iPhone Exports: ಏಪ್ರಿಲ್ ಮೇ, ಎರಡು ತಿಂಗಳಲ್ಲಿ ಭಾರತದಿಂದ ಆ್ಯಪಲ್ ಐಫೋನ್ ರಫ್ತು 20,000 ಕೋಟಿ ರೂ

|

Updated on: Jun 19, 2023 | 1:10 PM

Apple iPhone Exports From India Double: 2022ರ ಏಪ್ರಿಲ್ ಮತ್ತು ಮೇ ತಿಂಗಳಿಗೆ ಹೋಲಿಸಿದರೆ ಈ ವರ್ಷದಲ್ಲಿ ಈ ಎರಡು ತಿಂಗಳಲ್ಲಿ ಭಾರತದಿಂದ ರಫ್ತಾದ ಐಫೋನ್​ಗಳ ಪ್ರಮಾಣ ಎರಡು ಪಟ್ಟು ಹೆಚ್ಚಾಗಿದೆ. ಎರಡು ತಿಂಗಳಲ್ಲಿ 20,000 ಕೋಟಿ ರೂ ಮೌಲ್ಯದ ಐಫೋನ್ ರಫ್ತಾಗಿದೆ.

iPhone Exports: ಏಪ್ರಿಲ್ ಮೇ, ಎರಡು ತಿಂಗಳಲ್ಲಿ ಭಾರತದಿಂದ ಆ್ಯಪಲ್ ಐಫೋನ್ ರಫ್ತು 20,000 ಕೋಟಿ ರೂ
ಐಫೋನ್
Follow us on

ನವದೆಹಲಿ: ಐಫೋನ್ ತಯಾರಿಕೆಯಲ್ಲಿ ಚೀನಾ ಸ್ಥಾನ ಆಕ್ರಮಿಸಿಕೊಳ್ಳಲು ಹೊರಟಿರುವ ಭಾರತ ಆ ನಿಟ್ಟಿನಲ್ಲಿ ಒಂದೊಂದೇ ದೃಢ ಹೆಜ್ಜೆ ಇಡುತ್ತಿದೆ. ಕಳೆದ ಎರಡು ತಿಂಗಳಲ್ಲಿ ಭಾರತದಿಂದ ಆದ ಐಫೋನ್ ರಫ್ತು (iPhone exports) ಎರಡು ಪಟ್ಟು ಹೆಚ್ಚಾಗಿದೆ. ಮೇ ತಿಂಗಳಲ್ಲಿ ಭಾರತದಿಂದ 10,000 ಕೋಟಿ ರೂ ಮೌಲ್ಯದ ಐಫೋನ್​ಗಳ ರಫ್ತಾಗಿದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ರಫ್ತಾದ ಐಫೋನ್​ಗಳ ಒಟ್ಟು ಮೌಲ್ಯ 20,000 ಕೋಟಿ ರೂ. ಕಳೆದ ವರ್ಷದ (2022) ಏಪ್ರಿಲ್ ಮತ್ತು ಮೇ ತಿಂಗಳಲ್ಲಿ 9,066 ಕೋಟಿ ರೂ ಮೊತ್ತದ ಐಫೋನ್​ಗಳು ಭಾರತದಿಂದ ರಫ್ತಾಗಿದ್ದವು. ಅದಕ್ಕೆ ಹೋಲಿಸಿದರೆ ಕನಿಷ್ಠ ಎರಡು ಪಟ್ಟಿಗೂ ಹೆಚ್ಚು ಐಫೋನ್​ಗಳು ಈ ವರ್ಷ ಎಕ್ಸ್​ಪೋರ್ಟ್ ಆಗಿವೆ ಎಂದು ಇಂಡಿಯಾ ಸೆಲ್ಯೂಲಾರ್ ಅಂಡ್ ಎಲೆಕ್ಟ್ರಾನಿಕ್ಸ್ ಅಸೋಸಿಯೇಶನ್ ಸಂಸ್ಥೆ ಮಾಹಿತಿ ನೀಡಿರುವುದು ಎಕನಾಮಿಕ್ ಟೈಮ್ಸ್ ಪತ್ರಿಕೆಯ ವರದಿಯಿಂದ ತಿಳಿದುಬಂದಿದೆ.

