Adani Row: ಬ್ಯಾಂಕಿಂಗ್ ವಲಯ ಸ್ಥಿರವಾಗಿದೆ; ಆರ್ಬಿಐ ಸ್ಪಷ್ಟನೆ
ಬ್ಯಾಂಕ್ಗಳು ಭಾರೀ ಮೊತ್ತದ ಸಾಲ ನೀಡಿರುವ ಬಗ್ಗೆ ಆರ್ಬಿಐ ದತ್ತಾಂಶ ಸಂಗ್ರಹ ಮಾಡಿರುತ್ತದೆ. 5 ಕೋಟಿ ರೂ. ಹಾಗೂ ಅದಕ್ಕಿಂತ ಹೆಚ್ಚಿನ ಮೊತ್ತದ ಸಾಲ ನೀಡಿದ್ದರೆ ಬ್ಯಾಂಕ್ಗಳು ಆರ್ಬಿಐಗೆ ವರದಿ ಮಾಡಬೇಕಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ನವದೆಹಲಿ: ದೇಶದ ಬ್ಯಾಂಕಿಂಗ್ ವಲಯ (Banking Sector) ಸದೃಢ ಮತ್ತು ಸ್ಥಿರವಾಗಿದೆ ಎಂದು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ತಿಳಿಸಿದೆ. ಅದಾನಿ ಸಮೂಹದ (Adani group) ಕಂಪನಿಗಳಿಗೆ ಬ್ಯಾಂಕ್ಗಳು ಸಾಲ ನೀಡಿದ್ದು, ನಷ್ಟದ ಭೀತಿಯಲ್ಲಿವೆ ಎಂಬ ಊಹಾಪೋಹಗಳ ಬೆನ್ನಲ್ಲೇ ಆರ್ಬಿಐ ಈ ಸ್ಪಷ್ಟನೆ ನೀಡಿದೆ. ಬಂಡವಾಳ ಸಮರ್ಪಕತೆ, ಸ್ವತ್ತು ಗುಣಮಟ್ಟ, ಲಿಕ್ವಿಡಿಟಿ, ಲಾಭದಾಯಕತೆಯು ಆರೋಗ್ಯರವಾಗಿವೆ. ಆರ್ಬಿಐ ಮಾರ್ಗಸೂಚಿಯನ್ನು ಬ್ಯಾಂಕ್ಗಳು ಪಾಲನೆ ಮಾಡುತ್ತಿವೆ ಎಂದು ಕೇಂದ್ರೀಯ ಬ್ಯಾಂಕ್ ತಿಳಿಸಿದೆ. ದೇಶದ ಬ್ಯಾಂಕಿಂಗ್ ವಲಯದ ಮೇಲೆ ನಿಗಾ ಇಡುವುದನ್ನು ಮುಂದುವರಿಸಲಾಗಿದೆ. ಪ್ರಸ್ತುತ ಬ್ಯಾಂಕಿಂಗ್ ವಲಯ ಸ್ಥಿರವಾಗಿದೆ ಎಂದೂ ಆರ್ಬಿಐ ಪ್ರಕಟಣೆ ತಿಳಿಸಿದೆ. ದೇಶದ ಬ್ಯಾಂಕ್ಗಳು ಉದ್ಯಮ ಸಮೂಹಕ್ಕೆ ಭಾರೀ ಪ್ರಮಾಣದಲ್ಲಿ ಸಾಲ ನೀಡಿರುವ ಬಗ್ಗೆ ಮಾಧ್ಯಮ ವರದಿಗಳಾಗಿದ್ದವು. ಈ ವಿಚಾರವಾಗಿ ಆರ್ಬಿಐ ಪ್ರತಿಕ್ರಿಯೆ ನೀಡಿದೆ. ಆದರೆ ಎಲ್ಲಿಯೂ ಅದಾನಿ ಸಮೂಹದ ಹೆಸರನ್ನು ಉಲ್ಲೇಖಿಸಿಲ್ಲ.
