China Real Estate Sector Crisis: ಎವರ್​ಗ್ರ್ಯಾಂಡ್​ ನಂತರ ಇದೀಗ ಚೀನಾದ ಕೈಸಾ ಸಂಕಷ್ಟದಲ್ಲಿ

| Updated By: Srinivas Mata

Updated on: Nov 06, 2021 | 9:26 PM

ಎವರ್​ಗ್ರ್ಯಾಂಡ್ ರಿಯಲ್​ ಎಸ್ಟೇಟ್ ಕಂಪೆನಿಯು ಸಮಸ್ಯೆ ಅನುಭವಿಸಿದ ನಂತರ ಇದೀಗ ಚೀನಾದ ಮತ್ತೊಂದು ಕಂಪೆನಿ ಕೈಸಾ ಬಿಕ್ಕಟ್ಟು ಎದುರಿಸುತ್ತಿದೆ.

China Real Estate Sector Crisis: ಎವರ್​ಗ್ರ್ಯಾಂಡ್​ ನಂತರ ಇದೀಗ ಚೀನಾದ ಕೈಸಾ ಸಂಕಷ್ಟದಲ್ಲಿ
ಚೀನಾ ಬಾವುಟ (ಸಾಂದರ್ಭಿಕ ಚಿತ್ರ)
Follow us on

ಚೀನಾದಲ್ಲಿ ಆಸ್ತಿಗಳ (Property) ವ್ಯವಹಾರ ನಡೆಸುವ ರಿಯಲ್ ಎಸ್ಟೇಟ್ ದೈತ್ಯ ಕಂಪೆನಿಯಾದ ಎವರ್‌ಗ್ರಾಂಡ್ ಸಮೂಹವು ಗಡುವಿನೊಳಗೆ ಸಾಲ ಮರುಪಾವತಿ ಮಾಡಬೇಕಾದ ಸವಾಲಿನಲ್ಲಿ ವಿಫಲವಾದ ನಂತರ, ಇದೀಗ ಮತ್ತೊಂದು ರಿಯಲ್ ಎಸ್ಟೇಟ್ ಡೆವಲಪರ್ ಕೈಸಾ ಸಮೂಹವು ಸಾಲ ಮರುಪಾವತಿ ಮಾಡಲಾಗದ ಅಪಾಯದಲ್ಲಿದೆ. ಇದು ದೇಶದ ಆಸ್ತಿ ವಲಯದಲ್ಲಿ ಮತ್ತಷ್ಟು ಸಮಸ್ಯೆಗಳ ಭಯವನ್ನು ಹೆಚ್ಚಿಸಿದೆ. ಶೆನ್ಜೆನ್ ಮೂಲದ ಡೆವಲಪರ್ ಕೈಸಾ ಸಮೂಹದ ಷೇರುಗಳನ್ನು ಹಾಂಕಾಂಗ್‌ನಲ್ಲಿ ಶುಕ್ರವಾರ ವಹಿವಾಟಿನಿಂದ ಅಮಾನತುಗೊಳಿಸಲಾಗಿದೆ. ಕಂಪೆನಿಯ ಅಂಗಸಂಸ್ಥೆಗಳು ಸಹ ವಹಿವಾಟಿನಿಂದ ಸ್ಥಗಿತಗೊಂಡಿವೆ. ವಿನಿಮಯ ಕೇಂದ್ರದ ಫೈಲಿಂಗ್‌ಗಳಲ್ಲಿ ಗುಂಪಿನಿಂದ ಸಾಲ ಮರುಪಾವತಿ “ಬಾಕಿಯಿರುವ” ಬಗ್ಗೆ ಪ್ರಕಟಣೆಯನ್ನು ಉಲ್ಲೇಖಿಸಿವೆ ಎಂದು ಸಿಎನ್‌ಎನ್ ವರದಿ ಮಾಡಿದೆ. ಅಮಾನತಿನ ಹಿಂದಿನ ಕಾರಣದ ಬಗ್ಗೆ ಕೈಸಾ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸದಿದ್ದರೂ ಹಿಂದಿನ ದಿನ ಅದು ತನ್ನ ಹಣಕಾಸಿನ ಮೇಲೆ “ಈ ಹಿಂದೆಂದೂ ಕಾಣದ ಒತ್ತಡ” ಎದುರಿಸುತ್ತಿದೆ ಎಂದು ಹೇಳಿತ್ತು.

