ತಂತ್ರಜ್ಞಾನ ದೈತ್ಯ ಗೂಗಲ್ (Google) ಕಂಪನಿಯು 12,000 ಮಂದಿ ಉದ್ಯೋಗಿಗಳನ್ನು ಇತ್ತೀಚೆಗೆ ವಜಾಗೊಳಿಸಿದ್ದು (Layoff) ಭಾರೀ ಸುದ್ದಿಯಾಗಿತ್ತು. ಹಲವಾರು ಉದ್ಯೋಗಿಗಳು ಉದ್ಯೋಗ ಕಡಿತದಿಂದ ತೊಂದರೆಗೊಳಗಾಗಿರುವ ಬಗ್ಗೆ ನಿರಂತರ ವರದಿಗಳಾಗುತ್ತಲೇ ಇದೆ. ತಾಯಿ ನಿಧನರಾದರೆಂದು ರಜೆ ಹಾಕಿ ಹೋಗಿದ್ದ ವ್ಯಕ್ತಿ ವಾಪಸ್ ಬರುವಾಗ ಕೆಲಸ ಇಲ್ಲ ಎಂಬುದು ಗೊತ್ತಾದದ್ದು, ಕಂಪನಿಗೆ ಉದ್ಯೋಗಿಯ ನೇಮಕಾತಿಗಾಗಿ ಅಭ್ಯರ್ಥಿಯ ಸಂದರ್ಶನ ನಡೆಸುತ್ತಿದ್ದಾಗಲೇ ನೌಕರರೊಬ್ಬರು ಕೆಲಸ ಕಳೆದುಕೊಂಡಿದ್ದು ಇತ್ತೀಚೆಗೆ ಸುದ್ದಿಯಾಗಿತ್ತು. ಇದೀಗ ಅಂಥದ್ದೇ ಮತ್ತೊಂದು ವಿದ್ಯಮಾನ ‘ಲಿಂಕ್ಡ್ಇನ್’ ಸಂದೇಶದಿಂದ ಬೆಳಕಿಗೆ ಬಂದಿದೆ. ಮಾನಸಿಕ ಅನಾರೋಗ್ಯದ ಕಾರಣ ರಜೆಯಲ್ಲಿದ್ದ ಉದ್ಯೋಗಿ ಅಲಿ ನೀಲ್ ಎಂಬವರನ್ನು ಗೂಗಲ್ ವಜಾಗೊಳಿಸಿದ್ದು, ತಮ್ಮ ವೇದನೆಯ ಕಥೆಯನ್ನು ಅವರು ‘ಲಿಂಕ್ಡ್ಇನ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಉದ್ಯೋಗದಿಂದ ವಜಾಗೊಳಿಸಿದ ಸುದ್ದಿ ತಿಳಿದುಬಂದಾಗ ರಜೆಯಲ್ಲಿದ್ದ ಕಾರಣ ಅದ್ಹೇಗೋ ಅದನ್ನು ಎದುರಿಸಲು ಸಾಧ್ಯವಾಯಿತು. ಆದರೆ, ಅದನ್ನು ಪೂರ್ಣವಾಗಿ ಒಪ್ಪಿಕೊಳ್ಳಲು ಕೆಲವು ದಿನಗಳೇ ಬೇಕಾದವು ಎಂದು ಅಲಿ ನೀಲ್ ಹೇಳಿದ್ದಾರೆ. ಕಳೆದ ಶುಕ್ರವಾರ ಬೆಳಗ್ಗೆ ನಾನು ನಿದ್ದೆ ಮಾಡಲು ಸಾಧ್ಯವಾಗದೆ ಹಂಚಿಕೊಂಡ ಸಂದೇಶದ ನಂತರ ಎಲ್ಲವರೂ ಸರಿಯಾಗಬೇಕಿದ್ದರೆ ನನಗೆ ಕೆಲವು ಸಮಯ ಬೇಕಾಯಿತು. ಆ ಇ-ಮೇಲ್ ಅನ್ನು ಓದಲು ತಡರಾತ್ರಿ 2:06ರ ವರೆಗೂ ಎಚ್ಚರದಿಂದ ಇರುವುದು ಅಷ್ಟು ಸುಲಭವಾಗಿರಲಿಲ್ಲ ಎಂದು ಗೂಗಲ್ ಉದ್ಯೋಗ ಕಡಿತಕ್ಕೆ ಸಂಬಂಧಿಸಿ ಈ ಹಿಂದೆ ಮಾಡಿದ್ದ ಪೋಸ್ಟ್ ಅನ್ನು ಉಲ್ಲೇಖಿಸಿ ಅಲಿ ನೀಲ್ ಬರೆದುಕೊಂಡಿದ್ದಾರೆ.
