HP Layoffs: ಸಂಕಷ್ಟದಲ್ಲಿ ಎಚ್​ಪಿ ಉದ್ಯೋಗಿಗಳು; 6000 ಮಂದಿಯ ವಜಾಗೊಳಿಸಲಿದೆ ಟೆಕ್ ಕಂಪನಿ

| Updated By: Ganapathi Sharma

Updated on: Nov 23, 2022 | 10:38 AM

ಜಾಗತಿಕವಾಗಿ ಮುಂದಿನ ಮೂರು ವರ್ಷಗಳಲ್ಲಿ 4,000ದಿಂದ 6,000 ಉದ್ಯೋಗಿಗಳನ್ನು ವಜಾಗೊಳಿಸಲಾಗುವುದು ಎಂದು ಎಚ್​ಪಿ ಹೇಳಿದೆ. ತ್ರೈಮಾಸಿಕ ಫಲಿತಾಂಶ ನೀರಸವಾಗಿ ಕಂಡುಬಂದ ಬೆನ್ನಲ್ಲೇ ಎಚ್​ಪಿ ಈ ನಿರ್ಧಾರ ಪ್ರಕಟಿಸಿದೆ.

HP Layoffs: ಸಂಕಷ್ಟದಲ್ಲಿ ಎಚ್​ಪಿ ಉದ್ಯೋಗಿಗಳು; 6000 ಮಂದಿಯ ವಜಾಗೊಳಿಸಲಿದೆ ಟೆಕ್ ಕಂಪನಿ
ಎಚ್​ಪಿ
Image Credit source: Reuters
Follow us on

ನವದೆಹಲಿ: ಉದ್ಯೋಗ ಕಡಿತಗೊಳಿಸುತ್ತಿರುವ (Layoffs)ಕಂಪನಿಗಳ ಸಾಲಿಗೆ ಇದೀಗ ಅಮೆರಿಕದ ತಂತ್ರಜ್ಞಾನ ಕಂಪನಿ, ಎಚ್​ಪಿ ಎಂದೇ ಪ್ರಸಿದ್ಧಿಪಡೆದಿರುವ ಹೆವ್ಲೆಟ್ ಪ್ಯಾಕರ್ಡ್ ಎಂಟರ್‌ಪ್ರೈಸ್ (Hewlett Packard Enterprise) ಕೂಡ ಸೇರಿಕೊಂಡಿದೆ. ಮುಂದಿನ ಮೂರು ವರ್ಷಗಳಲ್ಲಿ ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುವುದಾಗಿ ಕಂಪನಿ ತಿಳಿಸಿದೆ. ತ್ರೈಮಾಸಿಕ ಫಲಿತಾಂಶ ನೀರಸವಾಗಿ ಕಂಡುಬಂದ ಬೆನ್ನಲ್ಲೇ ಎಚ್​ಪಿ ಉದ್ಯೋಗ ಕಡಿತದ ನಿರ್ಧಾರ ಪ್ರಕಟಿಸಿದೆ. ಆರ್ಥಿಕ ಅನಿಶ್ಚಿತತೆಯ ಕಾರಣ ಕಂಪನಿ ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ.

ಕಳೆದ ವರ್ಷದ ಇದೇ ತ್ರೈಮಾಸಿಕ ಅವಧಿಗೆ ಹೋಲಿಸಿದರೆ ಈ ವರ್ಷ ಮಾರಾಟದ ಪ್ರಮಾಣದಲ್ಲಿ ಶೇಕಡಾ 11ರಷ್ಟು ಕುಸಿತವಾಗಿದೆ ಎಂದು ಎಚ್​ಪಿ ಹೇಳಿದೆ. ಜಾಗತಿಕವಾಗಿ ಮುಂದಿನ ಮೂರು ವರ್ಷಗಳಲ್ಲಿ 4,000ದಿಂದ 6,000 ಉದ್ಯೋಗಿಗಳನ್ನು ವಜಾಗೊಳಿಸಲಾಗುವುದು ಎಂದು ಕಂಪನಿ ಮಾಹಿತಿ ನೀಡಿದೆ. 2025ನೇ ಹಣಕಾಸು ವರ್ಷದ ವೇಳೆಗೆ ವಜಾ ಪ್ರಕ್ರಿಯೆ ಮುಕ್ತಾಯಗೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ. ಎಚ್​ಪಿ ವಿಶ್ವದಾದ್ಯಂತ ಸುಮಾರು 51,000 ಉದ್ಯೋಗಿಗಳನ್ನು ಹೊಂದಿದೆ ಎಂದು ಈ ಹಿಂದೆ ವರದಿಯಾಗಿತ್ತು.