ಬ್ಯಾಂಕ್ಗಳು ಭಾರೀ ಮೊತ್ತದ ಸಾಲ ನೀಡಿರುವ ಬಗ್ಗೆ ಆರ್ಬಿಐ ದತ್ತಾಂಶ ಸಂಗ್ರಹ ಮಾಡಿರುತ್ತದೆ. 5 ಕೋಟಿ ರೂ. ಹಾಗೂ ಅದಕ್ಕಿಂತ ಹೆಚ್ಚಿನ ಮೊತ್ತದ ಸಾಲ ನೀಡಿದ್ದರೆ ಬ್ಯಾಂಕ್ಗಳು ಆರ್ಬಿಐಗೆ ವರದಿ ಮಾಡಬೇಕಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಅಮೆರಿಕದ ಹಿಂಡನ್ಬರ್ಗ್ ರಿಸರ್ಚ್ ಕಂಪನಿ ಕಳೆದ ವಾರ ಸ್ಫೋಟಕ ವರದಿ ಬಿಡುಗಡೆ ಮಾಡಿದ ಬಳಿಕ ಗೌತಮ್ ಅದಾನಿ ಮಾಲಿಕತ್ವದ ಕಂಪನಿಗಳು ಒಂದು ವಾರದಲ್ಲಿ ನೂರು ಬಿಲಿಯನ್ ಡಾಲರ್ (ಸುಮಾರು 8 ಲಕ್ಷ ಕೋಟಿ ರೂಪಾಯಿ) ಮೌಲ್ಯದ ಸಂಪತ್ತನ್ನು ಕಳೆದುಕೊಂಡಿವೆ. ಇವು ವ್ಯವಹಾರದಲ್ಲಿ ಆದ ನಷ್ಟ ಅಲ್ಲ. ಅದಾನಿ ಗ್ರೂಪ್ ಕಂಪನಿಗಳು ಷೇರುಪೇಟೆಯಲ್ಲಿ ಮೌಲ್ಯ ಕಳೆದುಕೊಂಡಿವೆ. ಪರಿಣಾಮವಾಗಿ ಅದಾನಿ ಷೇರು ಸಂಪತ್ತಿನ ಮೊತ್ತ ಬಹಳಷ್ಟು ಕರಗಿಹೋಗಿದೆ.
ಇದನ್ನೂ ಓದಿ: Adani Row: ಅದಾನಿ ಮಹಾಕುಸಿತದಿಂದ ಎಲ್ಐಸಿ, ಎಸ್ಬಿಐಗೆ ಹೆಚ್ಚಿನ ಹಾನಿಯಿಲ್ಲ; ಹಣಕಾಸು ಕಾರ್ಯದರ್ಶಿ ಸ್ಪಷ್ಟನೆ
ಇದರ ಬೆನ್ನಲ್ಲೇ ಎಸ್ಬಿಐ ಸೇರಿದಂತೆ ದೇಶದ ಬ್ಯಾಂಕ್ಗಳು ಅದಾನಿ ಸಮೂಹದ ಕಂಪನಿಗಳಿಗೆ ನೀಡಿದ ಸಾಲದ ಬಗ್ಗೆ ಚರ್ಚೆಗಳು ಆರಂಭವಾಗಿದ್ದವು. ಎಸ್ಬಿಐ ಮತ್ತು ಎಲ್ಐಸಿಯಲ್ಲಿರುವ ಬಹಳಷ್ಟು ಸಾರ್ವಜನಿಕರ ಹಣವು ಅದಾನಿ ಗ್ರೂಪ್ಗಳಲ್ಲಿ ಹೂಡಿಕೆಯಾಗಿದೆ. ಇದಕ್ಕೆ ಸರ್ಕಾರ ಉತ್ತರ ಕೊಡಬೇಕು ಎಂದು ಪ್ರತಿಪಕ್ಷ ಕಾಂಗ್ರೆಸ್ ಆಗ್ರಹಿಸಿತ್ತು. ಈ ಮಧ್ಯೆ, ಅದಾನಿ ಗ್ರೂಪ್ನ ವಿವಿಧ ಕಂಪನಿಗಳಿಗೆ ಯಾವ್ಯಾವ ಬ್ಯಾಂಕುಗಳು ಸಾಲ ನೀಡಿವೆ ಎಂದು ಆರ್ಬಿಐ ಮಾಹಿತಿ ಕಲೆಹಾಕಲು ಆರಂಭಿಸಿತ್ತು. ಈ ಸಂಬಂಧ ಸ್ಥಳೀಯ ಬ್ಯಾಂಕುಗಳಿಂದ ಆರ್ಬಿಐ ವಿವರ ಕೋರಿತ್ತು.
ಅದಾನಿ ಸಮೂಹ ಕಂಪನಿಗಳು ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ ಕಂಡಿರುವುದರಿಂದ ಎಲ್ಐಸಿ ಮತ್ತು ಎಸ್ಬಿಐಗೆ ಹೆಚ್ಚಿನ ಹಾನಿಯಿಲ್ಲ ಎಂದು ಕೇಂದ್ರ ಹಣಕಾಸು ಕಾರ್ಯದರ್ಶಿ ಟಿವಿ ಸೋಮನಾಥನ್ ಶುಕ್ರವಾರ ಸ್ಪಷ್ಟನೆ ನೀಡಿದ್ದರು. ಆದರೆ, ಅವರು ಅದಾನಿ ಕಂಪನಿಯ ಹೆಸರನ್ನು ನೇರವಾಗಿ ಉಲ್ಲೇಖಿಸಿರಲಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:20 am, Sat, 4 February 23