ಕುಗ್ಗದ ಅದಾನಿ; ವಾಯುಯಾನ ಕ್ಷೇತ್ರಕ್ಕೆ ಇನ್ನೊಂದು ಹೆಜ್ಜೆ; ಬೃಹತ್ ಸೂಪರ್ ವಿದ್ಯುತ್ ಸ್ಥಾವರ ಸ್ಥಾಪನೆಗೂ ಯೋಜನೆ
Adani Group takes important steps: ಏವಿಯೇಶನ್ ಎಂಆರ್ಒ ಸರ್ವಿಸ್ ನೀಡುವ ಏರ್ವರ್ಕ್ಸ್ ಸಂಸ್ಥೆಯನ್ನು ಅದಾನಿ ಗ್ರೂಪ್ ಖರೀದಿ ಮಾಡಿದೆ. ಸಿವಿಲ್ ಮತ್ತು ಡಿಫೆನ್ಸ್ ಏವಿಯೇಶನ್ ಎರಡರಲ್ಲೂ ಎಂಆರ್ಒ ಸೇವೆ ನೀಡಲು ಅದಾನಿ ಗ್ರೂಪ್ ಪರಿಣಿತಿ ಹೊಂದಿದಂತಾಗಿದೆ. ಇದೇ ವೇಳೆ ಬಿಹಾರದಲ್ಲಿ ಅಲ್ಟ್ರಾ ಸೂಪರ್ಕ್ರಿಟಿಕಲ್ ಥರ್ಮಲ್ ವಿದ್ಯುತ್ ಸ್ಥಾವರವನ್ನು ಅದಾನಿ ಗ್ರೂಪ್ ಸ್ಥಾಪಿಸಲಿದೆ.
ನವದೆಹಲಿ, ಡಿಸೆಂಬರ್ 24: ದೊಡ್ಡ ವಿವಾದಗಳು, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಟಾರ್ಗೆಟ್ ಮಾಡಲಾಗುತ್ತಿರುವುದು ಇವ್ಯಾವುದಕ್ಕೂ ಗೌತಮ್ ಅದಾನಿ ಜಗ್ಗುತ್ತಿರುವಂತೆ ಕಾಣುತ್ತಿಲ್ಲ, ಕುಗ್ಗುತ್ತಿರುವಂತೆ ತೋರುತ್ತಿಲ್ಲ. ಬಿಸಿನೆಸ್ ವಿಸ್ತರಣೆಗೊಳಿಸಲು ಮತ್ತು ಗಟ್ಟಿಗೊಳಿಸಲು ಅದಾನಿ ಗ್ರೂಪ್ನ ಚಿತ್ತ ನೆಟ್ಟಂತಿದೆ. ಮಹತ್ವದ ಬೆಳವಣಿಗೆಗಳಲ್ಲಿ ಅದಾನಿ ಗ್ರೂಪ್ ವೈಮಾನಿಕ ಮತ್ತು ವಿದ್ಯುತ್ ಶಕ್ತಿ ಕ್ಷೇತ್ರಗಳಲ್ಲಿ ಪ್ರಬಲ ಹೆಜ್ಜೆಗಳನ್ನು ಇರಿಸಿದೆ. ದೇಶದ ಅತಿದೊಡ್ಡ ಖಾಸಗಿ ಎಂಆರ್ಒ ಸರ್ವಿಸ್ ಕಂಪನಿ ಎನಿಸಿದ ಏರ್ವರ್ಕ್ಸ್ ಅನ್ನು ಅದಾನಿ ಗ್ರೂಪ್ ಖರೀದಿಸಿದೆ. ಬಿಹಾರದಲ್ಲಿ ಅಲ್ಟ್ರಾ ಸೂಪರ್ಕ್ರಿಟಿಕಲ್ ವಿದ್ಯುತ್ ಉತ್ಪಾದನಾ ಘಟಕವನ್ನು ಸ್ಥಾಪಿಸಲಿದೆ. ಇವೆರಡೂ ಕೂಡ ಮಹತ್ವದ ಹೆಜ್ಜೆಗಳಾಗಿವೆ.
400 ಕೋಟಿ ರೂಗೆ ಏರ್ವರ್ಕ್ಸ್ ಖರೀದಿ…
ಅದಾನಿ ಗ್ರೂಪ್ಗೆ ಸೇರಿದ ಅದಾನಿ ಡಿಫೆನ್ಸ್ ಸಿಸ್ಟಮ್ಸ್ ಅಂಡ್ ಟೆಕ್ನಾಲಜೀಸ್ ಸಂಸ್ಥೆಯು ಏರ್ವರ್ಕ್ಸ್ ಅನ್ನು 400 ಕೋಟಿ ರೂಗೆ ಖರೀದಿಸಿರುವುದು ತಿಳಿದುಬಂದಿದೆ. ಈ ಕಂಪನಿಯಲ್ಲಿ ಎಡಿಎಸ್ಟಿಎಲ್ ಶೇ. 85.8ರಷ್ಟು ಷೇರುದಾರಿಕೆ ಹೊಂದಿರಲಿದೆ. ಏರ್ವರ್ಕ್ಸ್ ಸಂಸ್ಥೆ ದೇಶದ ಅತಿದೊಡ್ಡ ಖಾಸಗಿ ವಲಯದ ಏವಿಯೇಶನ್ ಎಂಆರ್ಒ ಸರ್ವಿಸ್ ಕಂಪನಿ ಎನಿಸಿದೆ.
