Adani Row: ಉದ್ಯಮ ಸಮೂಹದ ಷೇರು ಬೆಲೆಯಲ್ಲಿ ಅಸಹಜ ಏರಿಳಿತ ಕಂಡುಬಂದಿದೆ; ಸೆಬಿ ಮಹತ್ವದ ಹೇಳಿಕೆ

ಮಹತ್ವದ ಬೆಳವಣಿಗೆಯೊಂದರಲ್ಲಿ, ಉದ್ಯಮ ಸಮೂಹವೊಂದರ ಷೇರು ಬೆಲೆಯಲ್ಲಿ ಅಸಜ ಏರಿಳಿತ ಕಂಡುಬಂದಿರುವುದನ್ನು ಗಮನಿಸಲಾಗಿದೆ ಎಂದು ಷೇರು ಮಾರುಕಟ್ಟೆ ನಿಯಂತ್ರಕ ಸೆಬಿ ಶನಿವಾರ ಸಂಜೆ ತಿಳಿಸಿದೆ.

Adani Row: ಉದ್ಯಮ ಸಮೂಹದ ಷೇರು ಬೆಲೆಯಲ್ಲಿ ಅಸಹಜ ಏರಿಳಿತ ಕಂಡುಬಂದಿದೆ; ಸೆಬಿ ಮಹತ್ವದ ಹೇಳಿಕೆ
ಸೆಬಿ (ಸಾಂದರ್ಭಿಕ ಚಿತ್ರ)
Follow us
Ganapathi Sharma
|

Updated on:Feb 04, 2023 | 6:24 PM

ಮುಂಬೈ: ಮಹತ್ವದ ಬೆಳವಣಿಗೆಯೊಂದರಲ್ಲಿ, ಉದ್ಯಮ ಸಮೂಹವೊಂದರ ಷೇರು ಬೆಲೆಯಲ್ಲಿ ಅಸಜ ಏರಿಳಿತ ಕಂಡುಬಂದಿರುವುದನ್ನು ಗಮನಿಸಲಾಗಿದೆ ಎಂದು ಷೇರು ಮಾರುಕಟ್ಟೆ ನಿಯಂತ್ರಕ ಸೆಬಿ (SEBI) ಶನಿವಾರ ಸಂಜೆ ತಿಳಿಸಿದೆ. ಕಳೆದ ಒಂದು ವಾರದಿಂದ ಅದಾನಿ ಸಮೂಹ(Adani Group) ಷೇರು ಮೌಲ್ಯದಲ್ಲಿ ಭಾರೀ ಕುಸಿತವಾಗಿರುವ ಬೆನ್ನಲ್ಲೇ ಸೆಬಿಯಿಂದ ಈ ಹೇಳಿಕೆ ಮೂಡಿಬಂದಿದೆ. ದೇಶದ ಷೇರು ಮಾರುಕಟ್ಟೆಗಳು ಈವರೆಗೆ ಕಾರ್ಯನಿರ್ವಹಿಸಿದ ರೀತಿಯಲ್ಲೇ ಮುಂದೆಯೂ ಇರುವುದನ್ನು ಖಾತರಿಪಡಿಸಿಕೊಳ್ಳಲಾಗುವುದು. ತಡೆರಹಿತ, ಪಾರದರ್ಶಕ ಹಾಗೂ ಸಮರ್ಥವಾಗಿ ಷೇರು ಮಾರುಕಟ್ಟೆ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಲಾಗುವುದು. ಜತೆಗೆ ಷೇರು ಮಾರುಕಟ್ಟೆಯ ಸಮಗ್ರತೆಯನ್ನು ಖಾತರಿಸಿಪಡಿಸುವ ವಿಚಾರದಲ್ಲಿ ಬದ್ಧವಾಗಿರುವುದಾಗಿ ಸೆಬಿ ಹೇಳಿದೆ. ಅದಾನಿ ಸಮೂಹದ  ವಿರುದ್ಧ ಕೇಳಿಬಂದಿರುವ ಆರೋಪಕ್ಕೆ ಸಂಬಂಧಿಸಿ ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಉನ್ನತ ಮಟ್ಟದ ತನಿಖೆ ನಡೆಸುವಂತೆ ಆಗ್ರಹಿಸಿವೆ. ಇದರ ಬೆನ್ನಲ್ಲೇ ಸೆಬಿ ಹೇಳಿಕೆ ನೀಡಿದೆ.

