Adani: ಗೌತಮ್ ಅದಾನಿಗೆ ಇನ್ನಷ್ಟು ನಿರಾಳ; ಹಿಂಡನ್ಬರ್ಗ್ ಪ್ರಕರಣದ ತನಿಖೆ ಎಸ್ಐಟಿಗೆ ವಹಿಸಲು ಸುಪ್ರೀಂಕೋರ್ಟ್ ನಕಾರ
Supreme Court Judgement: ಅದಾನಿ ಗ್ರೂಪ್ ವಿರುದ್ಧ ಹಿಂಡನ್ಬರ್ಗ್ ಮಾಡಿದ ಆರೋಪಗಳ ಸಂಬಂಧ ಸೆಬಿ ಸದ್ಯ ತನಿಖೆ ನಡೆಸುತ್ತಿದೆ. ಈ ತನಿಖೆಯನ್ನು ಎಸ್ಐಟಿಗೆ ವರ್ಗಾಯಿಸಲು ಸೂಕ್ತ ಕಾರಣಗಳು ಇಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
ನವದೆಹಲಿ, ಜನವರಿ 3: ಗೌತಮ್ ಅದಾನಿ (Gautam Adani) ಅವರಿಗೆ ಇನ್ನಷ್ಟು ನಿರಾಳತೆ ತರುವ ಬೆಳವಣಿಗೆಯೊಂದರಲ್ಲಿ, ಸುಪ್ರೀಮ್ ಕೋರ್ಟ್ ಹಿಂಡನ್ಬರ್ಗ್ ಪ್ರಕರಣದ (Adani – Hindenburg Research Case) ತನಿಖೆಯನ್ನು ಸೆಬಿಯಿಂದ ಎಸ್ಐಟಿಗೆ ವರ್ಗಾಯಿಸಲು ನಿರಾಸಕ್ತಿ ತೋರಿದೆ. ಅದಾನಿ ಗ್ರೂಪ್ ವಿರುದ್ಧ ಹಿಂಡನ್ಬರ್ಗ್ ಮಾಡಿದ ಆರೋಪಗಳ ಸಂಬಂಧ ಸೆಬಿ (SEBI) ಸದ್ಯ ತನಿಖೆ ನಡೆಸುತ್ತಿದೆ. ಈ ತನಿಖೆಯನ್ನು ಎಸ್ಐಟಿಗೆ ವರ್ಗಾಯಿಸಲು ಸೂಕ್ತ ಕಾರಣಗಳು ಇಲ್ಲ ಎಂದು ಸುಪ್ರೀಂಕೋರ್ಟ್ (supreme court) ಅಭಿಪ್ರಾಯಪಟ್ಟಿದೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ಈ ತೀರ್ಮಾನಕ್ಕೆ ಬಂದಿದೆ.
ಹಿಂಡನ್ಬರ್ಗ್ ರಿಸರ್ಚ್ ಅಥವಾ ಇನ್ಯಾವುದಾದರೂ ವರದಿಯ ಆಧಾರದ ಮೇಲೆ ಪ್ರಕರಣವನ್ನು ಪ್ರತ್ಯೇಕವಾಗಿ ತನಿಖೆ ಮಾಡುವ ಅವಶ್ಯಕತೆ ಇಲ್ಲ. ಹಾಗೆ ತನಿಖೆಗೆ ಆದೇಶಿಸುವಂತಹ ಅಂಶಗಳೂ ಕಾಣುತ್ತಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಈ ನ್ಯಾಯಪೀಠದಲ್ಲಿ ಸಿಜೆಐ ಡಿವೈ ಚಂದ್ರಚೂಡ್ ಜೊತೆಗೆ ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲ ಮತ್ತು ಮನೋಜ್ ಮಿಶ್ರಾ ಅವರಿದ್ದಾರೆ.
ಸೆಬಿಗೆ ಮೂರು ತಿಂಗಳ ಗಡುವು
ಅದಾನಿ ಹಿಂಡನ್ಬರ್ಗ್ ಪ್ರಕರಣದಲ್ಲಿ ಸಂಬಂಧ 22 ವಿಷಯಗಳ ಪೈಕಿ 20ರಷ್ಟನ್ನು ಸೆಬಿ ತನಿಖೆ ಪೂರ್ಣಗೊಳಿಸಿದೆ. ಇನ್ನೆರಡು ಪ್ರಕರಣಗಳು ಬಾಕಿ ಇವೆ. ಮುಖ್ಯ ನ್ಯಾಯಮೂರ್ತಿಗಳು ಈ ಎರಡು ಪ್ರಕರಣದ ತನಿಖೆಯನ್ನು 3 ತಿಂಗಳಲ್ಲಿ ಮುಗಿಸುವಂತೆ ಸೆಬಿಗೆ ಆದೇಶಿಸಿದ್ದಾರೆ.
ಏನಿದು ಅದಾನಿ ಹಿಂಡನ್ಬರ್ಗ್ ಪ್ರಕರಣ?
