Adult Industry: ಕೆನಡಾದ ಇಸಿಪಿ ಪಾಲಾದ ಪೋರ್ನ್ ಜಗತ್ತಿನ ಸಾಮ್ರಾಜ್ಯ
Blue Film Making Company Sold: ಪೋರ್ನ್ಹಬ್, ಯೂಪೋರ್ನ್ ಮೊದಲಾದ ನೀಲಿತಾಣಗಳ ಮಾಲೀಕ ಸಂಸ್ಥೆ ಮೈಂಡ್ಗೀಕ್ ಅನ್ನು ಕೆನಡಾ ಮೂಲದ ಇಸಿಪಿ ಖರೀದಿ ಮಾಡಿದೆ. ಪೋರ್ನ್ ದೃಶ್ಯಕ್ಕಾಗಿ ಅಸಮ್ಮತಿಯ ಲೈಂಗಿಕತೆಯನ್ನು ಬಳಸಲಾಗಿದೆ ಎಂಬುದೂ ಸೇರಿ ಹಲವು ಆರೋಪಗಳಿರುವ ಪ್ರಕರಣಗಳು ಮೈಂಡ್ಗೀಕ್ ಮೇಲಿವೆ.
ನವದೆಹಲಿ: ವಿಶ್ವದ ಅತ್ಯಂತ ದೊಡ್ಡ ಪೋರ್ನ್ ವೆಬ್ಸೈಟ್ಗಳ ಸಮೂಹದ ಮಾಲೀಕ ಸಂಸ್ಥೆ ಮೈಂಡ್ಗೀಕ್ (MindGeek) ಇದೀಗ ಮಾರಾಟವಾಗಿದೆ. ಕೆನಡಾದ ಎಥಿಕಲ್ ಕ್ಯಾಪಿಟಲ್ ಪಾರ್ಟ್ನಸ್ ಸಂಸ್ಥೆ (Ethical Capital Partners) ಮೈಂಡ್ಗೀಕ್ ಅನ್ನು ಖರೀದಿಸಿದೆ. ಅದರೆ, ಎಷ್ಟು ಮೊತ್ತಕ್ಕೆ ಈ ಸೇಲ್ ಆಗಿದೆ ಎಂಬ ಮಾಹಿತಿ ಬಹಿರಂಗವಾಗಿಲ್ಲ. ಪೋರ್ನ್ ವಲಯದಲ್ಲಿ ಬಹಳ ಜನಪ್ರಿಯವಾಗಿರುವ ಹಲವಾರು ಜಾಲತಾಣಗಳು ಮೈಂಡ್ಗೀಕ್ ಅಡಿಯಲ್ಲಿ ನಿರ್ವಹಣೆಯಾಗುತ್ತಿವೆ. 2004ರಲ್ಲಿ ಆರಂಭವಾದ ಮೈಂಡ್ಗೀಕ್ ಬಳಿ ಪೋರ್ನ್ಹಬ್, ಯೂಪೋರ್ನ್, ರೆಡ್ಟ್ಯೂಬ್, ಬ್ರಾಜರ್ಸ್ (Brazzers), ಮೆನ್ ಡಾಟ್ ಕಾಮ್, ಶಾನ್ ಕಾಡಿ (Sean Cody), ಟ್ರಾನ್ಸ್ ಏಂಜೆಲ್ಸ್ (Transgenders Site), ನುಟಾಕು, ವೈನಾಟ್ಬೈ ಡಾಟ್ ಕಾಮ್, ರಿಯಾಲಿಟಿ ಕಿಂಗ್ಸ್, ಬೇಬ್ಸ್ ಡಾಟ್ ಕಾಮ್ ಇತ್ಯಾದಿ ದೊಡ್ಡ ಪೋರ್ನ್ ಸಾಮ್ರಾಜ್ಯವೇ ಇದೆ. ಹಲವು ನೀಲಿ ಚಿತ್ರಗಳ ಪ್ರೊಡಕ್ಷನ್ ಕೂಡ ನಡೆಸುತ್ತಿತ್ತು. ಮೆನ್ ಡಾಟ್ ಕಾಮ್ ಎಂಬುದು ಪುರುಷ ಸಲಿಂಗಿಗಳಿಗೆಂದು (Gay Site) ರೂಪಿಸಲಾದ ತಾಣ. ಹಾಗೆಯೇ, ಮಹಿಳಾ ಸಲಿಂಗಿ (ಲೆಸ್ಬಿಯನ್ಸ್) ಇತ್ಯಾದಿ ವಿವಿಧ ರೀತಿಯ ಪೋರ್ನ್ ತಾಣಗಳನ್ನು ಮೈಂಡ್ಗೀಕ್ ನಿರ್ವಹಿಸುತ್ತದೆ.