ಇದಕ್ಕೂ ಮುನ್ನ ಅದಾನಿ ಸಮೂಹದ ಎಫ್​ಪಿಒ ವಿಚಾರವಾಗಿ ಪ್ರತಿಕ್ರಿಯಿಸಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಮಾರುಕಟ್ಟೆ ನಿಯಂತ್ರಕಗಳು ತಮ್ಮ ಕೆಲಸ ಮಾಡಲಿವೆ ಎಂದು ಹೇಳಿದ್ದರು. ಷೇರು ಮಾರುಕಟ್ಟೆ ನಿಯಂತ್ರಕರು ಅವರ ಕೆಲಸ ಮಾಡಲಿದ್ದಾರೆ. ರಿಸರ್ವ್ ಬ್ಯಾಂಕ್ ನಿನ್ನೆಯಷ್ಟೇ ಸ್ಪಷ್ಟನೆ ನೀಡಿದೆ. ಅದಕ್ಕೂ ಮೊದಲು ಹೂಡಿಕೆ ಬಗ್ಗೆ ಎಲ್​ಐಸಿ ವಿವರ ನೀಡಿದೆ. ಹೀಗಾಗಿ ನಿಯಂತ್ರಕರು ಅವರ ಕೆಲಸ ಮಾಡಲಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದರು.

ಎಫ್​​ಪಿಒಗಳು (Follow-On Public Offer) ಬರುತ್ತವೆ ಹೋಗುತ್ತವೆ. ಷೇರು ಮಾರುಕಟ್ಟೆಗಳಲ್ಲಿ ಈ ಏರಿಳಿತಗಳು ಸಹಜ. ಆದರೆ, ಕಳೆದ ಕೆಲವೇ ದಿನಗಳಲ್ಲಿ 8 ಶತಕೋಟಿ ಡಾಲರ್ ವಿದೇಶಿ ವಿನಿಯಮ ಮೀಸಲು ಹರಿದುಬಂದಿರುವುದು ಭಾರತದ ಬಗ್ಗೆ ಜಗತ್ತು ಹೊಂದಿರುವ ದೃಷ್ಟಿಕೋನ ಮತ್ತು ನಮ್ಮ ದೇಶದ ಶಕ್ತಿಯನ್ನು ಅನಾವರಣಗೊಳಿಸಿದೆ ಎಂದು ಹಣಕಾಸು ಸಚಿವರು ಹೇಳಿದ್ದರು.

ಇದನ್ನೂ ಓದಿ: Adani Row: ಮಾರುಕಟ್ಟೆ ನಿಯಂತ್ರಕಗಳು ತಮ್ಮ ಕೆಲಸ ಮಾಡಲಿವೆ; ಅದಾನಿ ಪ್ರಕರಣದ ಬಗ್ಗೆ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯೆ

ಅದಾನಿ ಸಮೂಹದ ಕಂಪನಿಯಾದ ಅದಾನಿ ಎಂಟರ್​​ಪ್ರೈಸಸ್ ಎಫ್​ಪಿಒ ಮೂಲಕ 20,000 ಕೋಟಿ ರೂ. ಸಂಗ್ರಹದ ಗುರಿಯನ್ನು ಹೊಂದಿತ್ತು. ಜನವರಿ 27ರಿಂದ 31ರ ವರೆಗೆ ಎಫ್​ಪಿಒ ಮಾರಾಟ ನಡೆದಿತ್ತು. ಆದರೆ, ಅಮೆರಿಕದ ಹಿಂಡನ್​ಬರ್ಗ್ ರಿಸರ್ಚ್ ಸಂಸ್ಥೆಯು ಅದಾನಿ ಸಮೂಹದ ವಿರುದ್ಧ ಮಾಡಿದ ಷೇರು ಮೌಲ್ಯ ತಿರುಚಿದ ಮತ್ತು ಅಕ್ರಮದ ಆರೋಪದಿಂದಾಗಿ ಗೌತಮ್ ಅದಾನಿ ಮಾಲಿಕತ್ವದ ಕಂಪನಿಗಳು ಒಂದು ವಾರದಲ್ಲಿ ಸುಮಾರು ನೂರು ಬಿಲಿಯನ್ ಡಾಲರ್ (ಸುಮಾರು 8 ಲಕ್ಷ ಕೋಟಿ ರೂಪಾಯಿ) ಮೌಲ್ಯದ ಸಂಪತ್ತನ್ನು ಕಳೆದುಕೊಂಡಿವೆ. ಹೀಗಾಗಿ ಎಫ್​​ಪಿಒ ರದ್ದುಪಡಿಸಿದ್ದ ಕಂಪನಿ ಹೂಡಿಕೆದಾರರಿಗೆ ಹಣವನ್ನು ಮರಳಿಸುವುದಾಗಿ ತಿಳಿಸಿತ್ತು.

ಈ ಎಲ್ಲ ಬೆಳವಣಿಗೆಗಳು ದೇಶದಲ್ಲಿ ರಾಜಕೀಯ ಕೋಲಾಹಲಕ್ಕೂ ಕಾರಣವಾಗಿದೆ. ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ಸರ್ಕಾರದ ವಿರುದ್ಧ ಮುಗಿಬೀಳುತ್ತಿವೆ. ಇದೇ ಸಂದರ್ಭದಲ್ಲಿ ಸೆಬಿ ಹೇಳಿಕೆ ನೀಡಿರುವುದು ಕುತೂಹಲ ಮೂಡಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:13 pm, Sat, 4 February 23