2022-23ರ ಹಣಕಾಸು ವರ್ಷದಲ್ಲಿ 5 ಬಿಲಿಯನ್ ಡಾಲರ್ (ಸುಮಾರು 41,000 ಕೋಟಿ ರೂ) ಮೊತ್ತದ ಐಫೋನ್​ಗಳು ರಫ್ತಾಗಿದ್ದವು. ಹಿಂದಿನ ವರ್ಷಕ್ಕೆ ಹೋಲಿಸಿದರೆ ರಫ್ತು ಪ್ರಮಾಣ 4 ಪಟ್ಟು ಹೆಚ್ಚಾಗಿದೆ. ಇದು ಈವರೆಗಿನ ದಾಖಲೆಯಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ (2023-24) ಐಫೋನ್ ರಫ್ತು ಈ ದಾಖಲೆಯನ್ನೂ ಮೀರಿ ಹೋಗುವುದು ಖಚಿತ.

ಇದನ್ನೂ ಓದಿDirect Tax Collection: ಜಿಎಸ್​ಟಿ ಮಾತ್ರವಲ್ಲ, ಈ ಹಣಕಾಸು ವರ್ಷದಲ್ಲಿ ನೇರ ತೆರಿಗೆ ಸಂಗ್ರಹದಲ್ಲೂ ಗಮನಾರ್ಹ ಹೆಚ್ಚಳ; ಇಲ್ಲಿದೆ ಡೀಟೇಲ್ಸ್

ಕೋವಿಡ್ ಸಾಂಕ್ರಾಮಿಕ ರೋಗ ಕಾಣಿಸಿದ ಬಳಿಕ ಚೀನಾ ಸಾಕಷ್ಟು ಬಾರಿ ಲಾಕ್​ಡೌನ್ ಕ್ರಮಗಳನ್ನು ಕೈಗೊಂಡಿತ್ತು. ವಿಶ್ವಕ್ಕೆ ಮಹಾಫ್ಯಾಕ್ಟರಿ ಎನಿಸಿದ್ದ ಚೀನಾ ತನ್ನ ಕೈಗಾರಿಕೆ, ಉದ್ಯಮಗಳನ್ನು ಬಂದ್ ಮಾಡಿತ್ತು. ಇದರ ಪರಿಣಾಮವಾಗಿ ವಿಶ್ವಾದ್ಯಂತ ಸರಬರಾಜು ಸರಪಳಿ ವ್ಯವಸ್ಥೆಯಲ್ಲಿ ಅಲ್ಲೋಲಕಲ್ಲೋಲವಾಗಿ ಜಾಗತಿಕ ಆರ್ಥಿಕ ಹಿನ್ನಡೆ ಪರಿಸ್ಥಿತಿಗೂ ಒಂದು ಕಾರಣವಾಗಿತ್ತು. ಆ್ಯಪಲ್​ನ ಐಫೋನ್​ಗಳು ಬಹುತೇಕ ಪೂರ್ಣವಾಗಿ ಚೀನಾದಲ್ಲಿ ತಯಾರಾಗುತ್ತಿದ್ದವು. ಈಗ ಅಮೆರಿಕದ ಸರ್ಕಾರದ ಒತ್ತಾಯ ಹಾಗೂ ತನ್ನ ವ್ಯವಹಾರ ಪಾಲನೆಗಾಗಿ ಆ್ಯಪಲ್ ಸಂಸ್ಥೆ ಚೀನಾದಿಂದ ಹೊರಗೆ ಐಫೋನ್ ಉತ್ಪಾದನೆಗೆ ಪರ್ಯಾಯ ಸ್ಥಳಗಳನ್ನು ಅನ್ವೇಷಿಸುತ್ತಿದೆ. ಇದರಲ್ಲಿ ಭಾರತಕ್ಕೆ ಆದ್ಯತೆ ಸಿಕ್ಕಿದೆ. ಹಂತಹಂತವಾಗಿ ಭಾರತದಲ್ಲಿ ಐಫೋನ್ ಉತ್ಪಾದನೆ ಹೆಚ್ಚಿಸಲು ಆ್ಯಪಲ್ ಗಮನ ಕೊಡುತ್ತಿದೆ

