ವಾಹನ ಸರ್ವಿಸ್‌ಗೆ ಎಲ್ಲಿ ಕೊಡುವುದು ಬೆಸ್ಟ್?: ಕಂಪನಿ ಶೋರೂಮ್‌ ಅಥವಾ ಲೋಕಲ್ ಗ್ಯಾರೇಜ್‌?; ಸರ್ವಿಸ್ ನಂತರ ಇವುಗಳನ್ನು ಚೆಕ್ ಮಾಡದಿದ್ದರೆ ನಷ್ಟ ಪಕ್ಕಾ

ವಾಹನದ ಆಯುಷ್ಯ ಮತ್ತು ಮೈಲೇಜ್ ಹೆಚ್ಚಿಸಲು ನಿಯಮಿತ ಸರ್ವಿಸ್ ಅತಿಮುಖ್ಯ. ಅಧಿಕೃತ ಸೇವಾ ಕೇಂದ್ರವೋ ಅಥವಾ ಸ್ಥಳೀಯ ಗ್ಯಾರೇಜೋ ಎಂಬ ಗೊಂದಲಕ್ಕೆ ಇಲ್ಲಿದೆ ಉತ್ತರ. ವಾರಂಟಿ ಅವಧಿಯಲ್ಲಿದ್ದರೆ ಅಧಿಕೃತ ಕೇಂದ್ರ ಉತ್ತಮ, ಹಳೆಯ ವಾಹನಗಳಿಗೆ ಸ್ಥಳೀಯ ಗ್ಯಾರೇಜ್ ಬಜೆಟ್ ಸ್ನೇಹಿ. ಸರ್ವಿಸ್ ನಂತರ ಎಂಜಿನ್ ಆಯಿಲ್, ಬ್ರೇಕ್, ಲೈಟ್‌ಗಳು, ಟೈರ್‌ಗಳನ್ನು ಪರಿಶೀಲಿಸಿ, ಬಿಲ್‌ ಕ್ರಾಸ್‌ಚೆಕ್ ಮಾಡಿ ಮತ್ತು ಟೆಸ್ಟ್ ಡ್ರೈವ್ ಮಾಡುವುದು ಕಡ್ಡಾಯ.

ವಾಹನ ಸರ್ವಿಸ್‌ಗೆ ಎಲ್ಲಿ ಕೊಡುವುದು ಬೆಸ್ಟ್?: ಕಂಪನಿ ಶೋರೂಮ್‌ ಅಥವಾ ಲೋಕಲ್ ಗ್ಯಾರೇಜ್‌?; ಸರ್ವಿಸ್ ನಂತರ ಇವುಗಳನ್ನು ಚೆಕ್ ಮಾಡದಿದ್ದರೆ ನಷ್ಟ ಪಕ್ಕಾ
ಸಾಂದರ್ಭಿಕ ಚಿತ್ರ
Image Credit source: Google

