Ambani London Residence: 300 ಎಕರೆ ಜಾಗ, 49 ಕೋಣೆ, ಮಿನಿ ಆಸ್ಪತ್ರೆ, ಬಾಂಡ್ ಸಿನಿಮಾದಲ್ಲೂ ಸ್ಥಾನ- ಇದು ಅಂಬಾನಿ ಹೊಸ ಅರಮನೆ
ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಲಂಡನ್ನ ಸ್ಟೋಕ್ ಪಾರ್ಕ್ನಲ್ಲಿ 592 ಕೋಟಿ ರೂಪಾಯಿಗೆ ಖರೀದಿ ಮಾಡಿರುವ ಆಸ್ತಿಯ ಸಂಪೂರ್ಣ ವಿವರ ಇಲ್ಲಿದೆ.

ಭಾರತವಷ್ಟೇ ಅಲ್ಲ, ಏಷ್ಯಾದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಕುಟುಂಬವು ಲಂಡನ್ನ ಎರಡನೇ ಮನೆಗೆ ಸ್ಥಳಾಂತರ ಆಗುತ್ತದೆ ಎಂಬ ಸುದ್ದಿ ಗಿರಕಿ ಹೊಡೆಯಲು ಆರಂಭವಾದಾಗ, ಹಾಗೇನೂ ಇಲ್ಲ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಈ ಬಗ್ಗೆ ಸ್ಪಷ್ಟನೆ ನೀಡಿದೆ. ಅಂಥ ಯಾವ ಉದ್ದೇಶವೂ ಇಲ್ಲ ಎಂದಿದೆ. ಆದರೆ ಲಂಡನ್ನಲ್ಲಿನ ಅಂಬಾನಿ ಕುಟುಂಬದ ಆ ಎರಡನೇ “ಅರಮನೆ” (ಮೊದಲನೆಯದು ಮುಂಬೈನ ಅತ್ಯಂತ ಪ್ರತಿಷ್ಠಿತ ಸ್ಥಳದಲ್ಲಿ ಇರುವ ಆ್ಯಂಟಿಲಿಯಾ) ಹೇಗಿದೆ ಮತ್ತು ಏನೇನಿದೆ ಗೊತ್ತಾ? ಈ ಬಗ್ಗೆ ಮಿಡ್-ಡೇ ವರದಿ ಮಾಡಿದೆ. 300 ಎಕರೆ ವ್ಯಾಪ್ತಿಯಲ್ಲಿ ಹಬ್ಬಿರುವ ಈ ಆಸ್ತಿ ಇರುವುದು ಸ್ಟೋಕ್ ಪಾರ್ಕ್ನ ಬಕಿಂಗ್ಹ್ಯಾಮ್ಶೈರ್ನಲ್ಲಿ. ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಅಂಬಾನಿ ಕುಟುಂಬ ಬಹುತೇಕ ಸಮಯ ಕಳೆದದ್ದು ಮುಂಬೈನ ಅಲ್ಟಾಮೌಂಟ್ ರಸ್ತೆಯಲ್ಲಿ ಇರುವ ಗಗನಚುಂಬಿ ಕಟ್ಟಡ ಆ್ಯಂಟಿಲಿಯಾದಲ್ಲಿ. ಆ ಸಂದರ್ಭದಲ್ಲೇ ಕುಟುಂಬವು ತಮಗೆ ಇನ್ನೊಂದು ಮನೆಯ ಅಗತ್ಯ ಇರುವ ಬಗ್ಗೆ ಆಲೋಚಿಸಿತು. ಆದ್ದರಿಂದ ಲಂಡನ್ ಆಸ್ತಿಯನ್ನು ಖರೀದಿಸಲು ನಿರ್ಧರಿಸಿ, ಈ ವರ್ಷದ ಆರಂಭದಲ್ಲಿ 592 ಕೋಟಿ ರೂಪಾಯಿಯನ್ನು ಪಾವತಿಸಿ, ಕೊಂಡಿದ್ದರ ಬಗ್ಗೆ ವರದಿ ಆಗಿದೆ. ಈಗಾಗಲೇ ತಮ್ಮ ಅಗತ್ಯಕ್ಕೆ ತಕ್ಕಂತೆ ಅದನ್ನು ಸಿದ್ಧಪಡಿಸುತ್ತಿರುವ ಬಗ್ಗೆ ಮಾಹಿತಿ ಇದೆ.
