
ನವದೆಹಲಿ, ಜೂನ್ 13: ನಿನ್ನೆ ಗುರುವಾರ ಅಹ್ಮದಾಬಾದ್ ಏರ್ಪೋರ್ಟ್ ಬಳಿ ಸಂಭವಿಸಿದ ಏರ್ ಇಂಡಿಯಾ ವಿಮಾನಾಪಘಾತವು (Air India flight crash incident) ಭಾರೀ ಘೋರ ಘಟನೆಗಳಲ್ಲಿ ಒಂದೆನಿಸಿದೆ. ಸಾವನ್ನಪ್ಪಿದ ವಿಮಾನ ಪ್ರಯಾಣಿಕರ ಕುಟುಂಬಗಳಿಗೆ ಏರ್ ಇಂಡಿಯಾ ಸಂಸ್ಥೆ ತಲಾ ಒಂದು ಕೋಟಿ ರೂ ಪರಿಹಾರ ಘೋಷಿಸಿದೆ. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 242 ಮಂದಿಯಲ್ಲಿ ಒಬ್ಬರು ಮಾತ್ರ ಪವಾಡಸದೃಶ ರೀತಿಯಲ್ಲಿ ಬಚಾವಾಗಿದ್ದು. ಉಳಿದ 241 ಪ್ರಯಾಣಿಕರು ದುರ್ಮರಣ ಆಪ್ಪಿದ್ದಾರೆ. ಏರ್ ಇಂಡಿಯಾ ಸಂಸ್ಥೆ ಪ್ರತೀ ಪ್ರಯಾಣಿಕರ ಕುಟುಂಬಗಳಿಗೆ ತಲಾ ಒಂದು ಕೋಟಿ ರೂ ಪರಿಹಾರ ಕೊಟ್ಟಿದೆ. ಏರ್ ಇಂಡಿಯಾದ ಈ ನಡೆಯು ಅಂತಾರಾಷ್ಟ್ರೀಯ ಕಾನೂನು ನಿಯಮಗಳಿಗೆ ಅನುಸಾರವಾಗಿ ಇದೆ.
ಇಂಟರ್ನ್ಯಾಷನಲ್ ಫ್ಲೈಟ್ಗಳು ಅಪಘಾತವಾದಾಗ ಪ್ರಯಾಣಿಕರು ಗಾಯಗೊಂಡರೆ ಅಥವಾ ಮೃತಪಟ್ಟರೆ ಏನು ಪರಿಹಾರ ಕೊಡಬೇಕು ಎನ್ನುವ ಬಗ್ಗೆ 1999ರ ಮಾಂಟ್ರಿಯಲ್ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಭಾರತವೂ ಆ ಸಭೆಯ ಭಾಗಿದಾರ ದೇಶವಾಗಿದೆ.
ಮಾಂಟ್ರಿಯಲ್ ಕನ್ವೆನ್ಷನ್ ರೂಪಿಸಿದ ನಿಯಮಾವಳಿ ಪ್ರಕಾರ, ವಿಮಾನ ಅಪಘಾತವಾದಾಗ ಪ್ರತಿಯೊಬ್ಬರಿಗೂ 1,28,821 ಎಸ್ಡಿಆರ್ಗಳನ್ನು ಪರಿಹಾರವಾಗಿ ನೀಡಬೇಕು. ಅಪಘಾತದಲ್ಲಿ ಏರ್ಲೈನ್ಸ್ ಕಂಪನಿಯ ತಪ್ಪು ಇಲ್ಲದೇ ಇದ್ದರೂ ಈ ಪರಿಹಾರ ನೀಡುವುದು ಕಡ್ಡಾಯ. ಒಂದು ವೇಳೆ, ಏರ್ಲೈನ್ಸ್ ಕಂಪನಿಯ ದೋಷ ಕಂಡು ಬಂದಲ್ಲಿ ಪರಿಹಾರ ಇನ್ನೂ ಹೆಚ್ಚು ಇರುತ್ತದೆ. ಅದನ್ನು ಅಂತಾರಾಷ್ಟ್ರೀಯ ಕೋರ್ಟ್ಗಳು ನಿರ್ಧರಿಸುತ್ತವೆ.
ಇದನ್ನೂ ಓದಿ: ಅಹಮದಾಬಾದ್ ವಿಮಾನ ಪತನ: ಕೊನೆಯ ಕ್ಷಣದಲ್ಲಿ ಕೈಕೊಟ್ಟ ನೊಗ ಪಂಪರ್, ಲಿಫ್ಟ್ ಗೇರ್
ಎಸ್ಡಿಆರ್ ಎಂದರೆ ಸ್ಪೆಷಲ್ ಡ್ರಾಯಿಂಗ್ ರೈಟ್ಸ್. ಇದು ಐಎಂಎಫ್ನ ರಿಸರ್ವ್ ಕರೆನ್ಸಿ. ಡಾಲರ್, ಯೂರೋ, ಪೌಂಡ್, ಯೆನ್ ಇತ್ಯಾದಿ ಕೆಲ ಅಂತಾರಾಷ್ಟ್ರೀಯ ಕರೆನ್ಸಿಗಳ ಮೌಲ್ಯದ ಆಧಾರದ ಮೇಲೆ ಎಸ್ಡಿಆರ್ ಮೌಲ್ಯ ಇರುತ್ತದೆ.