Updated on: Sep 21, 2026 | 12:39 PM

ಬೆಂಗಳೂರು, ಸೆ.21: ದ್ವಿಚಕ್ರ ವಾಹನವಾಗಲಿ ಅಥವಾ ಕಾರಾಗಿರಲಿ, ವಾಹನದ ಆಯುಷ್ಯ ಹಾಗೂ ಮೈಲೇಜ್ ಹೆಚ್ಚಿಸಲು ಕಾಲಕಾಲಕ್ಕೆ ಸರಿಯಾಗಿ ಸರ್ವಿಸ್ ಮಾಡಿಸುವುದು ಅತ್ಯಗತ್ಯ. ಆದರೆ ವಾಹನ ಮಾಲೀಕರನ್ನು ಸದಾ ಕಾಡುವ ದೊಡ್ಡ ಪ್ರಶ್ನೆ ಎಂದರೆ “ವಾಹನವನ್ನು ಕಂಪನಿಯ ಆಥರೈಸ್ಡ್ ಸರ್ವಿಸ್ ಸೆಂಟರ್‌ಗೆ (Authorized Service Centre) ಕೊಡುವುದು ಒಳ್ಳೆಯದೋ ಅಥವಾ ಸ್ಥಳೀಯ ಸರ್ವಿಸ್ ಗ್ಯಾರೇಜ್‌ಗೆ (Local Garage) ಕೊಡುವುದು ಉತ್ತಮವೋ?” ಇದರ ಜೊತೆಗೆ ಸರ್ವಿಸ್ ಮುಗಿದು ವಾಹನವನ್ನು ವಾಪಸ್ ಪಡೆಯುವಾಗ ನಾವು ಯಾವ ಪ್ರಮುಖ ಅಂಶಗಳನ್ನು ಪರಿಶೀಲಿಸಬೇಕು? ಇಲ್ಲಿದೆ ಸಂಪೂರ್ಣ ವರದಿ ಹಾಗೂ ಉಪಯುಕ್ತ ಸಲಹೆಗಳು

ಕಂಪನಿ ಸರ್ವಿಸ್ ಸೆಂಟರ್ vs ಸ್ಥಳೀಯ ಗ್ಯಾರೇಜ್: ಯಾವುದು ಉತ್ತಮ?

ಕಂಪನಿ ಆಥರೈಸ್ಡ್ ಸರ್ವಿಸ್ ಸೆಂಟರ್ :

ನೀವು ಕಂಪನಿಯಲ್ಲಿ ಸರ್ವಿಸ್​​​​ಗೆ ನೀಡಿದ್ರೆ ಬ್ರಾಂಡ್‌ನ ಮೂಲ ಬಿಡಿಭಾಗಗಳನ್ನು ಮಾತ್ರ ಬಳಸಲಾಗುತ್ತದೆ. ಕಂಪನಿಯಿಂದ ತರಬೇತಿ ಪಡೆದ ಪರಿಣಿತ ಮೆಕ್ಯಾನಿಕ್‌ಗಳು ಇರುತ್ತಾರೆ. ವಾಹನದ ‘ವಾರಂಟಿ’ ಪಡೆಯಲು ಕಂಪನಿ ಸರ್ವಿಸ್ ಕಡ್ಡಾಯವಾಗಿರುತ್ತದೆ. ಡಿಜಿಟಲ್ ಸರ್ವಿಸ್ ಹಿಸ್ಟರಿ ದಾಖಲಾಗುತ್ತದೆ, ಇದರಿಂದ ವಾಹನ ಮಾರಾಟ ಮಾಡುವಾಗ ಉತ್ತಮ ಮರುಮಾರಾಟ ಮೌಲ್ಯ ಸಿಗುತ್ತದೆ. ಆದರೆ ಇದರಿಂದ ಸರ್ವಿಸ್ ಶುಲ್ಕ ಹಾಗೂ ಬಿಡಿಭಾಗಗಳ ಬೆಲೆ ಸ್ಥಳೀಯ ಗ್ಯಾರೇಜ್‌ಗಳಿಗಿಂತ ಕೊಂಚ ಹೆಚ್ಚಿರುತ್ತದೆ.

ಸ್ಥಳೀಯ ಸರ್ವಿಸ್ ಗ್ಯಾರೇಜ್ :

