
ನವದೆಹಲಿ, ಏಪ್ರಿಲ್ 24: ಟೆಕ್ ದೈತ್ಯ ಸಂಸ್ಥೆಗಳಾದ ಮೆಟಾ (ಫೇಸ್‌ಬುಕ್‌ನ ಮಾತೃಸಂಸ್ಥೆ) ಮತ್ತು ಮೈಕ್ರೋಸಾಫ್ಟ್ ಜಾಗತಿಕವಾಗಿ ಸುಮಾರು 23,000 ಉದ್ಯೋಗಗಳ ಮೇಲೆ ಪರಿಣಾಮ ಬೀರಬಲ್ಲ ಬೃಹತ್ ಉದ್ಯೋಗ ಕಡಿತ ಮತ್ತು ಬೈಔಟ್ (Buyout) ಯೋಜನೆಗಳನ್ನು ಪ್ರಕಟಿಸಿವೆ. ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡಲು ಮತ್ತು ವೆಚ್ಚ ಕಡಿತಗೊಳಿಸಲು ಈ ಕ್ರಮ ಕೈಗೊಳ್ಳಲಾಗಿದೆ.
ಮೆಟಾ ತನ್ನ ಒಟ್ಟು ಉದ್ಯೋಗಿಬಳಗದ ಶೇಕಡಾ 10 ರಷ್ಟು, ಅಂದರೆ ಸುಮಾರು 8,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದೆ. ಮೇ 20 ರಿಂದ ಈ ಪ್ರಕ್ರಿಯೆ ನಡೆಯಲಿದೆ. ಈಗಾಗಲೇ ಉದ್ಯೋಗಿಗಳೆಲ್ಲರಿಗೂ ಮೆಮೋ ಮೂಲಕ ಈ ಅಲರ್ಟ್ ಮೆಸೇಜ್ ರವಾನಿಸಲಾಗಿದೆ.
ಎಂಟು ಸಾವಿರ ಉದ್ಯೋಗಗಳಿಗೆ ಕತ್ತರಿ ಹಾಕುವುದರ ಜೊತೆಗೆ ಈಗಾಗಲೇ ಖಾಲಿ ಇರುವ ಸುಮಾರು 6,000 ಹುದ್ದೆಗಳನ್ನು ಭರ್ತಿ ಮಾಡದಿರಲು ಕಂಪನಿ ನಿರ್ಧರಿಸಿದೆ.
ಫೇಸ್ಬುಕ್, ವಾಟ್ಸಾಪ್, ಇನ್ಸ್ಟಾಗ್ರಾಮ್ ಆ್ಯಪ್ಗಳ ಮಾಲೀಕಸಂಸ್ಥೆ ಮೆಟಾ ತನ್ನ ಎಐ (AI) ಇನ್ಫ್ರಾಸ್ಟ್ರಕ್ಚರ್ಗಾಗಿ ಸುಮಾರು 135 ಬಿಲಿಯನ್ ಡಾಲರ್ ಹೂಡಿಕೆ ಮಾಡುತ್ತಿದ್ದು, ಈ ಭಾರಿ ವೆಚ್ಚವನ್ನು ಸರಿದೂಗಿಸಲು ಮತ್ತು ಕಂಪನಿಯನ್ನು ಹೆಚ್ಚು ದಕ್ಷತೆಯಿಂದ ನಡೆಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಇದನ್ನೂ ಓದಿ: ಇನ್ಫೋಸಿಸ್ ಉದ್ಯೋಗಿಗಳ ಸ್ಯಾಲರಿ ಹೈಕ್ಗೆ ತಡೆ; ಸಿಇಒಗೆ 52 ಕೋಟಿ ರೂ ಮೌಲ್ಯದ ಸ್ಟಾಕ್ ಭತ್ಯೆ
ಮತ್ತೊಂದು ಟೆಕ್ನಾಲಜಿ ದೈತ್ಯ ಕಂಪನಿಯಾದ ಮೈಕ್ರೋಸಾಫ್ಟ್ ತನ್ನ ಅಮೆರಿಕದ ಉದ್ಯೋಗಿಗಳಿಗೆ ‘ಸ್ವಯಂಪ್ರೇರಿತ ನಿರ್ಗಮನ’ (Voluntary Buyouts) ಆಫರ್ ನೀಡಿದೆ. ಅಂದರೆ, ಉದ್ಯೋಗಿಗಳು ತಾವಾಗಿಯೇ ಕೆಲಸ ಬಿಟ್ಟರೆ ಅವರಿಗೆ ಕಂಪನಿಯಿಂದ ಆಕರ್ಷಕ ಪರಿಹಾರ ಧನ ಸಿಗಲಿದೆ.