ಫಾಕ್ಸ್​ಕಾನ್ ಮತ್ತು ಪೆಗಾಟ್ರಾನ್ ಸಂಸ್ಥೆಗಳಿಂದ ಐಫೋನ್ ತಯಾರಿಕೆ ಆಗುತ್ತವೆ. ಈ ಎರಡೂ ಕಂಪನಿಗಳು ಭಾರತದಲ್ಲಿ ಘಟಕಗಳನ್ನು ಸ್ಥಾಪಿಸಿದ್ದು, ಇಲ್ಲಿ ಐಫೋನ್​ಗಳ ಉತ್ಪಾದನೆ ಆಗುತ್ತಿದೆ. ಇದರ ಜೊತೆಗೆ ಐಫೋನ್ ತಯಾರಿಸುತ್ತಿದ್ದ ವಿಸ್ಟ್ರಾನ್ ಕಂಪನಿಯ ಎಲ್ಲಾ ವ್ಯವಹಾರಗಳನ್ನು ಟಾಟಾ ಸಂಸ್ಥೆ ವಹಿಸಿಕೊಂಡಿದೆ. ಕರ್ನಾಟಕದಲ್ಲಿ ಟಾಟಾ ವಿಸ್ಟ್ರಾನ್ ಘಟಕ ಅಸ್ತಿತ್ವದಲ್ಲಿದ್ದರೆ, ಫಾಕ್ಸ್​ಕಾನ್ ಘಟಕ ಸದ್ಯದಲ್ಲೇ ಸ್ಥಾಪನೆಯಾಗಲಿದೆ. ಇನ್ನು, ಪೆಗಾಟ್ರಾನ್ ಕಂಪನಿ ಚೆನ್ನೈನಲ್ಲಿ ದೊಡ್ಡ ಘಟಕ ಹೊಂದಿದೆ.

ಇದನ್ನೂ ಓದಿಯಾವುದೇ ಗ್ಯಾರಂಟಿ ಇಲ್ಲದೆ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಪ್ರಯೋಜನ ಪಡೆಯಬೇಕಾ? ನೋಂದಣಿ ಪ್ರಕ್ರಿಯೆ ವಿವರಗಳು ಇಲ್ಲಿವೆ ಓದಿ

ಭಾರತದಿಂದ ತಯಾರಾಗುವ ಐಫೋನ್​ಗಳು ಬ್ರಿಟನ್, ಇಟಲಿ ಫ್ರಾನ್ಸ್, ಜಪಾನ್, ಜರ್ಮನಿ, ರಷ್ಯಾ ಹಾಗೂ ಮಧ್ಯಪ್ರಾಚ್ಯ ದೇಶಗಳಿಗೆ ರಫ್ತಾಗುತ್ತಿವೆ. ಐಫೋನ್ ತಯಾರಿಕೆ ಉದ್ಯಮದಿಂದ ಭಾರತದಲ್ಲಿ 1 ಲಕ್ಷ ಮಂದಿಗೆ ಕೆಲಸ ಸಿಕ್ಕಿದೆ. 2025ರಷ್ಟರಲ್ಲಿ ಶೇ. 25ರಷ್ಟು ಐಫೋನ್​ಗಳು ಭಾರತದಲ್ಲಿ ತಯಾರಾಗುವ ಮಟ್ಟಕ್ಕೆ ಸಾಮರ್ಥ್ಯವೃದ್ಧಿಯಾಗುವ ನಿರೀಕ್ಷೆ ಇದೆ. ಹಾಗೇನಾದರೂ ಆದಲ್ಲಿ ಐಫೋನ್ ತಯಾರಿಕೆಯಿಂದ 2 ಲಕ್ಷ ಮಂದಿಗೆ ಕೆಲಸ ಸಿಗಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