Black Box: ಬ್ಲ್ಯಾಕ್ ಬಾಕ್ಸ್ ಸಿಕ್ಕರೆ ವಿಮಾನ ಪತನದ ರಹಸ್ಯ ಪತ್ತೆ ಸಾಧ್ಯ; ಏನಿದು ಕಪ್ಪುಪೆಟ್ಟಿಗೆ?
What is black box, what it do?: ಏರ್ಇಂಡಿಯಾದ ವಿಮಾನವೊಂದು ಅಹ್ಮದಾಬಾದ್ ಏರ್ಪೋರ್ಟ್ ಬಳಿ ಅಪಘಾತಗೊಂಡಿದೆ. ಇದರಲ್ಲಿ 242 ಮಂದಿ ಪ್ರಯಾಣಿಸುತ್ತಿದ್ದರು. ವಿಮಾನ ಯಾಕಾಗಿ ಅಪಘಾತಗೊಂಡಿತು ಎನ್ನುವ ಕಾರಣ ಗೊತ್ತಾಗಿಲ್ಲ. ಬ್ಲ್ಯಾಕ್ ಬಾಕ್ಸ್ ಸಿಕ್ಕರೆ ಒಂದಷ್ಟು ಸುಳಿವು ಸಿಗುತ್ತದೆ. ಈ ಬ್ಲ್ಯಾಕ್ ಬಾಕ್ಸ್ ಎಂದರೇನು? ಏನಿರುತ್ತೆ ಅದರಲ್ಲಿ? ಏನು ಕೆಲಸ ಮಾಡುತ್ತೆ? ಇಲ್ಲಿದೆ ಡೀಟೇಲ್ಸ್.

ಅಹ್ಮದಾಬಾದ್ನಿಂದ ಲಂಡನ್ಗೆ 242 ಮಂದಿಯನ್ನು ಹೊತ್ತು ಹೊರಟಿದ್ದ ಏರ್ಇಂಡಿಯಾದ ಬೋಯಿಂಗ್ ಡ್ರೀಮ್ಲೈನರ್ ವಿಮಾನ (Air India flight crash) ಏರ್ಪೋರ್ಟ್ ಬಿಟ್ಟ ಸ್ವಲ್ಪ ಹೊತ್ತಿಗೇ ನೆಲಕ್ಕಪ್ಪಳಿಸಿದೆ. ವಿಮಾನದಲ್ಲಿರುವ ಎಲ್ಲರೂ ಮೃತಪಟ್ಟಿರುವ ಶಂಕೆ ಇದೆ. ಬೋಯಿಂಗ್ 787-8 ಡ್ರೀಮ್ಲೈನರ್ ವಿಆನ ಇದಾಗಿದ್ದು, ಮಧ್ಯಾಹ್ನ 1:39ಕ್ಕೆ ಅಹ್ಮಾದಾಬಾದ್ ಏರ್ಪೋರ್ಟ್ನ ರನ್ವೇ 23ದಿಂದ ಟೇಕ್ ಆಫ್ ಆಗಿತ್ತು. ನಂತರ ಏರ್ ಟ್ರಾಫಿಕ್ ಕಂಟ್ರೋಲ್ನ ಕರೆಗಳಿಗೆ ವಿಮಾನ ಸ್ಪಂದಿಸಲಿಲ್ಲ. ಸ್ವಲ್ಪ ಹೊತ್ತಿಗೆ ಏರ್ಪೋರ್ಟ್ನಿಂದ ಅಣತಿ ದೂರದಲ್ಲಿ ಮೇಘಾನಿ ನಗರ್ ಪ್ರದೇಶದಲ್ಲಿ ವಿಮಾನ ಅಪಘಾತಗೊಂಡಿದೆ.