ಕಳೆದ ವರ್ಷದ ಜನವರಿಯಲ್ಲಿ ಶಾರ್ಟ್ ಸೆಲ್ಲರ್ ಸಂಸ್ಥೆಯಾದ ಹಿಂಡನ್ಬರ್ಗ್ ರಿಸರ್ಚ್ ಅದಾನಿ ಗ್ರೂಪ್ ವಿರುದ್ಧ ಸ್ಫೋಟಕ ವರದಿ ಬಿಡುಗಡೆ ಮಾಡಿತ್ತು. ಷೇರು ಅಕ್ರಮ ಸೇರಿದಂತೆ ಹಲವು ಆರೋಪಗಳನ್ನು ಮಾಡಲಾಗಿತ್ತು. ಆ ವರದಿ ಬಿಡುಗಡೆ ಆಗುತ್ತಿದ್ದಂತೆಯೇ ಅದಾನಿ ಗ್ರೂಪ್ನ ವಿವಿಧ ಸಂಸ್ಥೆಗಳ ಷೇರುಗಳು ಕುಸಿತ ಕಂಡವು. ನೋಡನೋಡುತ್ತಿದ್ದಂತೆಯೇ ಕೆಲವೇ ದಿನಗಳಲ್ಲಿ ಅದಾನಿ ಗ್ರೂಪ್ನ ಒಟ್ಟೂ ಷೇರುಸಂಪತ್ತು ಶೇ. 60ಕ್ಕಿಂತಲೂ ಹೆಚ್ಚು ಕರಗಿಹೋದವು.
ಇದೇ ವೇಳೆ ಸುಪ್ರೀಂಕೋರ್ಟ್ ಈ ಪ್ರಕರಣದ ತನಿಖೆಯನ್ನು ಸೆಬಿಗೆ ವಹಿಸಿತು. ಮೂಲ ಕಾಲಾವಕಾಶದಲ್ಲಿ ಸೆಬಿ ತನಿಖೆ ಪೂರ್ಣಗೊಳಿಸಿಲ್ಲ. ಇದು ಗಂಭೀರ ಸ್ವರೂಪದ್ದಾದ್ದರಿಂದ ತನಿಖೆಗೆ ಹೆಚ್ಚಿನ ಕಾಲಾವಕಾಶ ಬೇಕೆಂದು ಸೆಬಿ ಹೇಳಿದೆ. ಒಟ್ಟು 22 ಅಂಶಗಳಲ್ಲಿ ಸೆಬಿ ತನಿಖೆ ನಡೆಸಿದೆ. ಈ ಪೈಕಿ 20 ಅಂಶಗಳ ತನಿಖೆಯನ್ನು ಸೆಬಿ ಪೂರ್ಣಗೊಳಿಸಿರುವುದು ತಿಳಿದುಬಂದಿದೆ.
ಇದನ್ನೂ ಓದಿ: ಅದಾನಿ ಗ್ರೂಪ್ ಕಂಪನಿಗಳಿಗೆ ಷೇರುಪೇಟೆಯಲ್ಲಿ ಸುಗ್ಗಿ; ವಿಶ್ವ ಶ್ರೀಮಂತರ ಟಾಪ್15 ಪಟ್ಟಿಯಲ್ಲಿ ಗೌತಮ್ ಅದಾನಿ
ಈವರೆಗೆ ಬಂದಿರುವ ಸುಳಿವುಗಳ ಪ್ರಕಾರ ಅದಾನಿ ಗ್ರೂಪ್ ವಿರುದ್ಧ ಹಿಂಡನ್ಬರ್ಗ್ ಮಾಡಿರುವ ಆರೋಪಗಳಿಗೆ ಪ್ರಬಲ ಸಾಕ್ಷ್ಯಾಧಾರಗಳು ಸೆಬಿಗೆ ಸಿಕ್ಕಿಲ್ಲ ಎನ್ನಲಾಗಿದೆ. ಸುಪ್ರೀಮ್ ಕೋರ್ಟ್ ಕೂಡ ಈ ಹಿಂದಿನ ವಿಚಾರಣೆಗಳಲ್ಲಿ, ಹಿಂಡನ್ಬರ್ಗ್ ಇತ್ಯಾದಿ ಸಂಸ್ಥೆಗಳಲ್ಲಿ ಬಂದ ವರದಿಯನ್ನೇ ಸತ್ಯವೆಂದು ನಂಬಲು ಸಾಧ್ಯ ಇಲ್ಲ ಎನ್ನುವಂಥ ಅಭಿಪ್ರಾಯ ವ್ಯಕ್ತಪಡಿಸಿತ್ತು. ಈ ಬೆಳವಣಿಗೆಗಳು ಗೌತಮ್ ಅದಾನಿ ಮತ್ತವರ ಗ್ರೂಪ್ಗೆ ನಿರಾಳತೆ ತಂದಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 10:51 am, Wed, 3 January 24