ಇದನ್ನೂ ಓದಿ: Google Layoffs: ಗೂಗಲ್ ಮಾತೃಸಂಸ್ಥೆ ಅಲ್ಫಾಬೆಟ್​ನಿಂದ 10,000 ಉದ್ಯೋಗಿಗಳ ವಜಾಕ್ಕೆ ಸಿದ್ಧತೆ; ವರದಿ

ಇದನ್ನೂ ಓದಿ
Google Layoffs: ಗೂಗಲ್ ಮಾತೃಸಂಸ್ಥೆ ಅಲ್ಫಾಬೆಟ್​ನಿಂದ 10,000 ಉದ್ಯೋಗಿಗಳ ವಜಾಕ್ಕೆ ಸಿದ್ಧತೆ; ವರದಿ
ಡೆಬಿಟ್ ಕಾರ್ಡ್ ಇಲ್ಲದೆಯೂ ಫೋನ್​ ಪೇ ಆ್ಯಕ್ಟಿವೇಟ್ ಮಾಡಬಹುದು; ಹೇಗೆಂಬ ವಿವರ ಇಲ್ಲಿದೆ
ಇನ್ನೂ ಆಧಾರ್, ಪ್ಯಾನ್ ಲಿಂಕ್ ಮಾಡಿಲ್ಲವೇ? ಬೇಗ ಮಾಡಿ; ಇಲ್ಲವಾದರೆ ನಿಷ್ಕ್ರಿಯವಾಗಲಿದೆ ಪ್ಯಾನ್ ಕಾರ್ಡ್
Digital Wallets: ಡಿಜಿಟಲ್ ವಾಲೆಟ್​ನಲ್ಲಿ ಹೆಚ್ಚು ಹಣ ಇಡುವುದು ಉತ್ತಮಲ್ಲ; ತಜ್ಞರು ಹೀಗೆನ್ನಲು ಕಾರಣವಿದೆ

ಎಚ್​ಪಿ ಸಿಇಒ ಹೇಳಿದ್ದೇನು?

ಭವಿಷ್ಯಕ್ಕೆ ಸಿದ್ಧತೆ ಮಾಡಿಕೊಳ್ಳಬೇಕಿದೆ. ಅದಕ್ಕೆ ತಕ್ಕಂತೆ ಕಾರ್ಯತಂತ್ರ ರೂಪಿಸಬೇಕಾದ ಅನಿವಾರ್ಯತೆ ನಮ್ಮ ಮುಂದಿದೆ. ದೀರ್ಘಾವಧಿಗೆ ಕಂಪನಿಯ ಮೌಲ್ಯ ಉಳಿಸಿಕೊಂಡು ಗ್ರಾಹಕರಿಗೆ ಉತ್ತಮ ಸೇವೆ ನೀಡುವದಕ್ಕಾಗಿ ವೆಚ್ಚದಲ್ಲಿ ಕಡಿತ ಮಾಡಬೇಕಿದೆ. ಜತೆಗೆ ನಮ್ಮ ಉದ್ಯಮದ ಆರ್ಥಿಕ ಬೆಳವಣಿಗೆಗೆ ಪೂರಕವಾದ ಕ್ಷೇತ್ರಗಳಲ್ಲಿ ಮರು ಹೂಡಿಕೆ ಮಾಡಬೇಕಿದೆ ಎಂದು ಎಚ್​ಪಿ ಅಧ್ಯಕ್ಷ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ಎನ್ರಿಕ್ ಲೋರ್ಸ್ ತಿಳಿಸಿದ್ದಾರೆ.