ಸ್ಟೋಕ್ ಪಾರ್ಕ್ನಲ್ಲಿನ ಈ ಆಸ್ತಿಯಲ್ಲಿ 49 ಕೋಣೆಗಳಿವೆ. ವೈದ್ಯಕೀಯ ವ್ಯವಸ್ಥೆ ಇದೆ. ಮುಂಬೈನ ಆ್ಯಂಟಿಲಿಯಾದಲ್ಲಿ ಇರುವಂತೆಯೇ ದೇವಸ್ಥಾನವೊಂದನ್ನು ವ್ಯವಸ್ಥೆ ಮಾಡಿದ್ದು, ಇತರ ವಿಲಾಸಿ ಸಂಗತಿಗಳನ್ನು ಸಹ ಕಾಣಬಹುದು. ಈ ವರ್ಷದ ದೀಪಾವಳಿಗೆ ಅಂಬಾನಿ ಕುಟುಂಬವು ಲಂಡನ್ಗೆ ತೆರಳಿದ್ದಾರೆ. ಸಾಮಾನ್ಯವಾಗಿ ದೀಪಾವಳಿ ಆಚರಿಸುವುದು ಆ್ಯಂಟಿಲಿಯಾ ಮನೆಯಲ್ಲಿ ಆಗಿತ್ತು. ಈಗ ಹಬ್ಬದ ನಂತರ ಯು.ಕೆ. ವಿಲಾಸಿ ಬಂಗಲೆಯಿಂದ ಹಿಂತಿರುಗುವ ಮುಕೇಶ್ ಅಂಬಾನಿ, ಲಂಡನ್ನಲ್ಲಿ ಎಲ್ಲ ಸಿದ್ಧವಾದ ಮೇಲೆ ಮತ್ತೊಮ್ಮೆ ಮುಂದಿನ ವರ್ಷದ ಏಪ್ರಿಲ್ಗೆ ಹೋಗಲಿದ್ದಾರೆ.
ಅಂಬಾನಿ ಸ್ಟೋಕ್ ಪಾರ್ಕ್ ಆಸ್ತಿಯನ್ನು ಆರಿಸಿಕೊಂಡಿದ್ದೇಕೆ ಎಂಬ ಪ್ರಶ್ನೆ ಹರಿದಾಡುತ್ತಿದ್ದು, ಮುಂಬೈನ ಅತ್ಯಂತ ಪ್ರತಿಷ್ಠಿತ ಪ್ರದೇಶಕ್ಕೆ ಹೋಲಿಸಿದರೆ ಹೆಚ್ಚು ವಿಶಾಲ, ಮುಕ್ತವಾದ ಪ್ರದೇಶದಲ್ಲಿ ಇರುವುದಕ್ಕೆ ಬಯಸಿದ್ದರು ಎನ್ನಲಾಗಿದೆ. ಕಳೆದ ವರ್ಷವೇ ಆಸ್ತಿ ಹುಡುಕಾಟ ಶುರುವಾಗಿತ್ತು. ಆ ನಂತರ ಸ್ಟೋಕ್ ಪಾರ್ಕ್ ಮ್ಯಾನ್ಷನ್ ಅಂತಿಮಗೊಳಿಸಲಾಯಿತು. 300 ಎಕರೆ ಆಸ್ತಿಯನ್ನು ತಮಗೆ ಬೇಕಾದಂತೆ ಸಜ್ಜುಗೊಳಿಸಲು ಆಗಸ್ಟ್ನಿಂದ ಆರಂಭಿಸಿದರು. 1908ನೇ ಇಸವಿ ನಂತರ ಈ ವಿಲಾಸಿ ಬಂಗಲೆಯನ್ನು ಖಾಸಗಿ ನಿವಾಸವಾಗಿ ಬಳಸಲು ಆರಂಭಿಸಲಾಯಿತು. ಆ ಮೇಲೆ ಕಂಟ್ರಿ ಕ್ಲಬ್ ಆಗಿ ಬದಲಾವಣೆ ಮಾಡಲಾಯಿತು. ಮಾಧ್ಯಮಗಳ ವರದಿ ಪ್ರಕಾರ, ಈ ವಿಲಾಸಿ ಬಂಗಲೆಯನ್ನು ಜೇಮ್ಸ್ ಬಾಂಡ್ ಸಿನಿಮಾದಲ್ಲಿ ಕೂಡ ಬಳಸಿಕೊಳ್ಳಲಾಗಿದೆ.
View this post on Instagram
ಇದನ್ನೂ ಓದಿ: ಅಂಬಾನಿ ಕುಟುಂಬಕ್ಕೆ ಲಂಡನ್ ವಾಸ್ತವ್ಯದ ಆಲೋಚನೆಯಿಲ್ಲ: ರಿಲಯನ್ಸ್ ಇಂಡಸ್ಟ್ರೀಸ್ ಸ್ಪಷ್ಟನೆ