ಗೂಗಲ್ ನಂತರ ಮುಂದೇನು ಎಂಬ ಬಗ್ಗೆ ನಿಜವಾಗಿಯೂ ಯೋಚಿಸಿಲ್ಲ. ಆದರೆ ವಾಸ್ತವವು ಅಂದುಕೊಂಡದ್ದಕ್ಕಿಂತ ಸರಳವಾಗಿರಲಿದೆ ಎಂದು ಅವರು ಆಶಾವಾದ ವ್ಯಕ್ತಪಡಿಸಿದ್ದಾರೆ.
‘ನನ್ನ ಮೊದಲ ಉದ್ಯೋಗವನ್ನು 14ನೇ ವಯಸ್ಸಿನಲ್ಲಿ ಆರಂಭಿಸಿದ್ದೆ. ಆದರೆ ಆ ಉದ್ಯೋಗಕ್ಕೆ ವೇತನ ಇರಲಿಲ್ಲ. 16 ವರ್ಷ ವಯಸ್ಸಾದ ಮೇಲೆ ವೇತನ ದೊರೆಯಲು ಆರಂಭವಾಯಿತು. ಹೀಗಾಗಿ ನಾನೀಗ ಮತ್ತಷ್ಟು ಚಿಕ್ಕವಳಾಗಿದ್ದೇನೆ! ನಾನು ಹೊಂದಿದ್ದ ಉದ್ಯೋಗಗಳೆಲ್ಲವನ್ನೂ ನಾನು ಪ್ರೀತಿಸಿದ್ದೆ’ ಎಂದು ಅವರು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: Google Layoffs: ಇದು ನೋಡಿ ದುರದೃಷ್ಟ; ಬೇರೊಬ್ಬರಿಗೆ ಕೆಲಸ ಕೊಡಿಸಲು ಸಂದರ್ಶನ ಮಾಡುತ್ತಿದ್ದಾಗಲೇ ಬಂತು ವಜಾ ಸಂದೇಶ
ತಮ್ಮ ಮುಂದಿರುವ ಅನಿಶ್ಚಿತತೆಯ ಬಗ್ಗೆ ಉಲ್ಲೇಖಿಸಿರುವ ಅವರು, ಗೂಗಲ್ ನಂತರ ಮುಂದೇನು ಎಂಬುದನ್ನು ಯೋಚಿಸಬೇಕಾಗಿದೆ. ಆದಾಗ್ಯೂ, ಕಂಪನಿ ಎಂಬುದು ಒಂದು ಘಟಕವಷ್ಟೇ ವಿನಃ ಗುರುತಿನ ಭಾಗವಲ್ಲ. ಜೀವನದಲ್ಲಿ ತಿಳಿಯಬೇಕಾದ ವಿಚಾರಗಳು ಇನ್ನಷ್ಟಿವೆ. ನಾನು ಇಂದು ಯಾವ ಹಂತದಲ್ಲಿದ್ದೇನೆ ಮತ್ತು ಮುಂದೆ ಏನಾಗಲಿದ್ದೇನೆ ಎಂಬುದರ ಬಗ್ಗೆ ಹೆಮ್ಮೆಯಿದೆ’ ಎಂದು ಅವರು ಬರೆದುಕೊಂಡಿದ್ದಾರೆ.
ತಾಯಿ ನಿಧನರಾಗಿದ್ದಾರೆಂದು 10 ದಿನಗಳ ಕಾಲ ರಜೆಯಲ್ಲಿ ತೆರಳಿದ್ದ ಉದ್ಯೋಗಿಯೊಬ್ಬರು ಇತ್ತೀಚೆಗೆ ಕರ್ತವ್ಯಕ್ಕೆ ಮರಳಿದಾಗ ಗೂಗಲ್ ಅವರನ್ನು ವಜಾಗೊಳಿಸಿರುವ ಬಗ್ಗೆ ಇತ್ತೀಚೆಗೆ ವರದಿಯಾಗಿತ್ತು. ಅದೇ ರೀತಿ ಗೂಗಲ್ನ ನೇಮಕಾತಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿ ಡಾನ್ ಲಾನಿಗನ್ ಯಾನ್ ಎಂಬವರು ಅಭ್ಯರ್ಥಿಯೊಬ್ಬರ ಸಂದರ್ಶನ ನಡೆಸುತ್ತಿದ್ದಾಗಲೇ, ‘ನಿಮ್ಮನ್ನು ಕೆಲಸದಿಂದ ವಜಾಗೊಳಿಸಲಾಗಿದೆ’ ಎಂಬ ಇ-ಮೇಲ್ ಸಂದೇಶ ಬಂದ ಬಗ್ಗೆ ಇತ್ತೀಚೆಗೆ ವರದಿಯಾಗಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