ಚೀನಾದ ಸರ್ಕಾರಿ ಹಣಕಾಸು ಪತ್ರಿಕೆ ಸೆಕ್ಯೂರಿಟೀಸ್ ಟೈಮ್ಸ್ ಗುರುವಾರ ವರದಿ ಮಾಡಿರುವಂತೆ, ಕಂಪೆನಿಯು ತನ್ನ ನಗದು ಲಭ್ಯತೆ ಸಮಸ್ಯೆಗಳ ಬಗ್ಗೆ ತಿಳಿಸಿದೆ ಮತ್ತು ಅದರ ಸಂಪತ್ತು ನಿರ್ವಹಣಾ ಉತ್ಪನ್ನಗಳಿಗೆ ಸಂಬಂಧಿಸಿದ ಪಾವತಿಯನ್ನು ಮಾಡಲಿಕ್ಕೆ ಆಗದಿರುವುದನ್ನು ಒಪ್ಪಿಕೊಂಡಿದೆ. ವರದಿಯ ಪ್ರಕಾರ, ಕೈಸಾ ತಾನು ಸವಾಲಿನ ರಿಯಲ್ ಎಸ್ಟೇಟ್ ಮಾರುಕಟ್ಟೆ ಪರಿಸರ ಮತ್ತು ಅಂತರರಾಷ್ಟ್ರೀಯ ಏಜೆನ್ಸಿಗಳಿಂದ ಕ್ರೆಡಿಟ್ ರೇಟಿಂಗ್‌ಗಳನ್ನು ಇತ್ತೀಚೆಗೆ ಡೌನ್‌ಗ್ರೇಡ್ ಮಾಡುವಂತಹ ಅನೇಕ ಸಂಕಷ್ಟಗಳನ್ನು ಅನುಭವಿಸುತ್ತಿರುವುದಾಗಿ ಹೇಳಿದೆ ಎಂಬುದಾಗಿ ಸಿಎನ್‌ಎನ್ ವರದಿ ಮಾಡಿದೆ.

ಚೀನಾದ ಅತ್ಯಂತ ಹೆಚ್ಚು ಸಾಲ ಉಳಿಸಿಕೊಂಡ ಡೆವಲಪರ್ ಎವರ್‌ಗ್ರಾಂಡ್‌ನಲ್ಲಿನ ಬಿಕ್ಕಟ್ಟಿನ ಬಗ್ಗೆ ಹೂಡಿಕೆದಾರರು ಅಸಮಾಧಾನ ಮುಂದುವರಿಸುತ್ತಿರುವಾಗ ಈ ಸುದ್ದಿ ಬಂದಿದೆ. ಈ ಸಮೂಹದಿಂದ 300 ಶತಕೋಟಿ ಡಾಲರ್​ಗಿಂತ ಹೆಚ್ಚಿನ ಸಾಲಗಳನ್ನು ಮರುಪಾವತಿಸಲು ಆಗದಿರುಬಹುದು ಎಂದು ಎಚ್ಚರಿಸಿದ ನಂತರ ಸೆಪ್ಟೆಂಬರ್‌ನಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಡ್​ಲೈನ್​ಗಳನ್ನು ಸೃಷ್ಟಿಸಿದೆ. ಮತ್ತೊಂದು ರಿಯಲ್ ಎಸ್ಟೇಟ್ ಡೆವಲಪರ್ ಮಾಡರ್ನ್ ಲ್ಯಾಂಡ್ ಕೂಡ ಈಗ ತನ್ನ ಸಾಲವನ್ನು ಪಾವತಿಸಲು ಹೆಣಗಾಡುತ್ತಿದೆ. ಇತ್ತೀಚಿನ ವಾರಗಳಲ್ಲಿ ಡೆವಲಪರ್‌ಗಳು ತಮ್ಮದೇ ಆದ ನಗದು ಹರಿವಿನ ಸಮಸ್ಯೆಗಳನ್ನು ಬಹಿರಂಗಪಡಿಸಿದ್ದಾರೆ. ಸಾಲದಾತರನ್ನು ಮರುಪಾವತಿಸಲು ಹೆಚ್ಚಿನ ಸಮಯವನ್ನು ಕೇಳುತ್ತಿದ್ದಾರೆ ಅಥವಾ ಸಂಭಾವ್ಯ ಮರುಪಾವತಿ ಆಗದಿರುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಕಳೆದ ವಾರ ಫಿಚ್ ಮತ್ತು ಎಸ್ ಅಂಡ್ ಪಿ ಗ್ಲೋಬಲ್ ರೇಟಿಂಗ್‌ಗಳು ಸಾಲದ ಆತಂಕವನ್ನು ಉಲ್ಲೇಖಿಸಿ ಕಂಪೆನಿಯನ್ನು ಡೌನ್‌ಗ್ರೇಡ್ ಮಾಡಿದ್ದರಿಂದ ಕೈಸಾ ಹಿನ್ನಡೆಯನ್ನು ಎದುರಿಸಿತು.

ಇದನ್ನೂ ಓದಿ: Evergrande: ಚೀನಾದ ಪೋಸ್ಟರ್​ಬಾಯ್​ ಎವರ್​ಗ್ರ್ಯಾಂಡ್​ ದಬ್ಬಾಕಿಕೊಂಡರೆ 171 ಬ್ಯಾಂಕ್​, 121 ಹಣಕಾಸು ಸಂಸ್ಥೆ ಅಡ್ಡಡ್ಡ