ಮಹಿಳೆಯರು ಮತ್ತು ಮಕ್ಕಳನ್ನು ಬಲವಂತವಾಗಿ ಬಳಸಿಕೊಳ್ಳಲಾದ ಪೋರ್ನ್ ವಿಡಿಯೋಗಳ ವಿತರಣೆಯಿಂದ ಮೈಂಡ್ಗೀಕ್ ಬಹಳಷ್ಟು ಲಾಭ ಮಾಡಿಕೊಂಡಿದೆ ಎಂಬ ಆರೋಪ ಇದೆ. ಈ ಹಿನ್ನೆಲೆಯಲ್ಲಿ ಮೈಂಡ್ಗೀಕ್ ಮೇಲೆ ಹಲವು ಕಾನೂನು ಮೊಕದ್ದಮೆಗಳೂ ದಾಖಲಾಗಿವೆ. ಕಳೆದ ವರ್ಷ ಪೇಮೆಂಟ್ ಪ್ರೋಸಸಿಂಗ್ ಕಂಪನಿಗಳಾದ ವೀಸಾ ಮತ್ತು ಮಾಸ್ಟರ್ಕಾರ್ಡ್ ಸಂಸ್ಥೆಗಳು ಮೈಂಡ್ಗೀಕ್ಗೆ ಹಣ ಪಾವತಿ ವ್ಯವಸ್ಥೆಯನ್ನು ನಿಲ್ಲಿಸಿದ್ದವು. ಯೂಟ್ಯೂಬ್ ಮತ್ತು ಇನ್ಸ್ಟಾಗ್ರಾಮ್ನಲ್ಲಿದ್ದ ಪೋರ್ನ್ಹಬ್ನ ಖಾತೆಗಳನ್ನೂ ತೆಗೆದುಹಾಕಲಾಗಿತ್ತು.
ಇದನ್ನೂ ಓದಿ: Truecaller Office: ಬೆಂಗಳೂರಿಗೆ ಮತ್ತೊಂದು ದೊಡ್ಡ ಕಂಪನಿ; ಉದ್ಯಾನನಗರಿಯಲ್ಲಿ ಟ್ರ್ಯೂಕಾಲರ್ನ ವಿಶಾಲ ಕಚೇರಿ ಉದ್ಘಾಟನೆ
ಪೋರ್ನ್ಹಬ್ನ ನೀಲಿ ಚಿತ್ರಗಳಲ್ಲಿ ಅಸಮ್ಮತಿಯ ಲೈಂಗಿಕ ವಿಡಿಯೋಗಳನ್ನು ಒಳಗೊಳ್ಳಲಾಗಿದೆ. ಅಪ್ರಾಪ್ತೆಯರನ್ನು ದುರ್ಬಳಕೆ ಮಾಡಿಕೊಂಡು ನೀಲಿಚಿತ್ರಗಳನ್ನು ಮಾಡಲಾಗಿದೆ ಎಂಬ ಹಲವಾರು ವಿಚಾರಗಳನ್ನಿಟ್ಟುಕೊಂಡು ಅಮೆರಿಕದ ಪತ್ರಿಕೆಗಳಲ್ಲಿ ವರದಿಗಳಿ ಪ್ರಕಟವಾಗಿದ್ದವು. 2022 ಜೂನ್ ತಿಂಗಳಲ್ಲಿ ಮೈಂಡ್ಗೀಕ್ನ ಸಿಇಒ ಫೆರಾಸ್ ಅಂಟೂನ್ ಮತ್ತು ಸಿಒಒ ಡೇವಿಡ್ ಟಾಸಿಲ್ಲೋ ರಾಜೀನಾಮೆ ನೀಡಿದರು.
ಅದಾದ ಬಳಿಕ ಈಗ ಮೈಂಡ್ಗೀಕ್ ಕಂಪನಿಯೇ ಮಾರಾಟವಾಗಿದೆ. ಮೈಂಡ್ಗೀಕ್ನ ಮುಖ್ಯ ಕಚೇರಿ ಯೂರೋಪ್ನ ಲಕ್ಸಂಬರ್ಗ್ನಲ್ಲಿದೆ. ಆದರೆ, ಇದರ ಪ್ರಮುಖ ಕಾರ್ಯಾಲಯ ಕೆನಡಾದ ಮಾಂಟ್ರಿಯಲ್ನಲ್ಲಿದೆ. ಅಮೆರಿಕದ ಲಾಸ್ ಏಂಜಲಿಸ್, ಇಂಗ್ಲೆಂಡ್ನ ಲಂಡನ್, ರೊಮೇನಿಯಾದ ಬುಕಾರೆಸ್ಟ್ ಮೊದಲಾದ ಕಡೆಯೂ ಅದರ ಕಚೇರಿಗಳಿವೆ.
ಮೈಂಡ್ಗೀಕ್ ಅನ್ನು ಖರೀದಿಸಿರುವ ಎಥಿಕಲ್ ಕ್ಯಾಪಿಟಲ್ ಪಾರ್ಟ್ನರ್ಸ್ ಸಂಸ್ಥೆ ಕೆನಡಾದ ಒಟ್ಟಾವಾದಲ್ಲಿ ಮುಖ್ಯ ಕಚೇರಿ ಹೊಂದಿದೆ. ಪೋರ್ನ್ ಹಬ್ ಇತ್ಯಾದಿಗಳ ವಿಚಾರದಲ್ಲಿ ಸದಾ ಕಾನೂನಿನ ಕಣ್ಣು ಇದ್ದೇ ಇರುತ್ತದೆ. ಅನೈತಿಕತೆಯ ಪ್ರಶ್ನೆ ಸದಾ ಇದ್ದೇ ಇರುತ್ತದೆ. ಇದನ್ನು ನಿಭಾಯಿಸಿಕೊಂಡು ಪೋರ್ನ್ ವಲಯದಲ್ಲಿ ಮಾದರಿಯಾಗುವಂತೆ ನಾವು ನಿರ್ವಹಣೆ ಮಾಡುತ್ತೇವೆ ಎಂದು ಎಥಿಕಲ್ ಕ್ಯಾಪಿಟಲ್ ಪಾರ್ಟ್ನರ್ಸ್ ಸಂಸ್ಥೆ ಹೇಳಿದೆ.