ಕಂಪನಿ ಸರ್ವಿಸ್ ಸೆಂಟರ್‌ಗೆ ಹೋಲಿಸಿದರೆ ವೆಚ್ಚ/ಶುಲ್ಕ ತುಂಬಾ ಕಡಿಮೆ. ವಾಹನದ ಸಣ್ಣಪುಟ್ಟ ರಿಪೇರಿಗಳನ್ನು ಕಣ್ಣೆದುರೇ ಶೀಘ್ರವಾಗಿ ಮಾಡಿಸಿಕೊಡುತ್ತಾರೆ. ಆದರೆ ನಕಲಿ ಬಿಡಿಭಾಗಗಳನ್ನು ಬಳಸುವ ಅಪಾಯವಿರುತ್ತದೆ. ಆಧುನಿಕ ಎಲೆಕ್ಟ್ರಾನಿಕ್ ಮತ್ತು ಇಸಿ ಯು ಆಧಾರಿತ ವಾಹನಗಳ ಸಮಸ್ಯೆಯನ್ನು ಸರಿಯಾಗಿ ಪತ್ತೆಹಚ್ಚುವ ಅತ್ಯಾಧುನಿಕ ಉಪಕರಣಗಳು ಇರದಿರಬಹುದು. ವಾಹನ ಹೊಸದಾಗಿದ್ದರೆ ಹಾಗೂ ವಾರಂಟಿ ಅವಧಿಯಲ್ಲಿದ್ದರೆ ಕಂಪನಿ ಸರ್ವಿಸ್ ಸೆಂಟರ್‌ಗೆ ನೀಡುವುದು ಉತ್ತಮ. ವಾಹನ ಹಳೆಯದಾಗಿದ್ದರೆ ಹಾಗೂ ಬಜೆಟ್ ಸ್ನೇಹಿ ಸರ್ವಿಸ್ ಬೇಕಿದ್ದಲ್ಲಿ ನಂಬಿಕಸ್ಥ ಸ್ಥಳೀಯ ಗ್ಯಾರೇಜ್‌ಗೆ ನೀಡಬಹುದು.

ಇದನ್ನೂ ಓದಿ: ಮಂಗಳೂರು ವಾಟರ್ ಮೆಟ್ರೋ ಯೋಜನೆಗೆ ಬಿಗ್ ಬೂಸ್ಟ್: 11 ದೋಣಿ ನಿಲ್ದಾಣಗಳು ಅಂತಿಮ; ಕರಾವಳಿಯಲ್ಲಿ ಶುರುವಾಗಲಿದೆ ಜಲಸಾರಿಗೆ ಕ್ರಾಂತಿ

ಸರ್ವಿಸ್ ನಂತರ ವಾಹನ ಪಡೆಯುವಾಗ ಈ ವಿಷಯಗಳನ್ನು ತಪ್ಪದೇ ಚೆಕ್ ಮಾಡಿ

ವಾಹನ ಸರ್ವಿಸ್ ಮುಗಿದು ಕೈಗೆ ಸಿಕ್ಕ ತಕ್ಷಣ ಬಿಲ್ಲು ಪಾವತಿಸಿ ಮನೆಗೆ ಹೊರಡುವ ಮುನ್ನ ಈ ಕೆಳಗಿನ ಪ್ರಮುಖ ವಿಷಯಗಳನ್ನು ಪರಿಶೀಲಿಸುವುದು ಕಡ್ಡಾಯ.

ಎಂಜಿನ್ ಆಯಿಲ್ ಮಟ್ಟ: ಎಂಜಿನ್ ಆಯಿಲ್ ಚೇಂಜ್ ಮಾಡಿಸಲಾಗಿದೆಯೇ ಮತ್ತು ಡಿಪ್‌ಸ್ಟಿಕ್ ಮೂಲಕ ಎಂಜಿನ್ ಆಯಿಲ್ ಮಟ್ಟ ಸೂಕ್ತವಾಗಿದೆಯೇ ಎಂದು ಚೆಕ್ ಮಾಡಿ. ಹೊಸ ಆಯಿಲ್ ತಿಳಿ ಹಳದಿ/ಬ್ರೌನ್ ಬಣ್ಣದಲ್ಲಿರುತ್ತದೆ.

