ನವದೆಹಲಿ, ಏಪ್ರಿಲ್ 12: ಮೆಡಿಕಲ್ ಲೋನ್ಗಳನ್ನು ನೀಡಲು ಈಗ ಬಹಳಷ್ಟು ಫಿನ್ಟೆಕ್ ಕಂಪನಿಗಳು (Fintech company) ಹುಟ್ಟಿಕೊಂಡಿವೆ. ಸಾವೆಲನ್, ಕ್ಯೂಬ್ ಹೆಲ್ತ್, ಆರೋಗ್ಯ ಫೈನಾನ್ಸ್, ನಿಯೋಡಾಕ್ಸ್, ಫೈಬ್, ಕೆಂಕೋ, ಮೈಕೇರ್ ಹೆಲ್ತ್ ಮೊದಲಾದ ಬಿಸಿನೆಸ್ಗಳು ಔಷಧೀಯ ವೆಚ್ಚ ಭರಿಸಲು ಜನರಿಗೆ ಸಾಲ (medical loan) ಕೊಡುತ್ತವೆ. ಈ ಪಟ್ಟಿಗೆ ಈಗ ಝೀರೋ ಪೇ ಎಂಬ ಹೊಸ ಸ್ಟಾರ್ಟಪ್ ಸೇರ್ಪಡೆಯಾಗಿದೆ. ವಿವಾದದ ಸುಳಿಗೆ ಸಿಲುಕಿರುವ ಭಾರತ್ ಪೇ ಸಹಸಂಸ್ಥಾಪಕ ಹಾಗೂ ಮಾಜಿ ಎಂಡಿ ಆಶ್ನೀರ್ ಗ್ರೋವರ್ (Ashneer Grover) ಅವರು ಝೀರೋ ಪೇ ಅನ್ನು ಸ್ಥಾಪಿಸಿದ್ದಾರೆ. ಶಾರ್ಕ್ ಟ್ಯಾಂಕ್ ಜಡ್ಜ್ ಆಗಿ ಖ್ಯಾತರಾಗಿರುವ ಆಶ್ನೀರ್ ಗ್ರೋವರ್, ಭಾರತ್ ಪೇಯಿಂದ ನಿರ್ಗಮಿಸಿದ ಬಳಿಕ ಥರ್ಡ್ ಯೂನಿಕಾರ್ನ್ (Third Unicorn) ಎಂಬ ಕಂಪನಿ ಸ್ಥಾಪಿಸಿದ್ದರು. 2023ರಲ್ಲಿ ಕ್ರಿಕ್ಪೇ ಎಂಬ ಫ್ಯಾಂಟಸಿ ಗೇಮಿಂಗ್ ಪ್ಲಾಟ್ಫಾರ್ಮ್ ಸ್ಥಾಪಿಸಿದ್ದ ಥರ್ಡ್ ಯೂನಿಕಾರ್ನ್ ಇದೀಗ ಝೀರೋ ಪೇ ಅನ್ನು ಆರಂಭಿಸುತ್ತಿದೆ. ಅಶ್ನೀರ್ ಗ್ರೋವರ್ ಮತ್ತು ಅಸೀಮ್ ಗ್ರೋವರ್ ಅವರು ಇದರ ಸಹ-ಸಂಸ್ಥಾಪಕರು.
ಮುಕುಟ್ ಫಿನ್ವೆಸ್ಟ್ ಎಂಬ ಎನ್ಬಿಎಫ್ಸಿ ಸಂಸ್ಥೆಯು ಝೀರೋಪೆಗೆ ಫೈನಾನ್ಷಿಯಲ್ ಪಾರ್ಟ್ನರ್ ಆಗಿದೆ. ಗ್ರಾಹಕರಿಗೆ ಐದು ಲಕ್ಷ ರೂವರೆಗೆ ಮೆಡಿಕಲ್ ಲೋನ್ ನೀಡಲಾಗುತ್ತದೆ. ಝೀರೋ ಪೆ ಆ್ಯಪ್ನಿಂದ ಪಟ್ಟಿ ಮಾಡಿದ ಪಾರ್ಟ್ನರ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವುದಿದ್ದರೆ ಮಾತ್ರ ಈ ಸಾಲ ಭಾಗ್ಯ ಸಿಗುತ್ತದೆ.