ಹೆಚ್ಚುತ್ತಿದೆ ಟೆಕ್ ಕಂಪನಿಗಳ ಉದ್ಯೋಗ ಕಡಿತ

ಎಚ್​ಪಿ ಕೂಡ ಉದ್ಯೋಗ ಕಡಿತ ಘೋಷಿಸುವುದರೊಂದಿಗೆ ಜಾಗತಿಕ ಮಟ್ಟದಲ್ಲಿ ಟೆಕ್ ಕಂಪನಿಗಳು ಉದ್ಯೋಗಿಗಳನ್ನು ವಜಾಗೊಳಿಸುವ ಪ್ರಕ್ರಿಯೆ ಮತ್ತಷ್ಟು ಹೆಚ್ಚಾಗಿದೆ. ಗೂಗಲ್​ನ ಮಾತೃಸಂಸ್ಥೆ ಅಲ್ಫಾಬೆಟ್ ಸದ್ಯದಲ್ಲೇ 10,000 ಮಂದಿ ಉದ್ಯೋಗಿಗಳನ್ನು ವಜಾಗೊಳಿಸಲಿದೆ ಎಂದು ಮಂಗಳವಾರವಷ್ಟೇ ವರದಿಯಾಗಿತ್ತು. ಹೆಚ್ಚುತ್ತಿರುವ ಆರ್ಥಿಕ ಹೊರೆಯನ್ನು ನಿಭಾಯಿಸುವುದಕ್ಕಾಗಿ ಕಂಪನಿ ಈ ಕ್ರಮಕ್ಕೆ ಮುಂದಾಗಲಿದೆ. ಕಳಪೆ ಕಾರ್ಯಕ್ಷಮತೆ ಹೊಂದಿರುವ ಉದ್ಯೋಗಿಗಳನ್ನು ಗುರುತಿಸಲು ಗೂಗಲ್​ನ ಮ್ಯಾನೇಜರ್​ಗಳಿಗೆ ಸೂಚಿಸಲಾಗಿದೆ. ಕಂಪನಿಯು ಒಟ್ಟು ಉದ್ಯೋಗಿಗಳ ಶೇಕಡಾ 6ರಷ್ಟು ಮಂದಿಯನ್ನು ವಜಾಗೊಳಿಸಲು ಅಲ್ಫಾಬೆಟ್ ಮುಂದಾಗಿದೆ ಎಂದು ವರದಿ ತಿಳಿಸಿತ್ತು.

ತಂತ್ರಜ್ಞಾನ ಕ್ಷೇತ್ರದ ದೈತ್ಯ ಕಂಪನಿಗಳಾದ ಮೈಕ್ರೋಸಾಫ್ಟ್, ಮೆಟಾ, ಟ್ವಿಟರ್, ಅಮೆಜಾನ್ ಇತ್ತೀಚೆಗೆ ಉದ್ಯೋಗ ಕಡಿತ ಘೋಷಿಸಿದ್ದವು. ಮೆಟಾ ಇತ್ತೀಚೆಗೆ 11,000 ಮಂದಿ ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಮೈಕ್ರೋಸಾಫ್ಟ್​ ಸುಮಾರು 1000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿತ್ತು. ಟ್ವಿಟರ್ 3,500ಕ್ಕೂ ಹೆಚ್ಚು ಮಂದಿ ಸಿಬ್ಬಂದಿಯನ್ನು ಮನೆಗೆ ಕಳುಹಿಸಿತ್ತು. ಅಮೆಜಾನ್ ಸಹ 2023ರ ವರೆಗೂ ಉದ್ಯೋಗ ಕಡಿತ ಮುಂದುವರಿಸುವುದಾಗಿ ಇತ್ತೀಚೆಗೆ ಹೇಳಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