ಬ್ರೇಕ್ ಹಾಗೂ ಕ್ಲಚ್ : ಬ್ರೇಕ್ ಶೂ/ಪ್ಯಾಡ್ ಬದಲಾಯಿಸಿದ್ದರೆ ಬ್ರೇಕ್ ಪ್ರೆಶರ್ ಸರಿಯಾಗಿದೆಯೇ, ಕ್ಲಚ್ ಪೆಡಲ್ ಅತಿಯಾಗಿ ಟೈಟ್ ಅಥವಾ ಲೂಸ್ ಆಗಿದೆಯೇ ಎಂದು ನೋಡಿ.

ಬ್ಯಾಟರಿ ಮತ್ತು ಲೈಟ್‌ಗಳು: ಹೆಡ್‌ಲೈಟ್, ಇಂಡಿಕೇಟರ್, ಬ್ರೇಕ್ ಲೈಟ್ ಹಾಗೂ ಹಾರ್ನ್ ಸರಿಯಾಗಿ ಕೆಲಸ ಮಾಡುತ್ತಿವೆಯೇ ಎಂದು ತಪಾಸಣೆ ಮಾಡಿ.

ಟೈರ್ ಪ್ರೆಶರ್ ಹಾಗೂ ವೀಲ್ ಬ್ಯಾಲೆನ್ಸಿಂಗ್: ಟೈರ್‌ಗಳಲ್ಲಿ ಗಾಳಿಯ ಒತ್ತಡ ಸರಿಯಾಗಿದೆಯೇ ಹಾಗೂ ವೀಲ್ ಅಲೈನ್‌ಮೆಂಟ್ ಮಾಡಿದ್ದರೆ ಚಾಲನೆ ಮಾಡುವಾಗ ಸ್ಟೀರಿಂಗ್ ಬ್ಯಾಲೆನ್ಸ್ ಚೆಕ್ ಮಾಡಿ.

ವಾಷಿಂಗ್ & ಕ್ಲೀನಿಂಗ್: ವಾಹನದ ಒಳಾಂಗಣ ಮತ್ತು ಹೊರಾಂಗಣ ಸರಿಯಾಗಿ ವಾಶ್ ಆಗಿದೆಯೇ ಮತ್ತು ಗ್ರೀಸಿಂಗ್ ಬಿದ್ದಿದೆಯೇ ಎಂದು ಗಮನಿಸಿ.

ಬದಲಾಯಿಸಿದ ಹಳೆಯ ಬಿಡಿಭಾಗಗಳು: ಕಂಪನಿ ಅಥವಾ ಗ್ಯಾರೇಜ್‌ನವರು ಬದಲಾಯಿಸಿರುವ ಹಳೆಯ ಬಿಡಿಭಾಗಗಳನ್ನು ನಿಮಗೆ ಹಿಂತಿರುಗಿಸಿದ್ದಾರೆಯೇ ಎಂದು ಪರಿಶೀಲಿಸಿ. ಬಿಲ್‌ನಲ್ಲಿರುವ ಪ್ರತಿಯೊಂದು ಭಾಗಕ್ಕೂ ಹಣ ಸರಿಯಾಗಿ ವಿಧಿಸಲಾಗಿದೆಯೇ ಎಂದು ಬಿಲ್ ಕ್ರಾಸ್-ಚೆಕ್ ಮಾಡಿ.

ಸಣ್ಣ ಟೆಸ್ಟ್ ಡ್ರೈವ್ (Test Drive): ವಾಹನವನ್ನು ಡೆಲಿವರಿ ಪಡೆಯುವ ಮೊದಲು 1-2 ಕಿಲೋಮೀಟರ್ ಸಣ್ಣ ಟೆಸ್ಟ್ ಡ್ರೈವ್ ಮಾಡಿ, ಎಂಜಿನ್‌ನಲ್ಲಿ ಯಾವುದೇ ಹೊಸ ಶಬ್ದ ಬರುತ್ತಿದೆಯೇ ಎಂದು ಪರೀಕ್ಷಿಸಿ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:23 pm, Mon, 21 September 26

Loading...
Unable to load recommendations.
Follow Us