ಇದನ್ನೂ ಓದಿ: ಸ್ವಿಗ್ಗಿ, ಜೊಮಾಟೊಗೆ ಟಾಟಾ ಪೈಪೋಟಿ; ಬೆಂಗಳೂರು, ದಿಲ್ಲಿಯಲ್ಲಿ ಒಎನ್ಡಿಸಿಯಲ್ಲಿ ಫೂಡ್ ಡೆಲಿವರಿ ಸೇವೆಗೆ ಅಡಿ ಇಟ್ಟ Tata Neu
ಭಾರತದ ಡಿಜಿಟಲ್ ಹೆಲ್ತ್ ಕೇರ್ ಮಾರುಕಟ್ಟೆ ಉತ್ತಮ ಭವಿಷ್ಯ ಹೊಂದಿದೆ ಎಂದು ಅಂದಾಜಿಸಲಾಗಿದೆ. 2030ರೊಳಗೆ ಈ ಮಾರುಕಟ್ಟೆ 37 ಬಿಲಿಯನ್ ಡಾಲರ್ನಷ್ಟು ಆದಾಯ ತರಬಲ್ಲಷ್ಟು ಬೆಳೆಯುವ ಸಾಧ್ಯತೆ ಇದೆ ಎಂದು ಕೆಲ ಜಾಗತಿಕ ಕನ್ಸಲ್ಟಿಂಗ್ ಕಂಪನಿಗಳು ಅಭಿಪ್ರಾಯಪಟ್ಟಿವೆ. ಈ ಪೈಕಿ ಹೆಲ್ತ್ಕೇರ್ ಫೈನಾನ್ಸಿಂಗ್ ಕ್ಷೇತ್ರದಲ್ಲಿ 5 ಬಿಲಿಯನ್ ಡಾಲರ್ ಆದಾಯದ ನಿರೀಕ್ಷೆ ಇದೆ.
ಝೀರೋಪೆ ಆ್ಯಪ್ ಡೌನ್ಲೋಡ್ ಮಾಡಿ ತೆರೆದು, ಕೆವೈಸಿ ವಿವರಗಳನ್ನು ನೀಡಿ ನೊಂದಾಯಿಸಿಕೊಳ್ಳಬೇಕು. ಬಳಿಕ ಅದರಲ್ಲಿ ಪಟ್ಟಿ ಮಾಡಿರುವ ಪಾರ್ಟ್ನರ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಒಂದು ಆಸ್ಪತ್ರೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಬಳಿಕ ಐದು ಲಕ್ಷ ರೂ ಒಳಗೆ ಎಷ್ಟು ಮೊತ್ತದ ಸಾಲ ಬೇಕು ಎಂಬುದನ್ನು ನಮೂದಿಸಬೇಕು. ಹಾಗೆಯೇ ಈ ಸಾಲದ ಮರುಪಾವತಿ ಹೇಗೆ ಮಾಡುತ್ತೀರಿ ಎಂಬ ವಿವರವನ್ನೂ ನಮೂದಿಸಬೇಕು.
ಇದನ್ನೂ ಓದಿ: ಇವರ ಉತ್ಪನ್ನ ತಿರಸ್ಕರಿಸಿದ ಅದೇ ಬಿಸಿನೆಸ್ ರಿಯಾಲಿಟಿ ಶೋಗೆ ಜಡ್ಜ್ ಆಗಿ ಹೋದ ಬಿಸಿನೆಸ್ಮ್ಯಾನ್
ಸಾಮಾನ್ಯವಾಗಿ ಇವತ್ತಿನ ದಿನಗಳಲ್ಲಿ ಮೆಡಿಕಲ್ ಲೋನ್ ನೀಡುವ ಫಿನ್ಟೆಕ್ ಕಂಪನಿಗಳು ಸಾಲಕ್ಕೆ ವಾರ್ಷಿಕ ಶೇ. 10.50ರಿಂದ ಶೇ 30ರವರೆಗೂ ಬಡ್ಡಿ ವಿಧಿಸುತ್ತವೆ. ಝೀರೋಪೆ ಎಷ್ಟು ಬಡ್ಡಿ ವಿಧಿಸುತ್ತದೆ ಎಂಬ ವಿವರ ಸದ್ಯಕ್ಕೆ ಗೊತ್ತಾಗಿಲ್ಲ. ಸದ್ಯ ಇದು ಇನ್ನೂ ಬೀಟಾ ಹಂತದಲ್ಲಿ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