ಕ್ಯಾಪ್ಟನ್ ಸುಮೀತ್ ಸಭರವಾಲ್ ಅವರು ವಿಮಾನದ ಕಮ್ಯಾಂಡಿಂಗ್ನಲ್ಲಿದ್ದರು. ಕ್ಲೈವ್ ಕುಂದರ್ ಎಂಬುವವರು ಫಸ್ಟ್ ಆಫೀಸರ್ ಆಗಿದ್ದರು. ಇಬ್ಬರು ಪೈಲಟ್ ಹಾಗೂ 10 ಮಂದಿ ಸಿಬ್ಬಂದಿ ಸೇರಿ ಒಟ್ಟು 242 ಮಂದಿ ಈ ವಿಮಾನದಲ್ಲಿ ಇದ್ದರು. ಈ ಅಪಘಾತಕ್ಕೆ ನಿರ್ದಿಷ್ಟ ಕಾರಣ ಗೊತ್ತಾಗಿಲ್ಲ. ಎಲ್ಲರ ಕಣ್ಣು ಈಗ ವಿಮಾನದ ಬ್ಲ್ಯಾಕ್ ಬಾಕ್ಸ್ನತ್ತ ನೆಟ್ಟಿದೆ. ಈ ಕಪ್ಪು ಪೆಟ್ಟಿಗೆಯು ವಿಮಾನ ಅಪಘಾತಕ್ಕೆ ಏನು ಕಾರಣ ಎನ್ನುವ ಸುಳಿವನ್ನು ನೀಡುವ ಸಾಧ್ಯತೆ ಇದೆ.
ಏನಿದು ಬ್ಲ್ಯಾಕ್ ಬಾಕ್ಸ್?
ವಿಮಾನದ ಬ್ಲ್ಯಾಕ್ ಬಾಕ್ಸ್ ಎಂದರೆ ಅದೇನೂ ಕಪ್ಪು ಬಣ್ಣದ ಪೆಟ್ಟಿಗೆಯಲ್ಲ. ಫ್ಲೈಟ್ ರೆಕಾರ್ಡರ್ ಎಂದು ಕರೆಯುವ ಈ ಸಾಧನವು ದಟ್ಟ ಕಿತ್ತಳೆ ಅಥವಾ ಕೆಂಪು ಬಣ್ಣದ್ದಾಗಿರುತ್ತದೆ. ಇದರಲ್ಲಿ ಎರಡು ಕಾಂಪೊನೆಂಟ್ ಇರುತ್ತವೆ. ಒಂದು, ಫ್ಲೈಟ್ ಡಾಟಾ ರೆಕಾರ್ಡ್. ಮತ್ತೊಂದು, ಕಾಕ್ಪಿಟ್ ವಾಯ್ಸ್ ರೆಕಾರ್ಡರ್. ಇವೆರಡೂ ಕೂಡ ವಿಮಾನದ ವಿವಿಧ ದತ್ತಾಂಶ ಮತ್ತು ಒಳಗಿನ ಧ್ವನಿಯನ್ನು ದಾಖಲಿಸುತ್ತದೆ.
ಇದನ್ನೂ ಓದಿ: ಅಹಮದಾಬಾದ್ನಲ್ಲಿ 242 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ಪತನ
ಈ ಬ್ಲ್ಯಾಕ್ ಬಾಕ್ಸ್ ಅತಿಬಿಸಿಗೆ ಕರಗುವುದಿಲ್ಲ. ವಿಮಾನ ಸಂಪೂರ್ಣ ನಾಶವಾದರೂ ಬ್ಲ್ಯಾಕ್ ಬಾಕ್ಸ್ಗೆ ಏನೂ ಆಗಿರುವುದಿಲ್ಲ. ವಿಮಾನದ ಅವಶೇಷಗಳ ನಡುವೆ ಇದನ್ನು ಗುರುತಿಸಲು ಸಾಧ್ಯವಾಗುವಂತೆ ಇದಕ್ಕೆ ವಿಶೇಷ ಬಣ್ಣ ಬಳಿಯಲಾಗಿರುತ್ತದೆ. ಒಂದು ವೇಳೆ ನೀರಿನಲ್ಲಿ ಬಿದ್ದರೂ ಅದನ್ನು ಪತ್ತೆ ಮಾಡಲು ಅಂಡರ್ವಾಟರ್ ಲೊಕೇಟರ್ ಇರುತ್ತದೆ.
ವಿಮಾನದ ಏನೇನು ದತ್ತಾಂಶ ದಾಖಲಿಸುತ್ತದೆ ಈ ಬ್ಲ್ಯಾಕ್ ಬಾಕ್ಸ್?