ಸುಮಾರು 8,750 ಉದ್ಯೋಗಿಗಳು (ಅಮೆರಿಕದ ಕಾರ್ಯಪಡೆಯ ಶೇ. 7 ರಷ್ಟು) ಈ ಯೋಜನೆಗೆ ಅರ್ಹರಾಗಿದ್ದಾರೆ. ವಯಸ್ಸು ಮತ್ತು ಸೇವಾವಧಿಯ ಮೊತ್ತ 70 ಅಥವಾ ಅದಕ್ಕಿಂತ ಹೆಚ್ಚಿರುವ ಉದ್ಯೋಗಿಗಳಿಗೆ ಈ ಆಫರ್ ನೀಡಲಾಗಿದೆ. ಉದಾಹರಣೆಗೆ, ವಯಸ್ಸು 50 ವರ್ಷ, ಸೇವಾವಧಿ 20 ವರ್ಷ ಸೇರಿ ಒಟ್ಟು 70 ಇದ್ದವರು ಈ ವಾಲಂಟರಿ ಬಯೌಟ್ನ ಆಫರ್ ಪಡೆಯುತ್ತಾರೆ.
ಎರಡೂ ಕಂಪನಿಗಳು ಎಐ ತಂತ್ರಜ್ಞಾನದ ಓಟದಲ್ಲಿ ಮುಂಚೂಣಿಯಲ್ಲಿರಲು ಶತಕೋಟಿ ಡಾಲರ್‌ಗಳನ್ನು ಹೂಡಿಕೆ ಮಾಡುತ್ತಿವೆ. ಮನುಷ್ಯರು ಮಾಡುವ ಕೆಲಸಗಳನ್ನು ಎಐ ಮೂಲಕ ಮಾಡಿಸುವ ಅಥವಾ ಕೆಲಸದ ಪ್ರಕ್ರಿಯೆಯನ್ನು ಆಟೋಮೇಷನ್ ಮಾಡುವ ಗುರಿಯನ್ನು ಈ ಕಂಪನಿಗಳು ಹೊಂದಿವೆ.
ವಿಶೇಷವಾಗಿ ಮ್ಯಾನೇಜ್‌ಮೆಂಟ್, ಸೇಲ್ಸ್ ಮತ್ತು ನೇಮಕಾತಿ ವಿಭಾಗದ ಉದ್ಯೋಗಿಗಳ ಮೇಲೆ ಈ ಜಾಬ್ ಕಟ್ ಪರಿಣಾಮ ಹೆಚ್ಚಾಗಿರಲಿದೆ ಎಂದು ವರದಿಗಳು ತಿಳಿಸಿವೆ.
ಇದನ್ನೂ ಓದಿ: ಭಾರತದ ಆರ್ಥಿಕ ಪ್ರಗತಿಗೆ ತೊಡಕಾಗಿರುವ ಅಂಶಗಳೇನು? ಬರ್ನ್ಸ್ಟೈನ್ ಸಲಹೆ ನೀಡಿರುವ ಪರಿಹಾರಗಳೇನು?
ಒಟ್ಟಾರೆಯಾಗಿ, ಎಐ ತಂತ್ರಜ್ಞಾನದ ಅಬ್ಬರದಿಂದಾಗಿ ಐಟಿ ಕ್ಷೇತ್ರದಲ್ಲಿ ಹಳೆಯ ಮಾದರಿಯ ಉದ್ಯೋಗಗಳು ಕಣ್ಮರೆಯಾಗುತ್ತಿದ್ದು, ಕಂಪನಿಗಳು ಹೆಚ್ಚು ‘ಲೀನ್’ (Lean) ಆಗಲು ಪ್ರಯತ್ನಿಸುತ್ತಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