ಸದ್ಯ ಒಂದು ಎಸ್ಡಿಆರ್ ಸುಮಾರು 110.20 ರೂ ಮೌಲ್ಯ ಹೊಂದಿದೆ. ಮೃತಪಟ್ಟ ಪ್ರತೀ ಪ್ರಯಾಣಿಕರ ಕುಟುಂಬಕ್ಕೆ ಏರ್ಲೈನ್ಸ್ ಕಂಪನಿಯು ಕನಿಷ್ಠ 1,28,821 ಎಸ್ಡಿಆರ್ಗಳನ್ನು ಪರಿಹಾರ ಕೊಡಬೇಕಾಗುತ್ತದೆ. ಇದು 1.42 ಕೋಟಿ ರೂ ಆಗುತ್ತದೆ. ಏರ್ ಇಂಡಿಯಾ ಕಂಪನಿಯು ಒಂದು ಕೋಟಿ ರೂ ಪರಿಹಾರ ಘೋಷಿಸಿರುವುದು ಈ ಹಣದ ಒಂದು ಭಾಗವಾಗಿ.
ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ಕಂಪನಿ ತನ್ನ ಎಲ್ಲಾ ವಿಮಾನಗಳಿಗೂ ಒಟ್ಟಿಗೆ ಇನ್ಷೂರೆನ್ಸ್ ಮಾಡಿಸಿದೆ. 20 ಬಿಲಿಯನ್ ಡಾಲರ್ ಮೊತ್ತದ ಇನ್ಷೂರೆನ್ಸ್ ಸ್ಕೀಮ್ ಇದು. 20 ಬಿಲಿಯನ್ ಡಾಲರ್ ಎಂದರೆ ಬರೋಬ್ಬರಿ 1.72 ಲಕ್ಷ ಕೋಟಿ ರೂ ಆಗುತ್ತದೆ.
ಇದನ್ನೂ ಓದಿ: ಬ್ಲ್ಯಾಕ್ ಬಾಕ್ಸ್ ಸಿಕ್ಕರೆ ವಿಮಾನ ಪತನದ ರಹಸ್ಯ ಪತ್ತೆ ಸಾಧ್ಯ; ಏನಿದು ಕಪ್ಪುಪೆಟ್ಟಿಗೆ?
ಈ ಗ್ಲೋಬಲ್ ಏವಿಯೇಶನ್ ಇನ್ಷೂರೆನ್ಸ್ ಯೋಜನೆಯಲ್ಲಿ ಎರಡು ಭಾಗ ಇರುತ್ತದೆ. ವಿಮಾನಕ್ಕೆ ಹಾನಿಯಾದರೆ ಕೊಡಬೇಕಾದ ಪರಿಹಾರ; ಹಾಗು ಎರಡನೆಯದು, ಪ್ರಯಾಣಿಕರಿಗೆ ಕೊಡಬೇಕಾದ ಪರಿಹಾರ.
ವಿಮಾನ ಎಷ್ಟು ಹಳೆಯದು, ಯಾವ ಸ್ಥಿತಿಯಲ್ಲಿತ್ತು ಎಂಬಿತ್ಯಾದಿ ಅಂಶಗಳ ಆಧಾರದ ಮೇಲೆ ಈಗಿನ ಮೌಲ್ಯಕ್ಕೆ ಅನುಗುಣವಾಗಿ ಪರಿಹಾರ ಕೊಡಲಾಗುತ್ತದೆ. ಅಪಘಾತವಾದ ವಿಮಾನವು ಬೋಯಿಂಗ್ 787-8 ಡ್ರೀಮ್ಲೈನರ್ ಆಗಿದೆ. ಹೊಸ ವಿಮಾನದ ಮೌಲ್ಯ 211ರಿಂದ 280 ಮಿಲಿಯನ್ ಡಾಲರ್ ಇದೆ. ಅಪಘಾತವಾದ ವಿಮಾನವು 2013ರ ಮಾಡಲ್. 2021ರಲ್ಲಿ ಇದಕ್ಕೆ 115 ಮಿಲಿಯನ್ ಡಾಲರ್ಗೆ ಇನ್ಷೂರೆನ್ಸ್ ಮಾಡಿಸಲಾಗಿತ್ತೆನ್ನಲಾಗಿದೆ. ಏರ್ ಇಂಡಿಯಾಗೆ ಇಷ್ಟು ಮೊತ್ತದ ಪರಿಹಾರವಂತೂ ಸಿಗುತ್ತದೆ.