ವಿಮಾನದ ಕಾಕ್ಪಿಟ್ನಲ್ಲಿರುವ ಇರುವ ಬ್ಲ್ಯಾಕ್ ಬಾಕ್ಸ್ನ ಕಾಕ್ಪಿಟ್ ರೆಕಾರ್ಡರ್, ತನ್ನ ಹೆಸರೇ ಸೂಚಿಸುವಂತೆ ಕಾಕ್ಪಿಟ್ನಲ್ಲಿ ಪೈಲಟ್ ಹಾಗೂ ಇತರರು ನಡೆಸುವ ಸಂಭಾಷಣೆಗಳನ್ನು ದಾಖಲಿಸುತ್ತದೆ. ಹಾಗೆಯೇ, ಏರ್ ಟ್ರಾಫಿಕ್ ಕಂಟ್ರೋಲರ್ನಿಂದ ಬರುವ ಆದೇಶಗಳನ್ನು ದಾಖಲಿಸುತ್ತದೆ.
ಈ ಬಾಕ್ಸ್ನಲ್ಲಿ ಫ್ಲೈಟ್ ಡಾಟಾ ರೆಕಾರ್ಡರ್, ವಿಮಾನ ಎಷ್ಟು ಎತ್ತರದಲ್ಲಿ ಹಾರುತ್ತಿದೆ, ಎಷ್ಟು ವೇಗದಲ್ಲಿದೆ, ಯಾವ ದಿಕ್ಕಿನಲ್ಲಿದೆ ಇತ್ಯಾದಿ ಮಹತ್ವದ ಮಾಹಿತಿಯನ್ನು ದಾಖಲಿಸುತ್ತಿರುತ್ತದೆ.
ಇದನ್ನೂ ಓದಿ: ಅಪಘಾತಕ್ಕೀಡಾದ ಬೋಯಿಂಗ್ 787-8 ಡ್ರೀಮ್ಲೈನರ್ ಅಸಾಮಾನ್ಯ ಸಾಮರ್ಥ್ಯವಿರುವ ವಿಮಾನ; ಆದರೂ ಹೀಗಾಗಿದ್ದು ಆಶ್ಚರ್ಯ !
ಬ್ಲ್ಯಾಕ್ ಬಾಕ್ಸ್ಗೆ ಆ ಹೆಸರು ಬರಲು ಏನು ಕಾರಣ?
ಬ್ಲ್ಯಾಕ್ ಬಾಕ್ಸ್ ಸುಮಾರು 80 ವರ್ಷದ ಹಿಂದಿನಿಂದಲೇ ಬಳಕೆಗೆ ಬಂದಿದೆ. ಆಗ ಟೇಪ್ ರೆಕಾರ್ಡರ್ಗಳಿದ್ದುವು. ಅವುಗಳು ಹಾಳಾಗಬಾರದೆಂದು ಆಗ ಪ್ರತಿಫಲನ ಮಾಡದ ಕಪ್ಪು ಪೆಟ್ಟಿಗೆಗಳಲ್ಲಿ ಇಡಲಾಗುತ್ತಿತ್ತು. ಬಿಸಿಯಿಂದ ಈ ಭಾಗಗಳು ಹಾಳಾಗಬಾರದು ಎಂಬುದು ಒಂದು ಕಾರಣವಾದರೆ, ಆಗ ವಿಶ್ವ ಮಹಾಯುದ್ಧದ ಕಾಲವಾದ್ದರಿಂದ ಇವು ರಹಸ್ಯ ಕಾರ್ಯಾಚರಣೆಯ ಭಾಗವಾಗಿದ್ದುವು. ಹೀಗಾಗಿ, ಕಪ್ಪು ಬಣ್ಣದ ಪೆಟ್ಟಿಗೆ ಇತ್ತು. ನಂತರ, ಪೆಟ್ಟಿಗೆಗೆ ಕಿತ್ತಳೆ ಬಣ್ಣ ಹಚ್ಚಲಾಗುತ್ತಿದೆಯಾದರೂ ಹೆಸರು ಮಾತ್ರ ಬ್ಲ್ಯಾಕ್ ಬಾಕ್ಸ್ ಎಂದೇ ಉಳಿದುಕೊಂಡಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




