ನವದೆಹಲಿ, ಆಗಸ್ಟ್ 12: ಹಿಂಡನ್ಬರ್ಗ್ ರಿಸರ್ಚ್ ಸಂಸ್ಥೆ ಮೊನ್ನೆ ಬಿಡುಗಡೆ ಮಾಡಿದ ಎರಡನೇ ವರದಿಯು ನಿರೀಕ್ಷೆಯಂತೆ ಷೇರು ಮಾರುಕಟ್ಟೆ ಮೇಲೆ ಹೆಚ್ಚಿನ ಪರಿಣಾಮ ಬೀರಿಲ್ಲ. ಜಾಗತಿಕ ವಿದ್ಯಮಾನಗಳ ಪರಿಣಾಮವಾಗಿ ಮಾರುಕಟ್ಟೆ ತುಸು ಮಂದವಾಗಿ ಆರಂಭವಾಗಿದೆ. ಆದರೆ, ಅದಾನಿ ಗ್ರೂಪ್ನ ಷೇರುಗಳಿಗೆ ಹೆಚ್ಚಿನ ಧಕ್ಕೆಯಾಗಿದೆ. ಸೆಬಿ ಮುಖ್ಯಸ್ಥೆ ಮಾಧವಿ ಪುರಿ ಬುಚ್ ಅವರು ಅದಾನಿ ಗ್ರೂಪ್ ಜೊತೆ ಹಿತಾಸಕ್ತಿ ಹೊಂದಿದ್ದಾರೆ ಎನ್ನುವಂತಹ ಆರೋಪವೊಂದನ್ನು ಹಿಂಡನ್ಬರ್ಗ್ ಮಾಡಿತು. ಈ ಕಾರಣಕ್ಕೆ ಅದಾನಿ ಗ್ರೂಪ್ ಕಂಪನಿಗಳ ಷೇರುಗಳಿಗೆ ಇಂದು ಸೋಮವಾರ ಹಿನ್ನಡೆ ಆಗಿರಬಹುದು. ಇದು ಬಿಟ್ಟರೆ ಆ ವರದಿಯ ಪರಿಣಾಮ ಒಟ್ಟಾರೆ ಷೇರು ಮಾರುಕಟ್ಟೆ ಮೇಲೆ ಆಗಿಲ್ಲದಿರುವುದು ಮೇಲ್ನೋಟಕ್ಕೆ ತೋರುತ್ತದೆ.
ಅದಾನಿ ಗ್ರೂಪ್ಗೆ ಸೇರಿದ 10 ಕಂಪನಿಗಳ ಷೇರುಗಳು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿವೆ. ಈ ಎಲ್ಲಾ 10 ಷೇರುಗಳೂ ಇಂದು ಬೆಳಗಿನ ವಹಿವಾಟಿನಲ್ಲಿ ನಷ್ಟದಲ್ಲಿವೆ. ಒಂದು ಹಂತದಲ್ಲಿ ಒಟ್ಟಾರೆ ಶೇ. 7ರವರೆಗೆ ಕುಸಿತ ಸಂಭವಿಸಿತ್ತು. ಅಂದಾಜು ಪ್ರಕಾರ 53,000 ಕೋಟಿ ರೂ ಮೊತ್ತದ ಷೇರುಸಂಪತ್ತನ್ನು ಅದಾನಿ ಗ್ರೂಪ್ ಕಳೆದುಕೊಂಡಿತು.
ಅದಾನಿ ಟೋಟಲ್ ಗ್ಯಾಸ್, ಅದಾನಿ ಎಂಟರ್ಪ್ರೈಸಸ್, ಅದಾನಿ ಪವರ್, ಅದಾನಿ ಗ್ರೀನ್ ಎನರ್ಜಿ, ಅದಾನಿ ಎನರ್ಜಿ ಸಲ್ಯೂಶನ್ಸ್, ಅದಾನಿ ವಿಲ್ಮರ್, ಅದಾನಿ ಪೋರ್ಟ್ಸ್, ಅಂಬುಜಾ ಸಿಮೆಂಟ್ಸ್, ಎಸಿಸಿ ಸಿಮೆಂಟ್ಸ್, ಎನ್ಡಿಟಿವಿ ಈ ಹತ್ತು ಕಂಪನಿಗಳು ಕೆಂಪು ಗೆರೆಯಲ್ಲಿ ವಹಿವಾಟು ಕಾಣುತ್ತಿವೆ.
ಇದನ್ನೂ ಓದಿ: 5ಜಿ ಸರ್ವಿಸ್ ಅಳವಡಿಕೆ ಮಾಡದ ಅದಾನಿ ಕಂಪನಿ; ದೂರಸಂಪರ್ಕ ಇಲಾಖೆಯಿಂದ ಮತ್ತೆ ನೋಟೀಸ್; ಎಡಿಎನ್ಎಲ್ಗೆ ಲೈಸೆನ್ಸ್ ರದ್ದಾಗುತ್ತಾ?
ಕಳೆದ ವರ್ಷದ ಜನವರಿ ತಿಂಗಳಲ್ಲಿ ಹಿಂಡನ್ಬರ್ಗ್ ಸಂಸ್ಥೆ ಬಿಡುಗಡೆ ಮಾಡಿದ ಸ್ಫೋಟಕ ವರದಿಯೊಂದರಲ್ಲಿ ಅದಾನಿ ಗ್ರೂಪ್ ವಿರುದ್ಧ ಹಲವು ರೀತಿಯ ಷೇರು ಅಕ್ರಮಗಳ ಆರೋಪಗಳನ್ನು ಮಾಡಿತ್ತು. ಅಲ್ಲಿಯವರೆಗೆ ಬಹಳ ಮಿಂಚಿನ ವೇಗದಲ್ಲಿ ಹೆಚ್ಚಿದ್ದ ಅದರ ಷೇರುಸಂಪತ್ತು, ಹಿಂಡನ್ಬರ್ಗ್ ವರದಿ ಬಳಿಕ ಪಾತಾಳ ಕಚ್ಚಿತು. ಒಂದೂವರೆ ವರ್ಷದಲ್ಲಿ ಅದಾನಿ ಗ್ರೂಪ್ನ ಷೇರುಸಂಪತ್ತು ಬಹುತೇಕ ಹಿಂದಿನ ಸ್ಥಿತಿಗೆ ಮರಳುತ್ತಿದೆ. ಈ ಸಂದರ್ಭದಲ್ಲಿ ಹಿಂಡನ್ಬರ್ಗ್ ಮತ್ತೊಂದು ಅಸ್ತ್ರ ಬಿಟ್ಟಿದೆ. ನಿರೀಕ್ಷೆಯಂತೆ ಮೊದಲ ವರದಿ ಉಂಟು ಮಾಡಿದಷ್ಟು ಪರಿಣಾಮ ಈ ಎರಡನೇ ವರದಿ ಮಾಡಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