ನವದೆಹಲಿ: ಉದ್ಯೋಗಿಯು ವೇತನ ರಹಿತ ರಜೆಯಲ್ಲಿದ್ದ ಸಂದರ್ಭದಲ್ಲಿ ಮೃತಪಟ್ಟರೂ ಭವಿಷ್ಯ ನಿಧಿ ಖಾತೆದಾರರಾಗಿದ್ದರೆ (PF) ಅವರು ನಾಮನಿರ್ದೇಶನ ಮಾಡಿದ ವ್ಯಕ್ತಿ ಡೆತ್ ಬೆನಿಫಿಟ್ಗಳನ್ನು (ಉದ್ಯೋಗಿಗಳ ಠೇವಣಿ ಸಂಬಂಧಿತ ವಿಮೆ ಅಥವಾ EDLI) ಪಡೆಯಲು ಅರ್ಹರಾಗಿರುತ್ತಾರೆ ಎಂದು ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ (EPFO) ಸ್ಪಷ್ಟಪಡಿಸಿದೆ. ಉದ್ಯೋಗಿಗಳು ವೇತನ ರಹಿತ ರಜೆಯಲ್ಲಿದ್ದಾರೆ ಹಾಗೂ ಅವರಿಂದ ಭವಿಷ್ಯ ನಿಧಿ ಖಾತೆಗೆ ಹಣ ಸಂದಾಯವಾಗುತ್ತಿಲ್ಲ ಎಂದಾದರೂ ಡೆತ್ ಬೆನಿಫಿಟ್ಗಳನ್ನು ನಿರಾಕರಿಸುವಂತಿಲ್ಲ ಎಂದು ಇಪಿಎಫ್ಒ ಹೇಳಿದೆ.
ಈ ವಿಚಾರವಾಗಿ ಇಪಿಎಫ್ಒ ಅಧಿಸೂಚನೆ ಹೊರಡಿಸಿದೆ. ಉದ್ಯೋಗಿಯು ವೇತನ ರಹಿತ ಅಥವಾ ಇತರ ಯಾವುದೇ ಕಾರಣದ ರಜೆಯಲ್ಲಿದ್ದರೆ, ಆ ಸಂದರ್ಭದಲ್ಲಿ ಉದ್ಯೋಗದಾತರಿಂದ ಭವಿಷ್ಯ ನಿಧಿ ಖಾತೆಗೆ ಹಣ ಸಂದಾಯವಾಗದೇ ಇದ್ದರೆ ಮತ್ತು ಈ ಅವಧಿಯಲ್ಲಿ ಅವರು ಮೃತಪಟ್ಟರೆ ಖಾತರಿ ನೀಡಲಾದ ಭರವಸೆಗಳನ್ನು ನಿರಾಕರಿಸುವಂತಿಲ್ಲ. ಮರಣ ಹೊಂದಿದ ಸಂದರ್ಭದಲ್ಲಿ ಅವರು ಉದ್ಯೋಗಿಯಾಗಿಯೇ ಇದ್ದರೆ ಮತ್ತು ಇತರ ನಿಗದಿತ ಷರತ್ತುಗಳನ್ನೆಲ್ಲ ಪೂರೈಸಿದ್ದರೆ ಅವರು ನಾಮನಿರ್ದೇಶನ ಮಾಡಿದವರಿಗೆ ಸವಲತ್ತುಗಳನ್ನು ನೀಡಬೇಕು ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.
ಇದನ್ನೂ ಓದಿ: EPF: ಇಪಿಎಫ್ಒನಿಂದ ಉದ್ಯೋಗದಾತರ ಇಪಿಎಫ್ ಟ್ರಸ್ಟ್‌ಗೆ ಇಪಿಎಫ್ ಖಾತೆ ವರ್ಗಾವಣೆ ಹೇಗೆ? ಇಲ್ಲಿದೆ ಎಲ್ಲ ಮಾಹಿತಿ
ಉದ್ಯೋಗಿಯು ಮೃತಪಟ್ಟ ಕೆಲವು ಪ್ರಕರಣಗಳಲ್ಲಿ, ಅವರಿಂದ ಪಿಎಫ್ ಖಾತೆಗೆ ಹಣ ಸಂದಾಯವಾಗುತ್ತಿಲ್ಲ ಎಂದು ಆರೋಪಿಸಿ ಕಂಪನಿಗಳು ಮರಣಾನಂತರ ನೀಡಬೇಕಾದ ಸವಲತ್ತುಗಳನ್ನು ನೀಡಲು ನಿರಾಕರಿಸಿದ್ದವು. ಈ ಕುರಿತು ಹಲವು ದೂರುಗಳು ದಾಖಲಾಗಿದ್ದವು. ಹೀಗಾಗಿ ಇಪಿಎಫ್ಒ ಸ್ಪಷ್ಟೀಕರಣ ನೀಡಿದೆ.
ಪಿಎಫ್ ಖಾತೆದಾರರು ಮೃತಪಟ್ಟ ಸಂದರ್ಭದಲ್ಲಿ ಅವರ ಕುಟುಂಬದವರಿಗೆ ಕಿರುಕುಳ ನೀಡಬಾರದು. 7 ದಿನಗಳ ಒಳಗೆ ದೃಢೀಕರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಉದ್ಯೋಗಿಯು ಕರ್ತವ್ಯದಲ್ಲಿದ್ದೂ ಉದ್ಯೋಗದಾತರು ಬೇರೆಯೇ ಕಾರಣ ನೀಡಿದರೆ ಇದು ನಮಗೆ ಸ್ವೀಕಾರಾರ್ವಲ್ಲ. ಈ ವಿಚಾರವಾಗಿ ಕಚೇರಿಯಲ್ಲಿ ಪರಿಶೀಲನೆ ನಡೆಸಿ ದೃಢೀಕರಿಸಬೇಕು ಎಂದು ಇಪಿಎಫ್ಒ ಅಧಿಸೂಚನೆ ಉಲ್ಲೇಖಿಸಿದೆ.
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಇತ್ತೀಚೆಗಷ್ಟೇ ತನ್ನ ಚಂದಾದಾರರಿಗೆ ಇ-ನಾಮನಿರ್ದೇಶನವನ್ನು ಕಡ್ಡಾಯಗೊಳಿಸಿತ್ತು. ಸಾಮಾಜಿಕ ಭದ್ರತಾ ಪ್ರಯೋಜನಗಳನ್ನು ಪಡೆಯಲು ಇ-ನಾಮನಿರ್ದೇಶನವನ್ನು ಸಲ್ಲಿಸಬೇಕು ಮತ್ತು ಉದ್ಯೋಗಿಗಳ ಠೇವಣಿ ಸಂಯೋಜಿತ ವಿಮಾ ಯೋಜನೆ ಅನ್ನು ಸಲ್ಲಿಸಬೇಕು ಎಂದು ಸೂಚಿಸಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