕೆಲ ಅಂಶಗಳನ್ನು ಬಿಚ್ಚಿಟ್ಟಿದ್ದಾರೆ.
ಚೀನಾವನ್ನು ಭಾರತ ಸೋಲಿಸಬಲ್ಲಂತಹ ಮೂರ್ತಿ ಸೂತ್ರ ಯಾವುದು?
ಔದ್ಯಮಿಕ ಕ್ಷೇತ್ರದಲ್ಲಿ ಚೀನಾವನ್ನು ಭಾರತ ಸೋಲಿಸಬಹುದು ಎಂದು ಹೇಳಿರುವ ಇನ್ಫೋಸಿಸ್ ಸಹ-ಸಂಸ್ಥಾಪಕರು, ಈ ಕೆಳಗಿನ ಅಂಶಗಳನ್ನು ಹೆಸರಿಸಿದ್ದಾರೆ:
- ಉದ್ದಿಮೆದಾರರಿಗೆ ಅನುಕೂಲಕರ ಬಿಸಿನೆಸ್ ವಾತಾವರಣ ನಿರ್ಮಿಸಬೇಕು
- ಜನರಿಗೆ ಆದಾಯ ಹೆಚ್ಚಾಗಬೇಕು
- ವರ್ಷಕ್ಕೆ ಕೋಟ್ಯಂತರ ಉದ್ಯೋಗಗಳ ಸೃಷ್ಟಿಯಾಗುತ್ತಿರಬೇಕು.
- ಮಾನವ ಸಂಪನ್ಮೂಲದ ಉತ್ಪನ್ನಶೀಲತೆ ಹೆಚ್ಚಿಸಲು ಜೆನರಿಕ್ ಎಐ ಅನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು
ಇದನ್ನೂ ಓದಿ: ಭಾರತ ಭವಿಷ್ಯತ್ಕಾಲಕ್ಕೆ ಇದು ಬೇಕು- ಅಮೆರಿಕದ ಈ ಸ್ಟಾರ್ಟಪ್ನತ್ತ ಬೊಟ್ಟು ಮಾಡಿದ ಅಜಿತ್ ದೋವಲ್ ಟೀಮ್ ಸದಸ್ಯ
‘ಆಂಟ್ರಪ್ರನ್ಯೂರ್ ಮತ್ತು ಉದ್ಯಮಿಗಳಿಗೆ ತೊಂದರೆ ಮುಕ್ತ ವಾತಾವರಣ ಒದಗಿಸಬೇಕು. ಇವರ ಬೆಳವಣಿಗೆಯನ್ನು ಸುಲಭಗೊಳಿಸುವ ಮತ್ತು ಚುರುಕುಗೊಳಿಸುವಂತಹ ನೀತಿಗಳನ್ನು ರೂಪಿಸಬೇಕು. ಇದು ಸಾಧ್ಯವಾದರೆ ಚೀನಾವನ್ನು ನಾವು ಸರಿಗಟ್ಟುವುದು ಮಾತ್ರವಲ್ಲ ಹಿಂದಿಕ್ಕಲೂ ಬಹುದು’ ಎಂದಿದ್ದಾರೆ ಎನ್.ಆರ್. ನಾರಾಯಣಮೂರ್ತಿ.
ಚೀನಾ ಕಳೆದ ನಾಲ್ಕೈದು ದಶಕಗಳಿಂದ ಉದಾರೀಕರಣ, ಜಾಗತೀಕರಣ ನೀತಿ ಜಾರಿಗೆ ತಂದು ನಿರಂತರವಾಗಿ ಅಧಿಕ ಮಟ್ಟದ ಆರ್ಥಿಕ ಬೆಳವಣಿಗೆ ಸಾಧಿಸಿದೆ. ಅದರ ಪರಿಣಾಮವಾಗಿ ಅಮೆರಿಕ ಬಿಟ್ಟರೆ ಅತಿದೊಡ್ಡ ಆರ್ಥಿಕ ದೇಶವಾಗಿದೆ. ಭಾರತ ತೊಂಬತ್ತರ ದಶಕದಲ್ಲಿ ಜಾಗತೀಕರಣಕ್ಕೆ ತೆರೆದು ಮುಕ್ತ ಮಾರುಕಟ್ಟೆ ನೀತಿಯನ್ನು ಅಳವಡಿಸಿಕೊಂಡಿತು. ಆಗಿನಿಂದಲೂ ಉತ್ತಮ ಬೆಳವಣಿಗೆ ಹೊಂದಿದೆ. ಆದರೆ ಸ್ಪರ್ಧೆಯಲ್ಲಿ ಭಾರತಕ್ಕಿಂತ ಚೀನಾ ಬಹಳ ಮುಂದಿದೆ. ಎಲ್ಲಾ ರಂಗದಲ್ಲೂ ಚೀನಾ ಅದ್ವಿತೀಯ ಸಾಧನೆ ಮಾಡಿದೆ.
ಇದನ್ನೂ ಓದಿ: ಕಂಪನಿ ಕಾನೂನು ಉಲ್ಲಂಘನೆ ಆರೋಪ, ಲಿಂಕ್ಡ್ಇನ್ ಸಂಸ್ಥೆ, ಸತ್ಯ ನಾದೆಲ್ಲಾ ಹಾಗೂ ಇತರ ಎಂಟು ಮಂದಿಗೆ ದಂಡ ವಿಧಿಸಿದ ಸರ್ಕಾರ
ಮುಂಬರುವ ವರ್ಷಗಳಲ್ಲಿ ಚೀನಾದ ಆರ್ಥಿಕ ಬೆಳವಣಿಗೆ ಮಂದವಾಗುತ್ತಾ ಹೋಗಬಹುದು, ಭಾರತದ್ದು ಹೆಚ್ಚುತ್ತಾ ಹೋಗಬಹುದು ಎಂದು ಆರ್ಥಿಕ ತಜ್ಞರು ನಿರೀಕ್ಷಿಸಿದ್ದಾರೆ. ಬ್ಲೂಮ್ಬರ್ಗ್ ವರದಿ ಪ್ರಕಾರ ಈ ದಶಕದ ಅಂತ್ಯಕ್ಕೆ ಭಾರತದ ವಾರ್ಷಿಕ ಜಿಡಿಪಿ ವೃದ್ಧಿದರ ಶೇ. 9ಕ್ಕೆ ತಲುಪಬಹುದು. ಚೀನಾದ ಬೆಳವಣಿಗೆ ವೇಗ 3.5 ಪ್ರತಿಶತಕ್ಕೆ ಇಳಿಯಬಹುದು ಎಂದಿದೆ. ಇದೇ ವೇಗ ಮುಂದಿನ ವರ್ಷಗಳಲ್ಲಿ ಮುಂದುವರಿಯುತ್ತಾ ಹೋದಲ್ಲಿ ಚೀನಾವನ್ನು ಭಾರತ ಹಿಂದಿಕ್ಕಲು ಸಾಧ್ಯವಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:27 pm, Thu, 23 May 24