ಸ್ವಿಗ್ಗಿ, ಜೊಮಾಟೊಗೆ ಟಾಟಾ ಪೈಪೋಟಿ; ಬೆಂಗಳೂರು, ದಿಲ್ಲಿಯಲ್ಲಿ ಒಎನ್ಡಿಸಿಯಲ್ಲಿ ಫೂಡ್ ಡೆಲಿವರಿ ಸೇವೆಗೆ ಅಡಿ ಇಟ್ಟ Tata Neu
Tata Neu starts food delivery service: ಸ್ವಿಗ್ಗಿ, ಜೊಮಾಟೊ ಪ್ರಾಬಲ್ಯ ಇರುವ ಫೂಡ್ ಡೆಲಿವರಿ ಸೇವೆಗೆ ಟಾಟಾ ಗ್ರೂಪ್ನ ಕಂಪನಿ ಅಡಿ ಇಟ್ಟಿದೆ. ಬೆಂಗಳೂರು ಮತ್ತು ದೆಹಲಿ ಎನ್ಸಿಆರ್ನಲ್ಲಿ ಟಾಟಾ ನ್ಯೂ ಒಎನ್ಡಿಸಿ ನೆಟ್ವರ್ಕ್ನಲ್ಲಿ ಆಹಾರ ಸರಬರಾಜು ಸೇವೆ ಆರಂಭಿಸಿದೆ. ಮೇ ತಿಂಗಳೊಳಗೆ ದೇಶಾದ್ಯಂತ ಈ ಸೇವೆ ವಿಸ್ತರಣೆ ಆಗಲಿದೆ. ಟಾಟಾ ನ್ಯೂ ಒಎನ್ಡಿಸಿ ನೆಟ್ವರ್ಕ್ಗೆ ಇಂಟಿಗ್ರೇಟ್ ಮಾಡಲು ಟೆಕ್ನಾಲಜಿ ನೆರವನ್ನು ಮ್ಯಾಜಿಕ್ ಪಿನ್ ನೀಡಿದೆ.
ನವದೆಹಲಿ, ಏಪ್ರಿಲ್ 12: ಟಾಟಾದ ಡಿಜಿಟಲ್ ಸೂಪರ್ ಆ್ಯಪ್ ಎನಿಸಿದ ಟಾಟಾ ನ್ಯೂನಲ್ಲಿ (Tata Neu) ಫೂಡ್ ಡೆಲಿವರಿ ಸರ್ವಿಸ್ ಆರಂಭಿಸಲಾಗಿದೆ. ಒಎನ್ಡಿಸಿ ಪ್ಲಾಟ್ಫಾರ್ಮ್ (ONDC network) ಬಳಸಿ ಟಾಟಾ ನ್ಯೂ ಆಹಾರ ಸರಬರಾಜು ಸೇವೆ ಶುರು ಮಾಡಿದ್ದು, ಮೊದಲಿಗೆ ಬೆಂಗಳೂರು ಮತ್ತು ದೆಹಲಿ ಎನ್ಸಿಆರ್ ಪ್ರದೇಶಗಳಲ್ಲಿ ಚಾಲನೆಗೊಳಿಸಿದೆ. ಮುಂದಿನ ವಾರದೊಳಗೆ ಇನ್ನೂ ಮೂರ್ನಾಲ್ಕು ಪ್ರಮುಖ ನಗರಗಳಲ್ಲೂ ಫೂಡ್ ಡೆಲಿವರಿ ಸೇವೆ ಶುರುವಾಗಲಿದೆ. ಮೇ ಎರಡು ಅಥವಾ ಮೂರನೇ ವಾರದೊಳಗೆ ಇಡೀ ಭಾರತದಲ್ಲಿ ಟಾಟಾ ನ್ಯೂ ಈ ಸೇವೆ ಶುರು ಮಾಡುವ ಸಾಧ್ಯತೆ ಇದೆ.
ಟಾಟಾ ನ್ಯೂ ಸೂಪರ್ ಆ್ಯಪ್ ಅನ್ನು ಡೌನ್ಲೋಡ್ ಮಾಡಿದರೆ ಸದ್ಯಕ್ಕೆ ಬೆಂಗಳೂರು ಮತ್ತು ದೆಹಲಿ ಎನ್ಸಿಆರ್ ಪ್ರದೇಶದಲ್ಲಿರುವ ಬಳಕೆದಾರರಿಗೆ ಮಾತ್ರವೇ ಆ್ಯಪ್ನಲ್ಲಿ ಫೂಡ್ ಡೆಲಿವರಿ ಕೆಟಗರಿ ಕಾಣುತ್ತದೆ.
