LIC IPO: ಎಲ್​ಐಸಿ ಐಪಿಒಗಾಗಿ ಭಾನುವಾರವೂ ಬ್ಯಾಂಕ್​ ಶಾಖೆ ತೆರೆಯಬೇಕೆಂಬ ಆರ್​ಬಿಐ ನಿರ್ಧಾರಕ್ಕೆ ಅಧಿಕಾರಿಗಳ ಒಕ್ಕೂಟದಿಂದ ಆಕ್ಷೇಪ

| Updated By: Srinivas Mata

Updated on: May 07, 2022 | 11:24 AM

ಎಲ್​ಐಸಿ ಐಪಿಒ ಸಬ್​ಸ್ಕ್ರಿಪ್ಷನ್​ಗಾಗಿ ಭಾನುವಾರವೂ ಬ್ಯಾಂಕ್ ಶಾಖೆಗಳನ್ನು ತೆರೆಯಬೇಕು ಎಂಬ ಆರ್​ಬಿಐ ನಿರ್ಧಾರಕ್ಕೆ ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ ಆಕ್ಷೇಪ ವ್ಯಕ್ತಪಡಿಸಿದೆ.

LIC IPO: ಎಲ್​ಐಸಿ ಐಪಿಒಗಾಗಿ ಭಾನುವಾರವೂ ಬ್ಯಾಂಕ್​ ಶಾಖೆ ತೆರೆಯಬೇಕೆಂಬ ಆರ್​ಬಿಐ ನಿರ್ಧಾರಕ್ಕೆ ಅಧಿಕಾರಿಗಳ ಒಕ್ಕೂಟದಿಂದ ಆಕ್ಷೇಪ
ಸಾಂದರ್ಭಿಕ ಚಿತ್ರ
Follow us on

ಎಲ್​ಐಸಿ ಐಪಿಒ (LIC IPO) ಸಬ್​ಸ್ಕ್ರಿಪ್ಷನ್​ ಕಾರಣಕ್ಕಾಗಿ ಎಎಸ್​ಬಿಎ (ಅಪ್ಲಿಕೇಷನ್ ಸಪೋರ್ಟೆಡ್ ಬೈ ಬ್ಲಾಕ್ಡ್ ಅಮೌಂಟ್) ಹೊಂದಿರುವಂಥ ಶಾಖೆಗಳನ್ನು ಭಾನುವಾರವೂ ತೆರೆಯಬೇಕು (ಮೇ 8, 2022) ಎಂಬ ಆರ್​ಬಿಐ ನಿರ್ಧಾರಕ್ಕೆ ಬ್ಯಾಂಕ್ ಅಧಿಕಾರಿಗಳ ಒಕ್ಕೂಟವಾದ ಎಐಬಿಒಸಿ ಆಕ್ಷೇಪ ವ್ಯಕ್ತಪಡಿಸಿದೆ. ಬಹುತೇಕ ಅಪ್ಲಿಕೇಷನ್​ಗಳಲ್ಲಿ ಡಿಜಿಟಲ್​ ಆಗಿಯೇ ಫೈಲ್ ಮಾಡುವಂಥ ಅವಕಾಶ ಇರುವಾಗ ಹೀಗೆ ಭಾನುವಾರವೂ ಬ್ಯಾಂಕ್ ತೆರೆಯುವುದರಿಂದ ಯಾವ ಉದ್ದೇಶವೂ ಈಡೇರಲ್ಲ ಎನ್ನಲಾಗಿದೆ. ಬಹುತೇಕ ಬ್ಯಾಂಕ್​ ಶಾಖೆಗಳು ಎಎಸ್​ಬಿಎ (ಅಪ್ಲಿಕೇಷನ್ ಸಪೋರ್ಟೆಡ್ ಬೈ ಬ್ಲಾಕ್ಡ್ ಅಮೌಂಟ್) ಹೊಂದಿರುವಂಥವು. ಡಿಜಿಟೈಸೇಷನ್ ಸಹ ಇದೆ. ಹೂಡಿಕೆದಾರರಲ್ಲಿ ಐಪಿಒಗೆ ಆನ್​ಲೈನ್ ಸಬ್​​ಸ್ಕ್ರಿಪ್ಷನ್ ಬಳಕೆ ವ್ಯಾಪಕ ಆಗಿರುವುದನ್ನು ಗಮನಿಸಿದರೆ ಭಾನುವಾರದಂದು ಬಹುತೇಕ ಶಾಖೆಗಳಲ್ಲಿ ಭೌತಿಕವಾಗಿ ಒಂದು ಅಪ್ಲಿಕೇಷನ್ ಕೂಡ ಸಲ್ಲಿಕೆ ಆಗಲ್ಲ. ಇಂಥ ಸನ್ನಿವೇಶದಲ್ಲಿ ಎಲ್ಲ ಬ್ಯಾಂಕ್ ಶಾಖೆಗಳನ್ನು ತೆರೆಯಬೇಕು ಎಂಬ ನಿರ್ಧಾರ ಹಾಸ್ಯಾಸ್ಪದವಾದದ್ದು ಮತ್ತು ಬ್ಯಾಂಕ್​ಗಳು ಅಂಥ ದೊಡ್ಡ ವೆಚ್ಚವನ್ನು ಭರಿಸುವುದಕ್ಕೆ ಸಾಧ್ಯವಿಲ್ಲ ಎಂದು ಎಐಬಿಒಸಿ ಹೇಳಿಕೆಯಲ್ಲಿ ತಿಳಿಸಿದೆ.