ಪ್ರತಿಯೊಬ್ಬ ಪ್ರಯಾಣಿಕರಿಗೂ ಇನ್ಷೂರೆನ್ಸ್ ಕವರೇಜ್ ಇರುತ್ತದೆ. ಆದರೆ, ಎಲ್ಲರಿಗೂ ಒಂದೇ ರೀತಿಯ ಪರಿಹಾರ ಸಿಗುವುದಿಲ್ಲ. ಮೃತ ವ್ಯಕ್ತಿಯ ಗಳಿಸುತ್ತಿದ್ದ ಆದಾಯ, ಕುಟುಂಬಕ್ಕೆ ಆತನ ಆಧಾರ ಎಷ್ಟು ಇತ್ಯಾದಿ ಅಂಶಗಳ ಮೇಲೆ ಪರಿಹಾರ ನೀಡಲಾಗುತ್ತದೆ. ಅದಕ್ಕೆ ಪೂರಕವಾದ ದಾಖಲೆಗಳನ್ನು ಕುಟುಂಬದವರು ನೀಡಿ ಪರಿಹಾರ ಪಡೆಯಬೇಕಾಗುತ್ತದೆ.
ಇದನ್ನೂ ಓದಿ: ಒಂದು ವಾರದ ಹಿಂದೆಯೇ ವಿಮಾನ ಅಪಘಾತದ ಭವಿಷ್ಯ ನುಡಿದಿದ್ದ ಜ್ಯೋತಿಷಿ!
ಒಂದು ಏರ್ಲೈನ್ಸ್ ಕಂಪನಿಯು ಒಂದು ವಿಮಾ ಕಂಪನಿಯಿಂದ ಇನ್ಷೂರೆನ್ಸ್ ಮಾಡುತ್ತವೆ. ಆ ಇನ್ಷೂರೆನ್ಸ್ ಕಂಪನಿಯು ಜಾಗತಿಕವಾಗಿ ವಿವಿಧ ವಿಮಾ ಸಂಸ್ಥೆಗಳಿಗೆ ಇದನ್ನು ಮರುಹಂಚಿಕೆ ಮಾಡುತ್ತದೆ. ಇದಕ್ಕೆ ರೀಇನ್ಷೂರೆನ್ಸ್ ಎನ್ನುಲಾಗುತ್ತದೆ. ಅಂದರೆ, ವಿಮಾ ಕಂಪನಿಗಳಿಗೆ ವಿಮಾ ಕವರೇಜ್ ಮಾಡಿಸಿದಂತೆ.
ಏರ್ ಇಂಡಿಯಾ ಕಂಪನಿಯು ತನ್ನೆಲ್ಲಾ ವಿಮಾನಗಳಿಗೆ ನ್ಯೂ ಇಂಡಿಯಾ ಅಶೂರೆನ್ಸ್ ಕಂಪನಿಯಿಂದ ಇನ್ಷೂರೆನ್ಸ್ ಸರ್ವಿಸ್ ಪಡೆದಿದೆ. ಆ ವಿಮಾ ಕಂಪನಿಯು ಬೇರೆ ಬೇರೆ ಅಂತಾರಾಷ್ಟ್ರೀಯ ವಿಮಾ ಕಂಪನಿಗಳೊಂದಿಗೆ ರೀಇನ್ಷೂರೆನ್ಸ್ ಮಾಡಿಸಿದೆ. ಸ್ವಿಸ್ ರೀ, ಮ್ಯುನಿಕ್ ರೀ, ಜಿಐಸಿ ರೀ, ಸ್ಕಾರ್, ಹ್ಯಾನೋವರ್ ರೀ, ಲಾಯ್ಡ್ಸ್ ಆಫ್ ಲಂಡನ್ ಸಿಂಡಿಕೇಟ್ಸ್ ಇತ್ಯಾದಿ ಕಂಪನಿಗಳು ರೀಇನ್ಷೂರೆನ್ಸ್ ಬಳಗದಲ್ಲಿವೆ.
ಏರ್ ಇಂಡಿಯಾ ವಿಚಾರದಲ್ಲಿ ನ್ಯೂ ಇಂಡಿಯಾ ಅಷೂರೆನ್ಸ್ ಕಂಪನಿಗೆ ಆಗುವ ಹೊರೆ ಶೇ. 10ರಷ್ಟಿರಬಹುದು. ಉಳಿದ ಪರಿಹಾರದ ಹೊರೆಯನ್ನು ರೀಇನ್ಷೂರೆನ್ಸ್ ಕಂಪಗಳಿಗೆ ವರ್ಗವಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:03 pm, Fri, 13 June 25