ಇದನ್ನೂ ಓದಿ: ಭಾರ್ತಿ ಹೆಕ್ಸಾಕಾಮ್ ಭರ್ಜರಿ ಬೆಲೆಗೆ ಷೇರು ಮಾರುಕಟ್ಟೆಗೆ ಸೇರ್ಪಡೆ; ಐಪಿಒ ಬೆಲೆ 570 ರೂ, ಲಿಸ್ಟಿಂಗ್ ಬೆಲೆ 755 ರೂ
ಮ್ಯಾಜಿಕ್ಪಿನ್ ತಂತ್ರಜ್ಞಾನ ನೆರವು…!
ಟಾಟಾ ನ್ಯೂ ಒಎನ್ಡಿಸಿ ಪ್ಲಾಟ್ಫಾರ್ಮ್ಗೆ ಮಿಳಿತಗೊಳಿಸಲು ಮ್ಯಾಜಿಕ್ಪಿನ್ ಸಹಾಯ ಮಾಡುತ್ತಿದೆ. ಕುತೂಹಲವೆಂದರೆ, ಫೂಡ್ ಡೆಲಿವರಿ ಆ್ಯಪ್ ಆದ ಜೊಮಾಟೋ ಸಂಸ್ಥೆ ಮ್ಯಾಜಿಕ್ಪಿನ್ ಮಾಲಕತ್ವ ಹೊಂದಿದೆ. ಪೇಟಿಎಂ, ಓಲಾ ಮೊದಲಾದ ಕೆಲ ಆ್ಯಪ್ಗಳನ್ನು ಓಎನ್ಡಿಸಿಗೆ ಇಂಟಿಗ್ರೇಟ್ ಮಾಡಿಸಿದ್ದು ಇದೇ ಮ್ಯಾಜಿಕ್ ಪಿನ್.
ಸರ್ಕಾರದಿಂದ ಅಭಿವೃದ್ಧಿಪಡಿಸಲಾಗಿರುವ ಒಎನ್ಡಿಸಿಯಲ್ಲಿ ಇಕಾಮರ್ಸ್ ಬಿಸಿನೆಸ್ ನಡೆಸಬಹುದು. ಖರೀದಿದಾರರ ಪ್ಲಾಟ್ಫಾರ್ಮ್, ಮಾರಾಟಗಾರರ ಪ್ಲಾಟ್ಫಾರ್ಮ್, ವಹಿವಾಟು ನಡೆಯಲು ಅನುವು ಮಾಡಿಕೊಡುವ ಗೇಟ್ವೇ, ಹಾಗೂ ತಂತ್ರಜ್ಞಾನ ಸೇವೆ ನೀಡುಗರು ಹೀಗೆ ನಾಲ್ಕು ಪ್ಲಾಟ್ಫಾರ್ಮ್ಗಳಿವೆ. ಮ್ಯಾಜಿಕ್ಪಿನ್ ಟೆಕ್ನಾಲಜಿ ಸರ್ವಿಸ್ ಪ್ರೊವೈಡರ್ ಆಗಿರುವುದರ ಜೊತೆಗೆ ಮಾರಾಟಗಾರರ ಪ್ಲಾಟ್ಫಾರ್ಮ್ ಕೂಡ ಆಗಿದೆ. ಟಾಟಾ ನ್ಯೂ ಖರೀದಿದಾರರ ಪ್ಲಾಟ್ಫಾರ್ಮ್ ಆಗಿದೆ.
ಇದನ್ನೂ ಓದಿ: ಇವನಿಂದೇನು ಪ್ರಯೋಜನ ಇಲ್ಲ, ತೊಲಗಿಸಿ ಎಂದಿದ್ದರು ನಂಟರು; ಈ ಹುಟ್ಟಾ ಕುರುಡ ಇವತ್ತು ಸಿಇಒ
ಇಲ್ಲಿ, ಒಎನ್ಡಿಸಿ ನೆಟ್ವರ್ಕ್ಗೆ ಮ್ಯಾಜಿಕ್ ಪಿನ್ ವಿವಿಧ ರೆಸ್ಟೋರೆಂಟ್ಗಳನ್ನು ತರುತ್ತದೆ. ಇಲ್ಲಿಯವರೆಗೆ 50,000ಕ್ಕೂ ಹೆಚ್ಚು ಹೋಟೆಲ್, ರೆಸ್ಟೋರೆಂಟ್ಗಳನ್ನು ಒಎನ್ಡಿಸಿ ನೆಟ್ವರ್ಕ್ಗೆ ಜೋಡಿಸಿದೆ. ಟಾಟಾ ನ್ಯೂ ಖರೀದಿದಾರರ ಪ್ಲಾಟ್ಫಾರ್ಮ್ ಆಗಿದ್ದು, ಇದು ಗ್ರಾಹಕರು ಸ್ವಿಗ್ಗಿ, ಜೊಮಾಟೋದಲ್ಲಿಯಂತೆ ಆಹಾರವನ್ನು ಬುಕ್ ಮಾಡಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