ಇದನ್ನೂ ಓದಿ: ಕೇಂದ್ರ ಸರ್ಕಾರಿ ಉದ್ದಿಮೆಗಳ ನಿವ್ವಳ ಲಾಭ, ಡಿವಿಡೆಂಡ್, ಮಾರ್ಕೆಟ್ ಕ್ಯಾಪ್ಗಳಲ್ಲಿ ಸಖತ್ ಹೆಚ್ಚಳ
1,300ಕ್ಕೂ ಹೆಚ್ಚು ಪರಿಣಿತ ಉದ್ಯೋಗಿಗಳ ಬಳಗ ಹೊಂದಿರುವ ಏರ್ವರ್ಕ್ಸ್ 35 ನಗರಗಳಲ್ಲಿ ಘಟಕಗಳನ್ನು ಹೊಂದಿದೆ. ವಿಮಾನದ ಫಿಕ್ಸೆಡ್ ವಿಂಗ್ ಮತ್ತು ರೋಟರಿ ವಿಂಗ್ ಅನ್ನು ಸರ್ವಿಸ್ ಮಾಡುವ ಕಾರ್ಯದಲ್ಲಿ ಈ ಕಂಪನಿ ಪರಿಣಿತಿಗೊಂಡಿದೆ. ಇದೀಗ ನಾಗರಿಕ ವಿಮಾನಯಾನ ಮತ್ತು ರಕ್ಷಣಾ ವಿಮಾನಯಾನ, ಈ ಎರಡರಲ್ಲೂ ಎಂಆರ್ಒ ಸೇವೆ ನೀಡಲು ಅದಾನಿ ಗ್ರೂಪ್ ತಯಾರಾಗಿದೆ.
ಬಿಹಾರದಲ್ಲಿ ಸೂಪರ್ ಕ್ರಿಟಿಕಲ್ ಥರ್ಮಲ್ ಘಟಕ
ಅದಾನಿ ಗ್ರೂಪ್ ಬಿಹಾರದಲ್ಲಿ ಹಲವು ಮಹತ್ವದ ಯೋಜನೆಗಳನ್ನು ಹಮ್ಮಿಕೊಂಡಿದೆ. ಅದರಲ್ಲಿ ಪ್ರಮುಖವಾದುದು ಅಲ್ಟ್ರಾ ಸೂಪರ್ಕ್ರಿಟಿಕಲ್ ಥರ್ಮಲ್ ಪವರ್ ಪ್ಲಾಂಟ್. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ವಿದ್ಯುತ್ ತಯಾರಿಕೆ ಮಾಡಲಾಗುತ್ತದೆ. ಕಲ್ಲಿದ್ದಲು ಮೂಲಕ ಉತ್ಪಾದನೆ ಮಾಡಲಾದರೂ ಪರಿಸರಕ್ಕೆ ಹೆಚ್ಚಿನ ಹಾನಿಯಾಗದ ರೀತಿಯ ತಂತ್ರಜ್ಞಾನವನ್ನು ಇದರಲ್ಲಿ ಬಳಕೆ ಮಾಡಲಾಗುತ್ತದೆ. ಈ ಘಟಕ ಸ್ಥಾಪನೆಗೆ ಅದಾನಿ ಗ್ರೂಪ್ 20,000 ಕೋಟಿ ರೂ ಹೂಡಿಕೆ ಮಾಡುವ ನಿರೀಕ್ಷೆ ಇದೆ.
ಇದನ್ನೂ ಓದಿ: 2024ರಲ್ಲಿ ಜಾಗತಿಕ ಆರ್ಥಿಕ ಮತ್ತು ರಾಜಕೀಯ ತಳಮಳ ಮಧ್ಯೆಯೂ ಮಿಂಚಿನಂತೆ ಸಂಚರಿಸಿದ ಭಾರತದ ಆರ್ಥಿಕತೆ
ವಿದ್ಯುತ್ ಕೊರತೆ ಎದುರಿಸುತ್ತಿರುವ ಬಿಹಾರಕ್ಕೆ ಈ ಘಟಕ ಬಹಳ ಉಪಯುಕ್ತ ಎನಿಸಲಿದೆ. ಅಲ್ಟ್ರಾ ಸೂಪರ್ ಕ್ರಿಟಿಕಲ್ ಪವರ್ ಪ್ಲಾಂಟ್ಗಳಲ್ಲಿ ಸುಮಾರು 2,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಸಾಧ್ಯ. 1,600 ಮೆಗಾವ್ಯಾಟ್ ವಿದ್ಯುತ್ ಕೊರತೆ ಎದುರಿಸುತ್ತಿರುವ ಬಿಹಾರಕ್ಕೆ ಈ ಘಟಕದಿಂದ ಅಗತ್ಯ ವಿದ್ಯುತ್ ಸರಬರಾಜಾಗಬಹುದು.
ಬಿಹಾರದಲ್ಲಿ ಈ ಬೃಹತ್ ವಿದ್ಯುತ್ ಘಟಕ ಮಾತ್ರವಲ್ಲ, ಸಿಮೆಂಟ್ ಉತ್ಪಾದನೆ, ಆಹಾರ ಸಂಸ್ಕರಣೆ ಮತ್ತು ಲಾಜಿಸ್ಟಿಕ್ಸ್ ಬಿಸಿನೆಸ್ಗಳನ್ನು ಅದಾನಿ ಗ್ರೂಪ್ ಹೆಚ್ಚಿಸಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