ಈಗಿನ ನಿರ್ಧಾರದಿಂದ ಅಧಿಕಾರಿಗಳ ಸಮೂಹದಲ್ಲಿ ಸಹಜವಾಗಿ ಬೇಸರ ಮತ್ತು ಅಸಮಾಧಾನ ಸೃಷ್ಟಿ ಆಗಿದೆ. ಅಂದಹಾಗೆ ಬ್ಯಾಂಕಿಂಗ್ ವಲಯದ ಮುಂಚೂಣಿಯಲ್ಲಿ ಇರುವವರೇ ಇವರು ಎಂದು ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ (AIBOC) ಹೇಳಿದೆ. ಬ್ಯಾಂಕ್​ ಶಾಖೆಗಳು ರಜಾದಿನಗಳಲ್ಲಿ ಕೆಲಸ ಮಾಡುವುದಕ್ಕೆ ಕೇಳಲು DIPAM ಹೆಚ್ಚು ಉತ್ಸಾಹದಿಂದ ಇದ್ದು, ಆರ್​ಬಿಐ ಎಲ್ಲ ಶಾಖೆಗಳನ್ನು ತೆರೆಯಲು ನಿಜವಾದ ಅಗತ್ಯವನ್ನು ನಿರ್ಣಯಿಸಿಲ್ಲ ಎಂದು ಹೇಳಿದೆ. ಈ ನಿರ್ಧಾರವು ಯಾವುದೇ ಫಲಿತಾಂಶವನ್ನು ನೀಡುವುದಿಲ್ಲ. ಬದಲಿಗೆ ದೊಡ್ಡ ಆರ್ಥಿಕ ಹೊರೆಯನ್ನು ಹಾಕುತ್ತದೆ, ಇದು ಉದ್ಯೋಗಿಗಳ ಪರಿಹಾರ ಮತ್ತು ಇತರ ಕಾರ್ಯಾಚರಣೆ ವೆಚ್ಚಗಳ ಖಾತೆಯಲ್ಲಿ 100 ಕೋಟಿ ರೂಪಾಯಿಗಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ.

ಈ ಎಲ್ಲ ಅಂಶಗಳನ್ನು ಪರಿಗಣಿಸಿ ಆರ್‌ಬಿಐ ತನ್ನ ನಿರ್ಧಾರವನ್ನು ಪರಿಶೀಲಿಸಬೇಕು ಮತ್ತು ಭಾನುವಾರ ಶಾಖೆಗಳನ್ನು ತೆರೆಯುವ ಆದೇಶವನ್ನು ಹಿಂಪಡೆಯಬೇಕು ಎಂದು ಒಕ್ಕೂಟ ಹೇಳಿದೆ. ಎಲ್‌ಐಸಿಯ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ)ಗಾಗಿ ಅರ್ಜಿಗಳನ್ನು ಪ್ರಕ್ರಿಯೆಗೊಳಿಸಲು ಅನುಕೂಲವಾಗುವಂತೆ ಎಎಸ್‌ಬಿಎ ಹೊಂದಿದ ಎಲ್ಲ ಶಾಖೆಗಳು ಭಾನುವಾರ ಸಾರ್ವಜನಿಕರಿಗೆ ತೆರೆದಿರುತ್ತವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಬುಧವಾರ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಿದೆ. ಸರ್ಕಾರಿ ಸ್ವಾಮ್ಯದ ಎಲ್‌ಐಸಿಯ ಐಪಿಒ ದೇಶದ ಅತಿದೊಡ್ಡ ಐಪಿಒ ಆಗಿದ್ದು, ಮೇ 9 ರಂದು ಮುಕ್ತಾಯವಾಗುತ್ತದೆ. ಮೇ 7 (ಶನಿವಾರ) ಮತ್ತು ಮೇ 8 (ಭಾನುವಾರ)ರಂದು ಸಹ ಅಪ್ಲೈ ಮಾಡಬಹುದು.

ಇನ್ನೂ ಹೆಚ್ಚಿನ ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: LIC IPO: ಎಲ್​ಐಸಿ ಐಪಿಒ ಇಂದಿನಿಂದ ಆರಂಭ: ನಿಮಗೆ ತಿಳಿದಿರಲೇ ಬೇಕು ಈ ಸಂಗತಿಗಳು

Published On - 11:24 am, Sat, 7 May 22